ಸ್ವಾಭಿಮಾನಿ ಅರವಿಂದ್ ಸಾಫ್ಟ್ ವೇರ್ ಕೆಲಸ ಬೇಡವೆಂದು ಕೃಷಿ ನಂಬಿಕೊಂಡು ಮಲೆನಾಡಿನಲ್ಲಿ ತಳವೂರಿದ. ಮದುವೆಯ ನೆಪದಲ್ಲಿ ಅವನ ಜೀವನದಲ್ಲಿ ಮೂರು ಹುಡುಗಿಯರು ಬಂದು ಹೋದರು. ಅವಿವಾಹಿತನಾಗಿಯೇ ಉಳಿದುಹೋದ ಅರವಿಂದ್ಧಾರಾಳನ್ನು ಆಕಸ್ಮಿಕವಾಗಿ ಭೇಟಿಯಾದ. ಮುಂದೆ ಇದು ಯಾವ ತಿರುವು ಪಡೆಯಿತು.....?
ಶಾಲೆಯ ಊರಿನಿಂದ ಮುಖ್ಯ ರಸ್ತೆಗೆ ಒಂದು ಕಿ.ಮೀ. ದೂರ. ಹೊತ್ತಾಗಿದ್ದರಿಂದ ಧಾರಾ ಗಡಿಬಿಡಿಯಿಂದ ಬಸ್ಸು ಹಿಡಿಯಲು ಹೊರಟಳು. ಅಲ್ಲಿಂದ ಶಿರಸಿ ಹನ್ನೆರಡು ಕಿ.ಮೀ. ಐದು ಗಂಟೆಯ ಬಸ್ಸು ಹಿಡಿದು ದಿನಾಲೂ ಶಿರಸಿ ಸೇರಿಕೊಳ್ಳುತ್ತಿದ್ದಳು. ಮುಗಿಲೋ ಕಪ್ಪನೆಯ ಮೋಡಗಳಿಂದ ತುಂಬಿ ತುಳುಕಾಡುತ್ತಿತ್ತು. ಮಳೆರಾಯ ಭುವಿಯನ್ನು ಚುಂಬಿಸುವ ತವಕದಲ್ಲಿದ್ದ. ನೆಲವನ್ನೊಮ್ಮೆ, ಆಕಾಶವನ್ನೊಮ್ಮೆ ನೋಡುತ್ತಾ ಧಾರಾ ದೌಡಾಯಿಸಿ ಹೆಜ್ಜೆ ಹಾಕುತ್ತಿದ್ದಳು.
ಬಸ್ ಶೆಲ್ಟರ್ ಇನ್ನೂ ಒಂದು ಫರ್ಲಾಂಗ್ ದೂರವಿತ್ತಷ್ಟೇ, ಮಳೆರಾಯ ಧುತ್ತೆಂದು ಧರೆಗಿಳಿದೇ ಬಿಟ್ಟ. ಅಂತಿಂಥ ಮಳೆಯಲ್ಲ, ಕುಂಭದ್ರೋಣ ಮಳೆ. ಮುಗಿಲೇ ಕಳಚಿಕೊಂಡಂತೆ ಸಾಂದ್ರ ಹನಿಗಳು. ಬೆಳಗ್ಗೆ ಹೊರಡುವ ಧಾವಂತದಲ್ಲಿ ಮಲೆನಾಡಿನ ಸಂಗಾತಿ ಛತ್ರಿಯನ್ನು ಮರೆತು ಬಂದಿದ್ದಳು. ಬಸ್ಸು ಮಿಸ್ಸಾಗುವ ಭಯ, ಬಿರಬಿರನೆ ಹೆಜ್ಜೆ ಹಾಕತೊಡಗಿದಳು. ನೂರು ಹೆಜ್ಜೆ ಹಾಕುವಷ್ಟರಲ್ಲಿ ತೊಯ್ದು ತೊಪ್ಪೆಯಾದಳು. ಉಟ್ಟಿದ್ದ ಸೀರೆ ಮೈಗಂಟಿಕೊಂಡಿತ್ತು. ಮುಖ್ಯ ರಸ್ತೆಗೆ ಬಂದು ಶೆಲ್ಟರ್ ಸೇರಿಕೊಂಡಳು. ಅಲ್ಲಿ ಕೆಲವೊಂದಿಷ್ಟು ಜನರು ಬಸ್ಸಿಗಾಗಿ ಕಾಯುತ್ತಿದ್ದರು.
``ಮೇಡಂ, ಶಿರಸಿಯ ಕಡೆಗಿನ ಬಸ್ಸು ಈಗಷ್ಟೇ ಹೋಯಿತು.....'' ಎಂದರು ಒಬ್ಬರು.
ಅವಳೆದೆ ಧಸಕ್ಕೆಂದಿತು, ``ಹೌದೇ.....?'' ಎಂದ ಅವಳ ದನಿ ಬಾಯಿಯಲ್ಲೇ ಉಡುಗಿಹೋಯಿತು.
ಮುಂದಿನ ಬಸ್ಸು ಆರು ಗಂಟೆಗೆ. ಶೆಲ್ಟರ್ ನ ಮೂಲೆಯಲ್ಲಿ ನಿಂತುಕೊಂಡು ಬಟ್ಟೆ ಕೂದಲನ್ನು ಒದರಿಕೊಳ್ಳತೊಡಗಿದಳು. ಚೀಲದಲ್ಲಿದ್ದ ನ್ಯಾಪ್ ಕಿನ್ ತೆಗೆದು ಮುಖ ಒರೆಸಿಕೊಳ್ಳುತ್ತಾ ಬಸ್ಸು ಮಿಸ್ಸಾಗಿದ್ದಕ್ಕೆ ತನ್ನನ್ನೇ ಹಳಿದುಕೊಳ್ಳತೊಡಗಿದಳು. ಅಷ್ಟರಲ್ಲಿ ಶಿರಸಿಯ ಕಡೆಯಿಂದ ಬಸ್ಸೊಂದು ಬಂದಿತು. ಶೆಲ್ಟರ್ ನಲ್ಲಿದ್ದ ಜನರೆಲ್ಲರೂ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೇ ಬಸ್ಸನ್ನೇರಿದರು. ಉಳಿದಿದ್ದು ಧಾರಾ ಒಬ್ಬಳೇ. ಮಳೆ ಧೋ ಎಂದು ಸುರಿಯುತ್ತಲೇ ಇತ್ತು. ಆಗಾಗ ಗುಡುಗುಡು ಎಂದು ಆರ್ಭಟಿಸುತ್ತಿದ್ದ ಗುಡುಗು, ಕಣ್ಣು ಕೋರೈಸುವಂತಿದ್ದ ಮಿಂಚು ಎದೆ ಝಲ್ಲೆನಿಸುವಂತಿದ್ದವು. ಅತಂತ್ರತೆ ಭಯವೆಂಬ ಹುಳುವನ್ನು ಅಳೆದೆಯಲ್ಲಿ ಬಿಟ್ಟು, `ಮುಂದಿನ ಬಸ್ಸು ಬರುವುದೋ ಇಲ್ಲವೋ.....?' ಎಂಬ ಅಳುಕು ಧೈರ್ಯವನ್ನು ಅಲುಗಾಡಿಸತೊಡಗಿತು. ಆರಾಯಿತು, ಬಸ್ಸು ಬರಲಿಲ್ಲ. ವರುಣದೇವ ಧರೆಗಿಳಿಯುವುದಕ್ಕೆ ಮೊದಲೇ ಸೂರ್ಯದೇವ ಕಾಣೆಯಾಗಿದ್ದರಿಂದ ಗವ್ವೆನ್ನುವ ಕತ್ತಲು ಜಗತ್ತನ್ನು ತನ್ನ ತೆಕ್ಕೆಯೊಳಗೆ ಎಳೆದುಕೊಳ್ಳತೊಡಗಿತ್ತು. ಜೀರುಂಡೆಗಳ ಸದ್ದು ಭಯ ಹುಟ್ಟಿಸುವಂತಿತ್ತು. ಮಳೆಯ ಅಬ್ಬರ ಕಡಿಮೆ ಆಗಿರಲಿಲ್ಲ. ಮಲೆನಾಡಿನ ಮಳೆಯ ಗಮ್ಮತ್ತು ಧಾರಾಳ ಮನದರಿವಿಗೆ ಯಾವಾಗಲೋ ಬಂದಿತ್ತು. `ಧೋ' ಎಂದು ಸುರಿಯಲು ಶುರುವಾದರೆ ತಾಸುಗಟ್ಟಲೇ, ದಿನಗಟ್ಟಲೇ ಸುರಿಯುತ್ತಲೇ ಇರುತ್ತಿತ್ತು. ಧಾರಾಳ ಎದೆಯಲ್ಲಿ ಡಡ, ಆತಂಕ ಅವಳೆದೆಯನ್ನು ಇರಿಯತೊಡಗಿತು.
`ನಾನಿಲ್ಲಿ ಒಂಟಿ ಹೆಣ್ಣು. ಕಾಡು ಪ್ರಾಣಿಗಳು ಆಕ್ರಮಣ ಮಾಡಿದರೆ...?' ಎದೆ ಝಲ್ಲೆಂದಿತು. ಕಾಡು ಪ್ರಾಣಿಗಳಿಗಿಂತ ಒಂಟಿ ಸಲಗದಂತಹ ಮನುಷ್ಯನೆಂಬ ಗಂಡು ಪ್ರಾಣಿ ಆಕ್ರಮಣ ಮಾಡಿದರೆ...?' ತೊಯ್ದು ತೊಪ್ಪೆಯಾಗಿದ್ದ ಧಾರಾ ಥರಗುಟ್ಟಿ ನಡುಗತೊಡಗಿದಳು.





