ಸರಸ್ವತಿ ಜಾಗೀರ್ದಾರ್
ʻಅನ್‌ಲಾಕ್ ರಾಘವʼ ಟೈಟಲ್ ಎಷ್ಟು ಯೂನಿಕ್ ಆಗಿದೆಯೋ ಈ ಚಿತ್ರದ ಹಾಡುಗಳೂ ಅಷ್ಟೇ ವಿಭಿನ್ನ ಮತ್ತು ವಿಶೇಷತೆಯಿಂದ ಕೂಡಿವೆ. ಚಿತ್ರದ ಮೂರನೇ ಹಾಡು ʻರಾಘವ ರಾಘವ’ ಬಿಡುಗಡೆ ಆಗಿದೆ.
ʻರಾಘವ ರಾಘವʼ ಮೆಲೋಡಿಯಸ್ ರೊಮ್ಯಾಂಟಿಕ್ ಸಾಂಗ್ ಆಗಿದೆ. ಚಿತ್ರದಲ್ಲಿ ಜಾನಕಿ ಪಾತ್ರದಲ್ಲಿ ಮೋಡಿ ಮಾಡಲಿರುವ ಮುದ್ದು ಮುಖದ ನಾಯಕಿ ರೆಚಲ್, ರಾಘವನಿಗಾಗಿ ಹಾಡುವ ಹಾಡು ಇದಾಗಿದೆ. ಧನಂಜಯ ಅವರ ನೃತ್ಯ ಸಂಯೋಜನೆಯಲ್ಲಿ, ಗಾಯಕಿ ಅಂಕಿತಾ ಕುಂಡು ಅವರ ಮ್ಯಾಜಿಕಲ್ ವಾಯ್ಸ್‌ನಲ್ಲಿ ಮೂಡಿ ಬಂದಿರುವ ಹಾಡಿಗೆ, ವಾಸುಕಿ ವೈಭವ್ ಬರೆದಿರುವ ಸಾಲುಗಳು ಹಾಡಿನ ವೈಭವ ಹೆಚ್ಚಿಸಿವೆ.
ಕೋಟೆನಗರಿ ಚಿತ್ರದುರ್ಗದ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಂಡಿರುವ ʻರಾಘವ ರಾಘವʼ ಹಾಡಿನಲ್ಲಿ ಹೀರೋ ಮಿಲಿಂದ್ ಹಾಗೂ ನಾಯಕಿ ರೆಚಲ್ ಕೆಮೆಸ್ಟ್ರಿ ನೆಕ್ಸ್ಟ್ ಲೆವೆಲ್ ಇರಲಿದೆ. ದುರ್ಗದ ಪ್ರಕೃತಿ ಸೊಬಗು, ಬೆಟ್ಟ, ಗುಡ್ಡ, ಬಂಡೆ, ರಸ್ತೆ, ಗಲ್ಲಿಗಳ ಮಧ್ಯೆ ಸಾಗುವ ಈ ಟ್ರ್ಯಾಕ್ ಸಂಗೀತ ಪ್ರಿಯರನ್ನು ರೊಮ್ಯಾಂಟಿಕ್ ಲೋಕಕ್ಕೆ ಕೊಂಡೊಯ್ಯುತ್ತದೆ.
ಈಗಾಗಲೇ ಬಿಡುಗಡೆಯಾಗಿರುವ ಅನ್‌ಲಾಕ್ ರಾಘವ ಚಿತ್ರದ ʻನನ್ ಹುಡುಗಿʼ ಹಾಗೂ ʻಲಾಕ್ ಲಾಕ್ ಲಾಕ್ʼ ಹಾಡುಗಳು ಯುವ ಹೃದಯಗಳ ಹಾಟ್ ಫೇವರೇಟ್ ಆಗಿದ್ದು, A2 ಮ್ಯೂಸಿಕ್‌ನಲ್ಲಿ ಈಗ ಬಿಡುಗಡೆಯಾಗಿರುವ ʻರಾಘವ ರಾಘವʼ ಗೀತೆ ಕೂಡ ಯಂಗ್ ಹಾರ್ಟ್‌ಗಳಲ್ಲಿ ಜಾಗ ಪಡೆಯಲಿದೆ.
ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿ ಮಂಜುನಾಥ ಡಿ ಹಾಗೂ ಗಿರೀಶ್ ಕುಮಾರ್ ಜಂಟಿಯಾಗಿ ನಿರ್ಮಿಸಿರುವ ʻಅನ್‌ಲಾಕ್ ರಾಘವʼ ಫೆಬ್ರವರಿ 7 ರಂದು ತೆರೆಗೆ ಬರಲಿದೆ. ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಸಿಗುವ ಸಾಧು ಕೋಕಿಲ ಅವರ ಕಾಮಿಡಿ, ಯುವ ನಾಯಕ ಮಿಲಿಂದ್ ಹಾಗೂ ಲವ್ ಮಾಕ್ಟೇಲ್ 2 ಚೆಲುವೆ ರೆಚಲ್ ಡೇವಿಡ್ ಜೊಡಿ ತೆರೆ ಮೇಲೆ ಮೋಡಿ ಮಾಡಲಿದೆ.
ರಾಮಾ ರಾಮಾ ರೇ & ಮ್ಯಾನ್ ಆಫ್ ದಿ ಮ್ಯಾಚ್ ಖ್ಯಾತಿಯ ಡಿ.ಸತ್ಯಪ್ರಕಾಶ್ ಅನ್‌ಲಾಕ್ ರಾಘವನಿಗೆ ಕಥೆ, ಚಿತ್ರಕಥೆ ಹೆಣೆದಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಅವರ ಗರಡಿಯಲ್ಲಿ ಕೆಲಸ ಮಾಡಿರುವ, ʻರಾಜು ಜೇಮ್ಸ್ ಬಾಂಡ್ʼ ಚಿತ್ರದ ನಿರ್ದೇಶಕ ದೀಪಕ್ ಮಧುವನಹಳ್ಳಿ ʻಅನ್‌ಲಾಕ್ ರಾಘವʼಗೆ ಆಕ್ಷನ್ ಕಟ್ ಹೇಳಿದ್ದಾರೆ. ಛಾಯಾಗ್ರಾಹಕ ಲವಿತ್, ಪ್ರತಿಯೊಂದು ದೃಷ್ಯಗಳನ್ನೂ ಮನೋಜ್ಞವಾಗಿ ಸೆರೆ ಹಿಡಿದಿದ್ದಾರೆ. ಅಜಯ್ ಕುಮಾರ್ ಮತ್ತು ಮಧು ತುಂಬಕೆರೆ ಸಂಕಲನ, ವಿನೋದ್ ಹಾಗೂ ಅರ್ಜುನ್ ಸಾಹಸ ನಿರ್ದೇಶನ, ಮುರುಳಿ ಮತ್ತು ಧನಂಜಯ ಅವರ ನೃತ್ಯ ನಿರ್ದೇಶನವಿದೆ. ಪ್ರಮುಖ ಪಾತ್ರಗಳಲ್ಲಿ ಶೋಭರಾಜ್, ಅವಿನಾಶ್, ರಮೇಶ್ ಭಟ್, ವೀಣಾ ಸುಂದರ್, ಧರ್ಮಣ್ಣ ಕಡೂರು, ಸಾಯಿ ಕುಡ್ಲ, ಭೂಮಿ ಶೆಟ್ಟಿ ಮೊದಲಾದವರು ಅಭಿನಯಿಸಿದ್ದಾರೆ.