ಕರ್ನಾಟಕದಲ್ಲಿ 7 ಕೋಟಿ ಜನರನ್ನು ರಂಜಿಸುತ್ತಿರುವ ಹಾಗೂ ವಿಶ್ವಾದ್ಯಂತ ಖ್ಯಾತಿ ಗಳಿಸಿರುವ ಕಲರ್ಸ್ ಕನ್ನಡ ಬಿಗ್ಬಾಸ್ ಕಾರ್ಯಕ್ರಮ ನಿರೂಪಣೆಯಿಂದ ನಟ ಕಿಚ್ಚ ಸುದೀಪ್ ನಿರ್ಗಮಿಸುತ್ತಿದ್ದಾರೆ. ಕಳೆದ 11 ಸೀಸನ್ಗಳನ್ನು ಯಶಸ್ವಿಯಾಗಿ ನಿರೂಪಣೆ ಮಾಡಿಕೊಂಡು ಬರುತ್ತಿದ್ದ ಸುದೀಪ್ ಈ ವಾರನೇ ಲಾಸ್ಟ್. ಬಿಗ್ಬಾಸ್ ನಿರೂಪಣೆಯಿಂದ ಹೊರಬರುತ್ತಿರುವುದು ಅಂತಿಮ ನಿರ್ಧಾರ ಎಂದು ಅವರೇ ಖುದ್ದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಸದ್ಯ ನಡೆಯುತ್ತಿರುವ 11ನೇ ಸೀಸನ್ ಕೊನೆಯಾಗಲಿದ್ದು, ಇನ್ನೊಂದು ವಾರವಷ್ಟೇ ನಡೆಯಲಿದೆ. ಈ ಹಿಂದೆನೇ ತಮ್ಮ ನಿರೂಪಣೆಯಿಂದ ಹೊರಬರುತ್ತಿರುವುದನ್ನು ಹೇಳಿದ್ದ ಸುದೀಪ್ ಕಲರ್ಸ್ ಕನ್ನಡದವರು ನನ್ನ ರೆಸಿಗ್ನೇಶನ್ ಲೆಟರ್ನ ಸ್ವೀಕರಿಸಿಲ್ಲ ಎಂದು ಹೇಳಿದ್ದರು. ಆದ್ರೀಗ ಮತ್ತೆ ಬಿಗ್ಬಾಸ್ ತೊರೆಯುವ ಬಗ್ಗೆ ಅಧಿಕೃತವಾಗಿ ಸ್ಪಷ್ಟನೆ ಕೊಟ್ಟಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಬಿಗ್ ಬಾಸ್ನ ಕಳೆದ 11 ಸೀಸನ್‌ಗಳಿಂದ ನಾನು ಆನಂದಿಸಿದ್ದೇನೆ. ನೀವು ತೋರಿದ ಪ್ರೀತಿಗಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳು. ಮುಂಬರುವ ಫಿನಾಲೆ, ಹೋಸ್ಟ್ ಆಗಿ ನನ್ನ ಕೊನೆಯ ಸೀಸನ್. ನಿಮ್ಮನ್ನು ಒಳ್ಳೆಯ ರೀತಿಯಲ್ಲಿ ರಂಜಿಸಿದ್ದೇನೆ ಎಂದು ನಾನು ಭಾವಿಸುತ್ತೇನೆ. ಇದೊಂದು ಅವಿಸ್ಮರಣೀಯ ಪಯಣ. ಅದನ್ನು ನನ್ನ ಕೈಲಾದಷ್ಟು ನಿಭಾಯಿಸಿದ್ದಕ್ಕೆ ನನಗೆ ಖುಷಿ ಇದೆ. ಈ ಅವಕಾಶಕ್ಕಾಗಿ ಕಲರ್ಸ್ ಕನ್ನಡಕ್ಕೆ ಧನ್ಯವಾದ’ ಎಂದಿದ್ದಾರೆ.
ಬಿಗ್ಬಾಸ್ ಕಾರ್ಯಕ್ರಮದ ಪ್ರತಿ ಸೀಸನ್ನಲ್ಲೂ ಒಂದಲ್ಲಾ ಒಂದು ವಿವಾದ ಸೃಷ್ಟಿಯಾಗ್ತಾನೇ ಇತ್ತು. ಅದು ಸ್ಪರ್ಧಿಗಳ ಆಯ್ಕೆ ವಿಚಾರದಲ್ಲಿ ಇರಬಹುದು ಅಥವಾ ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಕೊಡುವ ಟಾಸ್ಕ್ ವಿಚಾರದಲ್ಲಿ ಇರಬಹುದು ಅಥವಾ ಪ್ರತಿ ವಾರಂತ್ಯಗಳಲ್ಲಿ ಸ್ಪರ್ಧಿಗಳ ಎಲಿಮಿನೇಷನ್ ವಿಚಾರದಲ್ಲಿ ಇರಬಹುದು. ಅದೆಲ್ಲದರ ಎಫೆಕ್ಟ್ ಕಿಚ್ಚ ಸುದೀಪ್ ಅವರ ಮೇಲೆ ಬರುತ್ತಿತ್ತು. ಅಷ್ಟೇ ಅಲ್ಲ, ಕಳೆದ 10 ಸೀಸನ್ಗಳಿಗಿಂತ ಈ ಬಾರಿಯ 11ನೇ ಸೀಸನ್ ಕೊಂಚ ವಿವಾದಕ್ಕೂ ಕಾರಣವಾಗಿತ್ತು.
ಸ್ಪರ್ಧಿಗಳ ವೈಯಕ್ತಿಕ ವಿಚಾರಗಳ ಜೊತೆಗೆ ಹುಲಿಉಗುರು ಕೇಸ್, ಸ್ಪರ್ಧಿಯೊಬ್ಬರ ಹಳೇ ಪ್ರಕರಣ ಅಷ್ಟೇ ಅಲ್ಲದೇ ಬಿಗ್ಬಾಸ್ ಸೆಟ್ ಹಾಕಿರುವ ಜಾಗವೂ ವಿವಾದಿತ ಭೂಮಿಯಾಗಿತ್ತು. ಇಷ್ಟೆಲ್ಲಾ ವಿವಾದಗಳ ಮಧ್ಯೆ ಕಿಚ್ಚ ಸುದೀಪ್ ಮಾತ್ರ ವಾರದ ಪಂಚಾಯಿತಿಯಲ್ಲಿ ಇಡೀ ಕರುನಾಡೇ ಕಾರ್ಯಕ್ರಮದತ್ತ ತಿರುಗಿ ನೋಡುವಂತೆ ಮಾಡುತ್ತಿದ್ದರು. ಅಷ್ಟೇ ಅಲ್ಲ, ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಗಳ ತಪ್ಪುಗಳೇನು..? ಹೇಗಿರಬೇಕು..? ಅನ್ನೋದ್ರ ಕುರಿತಂತೆಯೂ ಮಾರ್ಗದರ್ಶನ ನೀಡುತ್ತಿದ್ದರು.
ಆದ್ರೀಗ ಮೊನ್ನೆಯಷ್ಟೇ ವಾರದ ಪಂಚಾಯಿತಿಯಲ್ಲಿ ನಿಮ್ಮ ಸಹವಾಸ ಸಾಕಾಗಿ ಹೋಗಿದೆ ಎನ್ನುವ ಮೂಲಕ ಕಿಚ್ಚ ಸುದೀಪ್ ಬಿಗ್ಬಾಸ್ 11 ಕೊನೆ ಅನ್ನೋ ಸೂಚನೆ ಕೊಟ್ಟಿದ್ದರು. ಇದೀಗ ಮತ್ತೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಎಲ್ಲರಿಗೂ ಧನ್ಯವಾದ ಹೇಳಿರುವುದರಿಂದ ಕಿಚ್ಚ ಸುದೀಪ್ ಇನ್ಮುಂದೆ ಬಿಗ್ಬಾಸ್ ಕಾರ್ಯಕ್ರಮದ ನಿರೂಪಣೆ ಮಾಡುವುದಿಲ್ಲ ಎಂಬುದು ದೃಢವಾಗಿದೆ.
ಹಾಗಾದ್ರೆ, ಮುಂದಿನ ಅರ್ಥಾತ್ ಬಿಗ್ಬಾಸ್ ಸೀಸನ್ 12ನ್ನು ನಿರೂಪಣೆ ಮಾಡುವುದು ಯಾರು ಅನ್ನೋ ಪ್ರಶ್ನೆ ಶುರುವಾಗಿದೆ. ಕನ್ನಡ ಚಿತ್ರರಂಗದಲ್ಲೀಗ ನಟ ರಮೇಶ್ ಅರವಿಂದ್ ಬಿಟ್ಟರೆ ಬೇರೆ ಯಾರೂ ಕೂಡ ದೊಡ್ಡ ದೊಡ್ಡ ಶೋಗಳನ್ನು ನಡೆಸಿಕೊಟ್ಟಿಲ್ಲ. ಹೀಗಾಗಿ ಬಿಗ್ಬಾಸ್ ನಿರೂಪಕರ ಲಿಸ್ಟ್ ನಲ್ಲಿ ಮೊದಲು ರಮೇಶ್ ಅರವಿಂದ್ ನಿಲ್ತಾರೆ. ನಂತರ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್, ನಟ ಯಶ್, ನಟ ಗಣೇಶ್ ಮತ್ತು ಡಾಲಿ ಧನಂಜಯ್ ಹೆಸರು ಕೇಳಿಬರುತ್ತಿದೆ. ಏನೇ ಆದ್ರೂ ಕಿಚ್ಚನ ಖಡಕ್ ನಿರೂಪಣೆಯನ್ನು ಇಡೀ ಕರುನಾಡೇ ಮಿಸ್ ಮಾಡಿಕೊಳ್ಳುತ್ತಿದೆ.
—–