ಕುಂಭಮೇಳದ ಅಂತ್ಯಕ್ಕೆ ಶಿವರಾತ್ರಿಯಂದು ಖಗೋಳದಲ್ಲಿ ವಿಸ್ಮಯ ನಡೆಯಲಿದೆ. ಅಂದು ಬುಧ, ಶುಕ್ರ, ಮಂಗಳ, ಗುರು, ಶನಿ, ಯುರೇನಸ್ ಹಾಗೂ ನೆಪ್ಚೂನ್ ಗ್ರಹಗಳು ಸೂರ್ಯನ ಮತ್ತೊಂದು ಬದಿಯಲ್ಲಿ ಗೋಚರಿಸಲಿವೆ.
ತ್ರಿವೇಣಿ ಸಂಗಮದ ಪುಣ್ಯಭೂಮಿ ಪ್ರಯಾಗ್ರಾಜ್ನಲ್ಲಿ ಮಹಾಕುಂಭಮೇಳದ ಧಾರ್ಮಿಕ ಉತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ಸಾಧು-ಸಂತರು, ನಾಗಸಾಧುಗಳು, ಅಘೋರಿಗಳು ಭಾಗಿಯಾಗಿ ಮಹಾಕುಂಭಮೇಳದ ಮೆರುಗು ಹೆಚ್ಚಿಸಿದ್ದಾರೆ. ಕೋಟ್ಯಾನುಕೋಟಿ ಹಿಂದೂಗಳು ತ್ರಿವೇಣಿ ಸಂಗಮದಲ್ಲಿ ಮುಳುಗೆದ್ದು ಪಾಪ ಕಳೆದುಕೊಳ್ಳುತ್ತಿದ್ದಾರೆ. 144 ವರ್ಷಕ್ಕೊಮ್ಮೆ ನಡೆಯುತ್ತಿರುವ ಈ ಮಹಾಕುಂಭಮೇಳ ಧಾರ್ಮಿಕೋತ್ಸವ ಜಗತ್ತನ್ನೇ ನಿಬ್ಬೆರಗಾಗಿಸಿದೆ. ಪ್ರಪಂಚದ ಮೂಲೆ ಮೂಲೆಯಿಂದ ಭಕ್ತರು ಆಗಮಿಸಿ ಭಕ್ತಿಯ ಪರಾಕಾಷ್ಠೆ ಮೆರೆಯುತ್ತಿದ್ದಾರೆ.
ಜನವರಿ 14ರಂದು ಶುರುವಾದ ಮಹಾಕುಂಭಮೇಳದ ವೈಭವ ಫೆಬ್ರವರಿ 26, ಶಿವರಾತ್ರಿಯಂದು ಅಂತ್ಯವಾಗಲಿದೆ. ಅತ್ಯಂತ ವಿಶೇಷ ಏನೆಂದರೆ ಮಹಾಕುಂಭಮೇಳದ ಕೊನೆಯ ದಿನ ಖಗೋಳದಲ್ಲೂ ವಿಸ್ಮಯ ನಡೆಯಲಿದೆ. ಅಂದು ಆಕಾಶದಲ್ಲಿ ಅಪರೂಪದ ವಿದ್ಯಾಮಾನವೊಂದು ಘಟಿಸಲಿದೆ. ಮಹಾಕುಂಭಮೇಳದ ಧಾರ್ಮಿಕ ನಂಬಿಕೆಯ ಜೊತೆಗೆ ವೈಜ್ಞಾನಿಕತೆಯೂ ಕೈ ಜೋಡಿಸಲಿದೆ. ಶತಕೋಟಿ ಭಾರತೀಯರ ಆಧ್ಯಾತ್ಮಿಕತೆಯ ಶಕ್ತಿಯನ್ನ ಹೆಚ್ಚು ಮಾಡಲಿದೆ. ಮಹಾ ಕುಂಭಮೇಳದ ಕೊನೆ ದಿನ ಒಂದೇ ಸಾಲಿನಲ್ಲಿ ಬರೋಬ್ಬರಿ 7 ಗ್ರಹಗಳ ದರ್ಶನ ಭಾಗ್ಯ ಸಿಗಲಿದೆ.
ಇದೇ ವರ್ಷ ಜನವರಿಯಲ್ಲಿ ಆರು ಗ್ರಹಗಳು ಒಂದೇ ಸಾಲಿನಲ್ಲಿ ಗೋಚರಿಸಿದ್ದವು. ಶುಕ್ರ, ಮಂಗಳ, ಗುರು, ಶನಿ, ಯುರೇನಸ್ ಹಾಗೂ ನೆಪ್ಚೂನ್ ಗ್ರಹಗಳ ಗೋಚರತೆ ಆಗಿದ್ದವು. ಒಂದು ತಿಂಗಳ ಸರಿಯಾಗಿ ಫೆಬ್ರವರಿಯಲ್ಲಿ ಶುಕ್ರ, ಮಂಗಳ, ಗುರು, ಶನಿ, ಯುರೇನಸ್ ಹಾಗೂ ನೆಪ್ಚೂನ್ ಗ್ರಹಗಳ ಸಾಲಿಗೆ ಬುಧ ಗ್ರಹವೂ ಸೇರಿಕೊಳ್ಳಲಿದೆ. ಫೆಬ್ರವರಿ 28 ರಂದು ಒಂದೇ ಸಾಲಿನಲ್ಲಿ ಈ 7 ಗ್ರಹಗಳು ಕೂಡ ಸೂರ್ಯನ ಒಂದು ಬದಿಯಲ್ಲಿ ಗೋಚರಿಸಲ್ಪಡುತ್ತವೆ.
ಆ ದಿನ ನಡೆಯಲಿರುವ ಅಪರೂಪದ ವಿದ್ಯಾಮಾನದಂದು ಬುಧ, ಶುಕ್ರ, ಮಂಗಳ, ಗುರು, ಶನಿ ಗ್ರಹಗಳನ್ನು ಬರಿಗಣ್ಣಿಂದ ನೋಡಬಹುದಾಗಿದೆ. ಆದರೆ ಯುರೇನಸ್ ಹಾಗೂ ನೆಪ್ಚೂನ್ ಗ್ರಹಗಳು ಮಂಕಾಗಿ ಇರುವುದರಿಂದ ಬೈನಾಕ್ಯೂಲರ್ ಅತ್ಯಗತ್ಯ.
ಸೂರ್ಯಾಸ್ತದ ನಂತರ ಅಥವಾ ಸೂರ್ಯೋದಕ್ಕೂ ಮುನ್ನ ವೀಕ್ಷಣೆಗೆ ಉತ್ತಮ ಸಮಯ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಖಗೋಳ ಶಾಸ್ತ್ರಜ್ಞರು ಹೇಳುವ ಪ್ರಕಾರ ಇದೇ ವರ್ಷ ಆಗಸ್ಟ್ ತಿಂಗಳಿನಲ್ಲಿ ಮತ್ತೊಂದು ಇದೇ ರೀತಿಯ ವಿದ್ಯಾಮಾನ ನಡೆಯಲಿದೆ. ಆಗಲೂ ಕೂಡ ಒಂದೇ ಸಾಲಿನಲ್ಲಿ 7 ಗ್ರಹಗಳನ್ನ ನೋಡುವ ಅವಕಾಶ ಸಿಗಲಿದೆ.