ಹಿರಿಯಣ್ಣ ತಮ್ಮ ಮಲ ಸಹೋದರ ಎಂದು ತಿಳಿದ ನಂತರ ವಾಸು ಮತ್ತು ಪ್ರಿಯಾರ ನಡವಳಿಕೆಯಲ್ಲಿ ವಿಚಿತ್ರ ಬದಲಾವಣೆಗಳಾದವು. ಮುಂದೆ ಇವರ ಬಾಂಧವ್ಯ ಮಧುರವಾಗಿ ಮಾರ್ಪಟ್ಟಿತೇ....?
``ಅಮ್ಮಾ.... ನಾನು ಸತೀಶ್....''
``ಹ್ಞೂಂ..... ಗೊತ್ತಾಯ್ತು ಹೇಳು....''
``ಎಲ್ಲಾ ಚೆನ್ನಾಗಿದ್ದೀರಾ......? ಪ್ರಿಯಾಳ ಮದುವೆ ಫಿಕ್ಸ್ ಆಯ್ತಂತೆ.... ಹುಡುಗ ಯಾವ ಊರು? ನಿಶ್ಚಿತಾರ್ಥ ಯಾವಾಗ? ನೀನು ಏನ್ಮಾಡ್ತಿದ್ದೀಯಾ....?''
ಹೀಗೆ ಒಂದರ ಹಿಂದೆ ಮತ್ತೊಂದು ಪ್ರಶ್ನೆ ಕೇಳುತ್ತಿದ್ದ. ಅಮ್ಮನ ಫೋನಿನ ಸ್ಪೀಕರ್ ಆನ್ ಆಗಿದ್ದರಿಂದ ಅಲ್ಲಿಯೇ ತಿಂಡಿ ತಿನ್ನುತ್ತಿದ್ದ ವಾಸು, ಕುಳಿತಲ್ಲಿಂದಲೇ ಏರು ಸ್ವರದಲ್ಲಿ, ``ಮತ್ತೆ ಏನಂತಮ್ಮಾ ಅವನ ಗೋಳು.... ಬೆಣ್ಣೆ ಹಂಗೆ ಮಾತಾಡಿ ನಿನ್ನ ಹತ್ರ ದುಡ್ಡು ಕಿತ್ಕೊಂಡಿದ್ದು ಸಾಕಾಗ್ಲಿಲ್ವಂತಾ.....? ಇನ್ನೂ ಏನಂತೆ? ನಮ್ಮನ್ನ ನೆಮ್ಮದಿಯಿಂದ ಬದುಕೋಕೆ ಬಿಡು ಅಂತ ಹೇಳು,'' ಎಂದು ತನ್ನ ಅಮ್ಮನಿಗೆ ಹೇಳಿದ.
ಅವನು ಆಡಿದ ಮಾತುಗಳ ಆ ಬದಿಯಲ್ಲಿದ್ದ ಸತೀಶನಿಗೆ ಸ್ಪಷ್ಟವಾಗಿ ಕೇಳುತ್ತಿತ್ತು.
ಈ ಸತೀಶ್, ಭಾಗ್ಯಮ್ಮನ ದಿವಂಗತ ಪತಿಯ ಮೊದಲನೆ ಹೆಂಡತಿಯ ಮಗ. ಸತೀಶನಿಗೆ ಇನ್ನೂ ಮೂರು ವರ್ಷ ಕೂಡ ತುಂಬಿರಲಿಲ್ಲ. ಅವನ ತಾಯಿ ಯಾವುದೋ ಕಾಯಿಲೆಗೆ ತುತ್ತಾಗಿ ಇಹಲೋಕ ತ್ಯಜಿಸಿ, ಪುಟ್ಟ ಸತೀಶನನ್ನು ಪತಿ ಶೇಷಗಿರಿಯ ಮಡಿಲಿಗೆ ಹಾಕಿ ಹೋಗಿದ್ದಳು. ಶೇಷಗಿರಿಗೆ ಅದೇ ತಾನೇ ಕಛೇರಿಯಲ್ಲಿ ಮುಂಬಡ್ತಿ ದೊರೆತಿದ್ದರಿಂದ ಹೆಚ್ಚುವರಿ ಜವಾಬ್ದಾರಿ ಜೊತೆಗೆ ವಿಪರೀತ ಕೆಲಸ ಮಾಡಬೇಕಿತ್ತು. ಇಂತಹ ಸಂದರ್ಭದಲ್ಲಿ ಪುಟ್ಟ ಸತೀಶನನ್ನು ಸರಿಯಾಗಿ ನೋಡಿಕೊಳ್ಳಲು ಆಗದಿರುವುದನ್ನು ಗಮನಿಸಿದ ಅವನ ಹತ್ತಿರದ ಬಂಧು ಬಾಂಧರೆಲ್ಲ ಸೇರಿ ಶೇಷಗಿರಿಯನ್ನು ಒಪ್ಪಿಸಿ ತಮ್ಮ ಪರಿಚಯಸ್ಥ ಕುಟುಂಬದ ಕನ್ಯೆ ಭಾಗ್ಯಮ್ಮನೊಂದಿಗೆ ದೇವಸ್ಥಾನದಲ್ಲಿ ಸರಳವಾಗಿ ಮದುವೆ ಮಾಡಿಸಿದ್ದರು.
ಭಾಗ್ಯಮ್ಮ ಶೇಷಗಿರಿ ಮನೆಗೆ ಕಾಲಿಟ್ಟಾಗ ಸತೀಶ್ ತೊದಲು ನುಡಿಯು ಮೂರು ವರ್ಷದ ಕೂಸಾಗಿದ್ದ. ಮೊದ ಮೊದಲು ಸತೀಶ್ ಭಾಗ್ಯಮ್ಮನನ್ನು ಹೊಂದಿಕೊಳ್ಳಲು ಕೊಂಚ ಹಿಂಜರಿದನಾದರೂ ಭಾಗ್ಯಮ್ಮ ಅವನಿಗೆ ತೋರುತ್ತಿದ್ದ ಅದಮ್ಯ ಪ್ರೀತಿ, ವಿಶ್ವಾಸ, ವಾತ್ಸಲ್ಯದ ಪರಿಣಾಮದಿಂದ ಕೆಲವೇ ದಿನಗಳಲ್ಲಿ ದಿನದ ಮೂರು ಹೊತ್ತು ಆಕೆ. ಹಿಂದೆ ``ಅಮ್ಮಾ..... ಅಮ್ಮಾ....'' ಎಂದು ಸುತ್ತಲಾರಂಭಿಸಿದ.
ಭಾಗ್ಯಮ್ಮ ಕೂಡ ಮನೆಯಲ್ಲಿ ಎಂತಹದೇ ಸಂದರ್ಭ ಬಂದರೂ ಆ ಮಗುವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಸತೀಶ್ ಪ್ರಾಥಮಿಕ ಶಾಲೆಯ ಮೂರನೇ ತರಗತಿಯಲ್ಲಿದ್ದಾಗ ಭಾಗ್ಯಮ್ಮನಿಗೆ ಒಂದು ಗಂಡು ಮಗು, ಅದಾದ ಎರಡು ವರ್ಷಗಳ ನಂತರ ಒಂದು ಹೆಣ್ಣು ಮಗು ಜನಿಸಿತ್ತು. ಗಂಡು ಮಗುವಿಗೆ ವಾಸುದೇವ್, ಹೆಣ್ಣು ಮಗುವಿಗೆ ಪ್ರಿಯಾ ಎಂದು ಹೆಸರಿಟ್ಟರು.
ಇಷ್ಟು ದಿನ ತಾನೊಬ್ಬನೇ ಎಂದು ಬೇಸರದಿಂದ ಇದ್ದ ಸತೀಶನಿಗೆ ತನ್ನ ಜೊತೆಗೆ ಆಡಲು ಒಬ್ಬ ತಮ್ಮ ಹಾಗೂ ತಂಗಿ ಸಿಕ್ಕರೆಂದು ತುಂಬಾ ಸಂತೋಷಪಟ್ಟಿದ್ದ. ಬಾಲದಿಂದಲೂ ಭೋಳೇ ಸ್ವಭಾವದ ಸತೀಶ್, ತಮ್ಮ ತಂಗಿಯರೊಂದಿಗೆ ಪ್ರೀತಿಯಿಂದ ಮಾತನಾಡುತ್ತಾ, ಆಟವಾಡುತ್ತಾ ಅವರೊಂದಿಗೆ ಸಂತೋಷವಾಗಿದ್ದ.
ಸತೀಶ್ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ವಾಸು ಮತ್ತು ಪ್ರಿಯಾ ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದರು. ಶಾಲೆಯಿಂದ ಮನೆಗೆ ಬಂದ ನಂತರ ಆಟ, ಊಟ, ಓದು ಎಲ್ಲವನ್ನೂ ಒಟ್ಟಿಗೆ ಮಾಡುತ್ತಿದ್ದರು.





