ಊರಿನ ಅತಿ ಸಿರಿವಂತನಾದ ರಘುನಾಥ್ ರಾವ್ ಸ್ವಪ್ರತಿಷ್ಠೆಗೆ ಕಟ್ಟುಬಿದ್ದು ಮಗಳು ನಂದಿನಿ ಪ್ರೀತಿಸುತ್ತಿದ್ದ ನಂದೀಶನೊಂದಿಗೆ ಮದುವೆ ಆಗಲು ಬಿಡಲಿಲ್ಲ. ಇವರ ಅಪೇಕ್ಷೆಗೆ ತಕ್ಕಂತೆ ವಿಧಿ ಇಲ್ಲದೆ ಬೇರೊಬ್ಬನನ್ನು ಮದುವೆಯಾದ ನಂದಿನಿ, ಎಂದೂ ಜೀವನದಲ್ಲಿ ನೆಮ್ಮದಿ ಕಾಣದೆ ತೀರಿಕೊಂಡಳು. ಮುಂದೆ ಮೊಮ್ಮಗಳು ನಂದಿತಾ ಇದೇ ತರಹ ಪ್ರೇಮ ಪ್ರಸಂಗಕ್ಕೆ ಸಿಲುಕಿದಾಗ, ತಾತಾ ಆ ಮದುವೆಗೆ ಒಪ್ಪಿದರೇ......?
``ರಘುನಾಥ್ ರಾವ್..... ರಘುನಾಥ್ ರಾವ್......'' ಎಂದು ಯಾರೋ ಕೂಗಿದ ಸದ್ದು ಕೇಳಿ ರಘುನಾಥ್ ರಾವ್ ಹಿಂತಿರುಗಿ ನೋಡಿದರು.
ನರ್ಸ್ ಅವರ ಬಳಿ ಬಂದು, ``ನಿಮ್ಮ ಮಗಳು ನಿಮಗೆ ಈ ಲೆಟರ್ ಕೊಟ್ಟಿದ್ದಾರೆ,'' ಎಂದಷ್ಟೇ ಹೇಳಿ ಹೊರಟು ಹೋದಳು.
ಕಳೆದ ಇಪ್ಪತ್ತು ದಿನಗಳಿಂದ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ತಮ್ಮ ಮಗಳು ನಂದಿನಿ ಬದುಕುಳಿಯುವ ಬಗ್ಗೆ ಸಂದೇಹವಿದೆ ಎಂದು ಡಾಕ್ಟರ್ ಮೂರು ದಿನಗಳ ಮೊದಲೇ ತಿಳಿಸಿಯಾಗಿತ್ತು. ಆದರೂ ಮನಸಿನ ಮೂಲೆಯಲ್ಲಿ ಎಲ್ಲೋ ಒಂದು ಚಿಕ್ಕ ಭರವಸೆ. ಏಕೆಂದರೆ ಇವತ್ತು ನಂದಿನಿ ಕಣ್ಣು ಬಿಟ್ಟು ಒಮ್ಮೆ ಅವರನ್ನು ನೋಡಿದ್ದಾಳೆ. ಮಾತನಾಡುವ ಶಕ್ತಿಯನ್ನೂ ಕಳೆದುಕೊಂಡಿದ್ದ ಮಗಳು ಪತ್ರದಲ್ಲಿ ಏನು ಬರೆದಿದ್ದಾಳೆ ಎಂದು ನೋಡುವ ತವಕದಿಂದ ಪತ್ರ ಬಿಡಿಸಿ ಓದಿದರು. ನಡುಗುವ ಕೈಗಳಿಂದ ಬರೆಯುವ ಸಾಹಸ ಮಾಡಿರಬಹುದೆಂದು ಅಸ್ಪಷ್ಟ ಅಕ್ಷರಗಳನ್ನು ನೋಡಿದರೇ ತಿಳಿಯುತ್ತಿತ್ತು, ಆದರೂ ಓದಲು ಪ್ರಯತ್ನಿಸಿದರು.
`ನೆಮ್ಮದಿಯಿಂದ ಸಾಯೋದಕ್ಕಾದರೂ ಬಿಡಿ.....' ಅವಳು ಬರೆದದ್ದು ಇಷ್ಟೇ. ರಾಯರ ಕಣ್ಣು ಮಂಜಾಯಿತು. ಮಗಳು ಮಲಗಿದ್ದ ಕೋಣೆಯ ಕಡೆ ಅವಸರದಲ್ಲಿ ಹೆಜ್ಜೆ ಹಾಕಿದರು.
ಅಷ್ಟರಲ್ಲಿ ``ಡಾಕ್ಟರ್.... ಡಾಕ್ಟರ್....'' ಎಂದು ಬೊಬ್ಬೆ ಹೊಡೆಯುತ್ತಾ ನರ್ಸ್ ಅದೇ ಕೋಣೆಯಿಂದ ಹೊರಗೆ ಓಡಿ ಬರುವುದು ಕಂಡಿತು. ಕೆಲವೇ ಕ್ಷಣಗಳಲ್ಲಿ ಡಾಕ್ಟರ್ ಬಂದು ನಂದಿನಿಯನ್ನು ಪರೀಕ್ಷಿಸಲು ಕೋಣೆಯೊಳಗೆ ಹೋದರು. ರಾಯರು ಅವರ ಹಿಂದೆಯೇ ಹೋದರು.
ನಂದಿನಿಯನ್ನು ಪರೀಕ್ಷಿಸಿದ ಡಾಕ್ಟರ್, ``ಶೀ ಈಸ್ ನೋ ಮೋರ್......'' ಎಂದು ಡಾಕ್ಟರ್ ಅಂದಾಗ ರಘುನಾಥ್ ರಾಯರು, ``ನಂದಿನಿ....!'' ಎಂದು ಜೋರಾಗಿ ಕಿರುಚಿದರು.
``ಏನಾಯ್ತು ಯಜಮಾನ್ರೆ.....?'' ಎಂದು ಸೋಮಯ್ಯ ಕೇಳಿದ.
ಮಂಚದಿಂದ ದಢಕ್ಕನೆ ಎದ್ದು ಕುಳಿತ ರಾಯರಿಗೆ ಸೋಮಯ್ಯ ಒಂದು ಗ್ಲಾಸ್ ನೀರು ಕೊಟ್ಟು, ``ಏನಾಯ್ತು ಯಜಮಾನ್ರೆ.....? ಪುನಃ ಅದೇ ಆಸ್ಪತ್ರೆಯ ಕನಸು ಕಂಡಿರಾ.....? ಸ್ವಲ್ಪ ನೀರು ಕುಡಿಯಿರಿ,'' ಎಂದ.
ನೀರು ಕುಡಿದು ಸಾವರಿಸಿಕೊಂಡ ರಾಯರು ಹಾಸಿಗೆಯಿಂದ ಎದ್ದು ಈಸಿ ಚೇರ್ ಮೇಲೆ ಕುಳಿತು ಹಾಗೆಯೇ ಕಣ್ಮುಚ್ಚಿಕೊಂಡರು. ಸುಮಾರು ಮೂವತ್ತು ವರ್ಷಗಳ ಹಿಂದೆ ನಡೆದಿದ್ದ ಕೆಲವು ಘಟನೆಗಳು ಆಗಾಗ್ಗೆ ಕನಸಿನಲ್ಲಿ ಬಂದು ಅವರ ನಿದ್ದೆ, ನೆಮ್ಮದಿ ಮತ್ತು ಆರೋಗ್ಯವನ್ನು ಹದಗೆಡಿಸಿದ್ದವು.
ರಘುನಾಥ ರಾಯರು ಮಲ್ಲಿಗೆ ಹಿತ್ಲು ಎಂಬ ಊರಿನ ಹೆಸರಾಂತ ಶ್ರೀಮಂತ ವ್ಯಕ್ತಿ. ಆ ಊರಿನ ಯಜಮಾನ ಎಂದೇ ಹೇಳಬಹುದು. ಏಕೆಂದರೆ ಅವರು ಬಹುದೊಡ್ಡ ಆಸ್ತಿ ಮತ್ತು ಅಂತಸ್ತನ್ನು ಹೊಂದಿದ್ದವರು ಮಾತ್ರವಲ್ಲ, ಊರಿನ ಎಲ್ಲಾ ವ್ಯಾಜ್ಯಗಳನ್ನು ಬಗೆಹರಿಸುತ್ತಾ ಇದ್ದುದೂ ಅವರೇ. ನ್ಯಾಯ ತೀರ್ಮಾನ ಮಾಡಿ ಅವರು ನೀಡಿದ ತೀರ್ಪು ಅಂತಿಮ. ಅದನ್ನು ಯಾರೂ ವಿರೋಧಿಸುತ್ತಿರಲಿಲ್ಲ.





