ಸಾಧಕರಿಗೆ ಆತ್ಮೀಯ ಅಭಿನಂದನೆ :
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿದ್ಯಾಪೀಠ ವಾರ್ಡ್ ನ ಸದಸ್ಯರಾದ ಎಂ. ವೆಂಕಟೇಶ್ (ಸಂಗಾತಿ)ರವರ 50ನೇ ಹುಟ್ಟುಹಬ್ಬ ಸುವರ್ಣ ಸಂಭ್ರಮದ ಪ್ರಯುಕ್ತ ಮೌಂಟ್ ಜಾಯ್ ಎಕ್ಸ್ ಟೆನ್ಶನ್ ನ ಕಮ್ಮಾರಿ ಸಂಘ ಕಲ್ಯಾಣ ಮಂದಿರದಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ವಿಶಿಷ್ಟ ವರ್ಣರಂಜಿತ ವಿನೂತನ ಕಾರ್ಯಕ್ರಮದಲ್ಲಿ ಕ್ರೀಡೆ, ಸಂಗೀತ, ಸಾಹಿತ್ಯ, ಸಂಸ್ಕೃತಿ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪೂರ್ಣಪ್ರಜ್ಞ ವಿದ್ಯಾಪೀಠದ ವಿದ್ವಾನ್ ಎ. ಹರಿದಾಸ ಭಟ್ಟ, ಯುವ ಬರಹಗಾರ ಗುರುರಾಜ ಪೋಶೆಟ್ಟಿ ಹಳ್ಳಿ (ಪ್ರಣವ) ಮುಂತಾದವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಬಿ.ಬಿ.ಎಂ.ಪಿ.ಯ ಮಹಾಪೌರ ಬಿ.ಎಸ್. ಸತ್ಯನಾರಾಯಣ, ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ಬಸವನಗುಡಿ ವಿಧಾನಸಭಾ ಕ್ಷೇತ್ರದ ಎಲ್.ಎ. ರವಿಸುಬ್ರಹ್ಮಣ್ಯ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಹೊಸ ಕೃತಿಯ ಲೋಕಾರ್ಪಣೆ :
ಹುಬ್ಬಳ್ಳಿಯ ಚೇಂಬರ್ ಆಫ್ ಕಾಮರ್ಸ್ ನಲ್ಲಿ, ನೃಪತುಂಗ ಸಾಹಿತ್ಯ ವೇದಿಕೆ ವತಿಯಿಂದ, ಭಾಸ್ಕರ ಹೆಗಡೆ ವಿರಚಿತ `ನಂಬಿಕೆ ಮತ್ತು ವಾಸ್ತು’ ಪುಸ್ತಕ ಬಿಡುಗಡೆ ಮಾಡಲಾಯಿತು. ಈ ಸಮಾರಂಭದಲ್ಲಿ ಪ್ರಮುಖ ಸಾಹಿತಿಗಳಾದ ಆರೂರು ಲಕ್ಷ್ಮಣ ಶೇಟ್, ನಿರಂಜನ ವಾಲಿಶೆಟ್ಟರ್, ತಾಲೂಕಾ ಚುಟುಕ ಸಾಹಿತ್ಯಾಧ್ಯಕ್ಷರಾದ ಪದ್ಮಜಾ ಉಮರ್ಜಿ, ಸಿ.ಜಿ. ಧಾರವಾಡ ಶೆಟ್ಟರ್, ಚೆನ್ನಬಸಪ್ಪ ಹೊರಕೇರಿ ಮುಂತಾದವರು ಉಪಸ್ಥಿತರಿದ್ದರು.
ಮನಸೂರೆಗೊಂಡ ಚಿತ್ರಕಲಾ ಪ್ರದರ್ಶನ :
ಚಿಕ್ಕಲ್ಲಸಂದ್ರದ ಬೆಂಗಳೂರು ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಜರುಗಿದ ಸಾಂಸ್ಕೃತಿಕ ಉತ್ಸವದಲ್ಲಿ ಖ್ಯಾತ ಚಿತ್ರಕಲಾವಿದ ಶಿವಕುಮಾರ್ ರಚಿಸಿದ ನೂರಾರು ತೈಲವರ್ಣದ ಕಲಾಕೃತಿಗಳು ಹಾಗೂ ಅಪರೂಪದ ಛಾಯಾಚಿತ್ರಗಳು ಪ್ರದರ್ಶನಗೊಂಡು ಎಲ್ಲರ ಮನಸೂರೆಗೊಂಡವು. ಅದರಲ್ಲೂ ಪ್ರಸ್ತುತ ಹೆಣ್ಣಿನ ಮೇಲೆ ನಡೆಯುತ್ತಿರುವ ಲೈಂಗಿಕ ಹಲ್ಲೆಯನ್ನು ಬಿಂಬಿಸುವ ಕಲಾಕೃತಿಯಂತೂ ಮನೋಜ್ಞವಾಗಿ ಮೂಡಿಬಂದಿತ್ತು.
ಭರತನಾಟ್ಯ ರಂಗಪ್ರವೇಶ :
ಇತ್ತೀಚೆಗೆ ಬೆಂಗಳೂರಿನ ಮಲ್ಲೇಶ್ವರಂ ಸೇವಾ ಸದನದಲ್ಲಿ ಕುಮಾರಿ ಅಶಿತಾಳ ಭರತನಾಟ್ಯ ರಂಗಪ್ರವೇಶ ಶಾಸ್ತ್ರೋಕ್ತವಾಗಿ ನೆರವೇರಿತು. ಸುಪರ್ಣಾ ವೆಂಕಟೇಶ್ ರ ನೇತೃತ್ವದಲ್ಲಿ ತರಬೇತಿ ಪಡೆದಿದ್ದ ಅಶಿತಾ, ಸಾಯಿ ಆರ್ಟ್ಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಮಾರ್ಗದರ್ಶನದಲ್ಲಿ ತನ್ನ ಅಮೋಘ ನೃತ್ಯಾರ್ಪಣೆಯಿಂದ ಜನಮಾನಸವನ್ನು ಗೆದ್ದುಕೊಂಡಳು.
ಸನ್ಮಾನ ಸಮಾರಂಭ :
ಕೋಲಾರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಕರ್ನಾಟಕ ರಾಜ್ಯ ಚುಟುಕು ಸೌರಭ ಕಾವ್ಯೋತ್ಸವ ಕಾರ್ಯಕ್ರಮದಲ್ಲಿ ಬೆಂಗಳೂರಿನ ಕವಿ ವೇ.ಎಸ್. ಕೃಷ್ಣಮೂರ್ತಿ, ತುಮಕೂರಿನ ಪದ್ಮಾ ಕೃಷ್ಣಮೂರ್ತಿ, ಗದಗದ ಕೊತ್ತಲ ಮಹದೇವಪ್ಪ ಹಾಗೂ ಸಾಗರದ ಜಿ. ನಾಗರಾಜ ತೊಂಟ್ರಿರವರಿಗೆ ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಸಂಚಾಲಕರಾದ ಡಾ. ಎಂ.ಜಿ.ಆರ್. ಅರಸ್ `ಚುಟುಕು ಭೂಷಣ’ ಪ್ರಶಸ್ತಿ ನೀಡಿ ಗೌರವಿಸಿದರು. ಕೋಲಾರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಡಾ. ಕೆ.ಎಂ.ಜೆ. ಮೌನಿ, ಕಾರ್ಯಾಧ್ಯಕ್ಷ ಅರವಿಂದ್ ಭೀ.ಕಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಮನೆಯಂಗಳವೇ ನಾಟ್ಯಾಲಯ :
ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ತ್ಯಾಗರಾಜನಗರದ ಆಯುರ್ವೇದ ಪಂಡಿತರಾದ ಪ್ರಸಾದ್ ರಂಗಾಚಾರ್ ರ ಮನೆಯಂಗಳದ ಉತ್ಸವದಲ್ಲಿ ಶ್ರೀಕೃಷ್ಣ ಜಯಂತಿಯನ್ನು ವೈಭವವಾಗಿ ಆಚರಿಸಲಾಯಿತು. ಇದರ ಸಲುವಾಗಿ ಖ್ಯಾತ ನಾಟ್ಯ ವಿದೂಷಿ ಮೀರಾ ಹಾಗೂ ಶಿಷ್ಯ ವೃಂದದಿಂದ ಜರುಗಿದ ಭರತನಾಟ್ಯ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಮನಸೂರೆಗೊಂಡಿತು.
ಎಂಜಿನಿಯರ್ ಗಳ ದಿನಾಚರಣೆ : ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮದಿನದ ಪ್ರಯುಕ್ತ ಎಂಜಿನಿಯರ್ ಗಳ ದಿನಾಚರಣೆಯ ಅಂಗವಾಗಿ ಶಾಲಾ ಮಕ್ಕಳಿಗೆಂದೇ ನಗರದ ಯಲಹಂಕದ ಜಲ ಮತ್ತು ಮಲಿನ ಜಲ ಕಲಿಕಾ ಕೇಂದ್ರವಾದ ಥೀಮ್ ಪಾರ್ಕ್ ನಲ್ಲಿ ಏರ್ಪಡಿಸಿದ್ದ ನೀರು ಸರಬರಾಜು ಮತ್ತು ನೈರ್ಮಲ್ಯೀಕರಣದಲ್ಲಿ ಸರ್ ಎಂ. ವಿಶ್ವೇಶ್ವರಯ್ಯನವರು ನೀಡಿದ ಕೊಡುಗೆಯ ವಿಷಯಕ್ಕೆ ಸಂಬಂಧಿಸಿದಂತೆ ಭಾಷಣ ಸ್ಪರ್ಧೆ ಜರುಗಿತು. ಶ್ರೀಕೃಷ್ಣ ಇಂಟರ್ ನ್ಯಾಷನಲ್ ಶಾಲೆಯ ಆದಿತ್ಯ ವಸಿಷ್ಠ ಹಾಗೂ ಆ್ಯಡನ್ ಪಬ್ಲಿಕ್ ಶಾಲೆಯ ಕೆ. ಸೃಜನಾ ಬಹುಮಾನ ಪಡೆದರು. ಮಳೆ ನೀರು ಕೊಯ್ಲಿನ ವಿಶೇಷ ತಜ್ಞರಾದ ವಿಶ್ವನಾಥ್ ರವರ ಉಪಸ್ಥಿತಿಯಲ್ಲಿ ಥೀಮ್ ಪಾರ್ಕಿನ ಅಧೀಕ್ಷಕ ಅಭಿಯಂತರರಾದ ಆರ್.ಪಿ. ಮಲ್ಲಿಕ್ ಅಧ್ಯಕ್ಷತೆ ವಹಿಸಿದ್ದರು.`ಸಾಧ್ವಿ’ ಕೂಚಿಪುಡಿ ನೃತ್ಯೋತ್ಸವ ಇತ್ತೀಚೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ರಂಗಸಂಪದ ತಂಡದವರಿಂದ, ವೈಜಯಂತಿಕಾಶಿ ನಿರ್ದೇಶನದಲ್ಲಿ ಅವರದೇ ಆದ `ಸಾಧ್ವಿ’ ಎಂಬ ಸುಮನೋಹರ ಕೂಚಿಪುಡಿ ನೃತ್ಯೋತ್ಸವ ಆಯೋಜಿಸಲಾಗಿತ್ತು. ಸಚಿವೆ ಉಮಾಶ್ರೀ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಡಾ. ಎಸ್. ಶೈಲಜಾ ರಚಿಸಿ, ಉಮಾ ಕುಮಾರ್ ಸಂಗೀತ ಸಂಯೋಜಿಸಿದ್ದರೆ, ವೈಜಯಂತಿ ಕಾಶಿ ಪ್ರಧಾನ ಪಾತ್ರದಲ್ಲಿ ಮಿಂಚಿದರು.
ಜಾನಪದ ಸಮೂಹ ಗಾಯನ :
ರಂಗಸಂಸ್ಥಾನ ಸಂಸ್ಥೆಯು ಶೇಷಾದ್ರಿಪುರಂ ಅಕಾಡೆಮಿ ಆಫ್ ಬಿಸ್ ನೆಸ್ ಸ್ಟಡೀಸ್, ಸಹಯೋಗದಲ್ಲಿ ಇತ್ತೀಚೆಗೆ ಬಂಡ್ಲಹಳ್ಳಿ ವಿಜಯಕುಮಾರ್ ನಿರ್ದೇಶನದಲ್ಲಿ `ಜಾನಪದ ಸಂಪಿಗೆ’ ಜಾನಪದ ಸಮೂಹ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಕಾರ್ಯಕ್ರಮದಲ್ಲಿ ಶೇಷಾದ್ರಿಪುರಂ ಶಿಕ್ಷಣ ದತ್ತಿ ಸಂಸ್ಥೆಯ ಗೌ.ಪ್ರಧಾನ ಕಾರ್ಯದರ್ಶಿಗಳಾದ ಡಾ. ಡೆ. ಪಿ. ಕೃಷ್ಣ, ಸಂಸ್ಕೃತಿ ಚಿಂತಕರಾದ ಡಾ. ಎಂ.ಜಿ. ಚಂದ್ರಶೇಖರಯ್ಯ, ಜಾನಪದ ಗಾಯಕ ಬಂಡ್ಲಹಳ್ಳಿ ವಿಜಯಕುಮಾರ್ ಹಾಗೂ ಪ್ರಾಂಶುಪಾಲರಾದ ಪ್ರೊ. ಜಯರಾಮ್ ಉಪಸ್ಥಿತರಿದ್ದರು, ಮುರಳೀಧರ್ ಕಾರ್ಯಕ್ರಮ ನಿರೂಪಿಸಿದರು.`ಇಲ್ನಾ’ ಅಧ್ಯಕ್ಷರ ಆಯ್ಕೆ ಇತ್ತೀಚೆಗೆ ಆಗ್ರಾದಲ್ಲಿ ನಡೆದ ಇಂಡಿಯನ್ ಲ್ಯಾಂಗ್ವೇಜಸ್ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ (ಇಲ್ನಾ)ನ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ, ಯುವತಿಯರ ಅಚ್ಚುಮೆಚ್ಚಿನ ಮಾಸಪತ್ರಿಕೆ `ಗೃಹಶೋಭಾ’ ಹಾಗೂ ಪುಟಾಣಿಗಳ ಮುದ್ದಿನ `ಚಂಪಕ’ ಮಾಸಪತ್ರಿಕೆಗಳು ಮಾತ್ರವಲ್ಲದೆ, 10 ಭಾಷೆಗಳಲ್ಲಿ 35 ಪತ್ರಿಕೆಗಳನ್ನು ಪ್ರಕಟಿಸುತ್ತಿರುವ, ರಾಷ್ಟ್ರೀಯ ಖ್ಯಾತಿವೆತ್ತ ಡೆಲ್ಲಿ ಪ್ರೆಸ್ ಪ್ರಕಟಣಾ ಸಮೂಹದ ಪ್ರಧಾನ ಸಂಪಾದಕ, ಪ್ರಕಾಶಕ, ಮುದ್ರಕ ಹಾಗೂ ಮಾಲೀಕರಾದ ಶ್ರೀ ಪರೇಶ್ ನಾಥ್, ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಪುನರಾಯ್ಕೆಗೊಂಡರು.
ಗುರುವಂದನಾ ಮಹೋತ್ಸವ :
ಯಲಹಂಕ ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಸಮೀಪದ ಕಾಕೋಳಿನ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಇತ್ತೀಚೆಗೆ ಪಾಂಚಜನ್ಯ ಪ್ರತಿಷ್ಠಾನ ಹಾಗೂ ಕಾಕೋಳು ಸರ್ಕಾರಿ ಪ್ರೌಢಶಾಲೆಗಳ ಸಂಯುಕ್ತ ಆಶ್ರಯದಲ್ಲಿ `ಶಿಕ್ಷಕರ ದಿನಾಚರಣೆ’ ಸಲುವಾಗಿ ಗುರುವಂದನಾ ಮಹೋತ್ಸವ ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ನಾಡೋಜ ಪ್ರೊ. ಜಿ. ವೆಂಕಟಸುಬ್ಬಯ್ಯ ಆಗಮಿಸಿ ನಿವೃತ್ತ ಅಧ್ಯಾಪಕರಾದ ವೈ.ಎಚ್. ವೆಂಕಟೇಶ್ ಪ್ರಸಾದ್ ಮತ್ತು ಶಿಕ್ಷಕಿ ಎ. ವಿನೋದಮ್ಮನವರಿಗೆ ಮೈಸೂರು ಪೇಟ, ಶಾಲು, ಸ್ಮರಣಿಕೆಗಳನ್ನು ನೀಡಿ ಗೌರವ ಸಲ್ಲಿಸಿದರು.
ಲಯನೆಸ್ ಮಾಸ್ ಇನ್ಸ್ಟೀಷನ್ :
ಬೆಂಗಳೂರಿನ ಜೆ.ಎಸ್.ಎಸ್. ಸಭಾಂಗಣದಲ್ಲಿ ಇತ್ತೀಚೆಗೆ ಲಯನ್ಸ್ ಗ್ರೂಪ್ ಜಿಲ್ಲಾ ರಾಜ್ಯಪಾಲರಾದ ಟಿ.ಜೆ. ರಾಮಮೂರ್ತಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಲಯನ್ ಮಣಿ ಅರಸು ಎಂ. ಸೇಥಿ ಅಧ್ಯಕ್ಷತೆ ವಹಿಸಿದ್ದರೆ, ಕೌನ್ಸಿಲ್ ಅಧ್ಯಕ್ಷಿಣಿ ಲಯನೆಸ್ ನಾಗರತ್ನಾ ಮಂಜುನಾಥ್ ಮುಂದಾಳತ್ವ ವಹಿಸಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಿಕೊಟ್ಟರು.
ಯಶಸ್ವಿ ಸಂವಾದ ಕಾರ್ಯಕ್ರಮ :
ಡೆಲ್ಲಿ ಪ್ರೆಸ್ ಪ್ರಕಟಣಾ ಬಳಗದ ಹೆಮ್ಮೆಯ ಆಂಗ್ಲ ಪತ್ರಿಕೆ `ದಿ ಕ್ಯಾರವಾನ್,’ ನಯನಾ ಹಾಗೂ ಸಪ್ನಾ ಬುಕ್ ಹೌಸ್ ಆಶ್ರಯದಲ್ಲಿ, ಇತ್ತೀಚೆಗೆ ಸಪ್ನಾ ಬುಕ್ ಹೌಸ್ ನಲ್ಲಿ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದೇ ಸಂದರ್ಭದಲ್ಲಿ ಸಿದ್ದಲಿಂಗಯ್ಯನವರ `ಊರು ಕೇರಿ’ ಆತ್ಮಕಥೆಯ ಇಂಗ್ಲಿಷ್ ಅನುವಾದ `ಎ ವರ್ಡ್ ವಿತ್ ಯು, ವರ್ಲ್ಡ್’ ಕೃತಿ ಬಿಡುಗಡೆಗೊಂಡಿತು. ದಲಿತ ಕವಿ ಸಿದ್ದಲಿಂಗಯ್ಯನವರ ಜೊತೆ, ಕೃತಿಯ ಅನುವಾದಕ ಎಸ್.ಆರ್. ರಾಮಕೃಷ್ಣ ಹಾಗೂ ಕಥೆಗಾರ ವಿವೇಕ್ ಶಾನ್ ಭಾಗ್ ಉಪಸ್ಥಿತರಿದ್ದು, ಸಂವಾದದಲ್ಲಿ ಪಾಲ್ಗೊಂಡರು.
ದಿ ಕ್ಯಾರವಾನ್ ಸಂವಾದ :
ಡೆಲ್ಲಿ ಪ್ರೆಸ್ ಪ್ರಕಟಣಾ ಸಮೂಹದ ಹೆಮ್ಮೆಯ ಆಂಗ್ಲ ಪತ್ರಿಕೆ `ದಿ ಕ್ಯಾರವಾನ್’ ಇತ್ತೀಚೆಗೆ ಇಂದಿರಾನಗರದ ಆ್ಯಂಟ್ಲಸ್ ಕೆಫೆಯಲ್ಲಿ ಅಮಿತ ಕುಮಾರ್ ವಿರಚಿತ `ಎ ಮ್ಯಾಟರ್ ಆಫ್ ರಾಂಟ್ಸ್’ ಆಂಗ್ಲ ಕೃತಿಯ ಬಿಡುಗಡೆಯ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇವರೊಂದಿಗೆ `ದಿ ಕ್ಯಾರವಾನ್’ ಪತ್ರಿಕೆಯ ಬುಕ್ಸ್ ಎಡಿಟರ್ ಅಂಜುಂ ಹಸನ್ ಸಂವಾದದಲ್ಲಿ ಪಾಲ್ಗೊಂಡರು. ಆಂಗ್ಲ ಸಾಹಿತ್ಯದ ಪ್ರಮುಖ ಮಗ್ಗಲಾದ ಕಾಲ್ಪನಿಕವಲ್ಲದ (ನಾನ್‌ಫಿಕ್ಷನ್) ರಚನೆಗಳ ಕುರಿತು ಸುದೀರ್ಘ ಸಂವಾದ ನಡೆಯಿತು.
ಚಂಪಕ ಕ್ರಿಯೇಟಿವ್ ಚೈಲ್ಡ್ ಕಾಂಟೆಸ್ಟ್ :
ಪುಟಾಣಿಗಳ ಮುದ್ದಿನ ಮಾಸಪತ್ರಿಕೆ `ಚಂಪಕ’ ತಂಡ ಇತ್ತೀಚೆಗೆ ಬೆಂಗಳೂರಿನ ಕಮಲಾಬಾಯಿ ಪ್ರಾಥಮಿಕ ಶಾಲೆಯಲ್ಲಿ, `ಚಂಪಕ ಕ್ರಿಯೇಟಿವ್ ಚೈಲ್ಡ್ ಕಾಂಟೆಸ್ಟ್’ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಅಸಂಖ್ಯಾತ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪುಟಾಣಿಗಳು, ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ಪ್ರಬಂಧ ರಚನೆಯ ಸ್ಪರ್ಧೆಯಲ್ಲಿ ಅತಿ ಉತ್ಸಾಹದಿಂದ ಪಾಲ್ಗೊಂಡರು. ಇದರಲ್ಲಿ ಪ್ರಥಮ ಅತ್ಯುತ್ತಮ 10 ರಚನೆಗಳಿಗೆ `ಚಂಪಕ’ ವತಿಯಿಂದ ಪ್ರಶಸ್ತಿಪತ್ರ ವಿತರಿಸಲಾಯಿತು. ಶಾಲೆಯ ಹೆಡ್ ಮೇಡಂ ಹೆಲೆನ್ ಹಾಗೂ ಕಲಾ ವಿಭಾಗದ ಶಿಕ್ಷಕಿಯರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ಸಂಪನ್ನಗೊಂಡಿತು.