ರವಿ : ನೋಡಿದ್ಯಾ, ನಮ್ಮ ಕ್ಲಾಸಿಗೆ ಬಂದಿರೋ ಹೊಸ ಹುಡುಗಿ ನನ್ನ ಕಡೆ ನೋಡಿ ನಗುತ್ತಿದ್ದಾಳೆ…..
ರಾಜು : ಪುಣ್ಯಕ್ಕೆ ಅವಳು ನಿನ್ನ ಮುಸುಡಿ ನೋಡಿ ನಕ್ಕಳಷ್ಟೆ. ಬೇರೆಯವಳಾಗಿದ್ದರೆ ಇಂಥ ದರಿದ್ರ ಮುಖ ಕಂಡು ನಾಲ್ಕು ತದುಕಿರೋಳು, ಹುಷಾರ್….. ಮತ್ತೆ ಅವಳ ಕಡೆ ಹಲ್ಲು ಕಿಸಿಯಬೇಡ.
ಮದುವೆಯಾದ ಹೊಸತು. ಹೊಸ ಸೊಸೆ ಏನೇನೋ ಸರ್ಕಸ್ ಮಾಡಿ ಅತ್ತೆ ಮನೆಯವರನ್ನು ತನ್ನ ಪಾಕಕಲೆಯಿಂದ ಇಂಪ್ರೆಸ್ ಮಾಡಲು ಯತ್ನಿಸುತ್ತಿದ್ದಳು. ಪ್ರತಿ ಸಲ ಅವಳು ಪುಸ್ತಕ ಓದಿಕೊಂಡು, ಅದರಲ್ಲಿ ಬರೆದಿರುವಂತೆ ರೆಸಿಪಿ ತಯಾರಿಸುತ್ತಿದ್ದಳು.
ಒಂದು ದಿನ ಮಹಿಳಾ ಸಮಾಜದಿಂದ ಹಿಂದಿರುಗಿದ ಅತ್ತೆ, ತಣ್ಣೀರು ಕುಡಿಯಲೆಂದು ಫ್ರಿಜ್ ತೆರೆದಾಗ ಹೌಹಾರಿದರು!
ಅತ್ತೆ : ಇದೇನಮ್ಮ ತಾರಾ, ಈ ಫ್ರಿಜ್‌ನಲ್ಲಿ ಘಂಟೆ ತಂದು ಇಟ್ಟವರು ಯಾರು?
ಸೊಸೆ : ನಾನೇ ಅತ್ತೆ!
ಅತ್ತೆ : ಅದ್ಯಾಕಮ್ಮ ಹಾಗೆ ಮಾಡಿದೆ?
ಸೊಸೆ : ಈ ಪುಸ್ತಕದಲ್ಲಿ ಹಾಗೆ ಕೊಟ್ಟಿದ್ದಾರೆ ಅತ್ತೆ, ಮಿಶ್ರಣ ಕಲಸಿದ ಮೇಲೆ 1 ಗಂಟೆ ಫ್ರಿಜ್ ನಲ್ಲಿ ಇರಿಸಿ ಅಂತ…. ಆದರೆ ಎಷ್ಟು ಹೊತ್ತು ಆ ಘಂಟೆ ಫ್ರಿಜ್ ನಲ್ಲಿರಬೇಕೋ ತಿಳಿಯದೆ, ಬೆಳಗ್ಗಿನಿಂದ ಕಾಯ್ತಾನೇ ಇದ್ದೀನಿ….
ಜಡ್ಜ್ : ನೋಡ್ರಿ, ಕೋರ್ಟ್ ನಲ್ಲಿ ಸಾಬೀತು ಪಡಿಸಲಾದ ಎಲ್ಲಾ ಸಾಕ್ಷ್ಯಾಧಾರಗಳ ಪ್ರಕಾರ, ನೀವು ನಿಮ್ಮ ಹೆಂಡತಿಯನ್ನು 10 ವರ್ಷಗಳಿಂದ ಕಮಕ್ ಕಿಮಕ್ ಎಂದು ಬಾಯಿಬಿಡದಂತೆ ನಿಮ್ಮ ಕಂಟ್ರೋಲ್ ನಲ್ಲೇ ಇಟ್ಟುಕೊಂಡು ಶೋಷಣೆ ನಡೆಸಿದ್ದೀರಿ ಅನ್ನೋದು ಸ್ಪಷ್ಟವಾಗಿದೆ….
ಆಪಾದಿತ : ಹೌದು ಸ್ವಾಮಿ…. ಆದರೆ ವಿಷಯ ಏನೂ ಅಂದ್ರೆ…..
ಜಡ್ಜ್ : ಶಿಕ್ಷೆ ಮನೆ ಹಾಳಾಯ್ತು! ಯಾವ ವಿಧಾನದಿಂದ ಹೀಗೆ ಕಂಟ್ರೋಲ್ ನಲ್ಲಿಡ್ತೀಯಾ ಅಂತ ಮೊದಲು ಹೇಳಯ್ಯ….
ಹುಡುಗಿಯ ಹೆತ್ತವರು : ನೋಡಿ…. ನಿಮ್ಮ ಹುಡುಗ ಸ್ವಲ್ಪ ಇಷ್ಟ ಆಗಲಿಲ್ಲ…
ಹುಡುಗನ ಹೆತ್ತವರು : ನಮಗೂ ಇಷ್ಟವಿಲ್ಲ. ಏನು ಮಾಡೋದು? ಅವನನ್ನ ಮನೆಯಿಂದ ಓಡಿಸಲು ಆಗುತ್ತದೆಯೇ?
ಗುಂಡ ಚೆಕ್ ಎನ್ ಕ್ಯಾಶ್ ಮಾಡಿಕೊಳ್ಳಲು ಬ್ಯಾಂಕ್ ನಲ್ಲೇ 2 ಗಂಟೆ ಕಾಲ ಕಾದಿದ್ದೇ ಬಂತು. ಅಂತೂ ಅವನ ಟೋಕನ್ ನಂಬರ್ ಕೂಗಿದಾಗ ಹೊಟ್ಟೆಯಲ್ಲಿ ಇಲಿಗಳು ಓಡಾಡುತ್ತಿದ್ದವು. ಕ್ಯಾಶಿಯರ್ ಬಳಿ ಹೋದವನೇ ಗುಂಡ ರೇಗಾಡಿದ.
ಗುಂಡ : ರೀ, ಬೇಗ ದುಡ್ಡು ಕೊಡ್ರಿ! ಕಾದೂ ಕಾದೂ ಸಾಕಾಗಿದೆ….
ಕ್ಯಾಶಿಯರ್ : ದುಡ್ಡು ಇಲ್ಲ ಕಣ್ರೀ….!
ಗುಂಡ : ಆ ಹಾಳಾದ ಮಲ್ಯ, ನಿರ್ಮಲ್ ಮೋದಿ ಮುಂತಾದವರಿಗೆ ನಿಮ್ಮ ಬ್ಯಾಂಕಿನಿಂದಲೇ ಕೋಟಿ ಕೋಟಿ ಬಾಚಿಕೊಟ್ಟಿರಿ. ಅದನ್ನು ತಗೊಂಡು ಸಾಲ ತೀರಿಸಲಾಗದೆ ಅವರು ನಮ್ಮ ದೇಶ ಬಿಟ್ಟು ಓಡಿಹೋದ್ರು. ಅದೆಲ್ಲ ನನಗೆ ಗೊತ್ತಿಲ್ಲ, ಮೊದಲು ನನಗೆ ದುಡ್ಡು ಕೊಡಿ!
ಕ್ಯಾಶಿಯರ್ : ಅಯ್ಯೋ… ಬ್ಯಾಂಕ್ ನಲ್ಲಿ ದುಡ್ಡು ಇದೆ, ಆದ್ರೆ ನಿನ್ನ ಖಾತೇಲಿ ದುಡ್ಡಿಲ್ಲ!
ಮಹೇಶ : ಏನೋ ಮುಂದಿನ ವಾರ ನಾಣಿ ಮದುವೆಗೆ ನೀನು ಉಡುಪಿಗೆ ಬರೋದು ಗ್ಯಾರಂಟಿ ತಾನೇ…..?
ಸುರೇಶ್ : ಇರಪ್ಪ, ಸ್ವಲ್ಪ ಯೋಚನೆ ಮಾಡಿ ಹೇಳ್ತೀನಿ.
ಮಹೇಶ್ : ನಿನ್ನ ಹೆಂಡ್ತಿ ಒಪ್ಪಿಕೊಂಡು ಬಸ್ಸಿಗೆ ಚಾರ್ಜ್ ಕೊಟ್ಟರೆ ಬರ್ತೀನಿ ಅಂತ ನೇರವಾಗಿ ಹೇಳು!
ರೈಲು ಗುದ್ದಿ 9 ಜನ ಸತ್ತುಹೋದರು. ಅದೃಷ್ಟವಶಾತ್ ಒಬ್ಬ ವ್ಯಕ್ತಿ ಬದುಕುಳಿದುಕೊಂಡ. ಆಗ ಟಿವಿಯವರು ಬದುಕುಳಿದವನನ್ನು ಸಂದರ್ಶಿಸಿದರು. ಅವನ ಉತ್ತರದಲ್ಲಿ ಆಶ್ಚರ್ಯ ಕಾದಿತ್ತು.
ಟಿ.ವಿ. : ಈ ಅಪಘಾತ ಹೇಗಾಯಿತು ಸಾರ್…..?
ವ್ಯಕ್ತಿ : ಅಧಿಕಾರಿಗಳ ನಿರ್ಲಕ್ಷ್ಯದ ಬೇಜವಾಬ್ದಾರಿ ಪ್ರಕಟಣೆಯಿಂದ ಹೀಗಾಯಿತು. ಲೋಫರ್ ನನ್ ಮಕ್ಳು ಎಂದ ಕೋಪದಿಂದ.
ಟಿ.ವಿ. : ಏನೆಂದು ಪ್ರಕಟಿಸಿದರು…?
ವ್ಯಕ್ತಿ : ಕೆಲವು ಕ್ಷಣಗಳಲ್ಲಿ ರೈಲು ಪ್ಲಾಟ್ ಫಾರಂ ಮೇಲೆ ಬರಲಿದೆ ಅಂತ ಪ್ರಕಟಿಸಿದರು. ಆಗ ಜನ ಹೆದರಿ ಓಡಿಹೋಗಿ ರೈಲು ಕಂಬಿಯ ಮೇಲೆ ನಿಂತರು. ಆದರೆ ರೈಲು ಪ್ಲಾಟ್ ಫಾರಂ ಮೇಲೆ ಬರದೆ, ಹಳಿಯ ಮೇಲೆ ಬಂದಿದ್ದರಿಂದ ಎಲ್ಲರೂ ಸತ್ತು ಹೋದರು.
ಟಿ.ವಿ. : ನೀವೊಬ್ಬರು ಅದೃಷ್ಟವಂತ ಅಲ್ಲವೇ…?
ವ್ಯಕ್ತಿ : ಬಡ್ಕೊಬೇಕು… ನಾನು ಆತ್ಮಹತ್ಯೆ ಮಾಡಿಕೊಳ್ಳಲು ಹಳಿ ಮೇಲೆ ಮಲಗಿದ್ದೆ. ಪ್ರಕಟಣೆ ಕೇಳಿ ನಾನು ಪ್ಲಾಟ್ ಫಾರಂಗೆ ಬಂದು ಮಲಗಿದೆ.
ರೇಡಿಯೋ ರಂಗಮ್ಮ ಆ ಇಡೀ ವಠಾರಕ್ಕೆ ಮಹಾ ಘಟವಾಣಿ ಹೆಂಗಸರು ಎಂದು ಖ್ಯಾತರಾಗಿದ್ದರು. ಅಂತೂ ಇಂತೂ ಅಳೆದೂ ಸುರಿದೂ ಮಗನಿಗೆ ಮದುವೆ ಮಾಡಿ ಸೊಸೆಯನ್ನು ಮನೆ ತುಂಬಿಸಿಕೊಂಡಿದ್ದರು. ಮನೆ ಆಡಳಿತವೆಲ್ಲ ನಮ್ಮ ರೇಡಿಯೋದೇ ಅಂತ ಬೇರೆ ಹೇಳಬೇಕಾಗಿಲ್ಲ ಅಲ್ಲವೇ? ಹೀಗೆ ಕೆಲವು ದಿನಗಳಾದ ಮೇಲೆ ಎದುರುಮನೆ ಶಾರದಮ್ಮ 1 ಕಪ್ ಸಕ್ಕರೆ ಸಾಲ ಕೇಳಲೆಂದು ಇವರ ಮನೆಗೆ ಬಂದರು. ಆ ಸಮಯದಲ್ಲಿ ರಂಗಮ್ಮ ಸಂಚಾರಕ್ಕೆ ಹೊರಟಿದ್ದರು.
ಒಳ್ಳೆದೇ ಆಯ್ತು ಎಂದು ಶಾರದಮ್ಮ ಹೊಸ ಸೊಸೆ ಗೀತಾಳನ್ನು ಸಕ್ಕರೆ ಕೊಡುವಂತೆ ಕೇಳಿದರು.
ಗೀತಾ : ಇಲ್ಲ ರೀ ಶಾರದಮ್ಮ, ಇವತ್ತು ಬೆಳಗ್ಗೆ ನಮ್ಮ ಮನೆಯಲ್ಲಿ ಕೇಸರಿಭಾತ್ ಮಾಡಿದ್ದರಿಂದ ಖಾಲಿ ಆಯ್ತು. ನಿಮ್ಮ ಪಕ್ಕದ ಮನೇಲಿ ಕೇಳಿ ತಗೊಳ್ಳಿ.
“ಅಯ್ಯೋ ಹೋಗ್ಲಿ ಬಿಡಮ್ಮ,” ಎನ್ನುತ್ತಾ ಶಾರದಮ್ಮ ಕಾಂಪೌಂಡ್ ಹಾದೂ ಗೇಟಿನ ಬಳಿ ಬಂದಾಗ ಎದುರಿಗೆ ಅತ್ತೆ ರಂಗಮ್ಮನ ದರ್ಶನವಾಗಬೇಕೆ? ತಾನಿಲ್ಲದಾಗ ಬಂದು ನೆರೆಮನೆಯವಳು ಸೊಸೆ ಬಳಿ ಏನೇನು ಹೇಳಿಬಿಟ್ಟಳೋ ಅಂತ ಕೆಂಡದಂಥ ಕೋಪ ಬಂತು.
ರಂಗಮ್ಮನನ್ನು ಕಂಡ ತಪ್ಪಿಗೆ ವಿಧಿಯಿಲ್ಲದೆ ಶಾರದಮ್ಮ ಎಲ್ಲಾ ವರದಿ ಒಪ್ಪಿಸಿದರು.
ರಂಗಮ್ಮ : ಅಷ್ಟೇ ತಾನೇ? ನನ್ನ ಜೊತೆ ಬನ್ನಿ!
ಬಹುಶಃ ಅತ್ತೆ ಒಳಗಿನ ಉಗ್ರಾಣದಿಂದ ಸಕ್ಕರೆ ತೆಗೆದುಕೊಡಬಹುದು, ಪಾಪ… ಹೊಸ ಸೊಸೆಗೆ ಅದು ಗೊತ್ತಿಲ್ಲವೇನೋ ಎಂದು ಸಂಭ್ರಮಿಸುತ್ತಾ ಶಾರದಮ್ಮ ಅವರನ್ನು ಹಿಂಬಾಲಿಸಿದರು. ಆಕೆಯನ್ನು ಹೊಸ್ತಿಲ ಹೊರಗೇ ನಿಲ್ಲಿಸಿ ಅತ್ತೆ ರಂಗಮ್ಮ ಗುಡುಗಿದರು, “ಸಕ್ಕರೇನಾ…..? ಇಲ್ಲ ಬಿಡಿ! ಇವತ್ತು ಬೆಳಗ್ಗೆ ಕೇಸರಿಭಾತ್ ಮಾಡಿದ್ವಿ ಖಾಲಿ ಆಗಿಹೋಗಿದೆ…. ‘’
“ಅಯ್ಯೋ… ಇದೇ ಮಾತನ್ನು ನಿಮ್ಮ ಸೊಸೆ ಹೇಳಿದಳು ಅಂತ ನಾನು ಹೇಳಿದ್ನಲ್ಲ… ಮತ್ಯಾಕೆ ನನ್ನನ್ನು ವಾಪಸ್ಸು ಕರೆದುಕೊಂಡು ಬಂದ್ರಿ?” ಶಾರದಮ್ಮ ವ್ಯಂಗ್ಯವಾಗಿ ಕೇಳಿದರು.
“ಅವಳು ಯಾರ್ರಿ ಅದನ್ನೆಲ್ಲ ಹೋಳೋಕ್ಕೇ? ಈ ಮನೆ ಯಜಮಾನಿ ನಾನು!” ಎಂದಾಗ ಶಾರದಮ್ಮ ಸುಸ್ತು!
ಮಹೇಶ : ದುಡ್ಡು ಬರುತ್ತೆ ಹೋಗುತ್ತೆ, ಆಸ್ತಿ ಬರುತ್ತೆ ಹೋಗುತ್ತೆ, ಕಷ್ಟ ಬರುತ್ತೆ ಹೋಗುತ್ತೆ…. ಆದರೆ ಬಂದದ್ದು ಹೋಗೋಲ್ಲ…. ಹೋದದ್ದು ಬರೋಲ್ಲ… ಅದೇನು?
ಸುರೇಶ್ : ಅದೇನಪ್ಪ ಅಂಥಾದ್ದು… ನೀನೇ ಹೇಳು.
ಮಹೇಶ : ಹೊಟ್ಟೆ ಮುಂದೆ ಬಂದ ಮೇಲೆ ಹೋಗೋಲ್ಲ, ಕೂದಲು ಉದುರಿಹೋದ ಮೇಲೆ ಮತ್ತೆ ಬರೋಲ್ಲ…. ಇದೇ ನಮ್ಮ ಗಂಡಸರ ಗೋಳು!
ಗುಂಡ : ಛೇ….ಛೇ…. ಆ ಹುಡುಗಿ ಹಾಗೆ ಮಾಡಬಾರದಿತ್ತು.
ಸೀನ : ಏನಾಯ್ತು?
ಗುಂಡ : ಯಾರೋ ಹುಡುಗಿ, ನಿಮ್ದು ಊಟ ಆಯ್ತಾ? ಅಂತ ಮೆಸೇಜ್ ಮಾಡಿದ್ಲು. ರಾಂಗ್ ನಂಬರ್ ಅಂತ ಗೊತ್ತಿದ್ರೂ ಒಂದು ಕಲ್ಲು ತೂರೋಣ ಅಂತ ನಾನು ರಿಪ್ಲೈ ಮಾಡಿದೆ, `ಯಾಕೆ? ಆಗಿದ್ರೆ ಬಂದು ಪಾತ್ರೆ ತೊಳೆದು ಕೊಡ್ತೀಯಾ?’ ಅಂತ. ಅಷ್ಟಕ್ಕೆ ಅವಳು ನನ್ನ ನಂಬರ್ ನ ಬ್ಲಾಕ್ ಮಾಡಿಬಿಡೋದೇ?
ಮಹೇಶ್ : ನಿನಗೊಂದು ಹೊಸ ವಿಷಯ ಗೊತ್ತೇ?
ಸುರೇಶ್ : ಏನಪ್ಪ ಅಂಥಾದ್ದು?
ಮಹೇಶ್ : BMTC ಬಸ್ಸಿನಲ್ಲಿ ಸೀಟು, ಬೆಂಗಳೂರಿನಲ್ಲಿ ಸೈಟು, ಕನ್ನಡದ ಹುಡುಗನ ಹಾರ್ಟು ಸಿಗಬೇಕು ಅಂದ್ರೆ ಪುಣ್ಯ ಮಾಡಿರಬೇಕು!