ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ವಾಪಸ್ಸಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಈ ವರ್ಷದ ಹುಟ್ಟುಹಬ್ಬ ಸಾರ್ಥಕವಾಗಿದೆ. ಬೆನ್ನುನೋವಿನ ಕಾರಣ ಹೆಚ್ಚು ಹೊತ್ತು ನಿಲ್ಲೋಕೆ ಆಗದೇ ಇರೋದ್ರಿಂದ ಈ ಬಾರಿ ತಮ್ಮ ಫ್ಯಾನ್ಸ್ ಜೊತೆ ಜನ್ಮದಿನ ಆಚರಿಸೋಕೆ ಆಗೋದಿಲ್ಲ ಅಂತಾ ಹೇಳಿದ್ದರು. ಬದಲಿಗೆ ನೀವು ಇದ್ದಲ್ಲಿಯೇ ದಾನ ಧರ್ಮ ಮಾಡಿ ಜನ್ಮದಿನಕ್ಕೆ ವಿಶ್ ಮಾಡಿ ಅಂತಾ ಮನವಿ ಮಾಡಿಕೊಂಡಿದ್ದರು. ಅದರಂತೆ ದರ್ಶನ್ ಅಭಿಮಾನಿಗಳು ದಾನ ಧರ್ಮ ಪೂಜೆ ಪುನಸ್ಕಾರ ನೆರವೇರಿಸಿ ದರ್ಶನ್ ಅವರ ಜನ್ಮದಿನವನ್ನು ಸ್ಮರಣೀಯವನ್ನಾಗಿಸಿದ್ದಾರೆ.
ಅಸಂಖ್ಯಾತ ಅಭಿಮಾನಿಗಳು ಮಾಡಿದ ವಿಶೇಷ ಸೇವೆಯನ್ನು ನಟ ದರ್ಶನ್ ಸ್ಮರಿಸಿದ್ದಾರೆ. ತಮ್ಮ ತುಂಬು ಹೃದಯದಿಂದ ಸೋಷಿಯಲ್ ಮೀಡಿಯಾದಲ್ಲಿ ಅಷ್ಟೂ ಫೋಟೋಗಳನ್ನು ಹಂಚಿಕೊಂಡಿರುವ ದರ್ಶನ್ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ನಿಮ್ಮಂತಹ ಅಭಿಮಾನಿಗಳನ್ನು ಪಡೆದ ನಾನೇ ಧನ್ಯ ಅಂತಾ ಪೋಸ್ಟ್ ಮಾಡಿರುವ ದಾಸ, ರಾತ್ರಿ ಸಾಲು ಸಾಲು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಸೆಲಬ್ರಿಟಿಗಳ ಕೆಲಸವನ್ನು ಕೊಂಡಾಡಿದ್ದು, ಅಭಿಮಾನಿಗಳ ಬೆನ್ನು ತಟ್ಟುವ ಕೆಲಸ ಮಾಡಿದ್ದಾರೆ.
ದರ್ಶನ್ ಧನ್ಯವಾದ :
ನಿಮ್ಮ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಎಂದು ಭಾಸವಾಗುತ್ತದೆ. ಕಷ್ಟದಲ್ಲಿದ್ದಾಗ ಸದಾ ಬೆಂಬಲದಲ್ಲಿ ನಿಲ್ಲುವಂತ ಈ ನಿಷ್ಕಲ್ಮಶ ಹೃದಯಗಳಿಗೆ ನಾನು ಸದಾ ಚಿರಋಣಿ. ನಿಮ್ಮ ಪ್ರೀತಿ-ಪ್ರೋತ್ಸಾಹ ಮತ್ತು ಬೆಂಬಲವೇ ನನ್ನ ಜೀವನದ ನಿಜವಾದ ಆಸ್ತಿ. ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿಸುವ ನಿಮ್ಮ ಪ್ರೀತಿಯ ಆಶೀರ್ವಾದಕ್ಕೆ ನಾನು ಮನದಾಳದಿಂದ ಕೃತಜ್ಞನಾಗಿದ್ದೇನೆ.
ನೀವು ಹಲವೆಡೆ ಮಾಡುತ್ತಿರುವ ದಾನ-ಧರ್ಮ ಕಾರ್ಯಗಳು ಸಹಸ್ರಾರು ಹೃದಯಗಳನ್ನು ಸ್ಪರ್ಶಿಸುವಂತಹದ್ದು. ನಿಮ್ಮ ಈ ಕೆಲಸಗಳು ಅನೇಕರಿಗೆ ದಾರಿದೀಪವಾಗಲಿ. ನಿಮ್ಮ ಮನದಾಳದ ಪ್ರೀತಿಯ ಹಾರೈಕೆಗಳು ನನ್ನ ಮುಂದಿನ ಹೆಜ್ಜೆಗೆ ದಾರಿ ತೋರುವ ಬೆಳಕು ಎಂದರೆ ಅತಿಶಯೋಕ್ತಿಯಲ್ಲ. ಆದಷ್ಟು ಬೇಗ ನಿಮ್ಮನ್ನು ಕಾಣುವ ಹಂಬಲ, ಕಾತುರ ನನ್ನಲ್ಲಿಯೂ ಇದೆ. ನಿಮ್ಮನ್ನು ಪಡೆದಿರುವ ನಾನೇ ಧನ್ಯ… ನಿಮ್ಮ ದಾಸ ದರ್ಶನ್.
ತಮ್ಮ ಅಭಿಮಾನಿಗಳು ಮಾಡಿರುವ ಉತ್ತಮ ಕೆಲಸದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸುಮಾರು 15-20 ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಈ ಫೋಟೋಗಳಲ್ಲಿ ದರ್ಶನ್ ಅಭಿಮಾನಿಗಳು ದರ್ಶನ್ ಹೆಸರಲ್ಲಿ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಿಸಿದ್ದಾರೆ. ವಿಶೇಷ ಚೇತನ ಮಕ್ಕಳಲ್ಲಿ ಕೇಕ್ ಕಟ್ ಮಾಡಿಸಿ ಗಿಫ್ಟ್ ಕೊಟ್ಟಿದ್ದಾರೆ. ವೃದ್ಧರಿಗೆ ಅಗತ್ಯ ವಸ್ತು ನೀಡಿದ್ದಾರೆ. ಅನ್ನ ದಾಸೋಹ ಮಾಡಿದ್ದಾರೆ.
ಇನ್ನು ಈ ಮಧ್ಯೆ ದರ್ಶನ್ ಪುತ್ರ ವಿನೀಶ್ ದರ್ಶನ್ ತೂಗುದೀಪ ಕೂಡ ತನ್ನ ಅಜ್ಜಿ ಹಾಗು ಅಪ್ಪನ ಫೋಟೋ ಹಂಚಿಕೊಂಡು ಖುಷಿಪಟ್ಟಿದ್ದಾನೆ. ದರ್ಶನ್ ಹುಟ್ಟುಹಬ್ಬದ ಫೋಟೋವನ್ನು ಪುತ್ರ ವಿನೀಶ್ ಪೋಸ್ಟ್ ಮಾಡಿದ್ದಾನೆ.