ಉದ್ಯೋಗಸ್ಥ ತಾಯಂದಿರ ವಿಷಯ ಬಂದಾಗ, ಎಲ್ಲರಿಗೂ ಹೊಳೆಯುವುದೆಂದರೆ ಮುಂಜಾನೆಯಿಂದ ರಾತ್ರಿಯವರೆಗೂ ಬಿಡುವಿಲ್ಲದೆ ಸತತ ದುಡಿಯುವ ಒಬ್ಬ ಹೆಣ್ಣಿನ ಚಿತ್ರ ಮುಂದೆ ಬರುತ್ತದೆ. ಬೆಳಗ್ಗೆ ಎದ್ದೊಡನೆ ತನ್ನ ಪ್ರಾತಃವಿಧಿ ಮುಗಿಸಿ, ಮನೆಯವರಿಗಾಗಿ ಕಾಫಿ, ತಿಂಡಿ ರೆಡಿ ಮಾಡುವುದೇ ಅವಳ ಮೊದಲ ಆದ್ಯತೆ ಆಗಿರುತ್ತದೆ. ನಂತರ ಊಟ, ಎಲ್ಲರ ಬಾಕ್ಸ್ ರೆಡಿ ಮಾಡಿ ತಾನು ಕೆಲಸಕ್ಕೆ ಹೊರಡಲು ಬೇಗ ಬೇಗ ಸಿದ್ಧಳಾಗಿ ಆಫೀಸಿಗೆ ದೌಡಾಯಿಸುತ್ತಾಳೆ. ಯಥಾಪ್ರಕಾರ ಸಂಜೆ ಮನೆಗೆ ಬಂದ ತಕ್ಷಣ ಮಕ್ಕಳ ತಿಂಡಿ, ಕಾಫಿ, ಅವರ ಹೋಂವರ್ಕ್‌ ಮುಗಿಸಿ ರಾತ್ರಿ ಅಡುಗೆಯ ಧಾವಂತ ತಪ್ಪಿದ್ದಲ್ಲ. ಊಟ ಮಾಡಿ ಮಲಗುವಷ್ಟರಲ್ಲಿ 11 ಗಂಟೆ. ಮತ್ತೆ ಮರುದಿನ 5 ಗಂಟೆಗೆ ಎದ್ದರೆ ಇದೇ ಪುನರಾರ್ತನೆ!

ಈ ಮಧ್ಯೆ ಅವಳು ಮನೆಯ ಹಿರಿಯರ ಆರೋಗ್ಯ, ಹಾಸ್ಪಿಟಲ್ ವಿಸಿಟ್ಸ್, ಹಬ್ಬ ಹರಿದಿನ, ಮಕ್ಕಳ ಪೇರೆಂಟ್ಸ್ ಮೀಟಿಂಗ್‌, ಅವುಗಳ ರೋಗ ರುಜಿನ…. ಇದೆಲ್ಲದರ ಮಧ್ಯೆ ಎಲ್ಲಿಂದ ಬರಬೇಕು, ಮನೆಯವರಿಗಲ್ಲದೆ ತನಗಾಗಿ ಕ್ವಾಲಿಟಿ ಟೈಂ ಬಾಣಂತನ ಮುಗಿಸಿ ಆಫೀಸಿಗೆ ಹೊರಟ ದಿನದಿಂದಲೇ ವರ್ಕಿಂಗ್‌ ಮದರ್ಸ್‌ ತಮಗೆ ದಿನದ 24 ಗಂಟೆಗಳಲ್ಲಿ ಕೆಲವು ನಿಮಿಷಗಳನ್ನೂ ಪ್ರತ್ಯೇಕ ತನಗಾಗಿ ವಿನಿಯೋಗಿಸಿಕೊಳ್ಳುವಂತಿಲ್ಲ. ಈಗಿನ ಕೋವಿಡ್‌ ಮಹಾಮಾರಿಯಂತೂ ಅವರ ಈ ಕಷ್ಟಗಳನ್ನು ಹಲವು ಪಟ್ಟು ಹೆಚ್ಚಿಸಿದೆ. ಈಗ ಮಹತ್ವಾಕಾಂಕ್ಷಿ ಹೆಂಗಸರು ತಮ್ಮ ಕೆರಿಯರ್‌ ನ ಜೊತೆಗೆ ಮನೆಮಂದಿಯ ಆರೋಗ್ಯ ಮಾತ್ರವಲ್ಲದೆ, ಮನೆಯನ್ನು ಆರೋಗ್ಯದ ದೃಷ್ಟಿಯಿಂದ ದುಪ್ಪಟ್ಟು ಶುಚಿಯಾಗಿ ಇಟ್ಟುಕೊಳ್ಳಬೇಕಾದ ಅನಿವಾರ್ಯತೆ ಒದಗಿದೆ.

ಉದ್ಯೋಗಸ್ಥ ತಾಯಿ ಹಿಂದೆಲ್ಲ ಶತಪ್ರಯತ್ನ ಪಟ್ಟು ತನಗಾಗಿ ಕೆಲವು ನಿಮಿಷ ಬಿಡುವು ಮಾಡಿಕೊಳ್ಳಬಹುದಿತ್ತೇನೋ…. ಆದರೆ ಕೊರೋನಾ ಬಂದ ಮೇಲೆ ಉಸಿರಾಡಲಿಕ್ಕೂ ಪುರಸತ್ತು ಇಲ್ಲವಾಗಿದೆ. ಅವಳ ಈ ರೊಟೀನ್‌ ಅವಳ ಮನೆಯವರಿಗೆ ಅತ್ಯಗತ್ಯ. ಆದರೆ ಅದೇ ಮುಂದೆ ಅವಳ ಭವಿಷ್ಯಕ್ಕೆ ಮುಳುವಾಗಬಾರದು.

ಹೆಣ್ಣು ಸಂಸಾರದ ಕಣ್ಣು. ಅಂಥ ಕಣ್ಣಿಗೆ ಇನ್ನಿಲ್ಲದಷ್ಟು ಹಿಂಸೆ ನೀಡಿದರೆ ಮುಂದೆ ಅದರ ದೃಷ್ಟಿ ಚೆನ್ನಾಗಿದ್ದೀತೇ? ಆದ್ದರಿಂದ ತಾಯಿ ಆದವಳು ವರ್ಕಿಂಗ್‌ ಇರಲಿ ಬಿಡಲಿ, ಅವಳು ತನಗಾಗಿ ಒಂದಿಷ್ಟು ಸಮಯ ಅಂದ್ರೆ ಕ್ವಾಲಿಟಿ ಟೈಂ ಉಳಿಸಿಕೊಂಡರೆ, ತನಗಾಗಿ ಒಂದಿಷ್ಟು ಕಾಳಜಿ ತೋರಿಸಿಕೊಂಡರೆ, ಅವಳ ಮುಂದಿನ ಬಾಳು ಬೆಳಗೀತು.

ವಿಷಯ ದೈಹಿಕ ಫಿಟ್ನೆಸ್‌ ಅಥವಾ ಮಾನಸಿಕ ಆರೋಗ್ಯದ ಕುರಿತಾಗಿರಲಿ, ಡಾಕ್ಟರ್ಸ್‌ ಸಹ ಹೆಂಗಸರಿಗೆ ಸದಾ ತಮ್ಮ ವೈಯಕ್ತಿಕ ಕಾಳಜಿ ವಹಿಸುವಂತೆ ಸಲಹೆ ನೀಡುತ್ತಾರೆ.

ಹೆಲ್ದಿ ಆಹಾರ ನಿಮಗಿರಲಿ

ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ಹೆಂಗಸರು ವಯಸ್ಸಾದವರು, ಬೆಳೆಯುತ್ತಿರುವ ಮಕ್ಕಳು ಇತರರ ದೃಷ್ಟಿಯಿಂದ ಹೆಲ್ದಿ ಆಹಾರ ತಯಾರಿಸುತ್ತಾರೆ. ಆದರೆ ತಮ್ಮದೇ ಆಹಾರದ ವಿಷಯ ಬಂದಾಗ, ತಮ್ಮ ದೇಹದ ಕುರಿತಾಗಿ ಅವರು ಕಿಂಚಿತ್ತೂ ಗಮನ ವಹಿಸದೆ, ತಂಗಳೋ ಯಾವುದೋ…. ಉಳಿದಿರುವುದನ್ನು ತಿಂದು ಸುಮ್ಮನಾಗುತ್ತಾರೆ.

ಆದರೆ ವೈದ್ಯರು ಹೇಳುವುದೆಂದರೆ, ಪ್ರತಿ ವಯಸ್ಸಿನ ಹೆಂಗಸರಿಗೂ ಪೌಷ್ಟಿಕ ಆಹಾರ ಅತ್ಯಗತ್ಯ. ಕ್ಯಾಲ್ಶಿಯಂ, ಕಬ್ಬಿಣಾಂಶಗಳ ಅಗತ್ಯ ಪ್ರತಿ ವಯಸ್ಸಿನ ಹೆಂಗಸಿಗೂ ಇದೆ. ಹೀಗಾಗಿ ಇಂತಹ ಪೌಷ್ಟಿಕಾಂಶಗಳಿರು ಆಹಾರ ಅಂದ್ರೆ ಪಾಲಕ್‌ ಸೊಪ್ಪು, ಬ್ರೋಕ್ಲಿ, ಬೀಟ್‌ ರೂಟ್‌, ಸ್ಪ್ರೌಟ್ಸ್, ಹಾಲು, ಪನೀರ್‌, ಟೋಫು ಮುಂತಾದುವನ್ನು ಅಗತ್ಯ ಸೇವಿಸಬೇಕು.

ಮೀ ಟೈಂ ಅತ್ಯಗತ್ಯ

ಎಲ್ಲಕ್ಕೂ ಮುಖ್ಯ ಅಂದ್ರೆ ನಿಮ್ಮ ಇಡೀ ದಿನದ ಶೆಡ್ಯೂಲ್ ‌ನಲ್ಲಿ ನೀವು ನಿಮಗಾಗಿಯೂ ಕೊಂಚ ಟೈಂ ಮೀಸಲಿರಿಸಿಕೊಳ್ಳಿ. ಆಗ ನೀವು ನಿಮ್ಮಿಷ್ಟದ ಕೆಲಸ ಮಾಡಬಹುದು. ನಿಮ್ಮನ್ನು ನೀವು ಗ್ರೂಮ್ ಮಾಡಿಕೊಳ್ಳಲು ಈ ಸಮಯದ ಸದುಪಯೋಗ ಪಡೆಯಿರಿ. ಓದುವ ಹವ್ಯಾಸವಿದ್ದರೆ ಪತ್ರಿಕೆ, ಕಾದಂಬರಿ ಓದಿ ಅಥವಾ ಸಂಗೀತ ಕೇಳಿ. ನಿಮ್ಮಿಷ್ಟದ ಹವ್ಯಾಸಕ್ಕಾಗಿ ಈ ಸಮಯ ಇರಲಿ.

ಸ್ವಲ್ಪ ಹೊತ್ತು ಮಲಗಿ ವಿಶ್ರಾಂತಿ ಪಡೆದರೆ ಸಾಕಪ್ಪ ಎನಿಸಿದ್ದರೆ, ಅದರಲ್ಲೂ ತಪ್ಪಿಲ್ಲ. ಇದರಿಂದ ಇಡೀ ದಿನ ಬಹಳ ಸ್ಟ್ರೆಸ್‌ ಫುಲ್ ಎನಿಸದು, ನಿಮ್ಮ ಮಾನಸಿಕ ಒತ್ತಡ ಎಷ್ಟೋ ಕಡಿಮೆ ಆಗುತ್ತದೆ.

ವ್ಯಾಯಮ ಅಗತ್ಯ

ಮಕ್ಕಳ ಬೆಳವಣಿಗೆಗಾಗಿ ದೈಹಿಕ ಚಟುವಟಿಕೆ ಎಷ್ಟು ಮುಖ್ಯವೋ ನಿಮ್ಮ ಆರೋಗ್ಯದ ಕಡೆ ಕಾಳಜಿ ವಹಿಸುವುದೂ ಅಷ್ಟೇ ಮುಖ್ಯ. ತಮ್ಮ ವಯೋಗುಣಕ್ಕೆ ಅನುಸಾರವಾಗಿ ಎಲ್ಲಾ ಮಹಿಳೆಯರೂ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡಲೇಬೇಕು. ನೀವು ಜಿಮ್ ಗೆ ಹೋಗಿಯೇ ಬೆವರು ಹರಿಸಬೇಕು ಎಂದೇನಿಲ್ಲ, ನೀವು ನಿಮ್ಮ ಆಯ್ಕೆಯಂತೆ ವಾಕಿಂಗ್‌, ಜಾಗಿಂಗ್‌ ಮಾಡಿದರೂ ಸರಿ.

ಇದರಿಂದ ನಿಮ್ಮ ಇಡೀ ದಿನ ತಾಜಾ ಆಗಿ ಕೆಲಸ ಮಾಡಲು ಸ್ಛೂರ್ತಿ ಸಿಗುತ್ತದೆ, ಸುಸ್ತು ದೂರವಾಗುತ್ತದೆ. ಮುಂಜಾನೆ ಅಥವಾ ಸಂಜೆ ಟೈಂ ಮಾಡಿಕೊಂಡು ವ್ಯಾಯಾಮ ಮಾಡಬೇಕು ಅಂತೇನಿಲ್ಲ, ಬದಲಿಗೆ ನಿಮಗೆ ಟೈಂ ಸಿಕ್ಕಿದಾಗ ವ್ಯಾಯಾಮ ಮಾಡಬಹುದು, ಊಟ ಮಾಡಿದ ತಕ್ಷಣ ಬೇಡ, ಎಂಬುದನ್ನು ನೆನಪಿಡಿ.

ಉತ್ತಮ ನಿದ್ದೆ ಅತ್ಯಗತ್ಯ

ನಿಮ್ಮ ಆರೈಕೆಗೆ ಅತಿ ಸುಲಭವಾಗಿ ಆದರೆ ಸಮಯ ಒದಗಿಸಿಕೊಳ್ಳಲು ಅಷ್ಟೇ ಕಷ್ಟಕರವಾದ ವಿಧಾನ ಎಂದರೆ ಪೂರ್ಣ ನಿದ್ದೆ. ವೈದ್ಯರ ಪ್ರಕಾರ ಪ್ರತಿ ವಯಸ್ಕರಿಗೂ ದಿನಕ್ಕೆ 7-8 ಗಂಟೆಗಳ ನಿದ್ದೆ ಅತ್ಯಗತ್ಯ. ಯಾವ ಮನೆಯಲ್ಲೂ ಗೃಹಿಣಿಗೆ ಇಷ್ಟು ಧಾರಾಳವಾಗಿ ನಿದ್ದೆ ಸಿಗುವುದಿಲ್ಲ ಎಂಬುದು ಗೊತ್ತಿರುವ ವಿಷಯ. ಇದರಿಂದಾಗಿ ಸಹಜವಾಗಿ ಬೇಗ ರೋಗಗಳಿಗೆ  ತುತ್ತಾಗುತ್ತಾಳೆ.

ಎಲ್ಲಾ ಹೆಂಗಸರೂ ಮನೆಮಂದಿಯ ಕಾಳಜಿಯಲ್ಲಿ ಎಷ್ಟು ಮಗ್ನರಾಗಿರುತ್ತಾರೆ ಎಂದರೆ, ಗೊತ್ತಿದ್ದೂ ಸಹ ತಮಗೆ ಯಾವುದು ಒಳ್ಳೆಯದೋ ಅದನ್ನು ಮಾಡಿಕೊಳ್ಳಲು ಹೋಗುವುದಿಲ್ಲ. ಒಮ್ಮೆ ಮನೆಯ ಜವಾಬ್ದಾರಿಯಾದರೆ, ಮತ್ತೊಮ್ಮೆ ಆಫೀಸ್‌ ಟೆನ್ಶನ್ಸ್ ಇವರನ್ನು ಕಾಡುತ್ತಲೇ ಇರುತ್ತವೆ.

ದಿನವೊಂದರಲ್ಲಿ ಕೇವಲ 24 ಗಂಟೆಗಳು ಮಾತ್ರವೇ ಇರುವುದರಿಂದ, ಇದರಲ್ಲಿ ನೀವು ನಿಮ್ಮ ವೈಯಕ್ತಿಕ, ಕುಟುಂಬದವರ ಹಾಗೂ ಆಫೀಸಿನ ಕಾಳಜಿ ವಹಿಸಲೇಬೇಕಾಗುತ್ತದೆ. ಉಳಿದ ಕೆಲಸ ಹೇಗೋ ನಿಭಾಯಿಸುತ್ತಾ ಹೆಂಗಸರು ತಮ್ಮ ನಿದ್ದೆಯ ಟೈಮಿಗೆ ಕತ್ತರಿ ಹಾಕುತ್ತಾರೆ. ಯಾವಾಗಲೋ ವಾರಕ್ಕೊಮ್ಮೆ ಹೀಗೆ ಮಾಡಿದರೆ ಸರಿ, ಆದರೆ ದಿನ ಬಿಟ್ಟು ದಿನ ಇದೇ ಕಥೆಯಾದರೆ ಆರೋಗ್ಯ ಹದಗೆಡದೆ ಇನ್ನೇನಾದೀತು? ಇದರಿಂದ ಪಾರಾಗಲು ಒಂದೇ ಮಾರ್ಗ ಎಂದರೆ, ಬೆಳಗ್ಗೆ ಏಳಲು ಅಲಾರ್ಮ್ ಇಟ್ಟುಕೊಳ್ಳುವ ಹಾಗೆಯೇ ರಾತ್ರಿ ಮಲಗಲಿಕ್ಕೂ ನಿಶ್ಚಿತ ಟೈಂ ಫಿಕ್ಸ್ ಮಾಡಿ.

ಯೋಗ ಧ್ಯಾನ ಸಹಾಯಕ

ಇಡೀ ದಿನ ಹೀಗೆ ಒತ್ತಡದಲ್ಲಿ ಕಳೆದ ಮೇಲೆ ಸದಾ ನಿಮ್ಮ ಚಿಂತಿಸುವ ತಲೆಗೂ ಒಂದಿಷ್ಟು ರೆಸ್ಟ್ ಕೊಡಿ. ಇದಕ್ಕೆ ಧ್ಯಾನ, ಯೋಗ ಬಲು ಸಹಕಾರಿ. ಅದು ಮನಸ್ಸನ್ನು ಏಕಾಗ್ರತೆಗೆ ತಿರುಗಿಸಲು ರಾಮಬಾಣ. 10-15 ನಿಮಿಷ ಒಂದು ಮೂಲೆಯಲ್ಲಿ ಕುಳಿತು, ಕಣ್ಣು ಮುಚ್ಚಿ ಆಳವಾಗಿ ಉಸಿರೆದುಕೊಂಡು ದೀರ್ಘ ಧ್ಯಾನದಲ್ಲಿ ಮುಳುಗಿರಿ. ಮೊದ ಮೊದಲು ಏಕಾಗ್ರತೆ ಕಷ್ಟ ಎನಿಸಬಹುದು, ಯೋಗಾಭ್ಯಾಸ ಇದನ್ನು ಸಹಜವಾಗಿ ರೂಢಿಸುತ್ತದೆ.

ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ

ಕೊರೋನಾ ಕಾಟ ಇರಲಿ ಬಿಡಲಿ, ವರ್ಕಿಂಗ್‌ ಮದರ್ಸ್‌ ಗೆ ಸದಾ ಕಾಡು ಕೊರಗು ಎಂದರೆ, ತಾನು ಮಕ್ಕಳಿಗೆ ಮನೆಯವರಿಗೆ ಹೆಚ್ಚಿನ ಕ್ವಾಲಿಟಿ ಟೈಂ ನೀಡಲಾಗುತ್ತಿಲ್ಲ ಎಂಬುದು. ಆದರೆ ಅವರು ಮೂಲತಃ ತಿಳಿದಿರಬೇಕಾದ ವಿಷಯ ಎಂದರೆ, ಮನುಷ್ಯರಾಗಿ ಕೈ ಮೀರಿ ಎಷ್ಟು ಸಾಧ್ಯವೋ ಅವರು ಅಷ್ಟನ್ನು 100% ಮನಃಪೂರ್ವಕವಾಗಿ ಮಾಡಿದ್ದಾರೆಂಬುದು!

ನಿಮ್ಮನ್ನು ನೀವು ಇತರ ತಾಯಂದಿರೊಂದಿಗೆ ಎಂದೂ ಹೋಲಿಸಿಕೊಳ್ಳಲು ಹೋಗಬೇಡಿ. ನಿಮಗೆ ನಿಮ್ಮ ಮನೆಯವರ, ಮಕ್ಕಳ ಬೇಕು ಬೇಡಗಳ ಕಾಳಜಿ ಧಾರಾಳ ಇದೆ, ನಿಮ್ಮ ಶಕ್ತಿಗೂ ಮೀರಿ ಅವರಿಗಾಗಿ ದುಡಿಯುತ್ತಿದ್ದೀರಿ ಎಂದ ಮೇಲೆ ಯಾವ ವಿಧದಲ್ಲೂ ಕೀಳರಿಮೆ ಬೇಡ. ಬದಲಿಗೆ ಸಂಪೂರ್ಣ ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ಹೀಗಾಗಿ ನಿಮ್ಮನ್ನು ನೀವು ತೆಗಳಿಕೊಳ್ಳದೆ ಹೊಗಳಿಕೊಳ್ಳುವುದರತ್ತಲೂ ಗಮನಹರಿಸಿ!

ಜಿ. ಸುಮಂಗಳಾ 

ಉತ್ತಮ ನಿದ್ದೆಗಾಗಿ ಸಲಹೆ

ಮಲಗುವ 1 ಗಂಟೆಗೆ ಮೊದಲೇ ನಿಮ್ಮ ಮೇಲೆ ನೀವೇ ಹೆಚ್ಚಿನ ಚಿಂತೆಗಳ ಹೊರೆ ಹೊರಬೇಡಿ. ನಿಮ್ಮ ಮನಸ್ಸು ಶಾಂತವಾಗುವವರೆಗೂ ನಿದ್ದೆ ಬಾರದು.

ನಿಮ್ಮ ಹಾಸಿಗೆ ಬಳಿ ಒಂದು ನೋಟ್‌ ಪ್ಯಾಡ್‌ ಇರಲಿ, ಮಾರನೇ ದಿನ ಯಾವ ಅಗತ್ಯದ ಕೆಲಸಗಳನ್ನು ನೀವು ಮಾಡಲೇಬೇಕೋ ಅದನ್ನು ಅದರಲ್ಲಿ ನಮೂದಿಸಿ. ಇಡೀ ದಿನದಲ್ಲಿ ಯಾವ ಕೆಲಸದಿಂದ ನಿಮಗೆ ತೃಪ್ತಿ, ಖುಷಿ ಎನಿಸಿತೋ, ಅದನ್ನೂ ಬರೆಯಿರಿ. ಇದರಿಂದ ನಿಮ್ಮ ಟೆನ್ಶನ್ಸ್ ತಂತಾನೇ ಕಡಿಮೆ ಆಗುತ್ತದೆ. ಹೀಗಾಗಿ ನಿದ್ದೆ ಸಹಜವಾಗಿ ಬರುತ್ತದೆ.

ಮಲಗುವ ಮುನ್ನ ನಿಮ್ಮ ಬೆಡ್‌ ರೂಮಿನ ಲೈಟ್‌ ಮಂದ ಮಾಡಿ. ಇದರಿಂದ ಉತ್ತಮ ನಿದ್ದೆಗೆ ಮೂಲವಾದ ಮೆಲಟೋನಿನ್‌ಹಾರ್ಮೋನ್‌ ರಿಲೀಸ್‌ ಆಗುತ್ತದೆ, ಹಾಗಾಗಿ ಸಹಜ ನಿದ್ದೆ ಬರುತ್ತದೆ.

ಮಲಗುವ 2 ಗಂಟೆಗೆ ಮೊದಲೇ ನಿಮ್ಮ ಊಟ ಆಗಿರಲಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ