ಕರ್ನಾಟಕ ಸರ್ಕಾರ ಬೆಂಗಳೂರು-ತುಮಕೂರು ಮೆಟ್ರೋ ವಿಸ್ತರಣೆ ಯೋಜನೆಗೆ ಸಂಬಂಧಿಸಿದಂತೆ ಕಾರ್ಯಸಾಧ್ಯತಾ ಅಧ್ಯಯನಕ್ಕೆ ಅನುಮೋದನೆ ನೀಡಿದೆ. ಸದ್ಯ ಯೋಜನೆಯ 2ನೇ ಹಂತವಾದ ವಿಸ್ತೃತ ಯೋಜನಾ ವರದಿ(ಡಿಪಿಆರ್) ಸಿದ್ಧಪಡಿಸಲಾಗುತ್ತಿದೆ. ಡಿಪಿಆರ್ ತಯಾರಿಕಾ ವೆಚ್ಚದ ಕುರಿತು ಸರ್ಕಾರ ಸೆಪ್ಟೆಂಬರ್ ಅಂತ್ಯದಲ್ಲಿ ಆದೇಶ ಹೊರಡಿಸಿದೆ.
2024 – 25ರ ಕರ್ನಾಟಕ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಯೋಜನೆಯನ್ನು ಪ್ರಸ್ತಾಪಿಸಿದ್ದರು. ಮಾದಾವರದಿಂದ ತುಮಕೂರಿಗೆ 59.6 ಕಿ.ಮೀ. ಮೆಟ್ರೋ ಮಾರ್ಗ ವಿಸ್ತರಿಸುವ ಗುರಿ ಇದೆ. ಬಿಎಂಆರ್‌ಸಿಎಲ್ ಕಾರ್ಯ ಸಾಧ್ಯತಾ ವರದಿಯ ಅಧ್ಯಯನ ನಡೆಸಿದೆ. ಈಗ ಸಾರ್ವಜನಿಕ – ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗುತ್ತಿದೆ. ಇದು ಬೆಂಗಳೂರು ಮತ್ತು ತುಮಕೂರು ನಡುವೆ ಉತ್ತಮ ಸಂಪರ್ಕ ಕಲ್ಪಿಸಲು ಸಹಾಯ ಮಾಡುತ್ತದೆ.
ಗೃಹ ಸಚಿವ ಜಿ. ಪರಮೇಶ್ವರ ಅವರು ಇತ್ತೀಚೆಗೆ ಮಾಧ್ಯಮಗಳಿಗೆ ಈ ಮಾಹಿತಿ ನೀಡಿದ್ದಾರೆ. “ಬಿಎಂಆರ್‌ಸಿಎಲ್‌ಗೆ ಅಧ್ಯಯನ ನಡೆಸುವ ಜವಾಬ್ದಾರಿ ನೀಡಲಾಗಿತ್ತು. 3 ಕೋಟಿ ರೂ. ವೆಚ್ಚದಲ್ಲಿ ಟೆಂಡರ್‌ಗಳನ್ನು ಕರೆಯಲಾಗಿತ್ತು. ಹೈದರಾಬಾದ್ ಮೂಲದ ಸಂಸ್ಥೆಗೆ ಗುತ್ತಿಗೆ ನೀಡಲಾಯಿತು. ಆ ಸಂಸ್ಥೆ ಈಗ ತನ್ನ ಕಾರ್ಯಸಾಧ್ಯತಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ” ಎಂದು ಸಚಿವರು ಹೇಳಿದರು. ಈ ವರದಿಯು ಯೋಜನೆಯ ಮುಂದಿನ ಹಂತಗಳಿಗೆ ದಾರಿ ಮಾಡಿಕೊಟ್ಟಿದೆ.
3 ಕೋಟಿ ರೂ. ವೆಚ್ಚಕ್ಕೆ ಆದೇಶ: ಕಾರ್ಯಸಾಧ್ಯತಾ ವರದಿ ಬಂದ ನಂತರ, ಸರ್ಕಾರವು ಬಿಎಂಆರ್‌ಸಿಎಲ್‌ಗೆ ಡಿಪಿಆರ್ ಸಿದ್ಧಪಡಿಸಲು ಸೂಚಿಸಿದೆ. ಇದಕ್ಕೂ ಸಹ 3 ಕೋಟಿ ರೂ. ಅಂದಾಜು ವೆಚ್ಚವಾಗಲಿದೆ. ಈ ಕುರಿತು 2025ರ ಸೆಪ್ಟೆಂಬರ್ 25ರಂದು ಆದೇಶ ಹೊರಡಿಸಲಾಗಿದೆ.
20,649 ಕೋಟಿ ರೂ. ವೆಚ್ಚ: ಯೋಜನೆಯ ಮೊದಲ ಹಂತಕ್ಕೆ ₹20,649 ಕೋಟಿ ವೆಚ್ಚವಾಗುವ ನಿರೀಕ್ಷೆ ಇದೆ. ಹಲವು ಖಾಸಗಿ ಕಂಪನಿಗಳು ಈ ಯೋಜನೆಯನ್ನು ಕಾರ್ಯಗತಗೊಳಿಸಲು ಆಸಕ್ತಿ ತೋರಿಸಿವೆ ಎಂದು ವರದಿಗಳು ತಿಳಿಸಿವೆ. ಈಗಾಗಲೇ ನಮ್ಮ ಮೆಟ್ರೋ ಹಸಿರು ಮಾರ್ಗವು ರೇಷ್ಮೆ ಸಂಸ್ಥೆಯಿಂದ ಮಾದಾವರದವರೆಗೂ 33.4 ಕಿ.ಮೀ ಕಾರ್ಯಚರಣೆ ನಡೆಸುತ್ತಿದೆ. ಪ್ರಸ್ತಾವಿತ ಮೆಟ್ರೋ ಮಾರ್ಗವು 59.6 ಕಿ.ಮೀ. ಉದ್ದವಿದ್ದು, ಮಾದಾವರವನ್ನು ತುಮಕೂರಿಗೆ ಸಂಪರ್ಕಿಸುತ್ತದೆ.
ಮುಂದಿನ ಹಂತಗಳು: ಕಾರ್ಯ ಸಾಧ್ಯತಾ ವರದಿಗೆ ಅನುಮೋದನೆ ದೊರೆತರೆ, ಎರಡನೇ ಹಂತವಾದ ವಿಸ್ತೃತ ಯೋಜನಾ ವರದಿ ನಡೆಯುತ್ತದೆ. ಈ ವರದಿ ಆಧರಿಸಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಮಾತುಕತೆ ನಡೆಸಿ ಯೋಜನೆಗೆ ಅಂತಿಮ ಒಪ್ಪಿಗೆ ಸೂಚಿಸಿ ಅನುದಾನ ಬಿಡುಗಡೆ ಮಾಡಿದರೆ ಕಾಮಗಾರಿ ಆರಂಭವಾಗಲಿದೆ.
ಸಂಭಾವ್ಯ ನಿಲ್ದಾಣಗಳು :
- ಮಾದಾವರ
- ಮಾಕಳಿ
- ದಾಸನಪುರ
- ನೆಲಮಂಗಲ
- ವೀವರ್ ಕಾಲೋನಿ
- ನೆಲಮಂಗಲ ವಿಶ್ವೇಶ್ವರಪುರ
- ನೆಲಮಂಗಲ ಟೋಲ್‌ಗೇಟ್
- ಬೂದಿಹಾಳ್
- ಟಿ. ಬೇಗೂರು
- ತಿಪ್ಪಗೊಂಡನಹಳ್ಳಿ
- ಕುಲವನಹಳ್ಳಿ
- ಮಹಿಮಾಪುರ
- ಬಿಲ್ಲನ್‌ಕೋಟೆ
- ಸೋಂಪುರ ಕೈಗಾರಿಕಾ ಪ್ರದೇಶ
- ದಾಬಸ್‌ಪೇಟೆ
- ನಲ್ಲಾಯನಪಾಳ್ಯ
- ಚಿಕ್ಕಹಳ್ಳಿ
- ಹಿರೇಹಳ್ಳಿ ಕೈಗಾರಿಕಾ ಪ್ರದೇಶ
- ಪಂಡಿತನಹಳ್ಳಿ
- ಕ್ಯಾತ್ಸಂದ್ರ ಬೈಪಾಸ್
- ಕ್ಯಾತ್ಸಂದ್ರ
- ಎಸ್‌ಐಟಿ (ಸಿದ್ಧಾರ್ಥ ಕಾಲೇಜು)
- ತುಮಕೂರು ಬಸ್ ನಿಲ್ದಾಣ
- ಟೂಡಾ ಲೇಔಟ್
- ನಾಗಣ್ಣ ಪಾಳ್ಯ
- ಶಿರಾ ಗೇಟ್‌ನ
ಬೆಂಗಳೂರು ತುಮಕೂರು ನಮ್ಮ ಮೆಟ್ರೋ ಮಾರ್ಗದಲ್ಲಿ ಒಟ್ಟು 26 ಸಂಭಾವ್ಯ ನಿಲ್ದಾಣಗಳನ್ನು ಗುರುತಿಸಲಾಗಿದ್ದು, ಎಲ್ಲವೂ ಎಲೆವೆಟೆಡ್ ಮಾದರಿಯ ನಿಲ್ದಾಣಗಳಾಗಿವೆ. ಹೀಗಾಗಿ, ನಿರ್ಮಾಣ ವೆಚ್ಚ ಹಾಗೂ ಸಮಯ ಎರಡು ಕಡಿಮೆ ಇರಲಿದೆ.