ಭತ್ತದ ಕಣಜ ತಿ. ನರಸೀಪುರ ತಾಲೂಕಿನ ಕುರುಬೂರು ಗ್ರಾಮದ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇಳಿಬರುವ ಕಾಲ ಸನ್ನಿಹಿತವಾಗಿದೆ. ಇದಕ್ಕೆ ಕಾರಣರಾದವರು, ಮೈಸೂರು ಜಿಲ್ಲೆಯ ಗ್ರಾಮೀಣ ಪ್ರದೇಶದ ರೈತ ಕುಟುಂಬದಲ್ಲಿ ಜನಿಸಿದ ಬಿ.ಚೈತ್ರಾ.

ಗ್ರಾಮೀಣ ಪ್ರದೇಶದಲ್ಲೇ ತನ್ನ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿರುವ ಈಕೆ ಜ.13ರಿಂದ 19ರವರೆಗೆ ನವದೆಹಲಿಯಲ್ಲಿ ನಡೆಯುತ್ತಿರುವ ವಿಶ್ವಕಪ್ ಮಹಿಳಾ ಖೋ ಖೋ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಕ್ರೀಡಾಕೂಟವನ್ನು ಖೋ ಖೋ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಮೊದಲ ಬಾರಿಗೆ ಆಯೋಜಿಸಲಾಗಿದ್ದು, ಈ ಕ್ರೀಡಾಕೂಟದಲ್ಲಿ ಸುಮಾರು 20 ದೇಶಗಳು ಭಾಗವಹಿಸಲಿವೆ.

Chaitra-parents

ಕುರುಬೂರು ಗ್ರಾಮದ ರೈತ ದಂಪತಿ ಬಸವಣ್ಣ ಮತ್ತು ನಾಗರತ್ನ ಅವರ ಪುತ್ರಿ ಬಿ. ಚೈತ್ರಾ ಸಾಧನೆಯ ಮಾರ್ಗದಲ್ಲಿರುವ ಹೆಮ್ಮೆಯ ಕನ್ನಡತಿ ಎಂಬುದೇ ಹೆಗ್ಗಳಿಕೆ.

ಖೋ ಖೋ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲು ದಕ್ಷಿಣ ಭಾರತದಿಂದ ಆಯ್ಕೆಯಾಗಿರುವ ಏಕೈಕ ಕ್ರೀಡಾಪಟು ಮಾತ್ರವಲ್ಲ, ಮೈಸೂರಿನಿಂದ ಆಯ್ಕೆಯಾಗಿರುವ ಮೊದಲಿಗಳು ಈಕೆ ಎನ್ನಬಹುದು.

ಕಳೆದ ತಿಂಗಳಿಂದಲೂ ದೆಹಲಿಯಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಖೋ ಖೋ ಮಹಿಳಾ ಶಿಬಿರದಲ್ಲಿ ಪಾಲ್ಗೊಂಡಿದ್ದ ಚೈತ್ರಾ, ವಿಶ್ವಕಪ್ ಮಹಿಳಾ ಖೋ ಖೋ ಪಂದ್ಯಾವಳಿಯಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ.

b-chaitra-coach

ಬಡ ರೈತ ಕುಟುಂಬದಿಂದ ಬಂದ ಬಿ. ಚೈತ್ರಾಗೆ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಕೊಡಿಸಲು ಪೋಷಕರು ಆರ್ಥಿಕವಾಗಿ ಶಕ್ತರಾಗಿಲ್ಲ. ಆದರೆ, ಆಕೆಯ ಬುದ್ಧಿವಂತಿಕೆಯನ್ನು ಗಮನಿಸಿದ್ದ ಕುಟುಂಬದ ಸ್ನೇಹಿತರ ಒತ್ತಾಯದ ಮೇರೆಗೆ, ಪೋಷಕರು ಆಕೆಯನ್ನು ಕುರುಬೂರು ಗ್ರಾಮದ ವಿದ್ಯಾದರ್ಶಿನಿ ಶಾಲೆಗೆ ಸೇರಿಸಿದ್ದರು. ಅದೇ ಶಾಲೆಯ ಗಣಿತ ಶಿಕ್ಷಕ ಕೆ. ಮಂಜುನಾಥ್ ಖೋ ಖೋ ಕ್ರೀಡಯಲ್ಲಿ ಬಹಳ ಆಸಕ್ತಿಯುಳ್ಳವರು. ಆ ಶಾಲೆಯ ವಿದ್ಯಾರ್ಥಿಗಳಿಗೆ ಖೋ ಖೋ ತರಬೇತಿಯನ್ನೂ ಸಹ ನೀಡುತ್ತಿದ್ದರು. ಅವರು ಚೈತ್ರಾಳ ಪ್ರತಿಭೆಯನ್ನು ಗುರುತಿಸಿ, ಆಕೆಗೆ ತರಬೇತಿ ನೀಡಲು ಮುಂದಾದರು.

ವಿದ್ಯಾದರ್ಶಿನಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ಚೈತ್ರಾ, ತಿ. ನರಸೀಪುರದ ವಿದ್ಯೋದಯ ಪಿ ಯು ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಮುಗಿಸಿ, ಅಲ್ಲಿನ ಪಿಎಂಆರ್ ಕಾಲೇಜಿನಲ್ಲಿ ಬಿ ಎ ಪದವಿ ಪೂರ್ಣಗೊಳಿಸಿದರು. ಇದೀಗ ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿರುವ ಶ್ರೀ ಶಂಭುಲಿಂಗೇಶ್ವರ ಕಾಲೇಜಿನಲ್ಲಿ ಎರಡನೇ ವರ್ಷದ ಬಿಪಿಡಿ (ದೈಹಿಕ ಶಿಕ್ಷಣದಲ್ಲಿ ಪದವಿ) ವ್ಯಾಸಂಗ ಮಾಡುತ್ತಿದ್ದಾರೆ.

ತಂಡದ ಸದಸ್ಯೆ

ಅಖಿಲ ಭಾರತ ಅಂತರ ವಿಶ್ವ ವಿದ್ಯಾಲಯ ಖೋ ಖೋ ಚಾಂಪಿಯನ್​ಶಿಪ್ -2022ರಲ್ಲಿ ಚಿನ್ನದ ಪದಕ ಗೆದ್ದ ಚೈತ್ರಾ, ಮೈಸೂರು ವಿಶ್ವವಿದ್ಯಾಲಯದ ಮಹಿಳಾ ಖೋ ಖೋ ತಂಡದ ಸದಸ್ಯೆಯಾಗಿದ್ದರು.

ಖೋ ಖೋ ಫೆಡರೇಷನ್ ಆಫ್ ಇಂಡಿಯಾ (ಕೆಕೆಎಫ್​ಐ) ಸ್ಥಾಪಿಸಿದ “ಅತ್ಯತ್ತಮ ಸಬ್ ಜೂನಿಯರ್ ಆಟಗಾರ್ತಿ” ಪುರಸ್ಕಾರಕ್ಕೂ ಭಾಜನರಾಗಿದ್ದರು. ಸೀನಿಯರ್ ರಾಷ್ಟ್ರೀಯ ಪಂದ್ಯಾವಳಿ, ಖೇಲೋ ಇಂಡಿಯಾ ಚಾಂಪಿಯನ್​ಶಿಪ್ ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಎರಡು ಬಾರಿ ರಾಜ್ಯವನ್ನು ಪ್ರತಿನಿಧಿಸಿದ್ದರು. ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಮಹಿಳಾ ಖೋ ಖೋ ಪಂದ್ಯಾವಳಿಯ ಅರ್ಹತೆ ಪಡೆದ ಮಂಡ್ಯಾ ವಿಶ್ವವಿದ್ಯಾಲಯದ ಮಹಿಳಾ ಖೋ ಖೋ ತಂಡದಲ್ಲೂ ಪಾಲ್ಗೊಂಡಿದ್ದರು.

ಈ ಕುರಿತು ಸಂತಸ ಹಂಚಿಕೊಂಡಿರುವ ಚೈತ್ರಾ, ಇದು ನನ್ನ ಜೀವನದ ಅತೀ ದೊಡ್ಡ ಸಾಧನೆ. ವಿಶ್ವಕಪ್ ಖೋ ಖೋ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗೆಲ್ಲುವುದು ನನ್ನ ಕನಸು. ತರಬೇತುದಾರರಾದ ಕೆ ಮಂಜುನಾಥ್ ಅವರಿಂದಾಗಿ ನಾನು ಮಟ್ಟಕ್ಕೆ ತಲುಪಿದ್ದೇನೆ. ನನಗೆ ಆತ್ಮವಿಶ್ವಾಸ ತುಂಬಿದ ನನ್ನ ತಂದೆತಾಯಿ ಮತ್ತು ನನ್ನ ಸಹೋದರ ಬಿ.ಚೇತನ್ಗೆ ನಾನು ಚಿರಋಣಿಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಧನ್ಯವಾದ ಹೇಳಿದ ಪೋಷಕರು:

ಸಾಧನೆಗೆ ತರಬೇತಿ ನೀಡಿದ ಕೆ. ಮಂಜುನಾಥ್ ಅವರಿಗೆ ಧನ್ಯವಾದಗಳು. ನಾವು ಮೊದಲು ಆರ್ಥಿಕವಾಗಿ ಸದೃಢರಾಗಿರಲಿಲ್ಲ. ಆದರೆ, ಚಿಕ್ಕವಯಸ್ಸಿನಲ್ಲೇ ಆಕೆಯ ಬುದ್ಧಿವಂತಿಕೆಯನ್ನು ಗುರುತಿಸಿದ ಗ್ರಾಮದ ಕೆಲವರ ಒತ್ತಾಯದ ಮೇರೆಗೆ ವಿದ್ಯಾದರ್ಶಿನಿ ಖಾಸಗಿ ಶಾಲೆಗೆ ಸೇರಿಸಿದೆವು. ಇಂದು ತಮ್ಮ ಮಗಳು ಅದ್ಭುತ ಸಾಧನೆ ಮಾಡಲು ಅದೇ ಕಾರಣವಾಯಿತು,” ಎಂದಿದ್ದಾರೆ ತಾಯಿ ನಾಗರತ್ನ.

ಸಾಧನೆ ಸ್ಫೂರ್ತಿ ಗಣಿತ ಶಿಕ್ಷಕ:

ತಿ. ನರಸೀಪುರ ತಾಲೂಕು ಕುರುಬೂರು ಗ್ರಾಮದ ವಿದ್ಯಾದರ್ಶಿನಿ ಶಾಲೆಯ ಗಣಿತ ಶಿಕ್ಷಕ ಕೆ.ಮಂಜುನಾಥ್, ಖೋ ಖೋ ಆಟಗಾರರನ್ನು ಸಜ್ಜುಗೊಳಿಸುವಲ್ಲಿ ಎತ್ತಿದ ಕೈ. ವಿಶ್ವಕಪ್ ಮಹಿಳಾ ಖೋ ಖೋ ಪಂದ್ಯಾವಳಿಯಲ್ಲಿ ಭಾರತವನ್ನು ಪ್ರತಿನಿಧಿಸುವ ತಂಡಕ್ಕೆ ಆಯ್ಕೆಯಾಗಿರುವ ಚೈತ್ರಾಗೆ ತರಬೇತಿ ನೀಡಿದ್ದು ಈ ಶಿಕ್ಷಕ.

ಸುಮಾರು 15 ವರ್ಷಗಳ ಕಠಿಣ ಪರಿಶ್ರಮ ಅಪೇಕ್ಷಿತ ಫಲಿತಾಂಶ ನೀಡಿದೆ. ಚೈತ್ರಾ ನಮ್ಮ ದೇಶವನ್ನು ಪ್ರತಿನಿಧಿಸಲು ವಿಶ್ವ ಕಪ್ ಪಂದ್ಯಾವಳಿಗೆ ಆಯ್ಕೆಯಾಗಿರುವುದು ಅತ್ಯಂತ ಖುಷಿ ನೀಡಿದೆ. ಆಕೆಗೆ ಇನ್ನಷ್ಟು ಹೆಚ್ಚಿನ ತರಬೇತಿ ನೀಡಲಾಗುವುದು. ವಿಶ್ವ ಕಪ್ಪಂದ್ಯಾವಳಿಯಲ್ಲೂ ಆಕೆ ಸಾಧನೆ ಮಾಡುತ್ತಾಳೆ ಎಂಬ ವಿಶ್ವಾಸ ನನಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ ಕೆ. ಮಂಜುನಾಥ್.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ