ಮಾನವ ಆಶಾಜೀವಿ. ನಿಂತ ನೀರಿನಂತೆ ಅವನ ಜೀವನ ನಿಲ್ಲುವುದಿಲ್ಲ. ನಿಲ್ಲಲೂ ಬಾರದು. ನಿಂತ ನೀರಿನಲ್ಲಿ ಪಾಚಿ ಕಟ್ಟುತ್ತದೆ. ಕೊಳೆತ ವಾಸನೆ ಬರುತ್ತದೆ. ಆದ್ದರಿಂದ ಪ್ರಗತಿಯತ್ತ ಸಾಗುವುದು ಮಾನವನ ಸಹಜ ಜೀವನ ರೀತಿಯೂ ಹೌದು. ಅದು ಅಭವೃದ್ಧಿಯ ಸಂಕೇತ ಹೌದು. ಪ್ರಗತಿ ಅಥವಾ ಅಭಿವೃದ್ಧಿ ಎಂದಾಗ ಅದರ ನಿಜವಾದ ಅರ್ಥವಾದರೂ ಏನು? ಏನೇ ಬೆಲೆ ತೆತ್ತಾದರೂ ಸರಿ ಹೆಚ್ಚು ಹಣ ಮಾಡುವುದೇ ಅಥವಾ ಅಭಿವೃದ್ಧಿಯ ಹೆಸರಿನಲ್ಲಿ ಪರಿಸರವನ್ನು ನಾಶ ಮಾಡುವುದೇ? ನಿಸರ್ಗದ ಸಂಪತ್ತನ್ನು ಕಾಪಾಡುವುದು ಮಾನವರೆಲ್ಲರ ಕರ್ತವ್ಯ. ನೈಸರ್ಗಿಕ ಸಂಪತ್ತನ್ನು ಕಾಪಾಡಿದಷ್ಟು, ಅರಣ್ಯವನ್ನು ಕಾಪಾಡಿದಷ್ಟೂ, ಮರಗಳನ್ನು, ಹಸಿರನ್ನು ಉಳಿಸಿದಷ್ಟೂ ಶುಭ್ರ ಹವೆ, ಶುಭ್ರ ಜಲ ಮತ್ತು ಕಾಲ ಕಾಲಕ್ಕೆ ಮಳೆಯಾಗುವ ಸಾಧ್ಯತೆ ಇರುತ್ತದೆ ಮತ್ತು ಹವಾಮಾನ ತಂಪಾಗಿರುತ್ತದೆ.

ಆದರೆ ಮಾನವ ಎಂದಿನಿಂದ ಅಭಿವೃದ್ಧಿಯ ಹೆಸರಿನಲ್ಲಿ ನಿಸರ್ಗಕ್ಕೆ ಲಗ್ಗೆ ಹಾಕಿದನೋ, ಕಾಡನ್ನು ನಾಶ ಮಾಡಿದನೋ ಆಗಿನಿಂದಲೂ ಎಲ್ಲವೂ ಏರುಪೇರಾಗುತ್ತಿದೆ. ಮಳೆ ಇಲ್ಲ, ಬೆಳೆ ಇಲ್ಲ. ಭೂಮಿಯ ನೀರಿನ ಸೆಲೆ ಆಳಕ್ಕಿಳಿದು ಹೋಗಿದೆ. ಆಕಾಶಕ್ಕೆ ತೂತು ಮಾಡುವಷ್ಟು ಪ್ರಕೃತಿಯ ವಿಕೋಪಕ್ಕೆ ಕಾರಣನಾಗಿದ್ದಾನೆ ಮಾನವ. ಹೀಗಾದರೆ ನಮ್ಮ ಮುಂದಿನ ಪೀಳಿಗೆಯ ಗತಿ ಏನು? ಅವರಿಗೆ ನಾವು ಏನನ್ನು ನೀಡದಿದ್ದರೂ ಶುಭ್ರ ವಾಯು, ಶುಭ್ರ ಜಲವನ್ನಾದರೂ ನೀಡಬೇಕಲ್ಲವೇ?

ಕೆಟ್ಟ ಮೇಲೆ ಬುದ್ಧಿ ಎನ್ನುವಂತೆ ಈಗೀಗ ಸ್ವಲ್ಪ ಸ್ವಲ್ಪ ಎಲ್ಲರೂ ಎಚ್ಚೆತ್ತುಕೊಳ್ಳುತ್ತಿದ್ದಾರೆ. ಆದರೂ ನಾವು ಹಾಳು ಮಾಡಿರುವ ಪ್ರಕೃತಿಯ ಮುಂದೆ ಉಳಿಸುವ ಕಾರ್ಯ ತೃಣ ಮಾತ್ರ. ಆದರೂ ಈ ಕಾಳಜಿ ಮನುಜನಿಗೆ ಬಂದಿದೆ ಎಂದಾಗ ಒಂದಿಷ್ಟು ಮನಸ್ಸಿಗೆ ಮುದವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ನಗರಗಳಲ್ಲಿ ರಸ್ತೆ ಸರಿ ಇಲ್ಲದಿದ್ದರೂ ಸಾಕಷ್ಟು ಗುಂಡಿಗಳಿದ್ದರೂ ನಮ್ಮ ಬೆಂಗಳೂರಿಗೆ ಉದ್ಯಾನ ನಗರಿ ಎನ್ನುವ ಹೆಸರನ್ನು ಉಳಿಸಲು ನಗರದಲ್ಲಿ ಸಾಕಷ್ಟು ಉದ್ಯಾನವನಗಳು ಅರ್ಥಾತ್‌ ಪಾರ್ಕುಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ನಿಜಕ್ಕೂ ಕೆಲವು ಪಾರ್ಕುಗಳನ್ನು ಕಂಡಾಗ ಕಣ್ಮನಗಳಿಗೆ ತಂಪಾಗುವುದಂತೂ ನಿಜವೇ ಸರಿ. ಹೀಗೆಯೇ ಬೆಂಗಳೂರಿನ ಜಯನಗರದ ಬೃಂದಾವನ ಪಾರ್ಕಿಗೆ ಹೋದಾಗ ಅಲ್ಲಿಯ ಹಸಿರನ್ನು ಕಂಡು ನಿಜಕ್ಕೂ ಸಂತೋಷವೆನಿಸಿತು. ಈ ಚಿತ್ರಗಳನ್ನು ನೋಡಿದಾಗ ಇದು ಯಾವುದೋ ವಿದೇಶದ ಪಾರ್ಕ್‌ ಇರಬೇಕು ಎಂದೆನಿಸುತ್ತದೆ. ಆದರೆ ಇದು ನಮ್ಮ ಬೆಂಗಳೂರಿನ ಪಾರ್ಕಿನ ನೋಟ. ಬೆಂಗಳೂರಿನಲ್ಲಿ ಬಹಳಷ್ಟು ಚಂದದ ಪಾರ್ಕುಗಳಿವೆ.

ಹಸಿರಿನ ರಸದೂಟ

ಕಣ್ಮನ ತಣಿಸುವಷ್ಟು ಹಸಿರು. ಅದನ್ನೂ ಸಹ ಎಷ್ಟು ಸುಂದರವಾಗಿ ರೂಪಿಸಿದ್ದಾರೆಂದರೆ, ತಿಳಿ ಹಸಿರು, ನಂತರ ದಟ್ಟ ಹಸಿರು, ಅದರ ಮಧ್ಯೆ ಹೊಳೆಯುವ ಕೆಂಪನೆಯ ಎಲೆಗಳ ಗಿಡಗಳು, ಒತ್ತಾಗಿ ಬೆಳೆದಿರುವ ಗಿಡಗಳನ್ನು ಸ್ವಲ್ಪ ದೂರದಿಂದ ನೋಡಿದರೆ ಒಂದು ಸುಂದರ ರಂಗೋಲಿಯನ್ನು ನೋಡಿದಂತಾಗುತ್ತದೆ. ಅಲ್ಲವೇ ಸುಂದರ ಮೂರ್ತಿಗಳು, ಒಂದೆಡೆ ಕೊಳಲೂದುವ ಕೃಷ್ಣ ನಮ್ಮನ್ನು ನೋಡುತ್ತಿದ್ದರೆ, ಮತ್ತೊಂದೆಡೆ ನವಿಲು ಮುಂದೆ ಸಾಗುವಂತೆ ಭಾಸವಾಗುತ್ತದೆ. ಮತ್ತೊಂದೆಡೆ ತನ್ನ ಕೊಂಬುಗಳನ್ನು ಎತ್ತಿ ತೋರಿಸುತ್ತಾ ನಿಂತ ಜೋಡಿ ಕಾಡೆಮ್ಮೆಗಳ ಹೊಳೆಯುವ ಕಪ್ಪನೆಯ ಬಣ್ಣದ ಮೂರ್ತಿಗಳು, ಕೃಷ್ಣನ ಮೂರ್ತಿಯ ಮುಂದೆ ತಿಳಿ ಹಸುರಿನ ಗಿಡಗಳ ಹಾಸಿದ್ದರೆ ಪಕ್ಕದಲ್ಲಿ ಗಾಢ ಹಸುರಿನ ಸಸ್ಯ ರಾಶಿ, ಹಿಂಭಾಗಕ್ಕೆ ತಿಳಿ ಕಂದು ಬಣ್ಣದ ಚಾಮರದಂತಹ ಗಿಡಗಳು.

ಹಸಿರಿನ ಮುಂದಿನ ಚೆಲುವೆ

sasyaraashiya-madhye-naviluna-gatthu-nOdi

ಈ ಹಸುರಿನ ಮುಂದೆ ಸುಂದರ ಚೆಲುವೆಯೊಬ್ಬಳು ನಿಂತರೆ ನೋಡಲು ಮತ್ತೂ ಚೆನ್ನ ಅಲ್ಲವೇ? ಹರಿಯುವ ನೀರಿನ ಹಿನ್ನೆಲೆಗೆ ಬಣ್ಣ ಬಣ್ಣದ, ಚಂದದ ನೋಟ ನೋಡುವ ಕಲ್ಲು ಹಾಸು. ಒಂದೆಡೆ ಒತ್ತಾದ ಕೆಂಬಣ್ಣದ ಎಲೆಗಳ ರಾಶಿಯನ್ನು ಬಿಂಬಿಸುವ ಸಸ್ಯ ನೋಟ, ನಿಂತ ನವಿಲಿನ ಸುತ್ತ ಬಣ್ಣ ಬಣ್ಣದ ಹಸಿರಿನ ಚಿತ್ತಾರ, ಉದ್ಯಾನವನದ ಮಧ್ಯದಲ್ಲಿ ಎತ್ತರದ ಕಂಬಗಳು, ಅವುಗಳ ಸುತ್ತಲೂ ಗಗನವನ್ನು ಮುಟ್ಟುವ ಆತುರದಲ್ಲಿರುವ ಎತ್ತರದ ಮರಗಳು, ನೀರಿನ ಕಾರಂಜಿ, ಪಾರ್ಕಿನ ನಡಿಗೆಯ ದಾರಿಯಲ್ಲಿ ಒಂದು ಸುತ್ತು ಹಾಕುವಷ್ಟರಲ್ಲಿ ಬಣ್ಣ ಬಣ್ಣದ, ಬಗೆ ಬಗೆಯ ಸಸ್ಯರಾಶಿಯ ನೋಟದ ಔತಣ ಕಣ್ಣಿಗೆ ಹಬ್ಬವನ್ನು ನೀಡುತ್ತದೆ. ಈ ಉದ್ಯಾನವನಗಳಲ್ಲಿ ಎಂತಹ ಬೇಸಿಗೆಯಾದರೂ ಹೊರಗಿನದಕ್ಕಿಂತ ಒಂದೆರಡು ಡಿಗ್ರಿಯಾದರೂ ಉಷ್ಣಾಂಶ ಕಡಿಮೆ ಇರುತ್ತದೆ.

ಆಡೋಣ ಬಾ, ಬಾರೋ…..

naama-palaka

ಈ ಗಿಡ ಮರಗಳ ಮಧ್ಯೆ ಮಕ್ಕಳ ಆಟದ ತಾಣ, ಉಯ್ಯಾಲೆ, ಜಾರುಗುಪ್ಪೆ, ತಿರುಗಣಿಯಂತಹ ಒಂದಷ್ಟು ಕ್ರೀಡಾ ಪರಿಕರಗಳು, ಮತ್ತೊಂದೆಡೆ ದೊಡ್ಡವರಿಗೆ ವ್ಯಾಯಾಮದ ಸಲಕರಣೆಗಳು, ತೆರೆದ ಆಕಾಶದ ಕೆಳಗೆ ಯಾವ ವ್ಯಾಯಾಮವನ್ನಾದರೂ ಮಾಡಬಹುದು. ಈ ಕೊರೋನಾದ ಸಮಯದಲ್ಲಿ ಯಾವುದೇ ಜಿಮ್ ಗೆ ಹೋಗುವ ಬದಲು ಇಲ್ಲಿಯೇ ನಿಮ್ಮ ಕೊಬ್ಬನ್ನು ಕರಗಿಸಬಹುದು. ದೈಹಿಕವಾಗಿ, ಆರೋಗ್ಯಕ್ಕೆ ಅನುವು ಮಾಡುವ ಪಾರ್ಕ್‌ ಗಳ ಮಧ್ಯಭಾಗದಲ್ಲಿ ಅಲ್ಲವೇ ಇರುವ ಬೆಂಚುಗಳು, ಅಲ್ಲಿ ಕುಳಿತು ಮಾತನಾಡುವವರ ಕಷ್ಟ ಸುಖಗಳನ್ನು ತೋಡಿಕೊಳ್ಳುವವರ ಆತ್ಮಕತೆಗಳನ್ನೇ ತನ್ನೊಳಗೆ ಹುದುಗಿಸಿಕೊಂಡಿರುತ್ತದೆ. ಕಷ್ಟ ಸುಖ ಮಾತಾಡುವವರ ಹೃದಯ ಹಗುರ ಮಾಡಿಕೊಳ್ಳುವ ತಾಣ ಹೌದು.

ಮನದಲ್ಲಿ ಅಡಗಿಸಿಕೊಂಡ ಮಾತುಗಳು

parkina-mumbhaaga

ಮನೆಯಲ್ಲಿಯೇ ಕುಳಿತು ಸದಾ ಟಿವಿ ನೋಡುವುದಕ್ಕಿಂತ ತಂಪನೆಯ ವಾತಾವರಣದ ಪಾರ್ಕುಗಳು ಎಲ್ಲರಿಗೂ ಪ್ರಿಯವೇ. ಹಿರಿಯ ನಾಗರಿಕರಿಗಂತೂ ಸಂಜೀವಿನಿ ಇದ್ದಂತೆ. ದಿನದ ಒಂದಷ್ಟು ಸಮಯ ಪಾರ್ಕಿನಲ್ಲಿ ಕಳೆದು ಹೋಗಿಬಿಡುತ್ತದೆ. ತಮ್ಮ ವಯೋಮಾನದವರ ಜೊತೆ ಮಾತುಕತೆ, ಕಷ್ಟ ಸುಖಗಳ ಪರಸ್ಪರ ಹಂಚುವಿಕೆ ಮನಸ್ಸಿಗೆ ಸಮಾಧಾನ ನೀಡುತ್ತದೆ. ಸಂಜೆಯಾಗುವ ತನಕ, ಕತ್ತಲಾಗುವ ತನಕ ಪಾರ್ಕ್‌ ಅವರಿಗೆ ಆಸರೆ ನೀಡುತ್ತದೆ. ಆದರೂ ನಗರದ ಜನಸಂಖ್ಯೆಯನ್ನು ಗಮನಿಸಿದಾಗ ನಮ್ಮಲ್ಲಿ ಪಾರ್ಕ್‌ ಗಳಿಗೆ ಬರುವವರ ಸಂಖ್ಯೆ ಅಷ್ಟೇನೂ ಹೆಚ್ಚಿಲ್ಲ. ಒಟ್ಟಾರೆ ನಮ್ಮ ಬೆಂಗಳೂರಿನ ಪಾರ್ಕ್‌ ಗಳನ್ನು ಅಭಿವೃದ್ಧಿಗೊಳಿಸಿ ನಿರ್ವಹಿಸುತ್ತಿರುವವರಿಗೆ ಖಂಡಿತಾ ಒಂದು ವೇದನೆಯನ್ನು ಹೇಳಲೇಬೇಕು.

ಓ ಹಸಿರೇ ನಿನಗೆ ಮಾತೊಂದು ಹೇಳುವೆ

ನೀನಿಲ್ಲದೆ ನಮಗೇನಿಲ್ಲಾ ಎಂದುಸುರುವೆ

ಉದ್ಯಾನದ ಬಾಲಕ, ಬಾಲಕಿ, ಕೃಷ್ಣಾ, ನವಿಲು

ಎಲ್ಲರೂ ಸದಾ ಕುಲು ಕುಲು ನಗಲು ಬಾಳು ದಾರಿ ಕಂಡಿತು

ನಮಗಿನ್ನು ನೀಡುವಾ ಮುಂದಿನ ಪೀಳಿಗೆಗೆ ಶುಭ್ರ ಗಾಳಿಯನ್ನು…

ಮಂಜುಳಾ ರಾಜ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ