ಲಾಕ್‌ ಡೌನ್‌ ಬಹಳಷ್ಟು ಜನರಿಗೆ ಜೀವನ ಕಿತ್ತುಕೊಂಡರೆ, ಮತ್ತಷ್ಟು ಜನರಿಗೆ ಜೀವನ ಕೊಟ್ಟಿತು, ತಮ್ಮಲ್ಲಿರುವ ಪ್ರತಿಭೆಯ ಅನಾವರಣಗೊಳ್ಳುವಿಕೆಯಲ್ಲಿ ಸಹಕಾರಿಯಾಯಿತು. ಎರಡು ವರ್ಷ ಇಡೀ ವಿಶ್ವವೇ ಕಷ್ಟದ ದಿನಗಳನ್ನು ಎದುರಿಸಿತು. ಆ ಸಮಯದಲ್ಲಿ ನೋವೇನೇ ಇದ್ದರೂ ಕೂಡ ಊಟ, ಬಟ್ಟೆ ಜೊತೆಗೊಂದಷ್ಟು ಮನರಂಜನೆ ಬೇಕಿತ್ತು!

ಆ ಸಮಯದಲ್ಲಿ ಬಿತ್ತರವಾಗಿ ಬಹಳಷ್ಟು ಜನರನ್ನು ತನ್ನೆಡೆಗೆ ಆಕರ್ಷಿಸಿಕೊಂಡ ಹಿಂದಿ ಭಾಷೆಯ ಪ್ರಖ್ಯಾತ ಧಾರಾವಾಹಿ ಮಹಾಭಾರತ. ಭಾರತದ ಬಹುತೇಕ ಎಲ್ಲ ಭಾಷೆಗಳಲ್ಲೂ ಪ್ರಸಾರವಾಗಿ ಜನ ಮೆಚ್ಚುಗೆ ಪಡೆಯಿತು. ಕನ್ನಡ ಭಾಷೆಯಲ್ಲಿಯೂ ಬಿತ್ತರವಾಗಿ ಅಪಾರ ಯಶಸ್ಸು ಗಳಿಸಿತು. ಅಲ್ಲಿನ ದ್ರೌಪದಿಯ ಪಾತ್ರಕ್ಕೆ ಕಂಠದಾನ ನೀಡಿ, ಇಂದು ಸುಪ್ರಸಿದ್ಧಿಯನ್ನು ಪಡೆದ ಸ್ಪರ್ಶಾ ಆರ್‌.ಕೆ. ಈ ಲೇಖನದ ಕೇಂದ್ರಬಿಂದು!

ನನ್ನಪ್ಪ, ತಮ್ಮ ಮೊಮ್ಮಗಳಿಗೆ ಹೇಳಿದರು, ನೀವೆಲ್ಲ ಈಗಿನ ಬ್ಯುಸಿ ಲೈಫಿಗೆ ಹೊಂದಿಕೊಂಡವರು. ಮುಂದೆ ನಿಮಗೆಷ್ಟು ಸಮಯ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ. ಪುಸ್ತಕ ಓದಿದರೆ ಒಳಿತು. ಅದಾಗುವುದು ಎಂದೋ? ನಮ್ಮ ಧರ್ಮಗ್ರಂಥಗಳ ಸಣ್ಣ ಪರಿಚಯವಾದರೂ ಇರಲಿ. ಚಿಕ್ಕ ವಯಸ್ಸಿನಲ್ಲಿ ಕೇಳಿದ ಕಥೆಗಳು ಒಂದೆಡೆ, ಈಗ ಕೊಂಚ ಸಮಯವಿದೆ. ಶಾಲಾ ಕಾಲೇಜಿಗೆ ರಜೆ ಇದೆ. ನೋಡುವ ಮನಸ್ಸು ಮಾಡಿ. ಸಧ್ಯ, ದಿನಕ್ಕೆ ಅರ್ಧ ಗಂಟೆ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಮಹಾಭಾರತ ನೋಡಿ. ನಮ್ಮ ಗ್ರಂಥದ ಪರಿಚಯವಾದರೂ ಆದೀತು ಎಂದರು.

ಅದ್ಹೇಗೋ ಮಗಳು ಇದನ್ನು ಬಹಳ ಸೀರಿಯಸ್‌ ಆಗಿ ತೆಗೆದುಕೊಂಡಳು. ನಾನು, ಮಗಳು, ನನ್ನತ್ತೆ ನೋಡಲು ಪ್ರಾರಂಭಿಸಿದೆವು. ಆ ಸೆಟ್ಟಿಂಗ್‌, ಅಲ್ಲಿನ ಪಾತ್ರಧಾರಿಗಳು, ಅವರ ನಟನೆ, ಸಂಭಾಷಣೆ, ಸಂಗೀತ ಬಹಳವೇ ಮುದ ನೀಡಿತು. ಲಾಕ್‌ ಡೌನ್‌ಸಮಯದಲ್ಲಿ, ನಮ್ಮ ಕನ್ನಡದ ಹಲವಾರು ಹೊಸ ಹಾಗೂ ಮುಂಬರುತ್ತಿರುವ ಪ್ರತಿಭೆಗಳಿಗೆ ಇದು ವೇದಿಕೆಯಾಯಿತು. ಆ ಸಾಲಿಗೆ ಸ್ಪರ್ಶಾ ಕೂಡ ಸೇರ್ಪಡೆಯಾದರು ಎಂದರೆ ತಪ್ಪಾಗಲಾರದು.

ಬೆಳೆಯುವ ಸಿರಿ ಮೊಳಕೆಯಲ್ಲಿ

ಎಂ.ಆರ್‌. ಕಮಲಾ ಹಾಗೂ ರಮೇಶ್‌ ರಿಗೆ ಇಬ್ಬರು ಮಕ್ಕಳು. ಅಣ್ಣ ಆಕರ್ಷ್‌ ಕಮಲ ಹಾಗೂ ಸ್ಪರ್ಶಾ ಆರ್‌.ಕೆ. ರಾಜಾಜಿನಗರದ ವಿದ್ಯಾವರ್ಧಕ ಸಂಘದ ವಿದ್ಯಾರ್ಥಿ. ಶಾಲಾದಿನಗಳಲ್ಲಿ ಹೈಪರ್‌ ಚೈಲ್ಡ್! ಶಾಲೆಯ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸುತ್ತ ಬಹುಮಾನಗಳನ್ನು ಮಡಿಲಿಗೆ ತುಂಬಿಕೊಳ್ಳುತ್ತಾ ಬೆಳೆದರು ಸ್ಪರ್ಶಾ!

ಆ ದಿನಗಳು ಹೇಗಿತ್ತೆಂದರೆ, ತಾಯಿ ಹೇಳುತ್ತಿದ್ದರಂತೆ, “ದಮ್ಮಯ್ಯ, ಅಣ್ಣ, ತಂಗಿ ಇಬ್ಬರೂ ಶಾಲಾ ಚಟುವಟಿಕೆಗಳಲ್ಲಿ ಪಾರ್ಟಿಸಿಪೇಟ್‌ ಮಾಡೋದು ನಿಲ್ಲಿಸಿ. ಸಾಕು ನನಗೆ, ನೀವು ತರೋ ಪ್ರೈಜಸ್‌ ಇಡಲು ಮನೇಲಿ ಜಾಗವಿಲ್ಲ,” ಎಂದು. ಅಷ್ಟರ ಮಟ್ಟಿಗೆ ಬಹುಮಾನಗಳು ಮನೆಯನ್ನು ತುಂಬಿತ್ತು!

ಅದರ ಜೊತೆಗೆ ವಾಲಿಬಾಲ್‌, ಬ್ಯಾಡ್‌ ಮಿಂಟನ್‌ ಆಟಗಳಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದರು. ಮನೆಯಲ್ಲೋ ಸಾಹಿತ್ಯದ ವಾತಾವರಣ. ಪಿಕ್‌ ಎನ್‌ ಸ್ಪೀಕ್‌, ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಲು ಬಹಳವೇ ಸಹಕಾರಿಯಾಗುತ್ತಿತ್ತು. ಜೊತೆಗೆ ನಾಟಕ ಹಾಡು ನೃತ್ಯಗಳಲ್ಲಿ ವಿಶೇಷ ಆಸಕ್ತಿ. ತಾಯಿ ಕಮಲಾರೂ ಅತ್ಯುತ್ತಮ ನೃತ್ಯ ಕಲಾವಿದೆ. ತಾಯಿಯೊಟ್ಟಿಗೆ ಪುಟ್ಟ ಸ್ಪರ್ಶ ಕೂಡಾ ನೃತ್ಯ ಕಲಿಕೆಗೆ ಜೊತೆಯಲ್ಲೇ ಹೋಗುತ್ತಿದ್ದು, ಆ ಗುರುಗಳೇ ಇವರ ನೃತ್ಯಾಭ್ಯಾಸಕ್ಕೂ ಮೊದಲ ಗುರುವಾದರು! ವಿಶೇಷ ಏನು ಗೊತ್ತಾ, ತಾಯಿ ಕಮಾರರ ನೃತ್ಯ ರಂಗಪ್ರವೇಶ ಸ್ಪರ್ಶಾ ಹುಟ್ಟಿದ ಮೇಲೆಯೇ ಆಗಿದ್ದು.

ಅದೇಕೋ 10ನೇ ತರಗತಿಗೆ ಬರುವ ಹೊತ್ತಿಗೆ ಹಿಂದೂಸ್ಥಾನಿಯ ಮೇಲೆ ಇವರ ಮನಸ್ಸು ವಾಲಿತು. ಖ್ಯಾತ ಗಾಯಕರಾದ ರಾಧಾಕೃಷ್ಣ ವೇಲುಕರ್‌ ರವರ ಬಳಿ ಕಲಿಕೆಯನ್ನು ಆರಂಭಿಸಿದರು. ಜೊತೆ ಜೊತೆಗೆ ರತ್ನಮಾಲ ಪ್ರಕಾಶ್‌, ಕೆ.ಎಂ. ಕುಸುಮಾರವರ ಬಳಿ ಸುಗಮ ಸಂಗೀತವನ್ನು ಅಭ್ಯಸಿಸುವತ್ತ ಸಾಗಿದರು.

ಕಿರು ತೆರೆಗೆ ಎಂಟ್ರಿ

ಪ್ರಖ್ಯಾತ ಟಿವಿ ಶೋ ಸರಿಗಮಪ ಆಡಿಷನ್‌ ಪ್ರಾರಂಭವಾಗಿತ್ತು. ತಮ್ಮ ಸಂಗೀತದ ರಸಧಾರೆಯನ್ನು ಹರಿಸಿದರು. ಮರುಳಾದ ತೀರ್ಪುಗಾರರು ಸ್ಪರ್ಶಾರನ್ನು ಆಯ್ಕೆ ಮಾಡಿದರು. `ಕೆ.ಎಸ್‌. ಚಿತ್ರಾರ ಧ್ವನಿಯನ್ನು ನಾನು ನಿಮ್ಮಲ್ಲಿ ಆಲಿಸುತ್ತಿದ್ದೇನೆ,’ ಎಂದು ಹಂಸಲೇಖಾ ನುಡಿದಾಗ ಸಂತಸವಾಯಿತು. ಆಗ ನಂದಿತಾ ಇವರ ಮೆಂಟರ್‌ ಆಗಿದ್ದು ಸಣ್ಣ ಪುಟ್ಟ ಕರೆಕ್ಷನ್ಸ್ ಮಾಡುತ್ತಾ ಇವರ ಇಲ್ಲಿನ ಪಯಣಕ್ಕೆ ಸಹಾಯ ನೀಡಿದ್ದರು.

ಬಹಳ ಹಳೆಯ ಹಾಗೂ ತೂಕದ ಕಾರ್ಯಕ್ರಮವಾದ ಎದೆತುಂಬಿ ಹಾಡುವೆನು ಕಾರ್ಯಕ್ರಮಕ್ಕೂ ಆಯ್ಕೆಯಾದರು. ಸಂಗೀತದ ದೇವರೇ ಆಗಿರುವ ಮುಗ್ಧ ಮನದ ಎಸ್‌.ಪಿ.ಬಿ.ಯವರ ಮುಂದೆ ಹಾಡಿ ಸೈ ಎನಿಸಿಕೊಂಡರು. `ಇದೊಂದು ಅನುಭವ! ಅದೃಷ್ಟ! ವೇದಿಕೆ ಮೇಲಿದ್ದಾಗ, ಕ್ಯಾಮೆರಾ ಮುಂದಿದ್ದಾಗ ತಿದ್ದುವುದು ಒಂದು ರೀತಿಯದ್ದಾದರೆ, ಆಫ್‌ ಸ್ಕ್ರೀನ್‌ ಬಂದು ತಿದ್ದಿ ತೀಡುತ್ತಿದ್ದ ಗುಣವಂತರು, ಎಸ್‌.ಪಿ.ಬಿ. ಸರ್‌,’ ಎನ್ನುತ್ತಾ ಭಾವುಕರಾದರು.

ಹಿರಿ ತೆರೆಗೆ ಎಂಟ್ರಿ

ಜೊತೆ ಜೊತೆಗೆ ತಮ್ಮ ಶೈಕ್ಷಣಿಕ ಕ್ಷೇತ್ರದಲ್ಲೂ ಉತ್ತಮ ಅಂಕಗಳೊಂದಿಗೆ ಮುನ್ನಡೆಯುತ್ತ ಸಾಗಿದರು. ಮೈಕ್ರೋ ಬಯಾಲಜಿಯಲ್ಲಿ ಎಂ.ಎಸ್ಸಿ ಮುಗಿಯುತ್ತಿದ್ದಂತೆ, ಬರಗೂರು ರಾಮಚಂದ್ರಪ್ಪನವರ ಅಂಗೂಲಿ ಮಾಲಾ ಚಿತ್ರಕ್ಕೆ ವಿ. ಮನೋಹರ್‌ರವರ ಸಂಗೀತ, ಈ ಚಿತ್ರಕ್ಕೆ ಹಾಡುವ ಮುಖೇನ ಚಲನಚಿತ್ರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು.

2013ರಲ್ಲಿ ಜೀತು ಎಂಬ ಚಿತ್ರಕ್ಕೆ ವಿಕಾಸ್‌ ವಸಿಷ್ಠರ ಸಂಗೀತ ನಿರ್ದೇಶನವಿತ್ತು. ಮುಂದೇ ಇವರೇ ಸ್ಪರ್ಶಾಳ ಕೈ ಹಿಡಿದು ಸತಿಪತಿಗಳಾದರು. ಈ ಚಿತ್ರದ ಗೀತೆಗಳಿಗೆ ಗಾಯಕಿಯಾಗುವ ಮುಖೇನ ಹಿನ್ನೆಲೆ ಗಾಯಕಿಯಾಗಿ ಬಡ್ತಿಯನ್ನು ಪಡೆದರು. ಬಹುಪರಾಕ್‌, ಕೆಂಪಿರುವೆ ಸೇರಿದಂತೆ 25ಕ್ಕೂ ಹೆಚ್ಚಿನ ಚಲನಚಿತ್ರಗಳಿಗೆ ಹಾಡಿದ್ದಾರೆ.

ಅನಂತು v/s ನುಸ್ರತ್‌ ಚಿತ್ರದ ಹೀರೋಯಿನ್‌ಗೆ ಕಂಠದಾನ ನೀಡುb ಮುಖೇನ ಎಂಟ್ರಿ ಕೊಟ್ಟರು. ಸಾಲುಮರದ ತಿಮ್ಮಕ್ಕನವರ ಡಾಕ್ಯುಮೆಂಟರಿಯಲ್ಲೂ ಇವರ ದನಿಯಿದೆ. ಒಂದಷ್ಟು ಸೀರಿಯಲ್ ಗಳೂ ಕೂಡ ಇವರ ಕೈಯಲ್ಲಿತ್ತು. ಎಲ್ಲಾ ಚೆನ್ನಾಗಿ ನಡೆಯುತ್ತಿರುವಾಗಲೇ, ಲಾಕ್‌ ಡೌನ್‌ ಆಗೇಬಿಟ್ಟಿತು. ಶೋಗಳೆಲ್ಲ ನಿಂತುಬಿಟ್ಟವು. ಶೂಟಿಂಗ್‌ ಗಳೂ ನಿಂತುಬಿಟ್ಟವು. ಕೈ ತುಂಬ ಕೆಲಸವಿತ್ತು. ಬ್ಯುಸಿ ಇತ್ತು. ಥಟ್ಟನೆ ಎಲ್ಲ ಸ್ಥಬ್ದವಾದಾಗ ಮನಸ್ಸು ಚಡಪಡಿಸುತ್ತಿತ್ತು. ಹಳೆಯ ಎಪಿಸೋಡುಗಳನ್ನೇ ಮರುಪ್ರಸಾರ ಮಾಡುತ್ತಿದ್ದ ದಿನಗಳವು.

2013ರ ಸುಮಾರಿನಲ್ಲಿ ಮಹಾಭಾರತ ಹಿಂದಿಯಲ್ಲಿ ಬಿತ್ತರವಾಗಿ ಜನಮೆಚ್ಚುಗೆ ಪಡೆದಿತ್ತು. ಅಪಾರ ವೆಚ್ಚದಲ್ಲಿ ಶೂಟಿಂಗ್‌ ಆಗಿತ್ತು. ಈಗದು ಎಲ್ಲಾ ಭಾಷೆಗಳಲ್ಲೂ ಮರುಪ್ರಸಾರವಾಗ ತೊಡಗಿತು. ಮಹಾಭಾರತದ ಕನ್ನಡ ಡಬ್ಬಿಂಗ್‌ ನಿರ್ದೇಶಕರಾದ ನಾಗೇಶ್‌ರವರು ಧ್ವನಿ ಪರೀಕ್ಷೆಗೆ ಇವರನ್ನು ಆಹ್ವಾನಿಸಿದರು. ಗುರುವಾರ ಆಡಿಷನ್‌ ಮುಗಿಯಿತು, ಆಯ್ಕೆಯೂ ಆಯಿತು. ಶುಕ್ರವಾರದಿಂದ ಕೆಲಸ ಪ್ರಾರಂಭ, ಸೋಮಾರದಿಂದ ಟಿವಿಯಲ್ಲಿ ಬಿತ್ತರ! ಅಬ್ಬ ಎಂಥ ಅದೃಷ್ಟ ಇರದು.

ಮೊದಲಿನಿಂದಲೂ ಕೃಷ್ಣ ದ್ರೌಪದಿ ಕಾಂಬಿನೇಷನ್‌ ಎಂದರೆ ಸ್ಪರ್ಶಾರಿಗೆ ಬಲು ಇಷ್ಟ. ಯಾವ ಊಹೆಯೂ ಇಲ್ಲದೆ ನೇರ ಮಹಾಭಾರತದ ಮುಖ್ಯ ಪಾತ್ರವಾದ ದ್ರೌಪದಿಯ ಪಾತ್ರಕ್ಕೆ ಜೀವ ತುಂಬುವ ಕಂಠದಾನ ನೀಡುವ ಸುಕೃತ ಇವರ ಪಾಲಿಗೆ ಒದಗಿ ಬಂದದ್ದು ಸಂತಸ ತಂದಿತು. ಅಚಾನಕ್‌ ಆಗಿ ಬಂದ ಈ ಅವಕಾಶ ಇವರ ಜೀವನದ ಗುರಿಯನ್ನೇ ಬದಲಿಸಿಬಿಟ್ಟಿತು.

ಇದುವರೆವಿಗೂ ಹಾಡುಗಾರ್ತಿ ಎಂದು ಗುರುತಿಸಿಕೊಂಡಿದ್ದ ಸ್ಪರ್ಶಾ ಈಗ ಶ್ರೇಷ್ಠ ಕಂಠದಾನ ಕಲಾವಿದೆ ಎಂದೆನಿಸಿಕೊಂಡರು. ಹಿಂದಿರುಗಿ ನೋಡದಷ್ಟು ಮುಂದೆ ಸಾಗಿದರು. ಈಗದೇ ಇವರ ಜೀವನವಾಗಿದೆ. ಸಾಧನೆಯ ಹಾದಿಯೆಡೆಗೆ ಕೊಂಡೊಯ್ಯುತ್ತಿದೆ. ನಟಿಯ ಭಾವಾಭಿನಯದೊಟ್ಟಿಗೆ ತಮ್ಮ ಧ್ವನಿಯನ್ನು ಸೇರಿಸೋದು, ಅದಕ್ಕೊಂದು ನ್ಯಾಯ ಒದಗಿಸೋದು ಅಷ್ಟು ಸುಲಭದ ಕೆಲಸವೇನಲ್ಲ. ಈ ಒಂದು ಕಾರ್ಯದಲ್ಲಿ ಬಹಳವೇ ಯಶಸ್ಸನ್ನು ಕಂಡು ಇಂದು ಈ ಕ್ಷೇತ್ರದಲ್ಲಿ ಎಲ್ಲರ ಬಾಯಲ್ಲೂ ಸ್ಪರ್ಶಾಳ ಹೆಸರೇ ರಾರಾಜಿಸುತ್ತಿದೆ.

ಇದೊಂದು ಕಲಾ ಕುಟುಂಬ. ತಾಯಿ ಎಂ.ಆರ್‌. ಕಮಲಾ ಸಾಹಿತಿ, ಖ್ಯಾತ ನೃತ್ಯ ಕಲಾವಿದೆ. ಅಣ್ಣ ಆಕರ್ಷ್‌ ತನ್ನ ಹೆಸರಿನೊಂದಿಗೆ ವಿಶೇಷವಾಗಿ ತಾಯಿಯ ಹೆಸರನ್ನು ಸೇರಿಸಿಕೊಂಡು, ಆಕರ್ಷ್‌ ಕಮಲ ಎಂದೇ ಖ್ಯಾತರಾಗಿರುವರು. ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದರು ಕೂಡಾ ಸಾಹಿತ್ಯ ಹಾಗೂ ನಟನೆಯನ್ನು ಅಭ್ಯಸಿಸಿಕೊಂಡಿರುವರು. ಮೆಟ್ರೋ ಸಾಗಾದಲ್ಲಿ ಹಲವಾರು ಕಾಮಿಡಿ ಕಂಟೆಂಟ್‌ ಗಳನ್ನು ಹಾಕುವ ಮುಖೇನ ಪ್ರಸಿದ್ಧರಾಗಿದ್ದಾರೆ.

ಕಂಠದಾನ ಕಲಾವಿದೆಯಾಗಿ ಐಡೆಂಟಿಟಿ

ದ್ರೌಪದಿಯ ದನಿಯಲ್ಲಿ ಗಟ್ಟಿತನ, ಧೀರತೆ, ಅಧೀನದ ನಿಸ್ಸಹಾಯಕತೆ, ಅಸಹಾಯಕತೆ, ಪ್ರೀತಿ, ಪ್ರೇಮ, ದುಃಖ, ದುಗುಡ ಎಲ್ಲವನ್ನೂ ಆಯಾ ಸನ್ನಿವೇಶಗಳಿಗೆ ತಕ್ಕಂತೆ ದನಿ ನೀಡುತ್ತಾ ಪಾತ್ರಧಾರಿಯ ಭಾವನೆಗಳಿಗೆ ನ್ಯಾಯ ಒದಗಿಸುವಲ್ಲಿ ಯಶಸ್ವಿಯಾದರು. ಭಾಷೆಯಲ್ಲಿನ ಹಿಡಿತ, ಮಾತಿನಲ್ಲಿನ ಏರಿಳಿತ, ಉಸುರಿನ ಮೇಲಿನ ತುಡಿತ ಭಾವ ತುಂಬಿದ ದನಿಯೊಂದಿಗೆ ಪ್ರಾಮಾಣಿಕ ಕೆಲಸ ನಿರ್ವಹಿಸಿದರು.

ಇಲ್ಲಿಂದ ಮುಂದೆ ಇವರಿಗೆ ಬಹಳವೇ ಅವಕಾಶಗಳು ಒದಗಿ ಬಂದವು. ಸೀತೆಯ ರಾಮ, ನಂಬರ್‌ ಒನ್‌ ಸೊಸೆ ಒಳಗೊಂಡಂತೆ ಸುಮಾರು ಹತ್ತು ಸೀರಿಯಲ್ ಗೂ ಮೀರಿ ಕೆಲಸ ಮಾಡುತ್ತಿದ್ದಾರೆ. ಬಾಹುಬಲಿ ಸಿನಿಮಾದಲ್ಲಿ ದೇವಸೇನಾ ಪಾತ್ರದಲ್ಲಿನ ಅನುಷ್ಕಾ ಶರ್ಮರಿಗೆ ದನಿಯಾಗಿದ್ದಾರೆ. ಅಂತೆಯೇ ಜೈಭೀಮ್ ಚಿತ್ರದ ಆದಿವಾಸಿ ಮಹಿಳೆಯ ಪಾತ್ರಕ್ಕೆ ದನಿ ನೀಡಿದ್ದಾರೆ. ನೇತಾಜಿ ಸುಭಾಷ್‌ ಚಂದ್ರಬೋಸ್‌ ಚಿತ್ರಕ್ಕೂ ದನಿ ನೀಡಿದ್ದಾರೆ.

ಏಕಕಾಲದಲ್ಲಿ ಮಲಯಾಳಂ, ತೆಲುಗು ಭಾಷೆಗಳಲ್ಲಿ ತೆರೆ ಕಂಡ ಮಧುರಂ ಚಿತ್ರದಲ್ಲಿಯೂ ಇವರ ದನಿಯಿದೆ. ಡಬ್ಲ್ಯು, ಡಬ್ಲ್ಯು, ಡಬ್ಲ್ಯು ಹಾಗೂ ರತ್ನನ್‌ ಪ್ರಪಂಚ ಚಿತ್ರಗಳಿಗೂ ಕಂಠದಾನ ನೀಡಿದ್ದಾರೆ. ಇದುವರೆವಿಗೂ ಅರವತ್ತಕ್ಕೂ ಮೀರಿದ ಚಿತ್ರಗಳಿಗೆ, ಹದಿನೈದಕ್ಕೂ ಹೆಚ್ಚಿನ ಸೀರಿಯಲ್ ಗಳಿಗೆ, 20 ಡಾಕ್ಯುಮೆಂಟರಿಗಳಿಗೆ, ಆಡಿಯೋ ಬುಕ್ಸ್ ಗಳಿಗೆ ದನಿ ನೀಡಿದ್ದಾರೆ. ಅಲ್ಲದೆ ಲಾಕ್ ಡೌನ್‌ ಸಮಯದಲ್ಲಿ ಅಣ್ಣ ಆಕರ್ಷ್‌ ಕಮಲರೊಡನೆ ಸೇರಿ ಹಳಗನ್ನಡದ ಗದ್ಯ ಕಾವ್ಯಗಳಾದ ಕುಮಾರವ್ಯಾಸ ಭಾರತ, ಪಂಪ, ರನ್ನ, ಹರಿಹರ ರಗಳೆಗಳ ಸರಣಿಯನ್ನು ಮುಖ ಪುಸ್ತಕ (FB‌)ದ ಮುಖೇನ ಆಸಕ್ತ ಅಭಿಮಾನಿಗಳಿಗಲ್ಲದೆ, ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ವಿಡಿಯೋ ಮಾಡಿ ತಲುಪಿಸಿದ್ದಾರೆ.

ಬಹಳಷ್ಟು ಜನರ ಮನ್ನಣೆ ಪಡೆದುದಲ್ಲದೆ, ಹಿರಿಯ ಸಾಹಿತಿಗಳಾದಿಯಾಗಿ ಇವರನ್ನು ಪ್ರಶಂಸಿಸಿದ್ದಾರೆ. ನಿಮ್ಮಂಥವರೇ ಇದನ್ನು ಪೋಷಿಸಿ ಬೆಳೆಸಬೇಕು ಎಂದು ಕೂಡಾ ಹೇಳಿದ್ದಾರೆ. ಟಿ.ಎನ್‌. ಸೀತಾರಾಂರವರ ಜನಪ್ರಿಯ ಧಾರಾವಾಹಿ ಮಹಾಪರ್ವದಲ್ಲಿ ಶ್ರೀನಿವಾಸ ಪ್ರಭುರವರ ಮಗಳು ಸಮುದ್ಯತಾ ಪಾತ್ರದಲ್ಲಿ ನಟಿಸಿರುವರು. ಈಗಲೂ ಹಲವಾರು ನಿರ್ದೇಶಕರು ನಟನೆಗೆ ಆಹ್ವಾನಿಸುತ್ತಿದ್ದಾರೆ. ಆದರೂ ಇವರ ಆಸಕ್ತಿ ಹಾಡು ಹಾಗೂ ನಟನೆಗೆ ಮಾತ್ರ ಸೀಮಿತ ಎನ್ನುತ್ತಾರೆ ಮುಕ್ತಕಂಠದಿಂದ.

ಡಬ್ಬಿಂಗ್‌ ಅನ್ನೋದು ಒಂದು ಕಲೆ. ದನಿಯಲ್ಲೇ ನಟನೆ ಇದರ ವಿಶೇಷ. ಹಾಡುವ ಬದಲು ದನಿ ನೀಡುವುದು. ಥಿಯೇಟರ್‌ ಹಿನ್ನೆಲೆ ಇದ್ದ ಕಾರಣ ಈ ಕೆಲಸ ತುಂಬಾನೇ ಸುಲಲಿತವಾಯಿತು. ಮುಖಭಾವನೆಗೆ ಹೊಂದುವಂತೆ ನಗುವ ಆಳುವ ಭಾವನೆಗಳನ್ನು ದನಿಯಲ್ಲಿ ತಂದುಕೊಂಡು ವ್ಯಕ್ತಪಡಿಸಬೇಕು. ನಟನೆಯಲ್ಲಿನ ಸಮಯವನ್ನು ಹಿಡಿಯುತ್ತ ಅದರ ಜೊತೆ ಜೊತೆಗೆ ಸಾಗಬೇಕು. ರಿದಂ ಸೆನ್ಸ್ ಬಹಳವೇ ಮುಖ್ಯ. ಕೊಂಚ ಅಭ್ಯಾಸವಾದರೆ ಸಾಕು ಹಿಡಿತ ಸಿಗುತ್ತದೆ. ಮುಖ್ಯವಾಗಿ ತನ್ಮಯತೆ, ತಲ್ಲೀನತೆ ಬೇಕು. ಪಾತ್ರವನ್ನು ಆವಾಹನೆ ಮಾಡಿಕೊಂಡು ದನಿ ನೀಡಬೇಕು.

ಪ್ರಶಸ್ತಿ ಪುರಸ್ಕಾರ

ದಂಪತಿಗಳಿಬ್ಬರೂ ಸ್ನೇಹಿತರೊಟ್ಟಿಗೆ ಕೂಡಿ ಸಂಗೀತದ ಟೀಮ್ ಮಾಡಿಕೊಂಡಿರುವರು. ಮ್ಯೂಸಿಕ್‌ ಕ್ಯಾರವಾನ್ಸ್ ಮೂಲಕ ಹಲವಾರು ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿರುತ್ತಾರೆ. ಇಂತಹ ಯುವ ಪ್ರತಿಭೆಗೆ ಸಂದ ಗೌರವ, ಪುರಸ್ಕಾರಗಳು ಹಲವಾರು. ಮುಖ್ಯವಾದ, ಶಂಕರ್‌ ನಾಗ್‌ ಯುವ ಪುರಸ್ಕಾರ, ಟೆಡ್‌ ಎಕ್ಸ್ ಪರ್ಫಾರ್ಮೆನ್ಸ್, ಕೇಂಬ್ರಿಡ್ಜ್ ಇನ್‌ ಸ್ಟಿಟಿಟ್ಯೂಟ್‌ ಆಫ್ ಟೆಕ್ನಾಲಜಿ (ಸಿಐಟಿ), ರೇಡಿಯೋ ಮಿರ್ಚಿಯವರಿಂದ ಬೆಸ್ಟ್ ಪ್ರಾಮಿಸಿಂಗ್‌ ವಾಯ್ಸ್, ಚಿತ್ರಸಂತೆ ಪ್ರಶಸ್ತಿ, ಕೀಮಾ ಪ್ರಶಸ್ತಿಗಳು ಲಭಿಸಿವೆ. 2018ರಲ್ಲಿ ಫಿಲಂಫೇರ್‌ ಪ್ರಶಸ್ತಿಗೆ ಕೆಂಪಿರುವೆ ಚಿತ್ರ ನಾಮಿನೇಟ್‌ ಆಗಿದ್ದು ಹೆಮ್ಮೆಯ ಸಂಗತಿ!

ಸ್ಪರ್ಶಾರವರ ಈ ಎಲ್ಲ ಕಾರ್ಯಗಳಲ್ಲಿ ಪತಿ ವಿಕಾಸ್‌ ವಸಿಷ್ಠರ ತುಂಬು ಹೃದಯದ ಪ್ರೋತ್ಸಾಹವಿದೆ. ಅತ್ತೆ ವಿಜಯಾ ಹಾಗೂ ಮಾವ ವಿಜಯ್‌ ಕುಮಾರ್‌ ರ ಪರಿಪೂರ್ಣ ಸಹಕಾರವಿರುವುದು. ತಮ್ಮ ಸಾಧನೆಯಲ್ಲಿ ಮುಂದುವರಿಯಲು ಮತ್ತಷ್ಟು ಮಗದಷ್ಟು ಶಕ್ತಿ ನೀಡುತ್ತಿದೆ ಎನ್ನುತ್ತಾರೆ. ಗೃಹಶೋಭಾ ಈ ಯುವ ಪ್ರತಿಭೆಗೆ ಆಲ್ ದಿ ಬೆಸ್ಟ್ ಎನ್ನುತ್ತಿದ್ದಾಳೆ!

ಸವಿತಾ ನಾಗೇಶ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ