ರಿಂಗೋ ಬ್ಯಾನರ್ಜಿಯವರ `ನಾ ಹನ್ನೀಯತೆ’ ಬಂಗಾಳಿ ಚಿತ್ರ 2012ರಲ್ಲಿ ರಿಲೀಸ್‌ ಆದಾಗ, ತಾಯಿ ಮಗಳ ಅಪೂರ್ವ ಬಾಂಧವ್ಯದ ಈ ಚಿತ್ರ ಕೊಲ್ಕೊತಾ ಮಾತ್ರವಲ್ಲದೆ ದೆಹಲಿ, ಮುಂಬೈಗಳಲ್ಲೂ ಯಶಸ್ವಿಯಾಯಿತು. ಮಹಾಭಾರತದ ದ್ರೌಪದಿ ಪಾತ್ರದಿಂದ ಖ್ಯಾತಿವೆತ್ತ ರೂಪಾ ಗಂಗೂಲಿ ಇಲ್ಲಿ ತಾಯಿ ಆಗಿದ್ದರೆ, ಬಂಗಾಳ ಮೂಲದ ನವನಟಿ ಸಯಾನಿ ದತ್ತಾ ಮಗಳ ಪಾತ್ರದಲ್ಲಿ ಎಲ್ಲರ ಪ್ರಶಂಸೆ ಗಿಟ್ಟಿಸಿದಳು. ಈ ಕಾರಣದಿಂದಲೇ ಇದೇ ನಿರ್ದೇಶಕರು ತಮ್ಮ ಮುಂದಿನ `ಶದಾಕೋ ಅಚಾ’ ಚಿತ್ರದಲ್ಲೂ ಗ್ಲಾಮರಸ್‌ ಪಾತ್ರ ನೀಡಿದರು. ಹಳ್ಳಿ ಹುಡುಗಿ ಹೇಗೆ ಡಾಕ್ಟರ್‌ ಆದಳು ಎಂಬುದೇ ಈ ಚಿತ್ರ.

ನಿರ್ದೇಶಕರ ಸವಾಲನ್ನು ಖಡಕ್‌ ಆಗಿ ಸ್ವೀಕರಿಸಿದ ಸಯಾನಿ ಹಳ್ಳಿ ಹುಡುಗಿ ಡ್ಯಾನ್ಸರ್‌ ಬೆಡಗಿ ಎರಡೂ ಪಾತ್ರಗಳಲ್ಲಿ ಮಿಂಚಿ ಸೈ ಎನಿಸಿದಳು. ಆ ವರ್ಷದ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲೂ ಇದು ಪ್ರದರ್ಶನ ಕಂಡಿತು. ಇದಾದ ನಂತರ ಇವಳಿಗೆ ಇದೇ ನಿರ್ದೇಶಕರ `ಏ ಜೇ ಅಚೆ ಸೊಹೋರ್‌’ ಚಿತ್ರದಲ್ಲಿ ಸತತ 3ನೇ ಅವಕಾಶ ಸಿಕ್ಕಿ, ಹ್ಯಾಟ್ರಿಕ್‌ ಹೊಡೆದಳು!

ಇದುವರೆಗೂ ಸಯಾನಿ 11 ಬಂಗಾಳಿ ಚಿತ್ರಗಳಲ್ಲಿ ನಟಿಸಿ ತನ್ನದೇ ಛಾಪು ಮೂಡಿಸಿದ್ದಾಳೆ. ಪ್ರತಿ ಚಿತ್ರದಲ್ಲೂ ತನ್ನನ್ನು ತಾನು ಇಂಪ್ರೂವೈಸ್‌ ಮಾಡಿಕೊಳ್ಳುತ್ತಿದ್ದಾಳೆ. ಇದಾದ ಮೇಲೆ ಇವಳು ಬಾಲಿವುಡ್‌ ಗೆ ಕಾಲಿಟ್ಟಾಗ, ಸ್ವಲ್ಪ ಎಡವಿದಳು ಎಂದೇ ಹೇಳಬೇಕು. ಕಳೆದ ವರ್ಷ OTT ಯಲ್ಲಿ ರಿಲೀಸ್‌ ಆದ ಇವಳ `ದಿ ಲೈಫ್‌’ ಹಾರರ್‌ ಚಿತ್ರದಲ್ಲಿ ಗುರುಮೀತ್‌ ಚೌಧರಿಯ ಪತ್ನಿ ಪಾತ್ರದಲ್ಲಿ ನಟಿಸಿದ್ದಳು.

ನೀನು ನಟಿಯಾಗಲು ಬಂದವಳು, ಹಾಗಿರುವಾಗ ಸಹಾಯಕ ನಿರ್ದೇಶಕಿಯಾಗಿ ಕೆರಿಯರ್ಶುರು ಮಾಡಿದ್ದು ನಿನ್ನ ಸಿನಿ ಜೀವನಕ್ಕೆ ಹೊಂದುವುದೇ….?

ನೋಡಿ, ನಾನು ಬಾಲ್ಯದಿಂದಲೇ ಅತ್ಯುತ್ತಮ ಚಿತ್ರಗಳಲ್ಲಿ ನಟಿಸಿ ಉತ್ತಮ ಅಭಿನೇತ್ರಿ ಎನಿಸಿಕೊಳ್ಳುವ ಹುಚ್ಚು ಕನಸು ಕಂಡವಳು. ಶಾಲಾ ಕಾಲೇಜುಗಳಲ್ಲಿ ನಾನು ಬೇಕಾದಷ್ಟು ನಾಟಕಗಳಲ್ಲಿ ನಟಿಸಿದ್ದೇನೆ. ಮಮತಾ ಶಂಕರ್‌ ಅವರಿಂದ ಕಥಕ್‌ ಶಾಸ್ತ್ರೀಯ ನೃತ್ಯ ಸಹ ಕಲಿತಿರುವೆ. ಆದರೆ ನಟನೆಯ ವೃತ್ತಿಯಲ್ಲಿ ಹೇಗೆ ಮುಂದುವರಿಯಬೇಕೋ ಗೊತ್ತಿಲ್ಲದವಳು. ಆಗ ನಾನು ಕೋಲ್ಕತಾದ ಪ್ರಸಿದ್ಧ ರಂಗಕರ್ಮಿ, ಅಭಿನಯ ಪ್ರಶಿಕ್ಷಕರಾದ ಸೋಹಾಗ್‌ ಸೇನ್‌ ರನ್ನು ಭೇಟಿಯಾದೆ. ಅವರಿಂದ ಬೇಕಾದಷ್ಟು ಕಲಿತೆ. ಅವರೇ ತಿಳಿಸಿಕೊಟ್ಟಂತೆ, ಸಹಾಯಕ ನಿರ್ದೇಶಕಿಯಾಗಿ ದುಡಿಯುವುದರಿಂದ ಸಿನಿರಂಗದ ಆಗುಹೋಗುಗಳು, ಕ್ಯಾಮೆರಾ ಟ್ರಿಕ್ಸ್ ಬೇಗ ಕಲಿಯಬಹುದೆನಿಸಿತು. ಇದರಿಂದ ಉತ್ತಮ ನಟಿಯಾಗಲು ಸಾಧ್ಯ ಎಂದರು.

ಅವರೇ ಮುಂದೆ ನನ್ನನ್ನು ಒಬ್ಬ ನಿರ್ದೇಶಕರ ಬಳಿ ಕಳಿಸಿಕೊಟ್ಟರು. ಅಲ್ಲಿ ನಾನು ಅಸಿಸ್ಟೆಂಟ್‌ ಡೈರೆಕ್ಟರ್‌ ಆಗಿ ಸಾಕಷ್ಟು ಕಲಿತೆ. ದುರಾದೃಷ್ಟ, ಆ ಚಿತ್ರ ರಿಲೀಸ್‌ ಆಗಲೇ ಇಲ್ಲ. ಆ ನಂತರ ಆ ನಿರ್ದೇಶಕರು ಮತ್ತೆ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಿಲ್ಲ. ಹೀಗೆ ನಾನು ನಟನೆಗೆ ಮುಂಚೆ ಈ ರೀತಿ ತಾಂತ್ರಿಕ ವರ್ಗದಲ್ಲಿ ನುರಿತವಳಾದೆ.

ನಿನ್ನ 7-8 ವರ್ಷಗಳ ಸಿನಿ ಕೆರಿಯರ್ಬಗ್ಗೆ ಹೇಳು?

ನಾನು ಈ ಇಂಡಸ್ಟ್ರಿಗೆ ಬಂದು ಇಷ್ಟು ವರ್ಷಗಳಲ್ಲಿ ಬೇಕಾದಷ್ಟು ಕಲಿತಿದ್ದೇನೆ. ಅದರ ನೆರವಿನಿಂದಲೇ ನಾನೀಗ ಬಾಲಿವುಡ್‌ ನಲ್ಲಿ ಪ್ರತ್ಯೇಕ ಐಡೆಂಟಿಟಿ ಗಳಿಸಲು ಯತ್ನಿಸುತ್ತಿರುವೆ. ನನ್ನ ಇಷ್ಟು ವರ್ಷಗಳ ಕೆರಿಯರ್‌ ಉತ್ತಮ ರೀತಿಯಲ್ಲಿ ಮುಂದುವರಿಯದಿದ್ದರೆ, ನಾನು ಬಾಲಿವುಡ್‌ ನ ಎಂಟ್ರಿ ಪಡೆಯಲು ಆಗುತ್ತಲೇ ಇರಲಿಲ್ಲ. 7 ವರ್ಷಗಳಲ್ಲಿ ನಾನು ವೈವಿಧ್ಯಮಯ, ಸವಾಲೆನಿಸುವಂಥ ಪಾತ್ರಗಳನ್ನು ನಿಭಾಯಿಸಿರುವೆ. ಇದರಿಂದಾಗಿ ನಾನಿಂದು ಪರಿಪಕ್ವ ನಟಿ ಆಗಿರುವೆ. ಇದರ ಲಾಭವನ್ನು ನಾನು `ದಿ ಲೈಫ್‌’ ಹಿಂದಿ ಚಿತ್ರದಲ್ಲಿ ಕಂಡುಕೊಂಡೆ. ನನ್ನ ಕೆರಿಯರ್‌ ನ ಟರ್ನಿಂಗ್‌ ಪಾಯಿಂಟ್‌ ಅಂದ್ರೆ ನನ್ನ ಮೊದಲ ಚಿತ್ರ ಎಂದೇ ಹೇಳಬೇಕು.

ಆ ಸಮಯದಲ್ಲಿ ರೂಪಾ ಗಂಗೂಲಿ ಬಲು ಪ್ರಸಿದ್ಧಿ ಪಡೆದಿದ್ದರು. ಅವರ ಮಗಳಾಗಿ ನಟಿಸಿ, ಅವರಿಂದ ಬಹಳಷ್ಟು ಕಲಿತೆ. ಅವರ ಹೆಸರಿನಿಂದಲೇ ಆ ಚಿತ್ರ ಓಡಿದ್ದು, ಬಂಗಾಳಿ ಚಿತ್ರಗಳಲ್ಲಿ ನನಗೆ ಐಡೆಂಟಿಟಿ ಸಿಕ್ಕಿದ್ದು!

`ದಿ ಲೈಫ್‌’ ಚಿತ್ರ ಆರಿಸಿಕೊಳ್ಳಲು ಏನಾದರೂ ವಿಶೇಷ ಕಾರಣವಿತ್ತೇ? ಬಾಲಿವುಡ್ಗೆ ಎಂಟ್ರಿ ಪಡೆಯಲೆಂದೇ ಹೀಗೆ ಮಾಡಿದೆಯಾ?

ನಿಜ ಹೇಳಬೇಕು ಅಂದ್ರೆ, ನನಗೆ ಬಾಲಿವುಡ್‌ ನಲ್ಲಿ ಎಂಟ್ರಿ ಬೇಕಿತ್ತು. ಇಂದು ನನಗೇನಾದರೂ ಆಂಗ್ಲ, ಫ್ರೆಂಚ್‌ ಚಿತ್ರಗಳಲ್ಲಿ ಆಫರ್ ದೊರಕಿದರೆ, ನಾನು ಈಗಲೇ ಓಡಿಹೋಗಿ ಅಲ್ಲಿಗೆ ಸೇರುವೆ….. ಅಷ್ಟು ತಂತ್ರಗಳನ್ನು ಬಾಲಿವುಡ್‌ ಕಲಿಸಿದೆ. ಬಂಗಾಳಿ ಚಿತ್ರೋದ್ಯಮಕ್ಕಿಂತ ಬಾಲಿವುಡ್‌ ಬಲು ದೊಡ್ಡದು, ಇದರ ಪ್ರೇಕ್ಷಕ ವರ್ಗ ಇಡೀ ಭಾರತ, ಅದರಾಚೆಗೂ ಇದೆ. ಹೀಗಾಗಿ ಬಾಲಿವುಡ್ ನನ್ನ ಮೊದಲ ಆಯ್ಕೆಯಾಗಿತ್ತು. ಈ ಚಿತ್ರದ ಪಾತ್ರಧಾರಿಗಳು ಇದನ್ನೇ ನಾನು ಆಯ್ಕೆ ಮಾಡಲು ಪ್ರೇರಣೆ ನೀಡಿದರು. ಕೇವಲ ಬಂಗಾಳಿ ಚಿತ್ರಗಳಿಗೆ ಅಂಟಿ ಕೂರುವ ಬದಲು ಬಾಲಿವುಡ್‌ ನಲ್ಲಿ ಬಿಝಿ ಆದರೆ, ಭಾರತದಾದ್ಯಂತ ಫೇಮಸ್‌ ಆಗುವೆ ಎನಿಸಿತು.

ಆದರೆ….. `ದಿ ಲೈಫ್‌’ ಚಿತ್ರದಲ್ಲಿ ನಿನ್ನ ಅಭಿನಯ ಸುಮಾರಾಗಿತ್ತು ಅಂತಾರಲ್ಲ…..?

ನೋಡಿ, ಈ ಚಿತ್ರದಲ್ಲಿ ನಾನು ಆರ್ಯಾ ಎಂಬ ಗೃಹಿಣಿಯ ಪಾತ್ರ ನಿರ್ವಹಿಸಿದ್ದೇನೆ. ಇದಂತೂ ಬಹಳ ವಿಭಿನ್ನ ಪಾತ್ರ. ನನಗೆ ಸಿಗುತ್ತಿರುವ ಕಮೆಂಟ್ಸ್ ಸಪೋರ್ಟಿವ್ ‌ಆಗಿವೆ. ಈ ಚಿತ್ರ ತುಸು ನಿಧಾನವಾಗಿ ಸಾಗುತ್ತದೆ ಎಂದು ಗೊತ್ತು, ಆದರೆ ಪ್ರತಿ ನಿರ್ದೇಶಕರಿಗೂ ತಮ್ಮದೇ ಆದ ಶೈಲಿ ಇರುತ್ತದೆ. ಈ ಚಿತ್ರದಲ್ಲಿ ನಟಿಸುವಾಗ ನಾನು ಬಹಳ ಎಂಜಾಯ್‌ ಮಾಡಿದೆ. ಈ ಚಿತ್ರದ ಟ್ರೈಲರ್‌ ನೋಡಿಯೇ ನನಗೆ 2ನೇ ಹಿಂದಿ ಚಿತ್ರಕ್ಕೆ ಆಫರ್‌ ಬಂತು.

ನಿನ್ನ ಮೊದಲ ಹಿಂದಿ ಚಿತ್ರ ಥಿಯೇಟರ್ಬದಲು OTT ಯಲ್ಲಿ ರಿಲೀಸ್ಆದದ್ದು, ನಿನಗೆ ಹೇಗನ್ನಿಸಿತು?

ಇಷ್ಟೆಲ್ಲ ಯೋಚಿಸುತ್ತಾ ಕುಳಿತರೆ ಆಮೇಲೆ ನಮ್ಮ ಕೈಗೆ ಸಿಕ್ಕಿದ್ದು ಬಾಯಿಗಿಲ್ಲ ಅಂತಾಗಿ ಬಿಡುತ್ತದೆ. ಚಿತ್ರ ಪ್ರೇಕ್ಷಕರಿಗೆ ತಲುಪಿದೆ, ಇದೇ ನನ್ನ ಭಾಗ್ಯ. ಡಬ್ಬದಲ್ಲೇ ಕೊಳೆಯುತ್ತಿಲ್ಲ ಎಂಬುದೇ ಪುಣ್ಯ! ಬಾಲಿವುಡ್‌ ಗೆ ಬಂದ ನನ್ನಂಥ ಎಷ್ಟೋ ಹೊಸಬರ ಚಿತ್ರಗಳು ಇನ್ನೂ ಡಬ್ಬದಲ್ಲೇ ಕೊಳೆಯುತ್ತಿವೆ. ಕೊರೋನಾ 100% ತೊಲಗಿಲ್ಲ ಎಂಬುದನ್ನು ನಾವು ಮರೆಯಬಾರದು. ಚಿತ್ರ ಥಿಯೇಟರ್‌ ಗಳಲ್ಲಿ ರಿಲೀಸ್‌ ಆದರೆ, ಅದರ ಮಜವೇ ಬೇರೆ, ನನ್ನ ಮುಂದಿನ ಚಿತ್ರಗಳು ಹಾಗಾಗಬಹುದು!

ಮೂಲತಃ ಬಂಗಾಳಿ ನಟಿಯಾಗಿದ್ದರೂ ಹಿಂದಿ ಚೆನ್ನಾಗಿ ಮಾತಾಡ್ತೀಯಾ. ಇದನ್ನು ಹೇಗೆ ಕಲಿತೆ?

ಕೋಲ್ಕತಾದಲ್ಲಿ ನನ್ನ ಫ್ರೆಂಡ್ಸ್ ಎಲ್ಲಾ ಹಿಂದಿಯವರೇ! ಬಂಗಾಳಿಗಳೆ ಬಲು ಕಡಿಮೆ ಎನ್ನಬಹುದು. ಅವರುಗಳ ಜೊತೆ, ಶಾಲಾ ಕಾಲೇಜುಗಳಲ್ಲಿ ಚೆನ್ನಾಗಿ ಪಳಗಿದ್ದವರ ಪ್ರಭಾವ ಇದು. ಅವರುಗಳು ಹೆಚ್ಚಾಗಿ ಮಾರ್ವಾಡಿಗಳೇ ಆಗಿದ್ದರಿಂದ, ನನಗೆ ಎಲ್ಲ ಸುಲಭವಾಯಿತು. ನನ್ನ ತಾಯಿ ಆಂಗ್ಲ ಶಿಕ್ಷಕಿ, ಆಕೆಗೆ ನನ್ನಷ್ಟು ಹಿಂದಿ ಬಾರದು. ಮನೆ ಮಟ್ಟಿಗೆ ಮಾತೃಭಾಷೆ ಸೀಮಿತವಾಗಿದೆ.

ಬಂಗಾಳಿ ಚಿತ್ರೋದ್ಯಮ ಯಾಕೆ ಹಾಗಿದೆ? ಅಲ್ಲೇಕೆ ಹೊಸ ಜನರಿಗೆ ಕೆಲಸ ಸಿಗುತ್ತಿಲ್ಲ?

ಇದಕ್ಕೆ ಮೂಲಕಾರಣ ಎಂದರೆ ಹಿಂದಿ ನೆಟ್‌ ವರ್ಕ್‌ ತರಹ ಬಂಗಾಳಿ ಇಂಡಸ್ಟ್ರಿಗೆ ಹೈ ಸ್ಕೋಪ್‌ ಇಲ್ಲ. ದಕ್ಷಿಣದ ಚಿತ್ರಗಳಿಗೆ ಹೋಲಿಸಿದಾಗ ನಮ್ಮ ಇಂಡಸ್ಟ್ರಿ ಬಹಳ ಹಿಂದುಳಿದಿದೆ. ಇಲ್ಲಿ ನಿರ್ಮಾಪಕರ ಸಂಖ್ಯೆ ಕಡಿಮೆ, ಆದರೆ ಬಂಗಾಳಿ ಸಿನಿಮಾಗಳಿಗೆ ಬೇಡಿಕೆಯಂತೂ ಇದ್ದೇ ಇದೆ. ಇಲ್ಲಿ ರಿತುಪರ್ಣಾ ಘೋಷ್‌ ರಂಥ ಘಟಾನುಘಟಿ ನಿರ್ದೇಶಕಿಯರೂ ಇದ್ದಾರೆ. ಉತ್ತಮ ಚಿತ್ರಗಳಿಗೂ ಕೊರತೆ ಇಲ್ಲ. ಕೋಲ್ಕತಾದಾಚೆ ಅಂಥ ಸ್ಕೋಪ್‌ ಇಲ್ಲ, ಅಪರೂಪಕ್ಕೆ ಕೆಲವು ಹೊರಗೂ ಹಿಟ್‌ ಎನಿಸುತ್ತವೆ. ಆದರೆ ವ್ಯಾಪಾರಿ ದೃಷ್ಟಿಯಿಂದ ಬಂಗಾಳಿ ಚಿತ್ರಗಳು ಕುಂಟುತ್ತಿವೆ. ಹೀಗಾಗಿ ನನಗಂತೂ ದಕ್ಷಿಣದ ಚಿತ್ರಗಳಲ್ಲಿ ಅವಕಾಶ ಸಿಕ್ಕಿದರೆ ಸಾಕು ಎಂದಾಗಿಬಿಟ್ಟಿದೆ, ನೋಡೋಣ…..

ನಿನಗೆ ಎಂಥ ಪಾತ್ರಗಳು ಬಹಳ ಇಷ್ಟವಾಗುತ್ತವೆ?

ಪೊಲೀಸ್‌ ಆಫೀಸರ್‌ ಪಾತ್ರ ಬಹಳ ಇಷ್ಟ! ಹಿಂದಿಯ `ಹಂ ದಿಲ್ ದೇ ಚುಕೇ ಸನಂ` ಚಿತ್ರದಲ್ಲಿ ಐಶ್ವರ್ಯಾ ರೈ ನಿರ್ವಹಿಸಿದಂಥ ಜಿಮ್ ಟ್ರೇನರ್‌ ಪಾತ್ರ ಬಲು ಚಾಲೆಂಜಿಂಗ್‌! ಬಂಗಾಳಿಯಲ್ಲಿ ಅದು ರೀಮೇಕ್‌ ಆದರೆ ನಾನೇ ಆ ಪಾತ್ರ ಮಾಡುವಾಸೆ.

ಬಂಗಾಳಿ ಚಿತ್ರೋದ್ಯಮದಲ್ಲಿ ಸ್ತ್ರೀ ಪ್ರಧಾನ ಚಿತ್ರಗಳಿಗೇನೂ ಕೊರತೆ ಇಲ್ಲ. ಅವುಗಳಲ್ಲಿ ಯಾವುದರ ಹಿಂದಿ ಅತರಣಿಕೆಯಲ್ಲಿ ನಿನಗೆ ನಟಿಸಲು ಇಷ್ಟ?

ನೀವು ಹೇಳಿದ್ದು ಸರಿಯಾಗಿದೆ. ಬಂಗಾಳಿಯ ಅನೇಕ ಪ್ರಶಸ್ತಿ, ವಿಜೇತ ಚಿತ್ರಗಳು ಇಂಥ ಸಬ್ಜೆಕ್ಟ್ ಹೊಂದಿವೆ. ಆದರೆ ಆ ಚಿತ್ರಗಳೇ ಹಿಂದಿಗೆ ದಕ್ಷಿಣಕ್ಕೆ ರೀಮೇಕ್‌ ಆಗಲಿ ಎಂದು ನಾನು ಬಯಸುವುದಿಲ್ಲ. ಬಂಗಾಳಿಯ ಇಂಥ ಚಿತ್ರಗಳು ಭಲೇ ಕ್ಲಾಸಿಕ್‌ ಎನಿಸಿವೆ. ರೀಮೇಕ್‌ ನಲ್ಲಿ ಖಂಡಿತಾ ಆ ಸೊಗಡು ಬರಲಾರದು!

ಸಾಹಿತ್ಯ ಮಾತ್ರವಲ್ಲದೆ, ಬಂಗಾಳಿ ಚಿತ್ರಗಳು ಸಂಗೀತ ನೃತ್ಯಗಳಿಗೂ ಹೆಸರುವಾಸಿ ಅಲ್ಲವೇ?

ಹೌದು, ಈ ಎರಡೂ ಕ್ಷೇತ್ರಗಳಲ್ಲಿ ಬಂಗಾಳಿ ಚಿತ್ರ ಸದಾ  ಮುಂದು. ನನಗೆ ಸಂಗೀತದ ಸ…ರಿ….ಗ….ಮ ಏನೇನೂ ಬರಲ್ಲ. ಆದರೆ ನೀವು ಸುಶ್ಮಿತಾ ಸೇನ್‌, ರಾಣಿ ಮುಖರ್ಜಿ, ಸುಚಿತ್ರಾ ಸೇನ್‌, ಮೂನ್‌ ಮೂನ್‌ ಸೇನ್‌, ಕೊಂಕನಾ ಶರ್ಮಾರಂಥವರು ಇದರಲ್ಲಿ ಪಳಗಿದ್ದಾರೆ. ಭಾರತೀಯ ಸಾಹಿತ್ಯದಲ್ಲಿ ಬಂಗಾಳಿ ಸಾಹಿತ್ಯಕ್ಕೆ ತನ್ನದೇ ಆದ ಪ್ರಾಬಲ್ಯತೆ ಇದೆ. ಹಾಗೆಯೇ ಬಂಗಾಳದ ಸಂಸ್ಕೃತಿ ಸಹ!

ನಿನ್ನ ಹವ್ಯಾಗಳೇನು?

ಪೇಂಟಿಂಗ್‌! ನಾನು ಎಲ್ಲಾ ಬಗೆಯ ಚಿತ್ರಕಲೆಗಳಲ್ಲೂ ಚೆನ್ನಾಗಿ ಪಳಗಿದ್ದೇನೆ.

ನಿನ್ನ ಮನದಲ್ಲಿ ಮೂಡುವ ವಿಚಾರಗಳನ್ನು ಚಿತ್ರಿಸಬಲ್ಲೆಯಾ?

ಖಂಡಿತಾ! ಪ್ರಕೃತಿಯಲ್ಲಿ ಯಾವುದೇ ಉತ್ತಮ ದೃಶ್ಯ ಗಮನಿಸಿದಾಗ ನಾನು ಇದನ್ನು ಕ್ಯಾನ್‌ ವಾಸ್‌ ಗೆ ಇಳಿಸುತ್ತೇನೆ. ಚಿತ್ರಕಲೆ ಅಥವಾ ನಟನೆ ಇರಲಿ, ಇಲ್ಲಿ ನಿಮ್ಮ ಕಲ್ಪನೆ, ಕ್ರಿಯಾಶೀಲತೆಗೆ ಅತಿ ಮಹತ್ವವಿದೆ.

ನೀನು ಮಾಡಿರುವ ಯಾವುದಾದರೂ ಪೇಂಟಿಂಗ್ಗೆ ಉತ್ತಮ ಪ್ರತಿಕ್ರಿಯೆ ಬಂದಿದ್ದು ಉಂಟೇ?

ನಾನು ಇದುವರೆಗೂ ನನ್ನ ಚಿತ್ರಕಲೆಯ ಪ್ರದರ್ಶನ ಏರ್ಪಡಿಸಿಲ್ಲ, ಯಾರಿಗೂ ದೊಡ್ಡದಾಗಿ ತೋರಿಸಿಕೊಂಡಿದ್ದೂ ಇಲ್ಲ. ಹೀಗಾಗಿ ಬೆಸ್ಟ್ ಕಾಂಪ್ಲಿಮೆಂಟ್ಸ್ ಎಂಬುದು ನನ್ನ ಪಾಲಿಗೆ ದುಬಾರಿ ಆದೀತು. ಇದುವರೆಗೂ ನಾನು ಮಾಡಿರುವ ಪೇಂಟಿಂಗ್ಸ್ ನಲ್ಲಿ `ಬುದ್ಧ’ನ ಪೇಂಟಿಂಗ್‌, ನನ್ನ ಗೆಳತಿಯರಿಂದ ಹೆಚ್ಚು ಹೊಗಳಲ್ಪಟ್ಟಿದೆ. ಕಾಲೇಜಿನಲ್ಲಿದ್ದಾಗ ನಾನು ಅದನ್ನು ಮಾಡಿದ್ದೆ.

ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ