ನಿಮ್ಮ ಮನೆಯನ್ನು ಅಪರೂಪದ, ವಿಶಿಷ್ಟ ಗೃಹಾಲಂಕಾರದಿಂದ ಚಂದಗೊಳಿಸಿ, ಅದಕ್ಕೆ ಸೆಲೆಬ್ರಿಟಿ ಲುಕ್ಸ್ ಬರುವಂತೆ ಏಕೆ ಟ್ರೈ ಮಾಡಬಾರದು....?
ಇತ್ತೀಚೆಗೆ ಹೋಂ ಇಂಟೀರಿಯರ್ ಡೆಕೋರ್ ಅಂದ್ರೆ ಎಥ್ನಿಕ್ ಲುಕ್ಸ್ ಕಾರ್ಪೆಂಟರಿ ಸ್ಟೈಲ್ ನ ಟ್ರೆಂಡ್ ಜೋರಾಗಿದೆ. ಇದಕ್ಕಾಗಿ ಅತಿ ದುಬಾರಿಯಾದ ಗೃಹಾಲಂಕಾರದ ಸಾಮಗ್ರಿ, ಪೀಠೋಪಕರಣಗಳು ಇತ್ಯಾದಿ ಏನೂ ಬೇಕಿಲ್ಲ. ನಿಮ್ಮ ಅಭಿರುಚಿ, ಕಲಾತ್ಮಕತೆ, ಮ್ಯಾನೇಜ್ ಮೆಂಟ್ ಟೆಕ್ನಿಕ್ಸ್, ಹೊಸ ವಿಚಾರವಂತಿಕೆ, ಹೊಸ ಜೀವನಶೈಲಿ ಇತ್ಯಾದಿಗಳ ಆಧಾರದಿಂದ ನಿಮ್ಮ ಮನೆಯನ್ನು ಭವ್ಯವಾಗಿಸಿ.
ಮನೆಯ ಗೃಹಾಲಂಕಾರ ಗಮನಿಸಿ ಗೃಹಿಣಿಯ ಕ್ರಿಯೇಟಿವಿಟಿ ಅಂದಾಜಿಸಬಹುದು. ಏಕೆಂದರೆ ಗೃಹಾಲಂಕಾರ ಎಂಬುದು ಗೃಹಿಣಿಯ ವ್ಯಕ್ತಿತ್ವದ ಕೈಗನ್ನಡಿ ಎಂದರೆ ಉತ್ಪ್ರೇಕ್ಷೆಯಲ್ಲ.
ಇಂದಿನ ಆಧುನಿಕ ಇಂಟೀರಿಯರ್ ಡಿಸೈನಿಂಗ್ ನಲ್ಲಿ ಮಿನಿಮಿಲಸ್ಟ್, ಪೇಸ್ಟ್ ಕಲರ್ಸ್ ಪ್ರಮುಖ ಸ್ಥಾನ ಪಡೆಯುತ್ತವೆ. ಈ ಸಲುವಾಗಿಯೇ ಬಾಲಿವುಡ್ ನಟಿ ಕಿಯಾರಾ ಅಡ್ವಾನಿ ತನ್ನ ಮನೆಗೆ ಐವರಿ ಕಲರ್ ಆರಿಸಿದ್ದಾಳೆ, ಜಾನ್ ಅಬ್ರಹಾಂ ಜ್ಯಾಕ್ಲೀನ್ ಫರ್ನಾಂಡಿಸ್ ಸಹ ತಮ್ಮ ಮನೆಗಳಿಗೆ ಅಪ್ಪಟ ಹಾಲು ಬಿಳುಪಿನ ಬಣ್ಣ ಬಳಸಿದ್ದಾರೆ. ಹಲವಾರು ಆಧುನಿಕ ಡಿಸೈನಿನ ಫ್ಲವರ್ ಪಾಟ್ಸ್ ಗ್ರೀನ್ ಪ್ಲಾಂಟ್ಸ್ ಗಳಿಂದ ಈ ಬಣ್ಣ ಮಿರಿಮಿರಿ ಮಿರುಗುವಂತೆ ಕಾಣಿಸುತ್ತದೆ.
ಈಗ ಕಿಟಕಿಗಳಿಗೆ ಅತ್ಯಾಧುನಿಕ ಡಿಸೈನಿನ ಗ್ಲಾಸ್ ಅಳವಡಿಕೆ ಮಾಮೂಲಿ. ಇದಕ್ಕೆ ತೆಳು ಶೀಯರ್ ಪರದೆ ಬಳಸುವುದು ವಾಡಿಕೆ, ಇಲ್ಲಿ ಹೆವಿ ಬಣ್ಣ ಬಣ್ಣದ ಪರದೆ ಬೇಡ. ಸಿನಿಮಾ ನಟನಟಿಯರು ಸಹ ದಿನವಿಡೀ ಕಣ್ಣು ಕೋರೈಸುವ ಬೆಳಕಿನ ಶೂಟಿಂಗ್ ನಲ್ಲಿ ಮುಳುಗಿದ್ದು, ಸಂಜೆ ನಂತರ ಮನೆಗೆ ಹಿಂದಿರುಗಿದಾಗ, ಇಂಥ ಸರಳ ಬಣ್ಣಗಳಿಂದ ಅಲಂಕೃತ ಮನೆ ಅವರ ಮನಸ್ಸಿಗೆ ಎಷ್ಟೋ ತಂಪನ್ನು ನೀಡುತ್ತದೆ. ಈ ಕ್ಷಣಗಳು ಅವರಿಗೆ ಖಾಸಗಿಯದಾಗಿರುತ್ತವೆ. ಇಲ್ಲಿ ಸಂಭಾಷಣೆ, ಶೂಟಿಂಗ್ ನ ಕಿರಿಕಿರಿ ಇಲ್ಲದೆ ಅವರು ಮನಶ್ಶಾಂತಿ ಬಯಸುತ್ತಾರೆ.
ಬಣ್ಣಗಳ ಪ್ರಾಮುಖ್ಯತೆ
ಇಂಟೀರಿಯರ್ ಡಿಸೈನಿಂಗ್ ಇಲ್ಲದಿದ್ದರೆ ಮನೆ ಆಶ್ರಮದ ಹಾಗೆ ತೋರುತ್ತದೆ. ಇಂಟೀರಿಯರ್ಸ್ ನಿಂದ ನಿಮ್ಮ ಜೀವನಶೈಲಿ ಎಂಥದ್ದು ಎಂಬುದು ತಿಳಿಯುತ್ತದೆ, ಹೀಗಾಗಿ ನೀವು ನಿಮ್ಮ ಮನೆಯ ಗೃಹಾಲಂಕಾರದತ್ತ ವಿಶೇಷ ಗಮನ ನೀಡಬೇಕು. ಹೀಗೆ ಇಂಟೀರಿಯರ್ಸ್ ರೆಡಿ ಮಾಡಿಸುವಾಗ ಅಲ್ಲಿ ಬಣ್ಣಗಳು ಬಲು ಪ್ರಾಮುಖ್ಯತೆ ವಹಿಸುತ್ತವೆ. ಬಣ್ಣ ಎದ್ದು ಕಾಣುವಂತಿರಬೇಕು, ಆದರೆ ಕಣ್ಣಿಗೆ ರಾಚುವಂತಿರಬಾರದು.
ಇಂದು ಎಲ್ಲರೂ ಬಯಸುವುದು ಲೈಟ್ ಕಲರ್ಸ್ ಮಾತ್ರ. ಇದು ಕಂಗಳಿಗೆ ಹೆಚ್ಚಿನ ಆರಾಮ ನೀಡುತ್ತದೆ. ಇದರಲ್ಲಿ ಬಿಳಿ ಬಣ್ಣ, ಆಫ್ ವೈಟ್ ಪ್ರಮುಖ ಎನಿಸಿವೆ. ಇದರ ನಂತರ ಗೃಹಾಲಂಕಾರದಲ್ಲಿ ಹೂ (ಸಹಜ ಯಾ ಕೃತಕ) ಮುಖ್ಯವಾಗುತ್ತದೆ. ಮನೆಯಲ್ಲಿ ಎಲ್ಲಾ ಕಡೆ ಬಳುಕುವ ಹೂಗಳನ್ನಿರಿಸಿ ಅಲಂಕರಿಸಿದರೆ ಚಂದ! ಹೂಕುಂಡಗಳು ಹೆಚ್ಚಿದ್ದರೂ ಅಂದ! ಹೂ, ಹಸಿರಿನ ಎಲೆಗಳ ಈ ಅಲಂಕಾರ ಎಂಥವರ ಮನಸ್ಸನ್ನೂ ಗೆಲ್ಲಬಲ್ಲದು, ಇದರಿಂದ ಮನೆ ಎಷ್ಟೋ ತಾಜಾ ಅನಿಸುತ್ತದೆ. ಒಂದೇ ಬಗೆಯದನ್ನು ಬಳಸದೆ ಪ್ರತಿ ಸಲ ಬಗೆಬಗೆಯದನ್ನು ವಿಭಿನ್ನ ರೀತಿಯಲ್ಲಿ ಅಲಂಕರಿಸಿ ಸಂಭ್ರಮಿಸಿ! ಇದರಿಂದ ಗೃಹಾಲಂಕಾರದಲ್ಲಿ ಹೊಸ ಬಗೆಯ ನಾವೀನ್ಯತೆ ಮೂಡುತ್ತದೆ.





