ಶಿಶುವಿನ ಆರೈಕೆ ನಿಜಕ್ಕೂ ತಾಯಿ ತಂದೆಯರಿಗೆ ಒಂದು ದೊಡ್ಡ ಸವಾಲೇ ಸರಿ. ಆದರೆ ಇದರಲ್ಲಿನ ಒಂದು ಒಳ್ಳೆಯ ವಿಚಾರ ಅಂದ್ರೆ, ನಾವಿರುವ ಈ ಆಧುನಿಕ ಯುಗದಲ್ಲಿ ಈ ಕೆಲಸಕ್ಕೆ ನೆರವಾಗುವ ಹಲವಾರು ಉಪಕರಣಗಳಿವೆ. ನಮ್ಮಮ್ಮ, ಅಜ್ಜಿಯರ ಕಾಲಕ್ಕೆ ಇದು ಇರಲಿಲ್ಲ. ಇದರಿಂದ ನಿಮ್ಮ ಪೇರೆಂಟಿಂಗ್‌ ಸುಲಭ ಆಗುವುದಲ್ಲದೆ, ನಿಮ್ಮ ಕಂದನೂ ಸಹ ಹೆಚ್ಚಿನ ಖುಷಿ ಪಡುವಂತಾಗುತ್ತದೆ.

ಎಲೆಕ್ಟ್ರಿಕ್ ನೇಲ್ ಟ್ರಿಮ್ಮರ್

ಸಣ್ಣ ಮಕ್ಕಳ ಉಗುರು ಬಲು ಬೇಗ ಬೆಳೆಯುತ್ತದೆ. ಅಂಥ ನಾಜೂಕಾದ ಉಗುರನ್ನು ಕತ್ತರಿಸುವುದು ನಿಜಕ್ಕೂ ಹೆತ್ತವರಿಗೆ ಕಷ್ಟದ ಕೆಲಸವೇ ಸರಿ. ಮುಖ್ಯವಾಗಿ ಮಗು ಮೊದಲ 6 ತಿಂಗಳು ತಾಯಿಯ ಎದೆಹಾಲನ್ನೇ ಅಲಂಬಿಸಿರುವುದರಿಂದ, ಅದರಲ್ಲಿನ ಧಾರಾಳ ಕ್ಯಾಲ್ಶಿಯಂನಿಂದಾಗಿ ಮಗುವಿನ ಉಗುರು ಬೇಗ ಬೆಳೆಯುತ್ತದೆ. ಅದು ತನ್ನನ್ನು ತಾನೇ ಪರಚಿ ರಂಪ ಮಾಡಿಕೊಂಡರೆ ಕಷ್ಟ.

ಹೀಗಾಗಿ ಮಾರ್ಕೆಟ್‌ ನಲ್ಲಿ ಲಭ್ಯವಿರುವ ನೇಲ್ ‌ಟ್ರಿಮ್ಮರ್‌ ನಿಮಗೆ ಬಲು ಉಪಯುಕ್ತ. ಇದರಿಂದ ನಿಮ್ಮ ಮಗುವಿನ ಉಗುರನ್ನು ನೀಟಾಗಿ ಕತ್ತರಿಸಲು, ಅದನ್ನು ಫೈಲ್ ಮಾಡಿ ಮೊಡಾಗಿಸಲು ಅನುಕೂಲ. ಮಗುವಿಗೆ ಏನೂ ತೊಂದರೆ ಆಗದು.

ಮಗುವನ್ನು ಮಲಗಿಸುವ ಮೆಶೀನ್

ಮಗುವನ್ನು ರಾತ್ರಿ ಹೊತ್ತು ಮಲಗಿಸುವುದು ದೊಡ್ಡ ಸವಾಲೇ ಸರಿ. ಪೇರೆಂಟ್ಸ್ ಗೆ ಈ ಕಷ್ಟ ನೀಗಿಸಲು ಲೈಟ್‌ಸೌಂಡ್‌ ಮೆಶೀನ್ ಇದೀಗ ಲಭ್ಯ. ಇದರಲ್ಲಿ ನೀವು ನಿಮ್ಮ ಮಗುವಿನ ಆಯ್ಕೆ ಪ್ರಕಾರ ಲೈಟ್‌ಸೌಂಡ್‌ ಆರಿಸಬಹುದು. ಇದರಿಂದ ನಿಮ್ಮ ಮಗು ರಾತ್ರಿ ಹೊತ್ತು ಆರಾಮವಾಗಿ ನಿದ್ರಿಸುತ್ತದೆ. ಇದರಲ್ಲಿ ಜಂಗಲ್ ಥೀಂನಿಂದ ಹಿಡಿದು ಎಷ್ಟೋ ಬಗೆಯ ಲೈಟ್‌ಸೌಂಡ್‌ ಥೀಂ ಲಭ್ಯ, ಇದರಿಂದ ನೀವು ಮನೆಯ 4 ಗೋಡೆಗಳ ಮಧ್ಯೆ ಪ್ರಕೃತಿಯ ರಮ್ಯ ವಾತಾವರಣ ಸೃಷ್ಟಿಸಬಹುದು.

ಫ್ರೆಶ್ಫ್ರೂಟ್ಫೀಡರ್

ನಿಮ್ಮ ಮಗುವಿಗೆ ಹಲ್ಲು ಮೂಡುತ್ತಿರುವ ಸಂದರ್ಭದಲ್ಲಿ, ಈ ಸಮಯ ನಿಮಗೂ, ಮಗುವಿಗೂ ತುಸು ಕಷ್ಟಕರ ಎನ್ನಬಹುದು. ಈ ಸಮಯದಲ್ಲಿ ಕಂಡದ್ದನ್ನು ಕಚ್ಚುವ ಮಗುವಿಗೆ ವಾಂತಿ, ಭೇದಿಯ ಕಾಟ ತಪ್ಪಿದ್ದಲ್ಲ. ಈ ಪ್ರಕ್ರಿಯೆ ಆರಾಮದಾಯಕ ಆಗಿರಲು, ಇದಕ್ಕಾಗಿ ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಬಗೆಯ ಸಿಲಿಕಾನ್‌ ಟೀಥರ್‌ ಲಭ್ಯವಿವೆ. ಆದರೆ ಅದರಿಂದ ಇನ್‌ ಫೆಕ್ಷನ್ ಆದರೇನು ಗತಿ ಎಂದು ಹಿರಿಯರು ಚಿಂತಿಸುತ್ತಾರೆ. ಹೀಗಾಗಿ ಫ್ರೂಟ್‌ ಫೀಡರ್‌ ಈ ಸಂದರ್ಭಕ್ಕೆ ಉತ್ತಮ. ಇದು ಒಂದು ಉತ್ತಮ ಗ್ಯಾಜೆಟ್‌ ಆಗಿದ್ದು, ಮಗುವಿನ ಟೀಥಿಂಗ್‌ ಗೆ ನೆರವಾಗುವುದಲ್ಲದೆ, ಹಣ್ಣಿನ ಹೋಳು ಮಗು ಗಂಟಲಿಗೆ ಸಿಕ್ಕದಂತೆ ತಾಯಿ ಆರಾಮವಾಗಿ ತಿನ್ನಿಸಬಹುದು. ಹೀಗಾಗಿ ಇದು ಒಂದೇ ಕಲ್ಲಿಗೆ 2 ಹಕ್ಕಿ ಎಂಬಂತಾಯಿತು.

ಹಿಪ್ಸೀಟ್ಬೇಬಿ ಕ್ಯಾರಿಯರ್

ನೀವು ಹೊಸ ತಾಯಿ, ಜೊತೆಗೆ ಮಗು ಶೈಶಾವಸ್ಥೆಯಿಂದ ಬಾಲ್ಯಕ್ಕೆ ಇದೀಗ ಕಾಲಿಡುತ್ತಿದೆ ಎಂದಾಗ, ಈ ಸ್ಟೇಜ್‌ ನಲ್ಲಿ `ಹಿಪ್‌ಸೀಟ್‌ ಬೇಬಿ ಕ್ಯಾರಿಯರ್‌’ ನಿಮಗೆ ಬಲು ಉಪಕಾರಿ. ನಾವು ಮಗುವನ್ನು ಮಡಿಲಿಗೆ ಹಾಕಿಕೊಂಡಾಗೆಲ್ಲ, ನಾವು ಸರಿಯಾದ ಪೋಸ್ಚರ್‌ ನಲ್ಲಿ ಕುಳಿತಿದ್ದೇವೋ ಇಲ್ಲವೋ ಎಂಬುದನ್ನೇ ಮರೆಯುತ್ತೇವೆ. ಎಷ್ಟೋ ಸಲ ತಾಯಿ, ಅಜ್ಜಿ ಮಗುವನ್ನು 1-2 ಗಂಟೆ ಕಾಲ ಮಡಿಲಲ್ಲಿ ಮಲಗಿಸಿಕೊಳ್ಳ ಬೇಕಾಗುತ್ತದೆ.

ಆ ಸಮಯದಲ್ಲಿ ತಾಯಿ, ಅಜ್ಜಿಗೆ ಸೊಂಟ, ಹೆಗಲಲ್ಲಿ ನೋವು ತಪ್ಪಿದ್ದಲ್ಲ. ಹೀಗಾಗಿ ಇಂಥ ಸ್ಥಿತಿಯಲ್ಲಿ ಈ ಸಾಧನ ನಿಮಗೆ ಬಲು ಉಪಕಾರಿ. ಇದರ ನೆರವಿನಿಂದ ನೀವು ಶಿಶು ಅಥವಾ ಬಾಲ್ಯಾವಸ್ಥೆಗೆ ಕಾಲಿಡುತ್ತಿರುವ ಮಗುವಿನವರೆಗೆ ಅದನ್ನು ಸುಲಭವಾಗಿ ಮಲಗಿಸಿಕೊಳ್ಳಬಹುದು, ನಿಮಗೆ ಯಾವ ಜಂಜಾಟ ಇರುವುದಿಲ್ಲ.

ವೈಬ್ರೇಟಿಂಗ್ಮ್ಯಾಟ್ರಸ್ಪ್ಯಾಡ್

ಇದು ನಿಮ್ಮ ಮಗುವಿಗೆ ಬಲು ಉಪಕಾರಿ ಎಂದೇ ಹೇಳಬೇಕು. ಇದರಲ್ಲಿ ನೀವು ಇದನ್ನು ನಿಮ್ಮ ಮಗುವಿನ ಪುಟ್ಟ ಹಾಸಿಗೆ (ಕೌದಿ, ಬೊಂತೆ ಏನೇ ಇರಲಿ) ಅಡಿ ಇಡಬೇಕು. ಇದರಿಂದ ಮೂಡಿ ಬರುವ ಲಘು ತರಂಗಗಳು ಮಗುವನ್ನು ತೊಟ್ಟಿಲಲ್ಲಿ ತೂಗುತ್ತಿರುವಂತೆ ಭಾಸವಾಗುತ್ತದೆ. ಇದರಿಂದಾಗಿ ರಾತ್ರಿಯಿಡೀ ಮಗು ಸುಖವಾಗಿ ನಿದ್ರಿಸುತ್ತದೆ.

ಬೇಬಿ ಬಾತ್ಥರ್ಮಾಮೀಟರ್

ಮಗುವಿನ ಸ್ನಾನದ ಸಮಯ ಅದಕ್ಕೆ ಬಲು ಹಿತಕರ. ನಿಮ್ಮ ಮಗುವಿನ ವಯಸ್ಸಿಗೆ ತಕ್ಕಂತೆ, ಈ ಥರ್ಮಾಮೀಟರ್‌ ನೆರವಿನಿಂದ ಬಿಸಿ ನೀರಿನ ಉಷ್ಣತೆ ಎಷ್ಟಿರಬೇಕು ಎಂಬುದನ್ನು ನೀವು ಸುಲಭವಾಗಿ ಅಳೆಯಬಹುದು. ಮಗುವಿಗೆ ಬೇಕಾಗುವಂಥ ಸುಖೋಷ್ಣ ನೀರು ರೆಡಿ ಮಾಡಬಹುದು. ನೋಡಲು ಇದು ನೀರಿನಲ್ಲಿ ತೇಲುವ ಆಟಿಕೆಯಂತೆಯೇ ಇರುತ್ತದೆ. ಮಗು ಇದನ್ನು ತಟ್ಟುತ್ತಾ ಆನಂದಿಸುತ್ತಾ ಸ್ನಾನಕ್ಕೆ ಸಿದ್ಧವಾಗುತ್ತದೆ, ನೀವು ಉಷ್ಣತೆ ಗಮನಿಸಿಕೊಳ್ಳಿ.

ಸ್ಮಾರ್ಟ್ಮಾನಿಟರ್ಸಾಕ್ಸ್

ಉದ್ಯೋಗಸ್ಥ ತಾಯಂದಿರಿಗೆ ಈ ಸಾಧನ ಬಲು ಉಪಕಾರಿ. ಇದರಲ್ಲಿ ನಿಮಗೆ ಹೈ ಕ್ವಾಲಿಟಿ ಕ್ಯಾಮೆರಾ ಜೊತೆ ಸಾಕ್ಸ್ ಸೆಟ್ ಸಿಗುತ್ತದೆ. ನೀವು ಮಾಡಬೇಕಾದುದಿಷ್ಟೆ, ನಿಮ್ಮ ಮಗುವಿನ ಕೋಣೆಯಲ್ಲಿ ಇದನ್ನು ಅಳವಡಿಸಿ ಸೆಟ್‌ ಮಾಡಿ, ಜೊತೆಗೆ ಇರುವ ಸಾಕ್ಸ್ ತೊಡಿಸಿಬಿಡಿ. ಇದರಿಂದ ನಿಮ್ಮ ಮಗುವಿಗೆ ನಿದ್ರಿಸುವಾಗ ಏನೇ ತೊಂದರೆ ಇರಲಿ, ಅದರ ಆಕ್ಸಿಜನ್‌ ಲೆವೆಲ್ ‌ಯಾ ಹಾರ್ಟ್‌ ಬೀಟ್‌ ತುಸುವೇ ಅಪಾಯದೆಡೆಗೆ ವಾಲುವಂತಿದ್ದರೂ, ನಿಮ್ಮ ಮೊಬೈಲ್ ‌ಗೆ ಸೆಟ್‌ ಮಾಡಲಾದ ಕ್ಯಾಮೆರಾ ಟೆಕ್ನಿಕ್ಸ್ ಕಾರಣ, ಇದರ ಕುರಿತಾದ ನೋಟಿಫಿಕೇಶನ್ಸ್ ಬಂದುಬಿಡುತ್ತದೆ!

ನೀವು ಇರುವ ಕಡೆಯಿಂದಲೇ, ಮಗುವಿನ ಚಟುವಟಿಕೆಗಳನ್ನು ನಿಮ್ಮ ಮೊಬೈಲ್ ‌ನಿಂದಲೇ ಗಮನಿಸಬಹುದು. ಈ ಸಾಕ್ಸ್ ನ್ನು ನೀವು ಆರಾಮವಾಗಿ ಒಗೆಯಬಹುದು. ಇದರಿಂದ ಮಗುವಿಗೆ ಕರೆಂಟ್‌ ತಗಲೀತು ಎಂಬ ಭ್ರಮೆ ಇಲ್ಲ.

ಸಿಲಿಕಾನ್ಟ್ರೇನಿಂಗ್ಸ್ಪೂನ್

ಬೆಳೆಯುತ್ತಿರುವ ಮಗುವಿಗೆ ನೀವು ಘನ ಆಹಾರ ಉಣಿಸುವಾಗ ಅಥವಾ ಮಗು ತಾನೇ ತೆಗೆದುಕೊಂಡು ತಿನ್ನುವ ಹಂತ ತಲುಪಿದ್ದರೆ, ಆಗ ಈ ಸಿಲಿಕಾನ್‌ ಚಮಚ ನಿಮಗೆ ಬಲು ಉಪಕಾರಿ. ಇದನ್ನು ಬಳಸಿ ತಿನ್ನುವುದರಿಂದ ಮಗುವಿಗೆ ಏಟು ತಗುಲುವ ಅಪಾಯ ಇಲ್ಲವೇ ಇಲ್ಲ (ಸ್ಟೀಲ್ ‌ಚಮಚ ಅದರ ಬಾಯಿ, ಹಲ್ಲಿಗೆ ಬಡಿದೀತು), ಅವು ಸುಲಭವಾಗಿ ತಾನೇ ಈ ಚಮಚದಿಂದ  ಆಹಾರ ತಿನ್ನುವ ಅಭ್ಯಾಸ ರೂಢಿಸಿಕೊಳ್ಳುತ್ತವೆ.

ಬೇಬಿ ಶಿಮರ್ಕ್ಯಾಪ್

ಸ್ನಾನ ಮಾಡುತ್ತಿರುವ ಮಗುವಿನ ಕಣ್ಣಿಗೆ ಸೋಪು, ಶ್ಯಾಂಪೂ ನೊರೆ ಹೋಗಿಬಿಟ್ಟರೆ ತಾಯಿ, ಮಗು ಇಬ್ಬರಿಗೂ ತೊಂದರೆ ತಪ್ಪಿದ್ದಲ್ಲ. ಇದನ್ನು ತಪ್ಪಿಸಲು ಮಾರ್ಕೆಟ್‌ ನಲ್ಲಿ ಲಭ್ಯವಿರುವ ಶವರ್‌ ಕ್ಯಾಪ್‌ ಬಳಸಿಕೊಳ್ಳಿ. ಇದು ಹಲವು ಸೈಝ್ ಗಳಲ್ಲಿ ಲಭ್ಯ, ಬೆಳೆಯುವ ಮಗುವಿನ ತಲೆ ಗಾತ್ರಕ್ಕೆ ತಕ್ಕಂತೆ ನೋಡಿ ಆರಿಸಿ. ಇದು ಸಿಲಿಕಾನ್‌ ಬೇಸ್ಡ್ ಆದ್ದರಿಂದ, ಮಗುವಿಗೆ ಯಾವ ತೊಂದರೆಯೂ ಇಲ್ಲ. ಇದು ಮಗುವಿನ ಕಣ್ಣು, ಕಿವಿಗಳನ್ನು ಸೋಪು ನೀರಿನಿಂದ ರಕ್ಷಿಸುತ್ತದೆ, ಮಗುವಿಗೆ ಹಿತಕರ ಎನಿಸುತ್ತವೆ.

ಆಟೋಮ್ಯಾಟಿಕ್ಬೇಬಿ ಸ್ವಿಂಗ್

ಅಂದರೆ ಇದು ತಂತಾನೇ ತೂಗುವ ತೊಟ್ಟಿಲು! ಇದರ ಹೆಸರಿನಿಂದಲೇ ಎಷ್ಟು ಉಪಕಾರಿ ಅಂತ ತಿಳಿಯುತ್ತದೆ. ಇದರಲ್ಲಿ ಮಗುವನ್ನು ಮಲಗಿಸಿ, ಬೆಲ್ಟ್ ಬಿಗಿದು, ಮಗು ಬೀಳದಂತೆ ಎಚ್ಚರ ವಹಿಸಬಹುದು. ನಂತರ ಈ ತೊಟ್ಟಿಲು ತಂತಾನೇ ಮಗುವನ್ನು ತೂಗುತ್ತದೆ. ಇದರಿಂದ ಮಗುವಿಗೆ ಮಡಿಲಲ್ಲೇ ನಿದ್ರಿಸಬೇಕೆಂಬ ಹಠ ಬರುವುದಿಲ್ಲ. ತಾನು ಒಂಟಿ, ತಾಯಿ ದೂರದಲ್ಲಿದ್ದಾಳೆ ಎಂದೂ ತಿಳಿಯುವುದಿಲ್ಲ.

ಪ್ರಮೀಳಾ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ