ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸಿಕ್ಕಿ ಹಾಕಿಕೊಂಡರೆ ಅದೊಂದು ನರಕ. ಇಂತಾ ಟೈಮಲ್ಲಿ ಟ್ರಾಫಿಕ್ ದಾಟಿಕೊಂಡು ಹೋಗೋಕೆ ಹಲವರು ಹಲವಾರು ರೀತಿಯ ಸರ್ಕಸ್ ಮಾಡ್ತಾರೆ. ಅಂತಾ ದಿನಗಳು ದೂರ ಆಗೋ ಸಮಯ ಹತ್ತಿರ ಬಂದಂತೆ ಕಾಣ್ತಿದೆ. ಯಾಕಂದ್ರೆ, ಅಮೆರಿಕದ ಕಂಪನಿಯೊಂದು ಹಾರುವ ಕಾರು ಕಂಡು ಹಿಡಿದಿದ್ದು, ಯಶಸ್ವಿಯಾಗಿ ಟೆಸ್ಟ್ ಡ್ರೈವ್ ಕೂಡ ಮುಗಿದಿದೆ. ಹೇಗಿದೆ ಈ ಹಾರೋ ಕಾರು ಅಂತಾ ನೋಡೋಣ ಬನ್ನಿ.
ವೀಕೆಂಡ್‌ನಲ್ಲಿ ಬೆಂಗಳೂರಿಂದ ದೂರ ಹೋಗಿ.. ಭಾನುವಾರ ಸಂಜೆ ಅಥವಾ ಸೋಮವಾರ ಬೆಳಗ್ಗೆ ಬೆಂಗಳೂರಿಗೆ ವಾಪಸ್ ಬರೋ ವೇಳೆ ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿ ಹಾಕಿಕೊಂಡು ನರಕ ಯಾತನೆ ಅನುಭವಿಸಬೇಕಾಗುತ್ತೆ. ಹೀಗಾಗಿ ಕೆಲವರು ಮಧ್ಯರಾತ್ರಿ ವೇಳೆಗೆ ಬೆಂಗಳೂರು ತಲುಪುವಂತೆ ಪ್ಲ್ಯಾನ್ ಮಾಡಿಕೊಂಡಿರ್ತಾರೆ. ಇನ್ನು ಬೆಂಗಳೂರಲ್ಲಿ ಪೀಕ್ ಅವರ್‌ನ ಟ್ರಾಫಿಕ್ ಎಷ್ಟು ಯಾತನೆ ಕೊಡುತ್ತೆ ಅನ್ನೋದು ಅನುಭವಿಸಿದವರಿಗೆ ಮಾತ್ರವೇ ಗೊತ್ತು. ಇದಕ್ಕೆ ಬ್ರೇಕ್ ಬೀಳೋ ಟೈಂ ಹತ್ತಿರ ಬಂದಂತೆ ಕಾಣ್ತಿದೆ. ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಹಾಕೋಕೆ ಹಾರೋ ಕಾರು ಕಂಡು ಹಿಡಿಯಲಾಗಿದೆ.
ಹಾರೋ ಕಾರು ಕಂಡು ಹಿಡಿಯೋಕೆ ಜಗತ್ತಿನ ಹಲವಾರು ಜನ ಪ್ರಯತ್ನ ಮಾಡ್ತಿದ್ದಾರೆ. ಅಂತಾ ಕಂಪನಿಗಳಲ್ಲಿ ಅಲೆಫ್ ಏರೋನಾಟಿಕ್ಸ್ ಕೂಡ ಒಂದು. ಜಗತ್ತಿನಲ್ಲಿ ಇದುವರೆಗೆ ಹಲವಾರು ಜನ ನಿಂತಿದ್ದಲ್ಲಿಂದಲೇ ಮೇಲೆ ಹಾರುವ ಕಾರನ್ನ ನಿರ್ಮಾಣ ಮಾಡೋಕೆ ಯತ್ನಿಸಿದ್ರು. ಕೆಲವರು ಹಾರೋ ಕಾರು ಕಂಡು ಹಿಡಿದಿದ್ರೂ ಸಹ.. ಅವು ನಿಂತಲ್ಲಿದ್ದಂಲೇ ಹಾರುವ ಸಾಮರ್ಥ್ಯ ಹೊಂದಿರಲಿಲ್ಲ. ಆದ್ರೆ, ಅಲೆಫ್ ಏರೋನಾಟಿಕ್ಸ್ ನಿಂತಿದ್ದಲ್ಲಿಂದಲೇ ಹಾರೋ ರೀತಿ ಕಾರನ್ನು ನಿರ್ಮಿಸಿದೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಈ ಕಾರಿನ ಟೆಸ್ಟ್ ಡ್ರೈವ್ ಕೂಡ ಮಾಡಲಾಗಿದೆ. ಇದು ಅಕ್ಷರಶಃ ಯಾವುದೋ ಸಿನಿಮಾ ದೃಶ್ಯದಂತೆ ನಿಮಗೆ ಕಾಣಿಸಿದ್ರೆ ಅಚ್ಚರಿ ಇಲ್ಲ.
ಕ್ಯಾಲಿಫೋರ್ನಿಯಾದಲ್ಲಿ ಈ ಕಾರನ್ನು ಟೆಸ್ಟ್ ಡ್ರೈವ್ ಮಾಡಿದ್ದಾರೆ. ಈ ಟೆಸ್ಟ್ ಡ್ರೈವ್‌ನಲ್ಲಿ ನಿಂತಿದ್ದಲ್ಲಿಂದಲೇ ಟೇಕಾಫ್ ಆಗೋ ಈ ಕಾರು ಬೇರೊಂದು ಕಾರಿನ ಮೇಲೆ ಹಾರುವ ಮೂಲಕ ಟ್ರಾಫಿಕ್ ಜಾಮ್‌ನಿಂದ ಮುಕ್ತಿ ನೀಡೋ ಭರವಸೆ ನೀಡಿದೆ. ಆದ್ರೆ, ಇದಕ್ಕಾಗಿ ನೀವು ಇನ್ನೂ 10 ವರ್ಷ ಕಾಯಬೇಕಿದೆ. 2035ರ ವೇಳೆಗೆ ಹಾರೋ ಕಾರು ಮಾರುಕಟ್ಟೆಗೆ ಬರಲಿದೆ. ಕಂಪನಿ ನೀಡಿರೋ ಅಧಿಕೃತ ಮಾಹಿತಿ ಪ್ರಕಾರ, ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಟೆಸ್ಟ್ ಡ್ರೈವ್ ಮಾಡಲಾಗಿದೆ. ಈ ವೇಳೆ ಸಾರ್ವಜನಿಕರು ಉಪಸ್ಥಿತರಿರಲಿಲ್ಲ. ಮುಂಜಾಗ್ರತಾ ಕ್ರಮವಾಗಿ ರಕ್ಷಣಾ ಸಿಬ್ಬಂದಿ ಮತ್ತು ರಕ್ಷಣಾ ಸಲಕರಣೆಗಳನ್ನು ಬಳಸಿ ಟೆಸ್ಟ್ ಡ್ರೈವ್ ನಡೆಸಲಾಗಿದೆ.
ಇದೇ ಮೊಟ್ಟ ಮೊದಲ ಬಾರಿಗೆ ನಗರ ಪ್ರದೇಶದಲ್ಲಿ ಹಾರೋ ಕಾರಿನ ಪ್ರಯೋಗಾರ್ಥ ಚಾಲನೆ ಮಾಡಲಾಗಿದೆ. ಜಗತ್ತಿನಲ್ಲಿ ಮೊದಲ ಬಾರಿಗೆ ನಗರವೊಂದರಲ್ಲಿ ಹಾರೋ ಕಾರನ್ನು ಚಾಲನೆ ಮಾಡಿದ ಕೀರ್ತಿ ಅಲೆಫ್ ಏರೋನಾಟಿಕ್ಸ್‌ಗೆ ಸಲ್ಲುತ್ತೆ. ಅಲೆಫ್ ಏರೋನಾಟಿಕ್ಸ್ ಈ ಕಾರಿಗೆ ಮಾಡೆಲ್ ಜೀರೋ ಅಂತಾ ಹೆಸರಿಟ್ಟಿದೆ. ಅಲೆಫ್ ಏರೋನಾಟಿಕ್ಸ್ ಮಾಡೆಲ್ ಎ ಅನ್ನೋ ಹಾರೋ ಕಾರನ್ನು ಮಾರುಕಟ್ಟೆಗೆ ರಿಲೀಸ್ ಮಾಡಲು ಚಿಂತನೆ ನಡೆಸಿದೆ. 2023ರಲ್ಲಿ ಅಮೆರಿಕದ ವಿಮಾನಯಾನ ಆಡಳಿತದಿಂದ ಹಾರಾಟಕ್ಕೆ ಬೇಕಾದ ಅನುಮತಿ ಪತ್ರವನ್ನ ಅಲೆಫ್ ಏರೋನಾಟಿಕ್ಸ್ ಪಡೆದುಕೊಂಡಿದೆ.
ಕಂಪನಿ ವೆಬ್‌ಸೈಟ್ ಪ್ರಕಾರ ವಿದ್ಯುತ್ ಚಾಲಿತ ಹಾರೋ ಕಾರಿನ ಮುಂಗಡ ಬುಕ್ಕಿಂಗ್ ಕೂಡ ಆರಂಭವಾಗಿದೆ. ಈಗಾಗಲೇ ಸುಮಾರು 3,300 ಜನ ಮುಂಗಡ ಬುಕ್ಕಿಂಗ್ ಮಾಡಿದ್ದಾರೆ. ಬೇಕಾದವರು ಸುಮಾರು 3 ಲಕ್ಷ ಡಾಲರ್ ನೀಡಿ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಬಹುದು ಅಂತಾ ಕಂಪನಿ ಹೇಳಿದೆ. 2035ರ ವೇಳೆಗೆ ಮಾರುಕಟ್ಟೆಗೆ ಬರಲಿರೋ ಮಾಡೆಲ್ ಎ ಕಾರು 320 ಕಿಲೋ ಮೀಟರ್ ಹಾರಾಟ ಮಾಡುವಷ್ಟು ಸಾಮರ್ಥ್ಯ ಹೊಂದಿರಲಿದ್ದು, ಸುಮಾರು 640 ಕಿಲೋ ಮೀಟರ್ ಚಾಲನಾ ಸಾಮರ್ಥ್ಯ ಹೊಂದಿರಲಿದೆ ಅಂತಾ ಕಂಪನಿ ಹೇಳಿದೆ.