ಅಮಾಯಕ ಹಳ್ಳಿ ಹುಡುಗಿಯಾಗಿದ್ದ ಲಾವಣ್ಯಾ ಆಕಸ್ಮಿಕವಾಗಿ ಕನ್ನಡ ಚಿತ್ರರಂಗಕ್ಕೆ ಬಂದು ಆಕಾಶದೆತ್ತರಕ್ಕೆ ಬೆಳೆದುಬಿಟ್ಟಳು. ಮುಂದೆ ಅದೇ ವೇಗದಲ್ಲಿ ಅವನತಿಗೆ ಈಡಾದಳು. ಮುಂದೆ ಅವಳ ಭವಿಷ್ಯ........?
``ಹ್ಹ.....ಹ್ಹ....ಹ್ಹ....ಹ್ಹಾ......''
``ಯಾರು.....? ಯಾರು....?''
``ನಾನಾರೆಂದು ಆಮೇಲೆ ತಿಳಿಸುವೆ. ನಿನ್ನ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗ ನೀನು ಅದೆಷ್ಟು ಜನರ ಮನಸ್ಸಿಗೆ ನೋವನ್ನು ಉಣಿಸಿರುವಿಯೆಂಬುದು ನೆನಪಿದೆಯಾ.....?''
``ನಾನಾ.....? ನಾನ್ಯಾರ ಮನಸ್ಸನ್ನು ನೋಯಿಸಿದ್ದೇನೆ.....? ಛೇ, ಛೇ! ಇಲ್ಲವಲ್ಲ....!''
``ಇಲ್ಲವೇನೇ ಸುಬ್ಬಕ್ಕಾ......? ಲಾವಣ್ಯಾ, ನೀನು ಮಾಡಿದ ತಪ್ಪು ನಿನಗೆ ಅದು ಹೇಗೆ ಗೊತ್ತಾಗುತ್ತೆ ಬಿಡು....? ನಮ್ಮ ಬೆನ್ನು ನಮಗೆ ಕಾಣುವುದಿಲ್ಲವಲ್ಲ ಹಾಗೆ ನಮ್ಮ ತಪ್ಪುಗಳೂ ನಮಗೆ ಕಾಣುವುದೇ ಇಲ್ಲ. ಮೇಲಾಗಿ ಪ್ರತಿಯೊಬ್ಬ ಮನುಷ್ಯನಿಗೆ ತಾನು ಮಾಡಿದ್ದೆಲ್ಲ ಸರಿ ಎಂದೇ ಕಾಣುತ್ತಿರುತ್ತಿದೆ. ಅದಕ್ಕೆ ಸ್ವ ಸಮರ್ಥನೆಯೂ ಕೂಡ ಇರುತ್ತದೆ.''
``ಇಲ್ಲ, ಇಲ್ಲ.... ನೀನು ಹೇಳುವುದೆಲ್ಲ ಸುಳ್ಳು. ಸುಮ್ಮಸುಮ್ಮನೇ ನನ್ನ ಮೇಲೆ ಇಲ್ಲಸಲ್ಲದ ಆರೋಪ ಹೊರಿಸುತ್ತಿರುವಿ? ನಾನ್ಯಾವ ತಪ್ಪನ್ನೂ ಮಾಡಿಲ್ಲ.''
``ಮತ್ತದೇ ಸಮರ್ಥನೇ.....! ನಿನ್ನ ಯಶಸ್ಸಿಗೆ ಕಾರಣರಾದವರೆಲ್ಲರನ್ನೂ ಜಾಡಿಸಿ ಒದ್ದೆಯಲ್ಲ.....?''
``ನಾನಾ.....? ಇನ್ನೊಮ್ಮೆ ಹಾಗೆ ಹೇಳಿದರೆ ಕತ್ತು ಹಿಸುಕಿ ನೀನು ಹುಟ್ಟಿಲ್ಲ ಎಂದು ಅನಿಸಿಬಿಡ್ತೀನಿ.''
``ನೋಡು ನೋಡು.... ಕೋಪ ಮುಂಗೋಪ ಬಹಳ ನಿನಗೆ. ಈ ಕೋಪವೇ ನಿನ್ನನ್ನು ಹಾಳು ಮಾಡಿದ್ದು. ಆನೆ ನಡೆದಿದ್ದೇ ಹಾದಿ ಎಂಬಂತೆ ನೀನು ಆಡಿದ್ದೇ ಆಟವಾಗಿತ್ತು. ನಿನ್ನ ಮೊಂಡುತನ, ಸಿಡುಕುತನ, ವಿತಂಡವಾದ ನಿನ್ನ ಅವನತಿಗೆ ಕಾರಣಾಗಲಿಲ್ಲವೇ.....?''
``ಏಯ್..... ಸುಳ್ಳು ಸುಳ್ಳು ಏಕೆ ಬೊಗಳುತ್ತಿರುವಿ.....?''
``ನಾನೇಕೆ ಸುಳ್ಳು ಹೇಳಲಿ....? `ಸುಳ್ಳು ನಮ್ಮಲ್ಲಿಲ್ಲಯ್ಯಾ.... ಸುಳ್ಳೇ ನಮ್ಮನೆ ದೇವರು....' ಎಂಬುದು ನಿನ್ನ ನಡತೆಯಾಗಿತ್ತು. ನಿಮ್ಮ ಕಾಲೇಜಿನ ವಾರ್ಷಿಕೋತ್ಸವಕ್ಕೆ ಅತಿಥಿಯಾಗಿ ಬಂದಿದ್ದ ಚಲನಚಿತ್ರ ರಂಗದ ಹೆಸರಾಂತ ನಿರ್ದೇಶಕ ಮಲ್ಲಿನಾಥ್ ಅಂದು ನೀನು ಅಭಿನಯಿಸಿದ್ದ ನಾಟಕವನ್ನು ವೀಕ್ಷಿಸಿ ನಿನ್ನ ಅಭಿನಯ ಚಾತುರ್ಯವನ್ನು ಮೆಚ್ಚಿಕೊಂಡರು. `ಈ ಹುಡುಗಿಯಲ್ಲಿ ಪ್ರತಿಭೆ ಇದೆ, ನಟನಾ ಕೌಶಲ್ಯವಿದೆ, ಅವಳೆದೆಯಲ್ಲಿ ಕಲೆಯ ತುಡಿತವಿದೆ, ಉಳಿಯ ಏಟು ಬಿದ್ದಾಗ ಕಲ್ಲು ಚಪ್ಪಡಿಯಲ್ಲೂ ಕಲೆ ಅರಳುವಂತೆ ತಿದ್ದಿ ತೀಡಿದರೆ ಅವಳಲ್ಲಿನ ಅದ್ಭುತ ಪ್ರತಿಭೆ ಹೊರಬರಬಹುದು, ಕನ್ನಡದ ನಂ.ಒನ್ ನಾಯಕಿಯಾಗಿ ಹೊರಹೊಮ್ಮಬಹುದು, ಇವಳೇ ಬೆಳ್ಳಿ ತೆರೆಯ ಭಾವಿ ಯುವರಾಣಿ,' ಎಂದು ಅಂದುಕೊಂಡ ನಿರ್ದೇಶಕರು ನಿನಗೆ ಒಪ್ಪುವಂಥ ಚಿತ್ರಕಥೆ ಒಂದನ್ನು ರಚಿಸಿ, ನಿನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದರು.
``ತಮ್ಮ ಸತತ ಪ್ರಯತ್ನ, ಶ್ರಮದಿಂದ ಅಭಿನಯದಲ್ಲಿ ಇನ್ನೂ ಕಸುಗಾಯಿಯಂತಿದ್ದ ನಿನ್ನನ್ನು ಹಣ್ಣಾಗುವಂತೆ ರೂಪಿಸಿದರು. ಅಕ್ಕಸಾಲಿಗನ ಮೂಸೆಯಲ್ಲಿ ಆಕರ್ಷಕ ರೂಪು ತಳೆಯುವ ಚಿನ್ನದಂತೆ ನಿನ್ನಲ್ಲಿದ್ದ ನಟನಾ ಕೌಶಲ್ಯಕ್ಕೆ ಮೆರುಗು ತಂದಿದ್ದರು. ಆಗ ಬೆಳ್ಳಿ ತೆರೆಯಲ್ಲಿದ್ದ ನಟಿಯರು ಒಬ್ಬರಿಗಿಂತ ಒಬ್ಬರು ಚೆಂದುಳ್ಳಿ ಚೆಲುವೆಯರು. ಅವರ ಅಭಿನಯ ಅಷ್ಟೇ ಮನೋಜ್ಞವಾಗಿತ್ತು. ಅವರಂತೆ ನೀನೇನು ಅಪ್ರತಿಮ ಸುಂದರಿಯಾಗಿರಲಿಲ್ಲ. ಒಂದೆಂದರೆ ನಿನ್ನ ಕಣ್ಸೆಳೆಯುವ ಮೈಮಾಟದಿಂದ ಚಿತ್ರರಸಿಕರ ಹೃದಯದಲ್ಲಿ ರಾರಾಜಿಸತೊಡಗಿದೆ. ದಿನ ಬೆಳಗಾಗುವುದರೊಳಗೆ ನೀನು ಸ್ಟಾರ್ ಆಗಿಬಿಟ್ಟೆ.''

ಲಾವಣ್ಯಾಳ ಮನಸ್ಸಿನ ವಾಹನಕ್ಕೆ ರಿಸರ್ವ್ ಗೇರ್ ಬಿತ್ತು.





