ಸರಸ್ವತಿ ಜಾಗೀರ್ದಾರ್*
ವಿಜಯ್ ಕೃಷ್ಣ ಹಾಗೂ ಪ್ರಿಯಾಂಕ ಕುಮಾರ್ ಮುಖ್ಯಪಾತ್ರದಲ್ಲಿ ನಟಿಸಿರುವ, ಡಿ ಕ್ರಿಯೇಶನ್ಸ್ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ, ಆರ್. ದೇವರಾಜ್ ನಿರ್ಮಿಸುತ್ತಿರುವ `ದೂರ ತೀರ ಯಾನ’ ಸಿನೆಮಾ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ. ಮಂಸೋರೆ ನಿರ್ದೇಶನ ಮಾಡಿರುವ ಈ ಸಿನೆಮಾ ಬೆಂಗಳೂರು, ಉಡುಪಿ, ಕುಂದಾಪುರ, ಗೋಕರ್ಣ, ಮುರುಡೇಶ್ವರ, ಕಾರವಾರ, ಯಲ್ಲಾಪುರ, ದಾಂಡೇಲಿ, ಗೋವಾದಲ್ಲಿ 40ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಈ ಸಿನೆಮಾದಲ್ಲಿ ಇನ್ನೂ ಹಲವರು ಪ್ರಮುಖ ನಟಿ-ನಟರು ವಿಶೇಷ ಪಾತ್ರದಲ್ಲಿ ನಟಿಸಿದ್ದು, ಅವರ ವಿವರಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಮಂಸೋರೆ ಹೇಳಿದ್ದಾರೆ.
ಇದೊಂದು ಪ್ರೇಮಕಥೆ ಆಧರಿಸಿದ ಸಿನೆಮಾ ಆಗಿದ್ದು, ಹರೆಯದ ಇಬ್ಬರು ಪ್ರೇಮಿಗಳು ಬೆಂಗಳೂರಿನಿಂದ ಗೋವಾಗೆ ಪಯಣ ಆರಂಭಿಸಿ, ಆ ಪ್ರಯಾಣದಲ್ಲಿ ತಮ್ಮ ಪ್ರೀತಿಯ ಅರ್ಥ ಹುಡುಕಿಕೊಳ್ಳುವುದು ಮೂಲಕಥೆಯಾಗಿದೆ, ಮಂಸೋರೆ ಬರೆದಿರುವ ಕಥೆಗೆ ಚೇತನಾ ತೀರ್ಥಹಳ್ಳಿ ಸಂಭಾಷಣೆ ಬರೆದಿದ್ದಾರೆ.
ಈ ಸಿನೆಮಾದಲ್ಲಿ ಒಟ್ಟು ಆರು ಹಾಡುಗಳಿದ್ದು, ಬಕ್ಕೇಶ್ ಹಾಗೂ ಕಾರ್ತೀಕ್ ಹಾಡುಗಳನ್ನು ಸಂಯೋಜಿಸಿದ್ದಾರೆ. ಜಯಂತ್ ಕಾಯ್ಕಿಣಿ, ಕವಿರಾಜ್, ಪ್ರಮೋದ್ ಮರವಂತೆ ಹಾಗೂ ಕಿರಣ್ ಕಾವೇರಪ್ಪ ಹಾಡುಗಳನ್ನು ಬರೆದಿದ್ದಾರೆ. ಸಿನೆಮಾದ ಶೀರ್ಷಿಕೆ ಗೀತೆಯನ್ನು ಅದ್ಧೂರಿ ವೆಚ್ಚದಲ್ಲಿ ಚಿತ್ರೀಕರಿಸುವ ಮೂಲಕ ಸಿನೆಮಾದ ಚಿತ್ರೀಕರಣ ಪೂರ್ಣಗೊಂಡಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಈ ಸಿನೆಮಾಗೆ ಸರವಣ ಕುಮಾರ್ ಅವರ ಕಲಾನಿರ್ದೇಶನವಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತರಾದ ನಾಗೇಂದ್ರ ಕೆ ಉಜ್ಜನಿ ಅವರು ಸಿನೆಮಾದ ಸಂಕಲನ ಮಾಡುತ್ತಿದ್ದಾರೆ., ಸಿನೆಮಾದ ಚಿತ್ರೀಕರಣೋತ್ತರ ಕೆಲಸಗಳು ಭರದಿಂದ ಸಾಗುತ್ತಿದ್ದು, 2025 ಜುಲೈ ತಿಂಗಳಲ್ಲಿ ಸಿನೆಮಾ ತೆರೆಗೆ ತರುವುದಾಗಿ, ನಿರ್ಮಾಪಕರು ತಿಳಿಸಿದ್ದಾರೆ.