ರಂಗ ಚಟುವಟಿಕೆ, ಬೀದಿ ನಾಟಕಗಳಿಂದ `ಲಕ್ಷಣ’ದ `ನಕ್ಷತ್ರಾ’ಳ ವಿಜಯಲಕ್ಷ್ಮಿಯವರ ಅಭಿನಯದ ಹಾದಿ ಬಲು ರೋಚಕವಾಗಿದೆ.

ಕಪ್ಪಗಿದ್ದರೂ `ಲಕ್ಷಣ’ವಾಗಿರುವ ಹುಡುಗಿಯ ಪಾತ್ರದಲ್ಲಿ ನಟಿಸುತ್ತಿರುವ ವಿಜಯಲಕ್ಷ್ಮಿ ಈಗ ಮನೆ ಮಾತಾಗಿಬಿಟ್ಟಿದ್ದಾಳೆ. `ಗೃಹಶೋಭಾ’ದ ಮಹಿಳಾ ವಿಶೇಷಾಂಕಕ್ಕಾಗಿ ನೀಡಿದ ಸಂದರ್ಶನದಲ್ಲಿ, ಕಿರುತೆರೆಗೆ ಬಂದ ಬಗ್ಗೆ ಹಾಗೂ ಅದಕ್ಕೂ ಮುಂಚೆ `ರಂಗ ವಿಜಯ’ದ ಜೊತೆಗಿನ ತನ್ನ ನಂಟನ್ನು ಇಲ್ಲಿ ನೆನಪಿಸಿಕೊಂಡಿದ್ದಾರೆ.

ಅಭಿನಯದ ಹೆಜ್ಜೆ

ವಿಜಯಲಕ್ಷ್ಮಿ ಮೂಲತಃ ಕೋಲಾರ ಜಿಲ್ಲೆ ಮಾಲೂರಿನವರು. ತಂದೆ ರಾಧಾಕೃಷ್ಣ, ತಾಯಿ ಉದಯಲಕ್ಷ್ಮಿ. ಕುಟುಂಬದ ಯಾರೊಬ್ಬರಿಗೂ ಅಭಿನಯದ ಸಂಪರ್ಕ ಇಲ್ಲ. ಪಿಯುಸಿ ಓದುತ್ತಿದ್ದಾಗ ಆಕಸ್ಮಿಕ ಘಟನೆಯೊಂದು ವಿಜಯಲಕ್ಷ್ಮಿ ಅವರಲ್ಲಿನ ಅಭಿನಯದ ಸುಪ್ತ ಪ್ರತಿಭೆಯನ್ನು ಹೊರಹೊಮ್ಮಿಸಿತು ಎನ್ನಬಹುದು.

ಕಾಲೇಜಿನಲ್ಲಿ ನಾಟಕವೊಂದರ ರಂಗ ತಾಲೀಮು ನಡೆದಿತ್ತು. ಅದರಲ್ಲಿ ನಟಿಸುತ್ತಿದ್ದ ಹುಡುಗನೊಬ್ಬನಿಗೆ ಹೇಗೆ ಭಾವಾಭಿನಯ ತೋರಿಸಬೇಕೆಂಬ ಬಗ್ಗೆ ಗೊಂದಲವಿತ್ತು. ಅಲ್ಲಿಯೇ ಕುತೂಹಲದಿಂದ ನೋಡುತ್ತಾ ನಿಂತಿದ್ದ ವಿಜಯಲಕ್ಷ್ಮಿ ಆ ಹುಡುಗನಿಗೆ ಹಾಗಲ್ಲ, ಹೀಗೆ ನಟಿಸಬೇಕೆಂದು ಅಭಿನಯಿಸಿ, ಸಂಭಾಷಣೆ ಹೇಳಿ ತೋರಿಸಿದರು.

ಆಕೆಯ ಉಪನ್ಯಾಸಕರು, “ನೀನು ಅಭಿನಯಕ್ಕೆ ಮಾರ್ಗದರ್ಶನ ನೀಡುವಷ್ಟು ಮಟ್ಟಿಗೆ ತಿಳಿದುಕೊಂಡಿದ್ದರೆ, ನೀನೇ ಏಕೆ ಆ ಪಾತ್ರವನ್ನು ಮಾಡಬಾರದು?” ಎಂದು ಸವಾಲು ಹಾಕಿದರು. ಆ ಸವಾಲನ್ನು ಗಂಭೀರವಾಗಿ ತೆಗೆದುಕೊಂಡು, ಆ ಪಾತ್ರದಲ್ಲಿ ಲೀಲಾಜಾಲವಾಗಿ ಅಭಿನಯಿಸಿ, ಕಾಲೇಜು, ತಂಡ ಜಿಲ್ಲಾ ಮಟ್ಟದವರೆಗೆ ಹೋಗಿ ಅಭಿನಯಿಸುವಂತೆ ಮಾಡಿದರು. ಅದೇ ಅವಳನ್ನು ಅಭಿನಯದತ್ತ ಇನ್ನಷ್ಟು ಆಸಕ್ತಿ ತೋರಿಸುವಂತೆ ಮಾಡಿತು.

ರಂಗ ವಿಜಯದ ನಂಟು

ಅಲ್ಲಿಂದ ಮುಂದೆ ವಿಜಯಲಕ್ಷ್ಮಿ `ರಂಗ ವಿಜಯ’ದ ನಂಟು ಅಂಟಿಸಿಕೊಂಡು, ವಿಜಯ ಅವರ ಮಾರ್ಗದರ್ಶನದಲ್ಲಿ ಅನೇಕ ಬಗೆಯ ರಂಗ ಚಟುವಟಿಕೆಗಳಲ್ಲಿ ಪಾಲ್ಗೊಂಡರು. ಹೆಣ್ಣು ಭ್ರೂಣಹತ್ಯೆ, ಪ್ಲಾಸ್ಟಿಕ್‌ ಸಮಸ್ಯೆ, ಎಚ್‌ಐವಿ ಈ ಮುಂತಾದ ವಿಷಯಗಳ ಬಗ್ಗೆ ಹಳ್ಳಿ ಹಳ್ಳಿಗಳಿಗೆ ಹೋಗಿ ಬೀದಿ ನಾಟಕ ಮಾಡಿದರು. ಅದು ಅವರಲ್ಲಿ ಅಭಿನಯದ ಬಗೆಗಿನ ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸುವಂತೆ ಮಾಡಿತು.

ಬಿಎಸ್‌ಸಿ ಓದುತ್ತಿದ್ದಾಗ `ಹೆಣ್ಣು ಭ್ರೂಣಹತ್ಯೆ’ ವಿಷಯದ ಬಗೆಗಿನ ಒಂದು ನಾಟಕ ಏರ್ಪಾಟಾಗಿತ್ತು. ಅದರಲ್ಲಿ ವಿಜಯಲಕ್ಷ್ಮಿಯದು ಗರ್ಭಿಣಿಯ ಪಾತ್ರ. ಆ ಪಾತ್ರ ಅದೆಷ್ಟು ಪರಿಣಾಮಕಾರಿಯಾಗಿ ಮೂಡಿತೆಂದರೆ ನಾಟಕ ನೋಡಲು ಸೇರಿದ್ದ ಗಣ್ಯಾತಿಗಣ್ಯರು ಅವರ ಅಭಿನಯವನ್ನು ಮನಸಾರೆ ಹೊಗಳಿದ್ದಲ್ಲದೆ, ನಗದು ಹಣ ಕೊಟ್ಟು ಸನ್ಮಾನಿಸಿದರು.

ಆಡಿಷನ್ಗಾಗಿ ಅಲೆದಾಟ

ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವೀಧರೆಯಾದ ವಿಜಯಲಕ್ಷ್ಮಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳಬೇಕೆಂಬ ಉತ್ಕಟೇಚ್ಛೆಯಿಂದ ಅನೇಕ ಕಡೆ ಆಡಿಷನ್‌ ಕೊಟ್ಟರು. ಆದರೆ ಎಲ್ಲೂ ಅವಕಾಶ ಸಿಗಲಿಲ್ಲ.

ಕೊನೆಗೊಮ್ಮೆ ಅಂತಹದೊಂದು ಅವಕಾಶ ಬಂತು. `ಕಪ್ಪಗಿದ್ದರೂ ಲಕ್ಷಣವಾಗಿರುವ ಹುಡುಗಿ ಬೇಕು,’ ಎಂಬ ಪ್ರಕಟಣೆ ಗಮನಿಸಿ, ವಿಜಯಲಕ್ಷ್ಮಿ ಆಡಿಷನ್‌ ಕೊಟ್ಟು ಬಂದರು. ಆದರೆ ಕೋವಿಡ್‌ ಕಾರಣದಿಂದ ಶೂಟಿಂಗ್‌ ಆರಂಭವಾಗದೆ, ತನ್ನ ಅಭಿನಯದ ಭವಿಷ್ಯ ತೂಗುಯ್ಯಾಲೆಯಲ್ಲಿದೆ ಎನಿಸತೊಡಗಿತು.

ಅಂತೂ ಶೂಟಿಂಗ್‌ ದಿನಾಂಕ ನಿಗದಿಯಾದಾಗ, ವಿಜಯಲಕ್ಷ್ಮಿಗೆ ಕಿರುತೆರೆಯಲ್ಲಿ ನಟಿಸಬೇಕೆಂಬ ಬಗ್ಗೆ ಇದ್ದ ಆಸೆ ಕೊನೆಗೂ ಈಡೇರಿತು. ಸಿಕ್ಕಿದ್ದು ಚಿಕ್ಕ ಪುಟ್ಟ ಪಾತ್ರವಲ್ಲ, ಎಲ್ಲರೂ ಗಮನ ಸೆಳೆಯುವಂತಹ ಪರಿಣಾಮಕಾರಿ ಪಾತ್ರ.

ಎಫ್ಎಂ ಕೇಳಿದ್ದೇ ಕೇಳಿದ್ದು

ಲಕ್ಷಣದ ನಕ್ಷತ್ರಾಳ ಆರಂಭಿಕ ಪಾತ್ರ ರೇಡಿಯೋ ಜಾಕಿಯದ್ದು. ಅಂದರೆ ಅರಳು ಹುರಿದಂತೆ ಮಾತನಾಡುವ ಹುಡುಗಿಯ ಪಾತ್ರ. ಆಡಿಷನ್‌ ಗಾಗಿ ಆ ರೀತಿಯಲ್ಲಿ ಮಾತಾಡಿ ವಿಜಯಲಕ್ಷ್ಮಿ ಸೈ ಎನಿಸಿಕೊಂಡಳು. ಆದರೆ ನಿರ್ದೇಶಕರು ನೀನು ಇನ್ನೂ ಚೆನ್ನಾಗಿ ಮಾತನಾಡಲು ಪ್ರಯತ್ನಿಸಬೇಕು. ಅದಕ್ಕಾಗಿ ಎಫ್‌.ಎಂ ಕೇಳಬೇಕು ಎಂದು ಹೇಳಿದ್ದರು. ಅಷ್ಟು ಹೇಳಿದ್ದೇ ತಡ ವಿಜಯಲಕ್ಷ್ಮಿ 24×7 ಎಫ್‌.ಎಂ ಕೇಳಿದ್ದೇ ಕೇಳಿದ್ದು. ಆರ್‌.ಜೆಗಳು ಹೇಗೆ ಮಾತನಾಡುತ್ತಾರೆ. ಜನರೊಂದಿಗೆ ಹೇಗೆ ಸಂಪರ್ಕಿಸಿ ಪಟಪಟಾಂತ ನಿರರ್ಗಳವಾಗಿ ಮಾತನಾಡುತ್ತಾರೆ, ಎಂಬುದನ್ನು ತಿಳಿದುಕೊಂಡರು. ಮುಂದಿನ ಕಂತುಗಳಲ್ಲಿ ಆರ್‌.ಜೆ ಸಖಿಯಾಗಿ ಅಭಿನಯಿಸಿದ ವಿಜಯಲಕ್ಷ್ಮಿಯ ಪಾತ್ರ ಸ್ವತಃ ಆರ್‌.ಜೆಗಳಿಗೆ ಹುಬ್ಬೇರಿಸುವಂತೆ ಮಾಡಿತ್ತು.

`ಲಕ್ಷಣ’ ಆರಂಭವಾಗಿ ಅನೇಕ ತಿಂಗಳುಳೇ ಕಳೆದಿವೆ. ಅವರು ಹೊರಗೆ ಎಲ್ಲಿಯಾದರೂ ಹೋದರೆ, ಮಕ್ಕಳು ಸಹ ಗುರುತು ಹಿಡಿದು ಮಾತಾಡಿಸುತ್ತಾರೆ. ಇದು ವಿಜಯಲಕ್ಷ್ಮಿಗೆ ಬಹಳ ಖುಷಿ ಕೊಡುತ್ತದೆ. ತಮ್ಮೂರಿನ ಹುಡುಗಿ ಟಿವಿಯಲ್ಲಿ ಬರ್ತಿರೋದು ಮಾಲೂರಿನ ಅವಳ ಗೆಳತಿಯರಿಗೂ ಬಹಳ ಹೆಮ್ಮೆಯನ್ನುಂಟು ಮಾಡಿದೆ.

ಹಿರಿಯರಿಂದ ಅಭಿನಯ ಪಾಠ

`ಲಕ್ಷಣ’ದಲ್ಲಿ ಹಿರಿಯರ ದಂಡೇ ಅಭಿನಯಿಸುತ್ತಿದೆ. ಅಕೆಯ ತಂದೆಯ ಪಾತ್ರ ನಿಭಾಯಿಸುತ್ತಿರುವ ಕೀರ್ತಿ ಭಾನು ವಿಜಯಲಕ್ಷ್ಮಿಗೆ ಅಭಿನಯದ ಪಟ್ಟುಗಳನ್ನು ಹೇಳಿಕೊಡುತ್ತಿರುತ್ತಾರೆ

`ಯುವರತ್ನದಲ್ಲೂ ಪಾತ್ರ

ವಿಜಯಲಕ್ಷ್ಮಿ ಪುನೀತ್‌ ರಾಜ್‌ ಕುಮಾರ್‌ ಜೊತೆಗೆ ಯುವರತ್ನದಲ್ಲಿ ಕಾಲೇಜು ಹುಡುಗಿಯ ಪುಟ್ಟ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪುನೀತ್‌ಅವರು ಸಹ ಕಲಾವಿದರೊಂದಿಗೆ ಎಷ್ಟು ಆತ್ಮೀಯರಾಗಿ ನಡೆದುಕೊಳ್ಳುತ್ತಿದ್ದರು ಎನ್ನುವುದರ ಬಗ್ಗೆ ನೆನಪಿಸಿಕೊಂಡು ಅವರ ಅಗಲಿಕೆಯ ಬಗ್ಗೆ ಭಾವುಕರಾದರು.

ಕೀಳರಿಮೆ ಬೇಡ

`ಅಭಿನಯ ಕ್ಷೇತ್ರಕ್ಕೆ ಬರಬೇಕೆಂಬ ಉತ್ಸಾಹ ಹೊಂದಿರುವವರಿಗೆ ನಿಮ್ಮ ಸಲಹೆ ಏನು?’ ಎಂಬ ಪ್ರಶ್ನೆಗೆ, “ನಾನು ಹೀಗಿದ್ದೇನೆ, ಹಾಗಿದ್ದೇನೆ ನನಗೆ ಪಾತ್ರ ದೊರಕಬಹುದೇ ಎಂಬ ಬಗ್ಗೆ ಬಹಳಷ್ಟು ಜನರಲ್ಲಿ ಕೀಳರಿಮೆ ಇರುತ್ತದೆ. ಅದರಿಂದ ಹೊರಬಂದು ಅಭಿನಯದ ಬಗ್ಗೆ ಗಮನ ಕೇಂದ್ರೀಕರಿಸಿದರೆ ಎಂಥವರೂ ಕೂಡ ಪಾತ್ರ ಮಾಡಬಹುದಾಗಿದೆ.”

ಅಶೋಕ ಚಿಕ್ಕಪರಪ್ಪಾ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ