-ಶರತ್ ಚಂದ್ರ
ಡಾ. ರಾಜಕುಮಾರ್, ವಿಷ್ಣುವರ್ಧನ್ ರಿಂದ ಹಿಡಿದು ಹೊಸ ನಾಯಕರಿಗೆ ಆಕ್ಷನ್ ಕಟ್ ಹೇಳಿ 50ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿ ಕನ್ನಡ ಚಿತ್ರರಂಗಕ್ಕೆ ಅತ್ಯುತ್ತಮ ಚಿತ್ರಗಳನ್ನು ನೀಡಿರುವ ಎಸ್. ನಾರಾಯಣ್ ಮತ್ತೆ ನಿರ್ದೇಶನ ಮಾಡುತ್ತಿದ್ದಾರೆ.
ಕಳೆದ ವರ್ಷ ಬಿಡುಗಡೆಯಾದ 5ಡಿ ಚಿತ್ರದ ಸೋಲಿನ ನಂತರ ಮಂಕಾಗಿದ್ದ ಎಸ್ ನಾರಾಯಣ್ ಈ ವರ್ಷ ಸ್ಯಾಂಡಲ್ ವುಡ್ ಸಲಗ ವಿಜಯಕುಮಾರ್ ನಾಯಕತ್ವದ ' ಮಾರುತ' ಚಿತ್ರ ಡೈರೆಕ್ಟ್ ಮಾಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.
ಕನ್ನಡದ ಹಿರಿಯ ನಿರ್ಮಾಪಕರಾದಂತಹ ಕೆ ಮಂಜು ಮತ್ತು ರಮೇಶ ಯಾದವ್ ಜಂಟಿಯಾಗಿ ನಿರ್ಮಿಸುತ್ತಿರುವ ಚಿತ್ರದ ಶೀರ್ಷಿಕೆಯನ್ನು ಚಿತ್ರತಂಡ ವಿಜಯ್ ಅವರ ಹುಟ್ಟುಹಬ್ಬದ ದಿನ ಅನಾವರಣಗೊಳಿಸಿದ್ದಾರೆ.
ಈಶಾ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣಗೊಳ್ಳುತ್ತಿರುವ ಮಾರುತ ಚಿತ್ರದ ಪೋಸ್ಟರ್ ನಲ್ಲಿ ಪಿಸ್ತೂಲ್ ಹಿಡಿದಿರುವ ದುನಿಯಾ ವಿಜಯ್ ಸಖತ್ ಖದರ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಪೋಸ್ಟರ್ ನೋಡಿದಾಗ ಇದು ಒಂದು ಆಕ್ಷನ್ ಸಬ್ಜೆಕ್ಟ್ ಇರುವ ಸಿನಿಮಾ ಇರಬಹುದೆಂದು ಅಭಿಮಾನಿಗಳು ಊಹಿಸಿದ್ದಾರೆ. ಚಿತ್ರದ ನಾಯಕಿ, ಉಳಿದ ತಾರಾ ಬಳಗ ಮತ್ತು ತಾಂತ್ರಿಕ ವರ್ಗದ ಬಗ್ಗೆ ಮುಂದಿನ ದಿನಗಳಲ್ಲಿ ಚಿತ್ರತಂಡ ಅಪ್ಡೇಟ್ ನೀಡಲಿದೆ.
ದುನಿಯಾ ವಿಜಯ್ ಅವರು ಈ ಹಿಂದೆ ಎಸ್. ನಾರಾಯಣ್ ನಿರ್ದೇಶನದ ಚಂಡ ಮತ್ತು ದಕ್ಷ ಎಂಬ ಎರಡು ಚಿತ್ರಗಳಲ್ಲಿ ಅಭಿನಯಿಸಿದ್ದರು. ಎರಡು ಚಿತ್ರಗಳು ಅಂತಹ ಯಶಸ್ಸನ್ನು ಕಂಡಿರಲಿಲ್ಲ. 'ಚಂಡ 'ಚಿತ್ರದ ನಿರ್ಮಾಣದ ಸಮಯದಲ್ಲಿ ಸಣ್ಣಪುಟ್ಟ ವೈಮನಸ್ಸು ವಿಜಯ್ ಮತ್ತು ಎಸ್ ನಾರಾಯಣ್ ನಡುವೆ ಉಂಟಾಗಿತ್ತು. ಈ ಜೋಡಿ ಮತ್ತೆ 'ದಕ್ಷ 'ಚಿತ್ರದ ಮೂಲಕ ಮತ್ತೆ ಒಂದಾಗಿತ್ತು. ಈಗ ಹತ್ತು ವರ್ಷಗಳ ನಂತರ ಈ ಜೋಡಿ ಮತ್ತೊಮ್ಮೆ ಒಂದಾಗಿದೆ.
ಕಳೆದ ವರ್ಷ ಬಿಡುಗಡೆಯಾದ 'ಭೀಮ' ಚಿತ್ರದ ಯಶಸ್ವಿನಿಂದ ಬೀಗುತ್ತಿರುವ ದುನಿಯಾ ವಿಜಯ್, ಈ ವರ್ಷ ಕೂಡ ಬ್ಯುಸಿ ಯಾಗಿದ್ದಾರೆ. ಜಡೇಶ್ ಹಂಪಿ ನಿರ್ದೇಶನದ, ಮಗಳು ರಿತನ್ಯಾ ಜೊತೆ ನಟಿಸುತ್ತಿರುವ 'ಲ್ಯಾಂಡ್ ಲಾರ್ಡ್' ಚಿತ್ರೀಕರಣ ಭರದಿಂದ ಸಾಗಿದೆ. ಇನ್ನೊಬ್ಬ ಮಗಳು ಮೋನಿಷಾಳನ್ನು 'ಸಿಟಿ ಲೈಟ್ಸ್' ಮೂಲಕ ಲಾಂಚ್ ಮಾಡಿರುವ ವಿಜಯ್, ನಿರ್ದೇಶನದ ಜವಾಬ್ದಾರಿಯನ್ನು ಕೂಡ ವಹಿಸಿಕೊಂಡಿದ್ದಾರೆ. ನಿರ್ಮಾಪಕ ಕೆ. ಪಿ. ಶ್ರೀಕಾಂತ್ ಅವರ ಹೆಸರಿಡಿದ ಚಿತ್ರದಲ್ಲಿ ಕೂಡ ವಿಜಯ್ ನಟಿಸುತ್ತಿದ್ದಾರೆ.
ಜನವರಿ 20ರಂದು ನೆಲಮಂಗಲ ಬಳಿ 'ಲ್ಯಾಂಡ್ ಲಾರ್ಡ್' ಚಿತ್ರದ ಶೂಟಿಂಗ್ ಸ್ಥಳದಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡ ವಿಜಯಕುಮಾರ್, ಮುಂದಿನ ದಿನಗಳಲ್ಲಿ ಕೂಡ ಒಳ್ಳೆಯ ಚಿತ್ರಗಳನ್ನು ನೀಡಲಿ ಎಂದು ನಮ್ಮ ಆಶಯ.