ಚಿತ್ರ: ಕಾಡುಮಳೆ
ನಿರ್ದೇಶನ: ಸಮರ್ಥ ಮಂಜುಮಾಥ್
ನಿರ್ಮಾಣ: ಮಂಜುನಾಥ್ ಟಿ.ಎಸ್.
ತಾರಾಂಗಣ:  ಅರ್ಥ ಹರ್ಷನ್, ಸಂಗೀತಾ ರಾಜಾರಾಮ್, ವಿಜಯಲಕ್ಷ್ಮಿ, ಗೌತಮ್, ಗಿಲ್ಲಿ ಮಂಜು ಮತ್ತಿತರರು
ರೇಟಿಂಗ್: 3/5

ರಾಘವೇಂದ್ರ ಅಡಿಗ ಎಚ್ಚೆನ್.

ಹೊಸಬರ ತಂಡದ ಕಾಡುಮಳೆ ಇಂದಿನಿಂದ (31-1-2025) ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿದೆ. ಭಾರತದ ಮೊಟ್ಟ ಮೊದಲ ಬ್ರೈನ್ ಸ್ಕಾಮಿಂಗ್ ಸಿನಿಮಾ ಎಂದು ಪ್ರಚಾರ ಮಾಡಿಕೊಂಡಿದ್ದ ಕಾಡುಮಳೆ ಕಥೆಯನ್ನು ಕಾರ್ತಿಕ್ ಭಟ್ ಬರೆದಿದ್ದರೆ ಸಮರ್ಥ ಮಂಜುನಾಥ್ ನಿರ್ದೇಶನದ ಚಿತ್ರ ಇದಾಗಿದೆ. ಟೈಮ್ ಲೂಪ್ ಆಧಾರದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ಪ್ರಮುಖವಾಗಿ ಕಾಣಿಸುವುದು ಎರಡು ಪಾತ್ರಗಳು ಮಾತ್ರ. ಮೀರಾ (ಸಂಗೀತಾ ರಾಜಾರಾಮ್) ಹಾಗೂ ರಿಚರ್ಡ್ ಥಾಂಪ್ಸನ್(ಅರ್ಥ ಹರ್ಷನ್) ಈ ಎರಡು ಪಾತ್ರಗಳ ಸುತ್ತವೇ ಕಥೆ ಹೆಣೆಯಲಾಗಿದೆ. ದಟ್ಟವಾದ ಕಾಡಿನ ಹಿನ್ನೆಲೆಯಲ್ಲಿ ಕಥೆ ಹೆಣೆಯಲಾಗಿದೆ., ಪ್ರಕೃತಿಯ ಬಗೆಹರಿಯದ ರಹಸ್ಯಗಳಲ್ಲಿ ಒಂದಾದ ಕಾಲ್ಪನಿಕ ಕಾಡುಮಳೆಯನ್ನು ಇಲ್ಲಿ ಪ್ರಮುಖವಾಗಿ ತೋರಿಸಲಾಗಿದೆ.

ಮೀರಾ ತಾನು ಪ್ರೀತಿಸುತ್ತಿದ್ದ ವ್ಯಕ್ತಿಯಿಂದ ತಿರಸ್ಕೃತವಾಗಿ ಹತಾಶೆಗೊಂಡು ದಟ್ಟ ಕಾಡಿನ ಸಮೀಪದ ನದಿಯಲ್ಲಿ ಹಾರಿ ಜೀವ ಕಳೆದುಕೊಳ್ಳಲು ತೀರ್ಮಾನಿಸುತ್ತಾಳೆ. ಆದರೆ ವಿಧಿಯಾಟ ಬೇರೆಯೇ ಇದ್ದು ಆಕೆ ನದಿಯ ಮತ್ತೊಂದು ದಡಕ್ಕೆ ಕೊಚ್ಚಿ ಹೋಗಿ ಬದುಕುಳಿಯುತ್ತಾಳೆ. ಆದರೆ ಅದಾಗಲೇ ಅವಳು ನಿಗೂಢವಾದ ‘ಟೈಮ್ ಲೂಪ್’  ಹೊಂದಿದ್ದ ನಿಗೂಢ ಕಾಡಿನಲ್ಲಿ ಸಿಕ್ಕಿಹಾಕಿಕೊಂಡಿರುತ್ತಾಳೆ. ಅಲ್ಲಿಂದ ಆಕೆ ಮತ್ತು ಕಾಡು ಇವುಗಳ ಸುತ್ತವೇ ಚಿತ್ರ ಸಾಗುತ್ತದೆ.  ಈ ನಡುವೆ ಆಕೆಗೆ  ರಿಚರ್ಡ್ ಥಾಂಪ್ಸನ್ ಸಿಕ್ಕುತ್ತಾನೆ. ಏಳನೇ ದಿನ ಈ ನಿಗೂಢ ಕಾಡಿನಿಂದ ಆಕೆ ಪಾರಾಗಲು ಅವನು ಸಹಾಯ ಮಾಡುತ್ತಾನೆ. ಆದರೆ ಈ ಏಳನೇ ದಿನವೇ ಏಕೆ? ಅವರು ಕಾಡಿನಿಂದ ಪಾರಾಗುವುದಾದರೂ ಹೇಗೆ ತಿಳಿಯಲು ನೀವು ಸಿನಿಮಾಮಂದಿರದಲ್ಲಿ ಕಾಡುಮಳೆ ನೋಡಬೇಕು.

ಟೈಮ್-ಲೂಪ್ ವಿಷಯ ಹೊಸದೇನೂ ಅಲ್ಲ ಆದರೂ ಕಾಡು ಹಾಗೂ ಆ ಕಾಡಿನಲ್ಲಿ ಇಬ್ಬರೂ ವ್ಯಕ್ತಿಗಳು ಸಿಕ್ಕಿಹಾಕಿಕೊಳ್ಳುವುದು ಒಂದು ವಿಚಿತ್ರ ಸನ್ನಿವೇಶ ಎದುರಿಸುವುದು ಒಂದು ವಿಶೇಷವಾಗಿದೆ. ಆದರೆ ಈ ರೋಚಕತೆಯನ್ನು ಅನುಭವಿಸಲು  ಪ್ರೇಕ್ಷಕರಿಗೆ ತಾಳ್ಮೆ ಬೇಕಾಗುತ್ತದೆ ಏಕೆಂದರೆ ಸಿನಿಮಾದಲ್ಲಿ ಎರಡನೇ ಪಾತ್ರ ಪ್ರವೇಶಿಸುವುದೇ ಮಧ್ಯಂತರದ ನಂತರ. ಅಲ್ಲಿಯವರೆಗೂ  ಘಟನೆಗಳ ಪುನರಾವರ್ತನೆ ಪ್ರೇಕ್ಷಕರ ತಾಳ್ಮೆ ಬೇಡುವುದು ಖಚಿತ. ಆದರೆ ಸಿನಿಮಾ ಕ್ಲೈಮ್ಯಾಕ್ಸ್ ತಲುಪುವ ವೇಳೆಗೆ ಮನಸ್ಸು ಟೈಮ್ ಲೂಪ್ ಅನ್ನು ಹೊಂದಿಕೊಂಡು ಸಾಗುತ್ತಿರುತ್ತದೆ ಜೊತೆಗೆ ಚಿತ್ರದ ಎಲ್ಲಾ ವಿಷಯಗಳು ಒಂದಕ್ಕೊಂದು ಸಂಪರ್ಕಿಸಲು ತೊಡಗುತ್ತದೆ
ಸಂಕೀರ್ಣ ನಿರೂಪಣೆಯ ಕಥೆಯಲ್ಲಿ ಬರುವ ಎರಡೂ ಪಾತ್ರಧಾರಿಗಳ ಅಭಿನಯ ಮೆಚ್ಚುಗೆ ಗಳಿಸುತ್ತದೆ.
ವಿಜ್ಣಾನಕ್ಕೆ ಸವಾಲಾದ ಕೆಲವಷ್ಟು ವಿಷಯಗಳು ನಮ್ಮ ಸುತ್ತಮುತ್ತ ಇದ್ದರೂ ಕಾಡುಮಳೆ ಅಂತಹಾ ಒಂದು ವಿಷಯ ಒಳಗೊಂಡು ಒಂದು ಪ್ರಯತ್ನವಾಗಿದೆ.  ಹಾಗಾಗಿ ಎಲ್ಲಾ ನ್ಯೂನತೆಗಳ ಹೊರತು ಹೊಸಬರ ಈ ಪ್ರಯತ್ನವನ್ನು ಪ್ರೇಕ್ಷಕರು ಬೆಂಬಲಿಸಬೇಕಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ