16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್ 1ರಿಂದ ಆರಂಭವಾಗಲಿದ್ದು, ಸುಮಾರು 60 ದೇಶಗಳಿಂದ 200ಕ್ಕೂ ಹೆಚ್ಚು ಚಲನಚಿತ್ರಗಳು ಪ್ರದರ್ಶನ ಕಾಣಲಿವೆ.
ದೇಶ-ವಿದೇಶಗಳ ಕಲಾವಿದರು, ನಿರ್ಮಾಪಕರು, ನಿರ್ದೇಶಕರು ತಮ್ಮ ಚಿತ್ರಗಳನ್ನು ಪ್ರದರ್ಶಿಸಲಿದ್ದಾರೆ. ಈಗಾಗಲೇ ಮೂರು ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ನೋಂದಾಯಿಸಿಕೊಂಡಿದ್ದು, ಚಿತ್ರೋತ್ಸವನ್ನು ಕಣ್ಮನ ತುಂಬಿಕೊಳ್ಳಲು ಕಾತುರರಾಗಿದ್ದಾರೆ.
ನಗರದ ವಾರ್ತಾ ಇಲಾಖೆಯ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರೋತ್ಸವ ಸಮಿತಿ ಅಧ್ಯಕ್ಷೆ ಬಿ.ಬಿ.ಕಾವೇರಿ, ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಥೀಮ್‌ನಡಿಯಲ್ಲಿ ಚಲನಚಿತ್ರೋತ್ಸವ ನಡೆಯಲಿದೆ ಎಂದು ಹೇಳಿದ್ದಾರೆ.
ಮಾರ್ಚ್ 1 ರಂದು ಸಂಜೆ 5 ಗಂಟೆಗೆ ವಿಧಾನಸೌಧದ ಎದುರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಚಲನಚಿತ್ರದ ಉನ್ನತ ವ್ಯಕ್ತಿಗಳು ಚಲನಚಿತ್ರೋತ್ಸವದ ಕೈಪಿಡಿ ಬಿಡುಗಡೆ ಮಾಡುವ ಮೂಲಕ ಉತ್ಸವವನ್ನು ಉದ್ಘಾಟಿಸಲಿದ್ದಾರೆ.
ಕನ್ನಡದ ಮೊದಲ ವಾಕ್ ಚಿತ್ರ ಸತಿ ಸುಲೋಚನಾ ಬಿಡುಗಡೆ ದಿನದ ಅಂಗವಾಗಿ ಏರ್ಪಡಿಸಿರುವ ಸಮಾರಂಭದಲ್ಲಿ ನಟ ಸೃಜನ್ ಲೋಕೇಶ್ ಭಾಗವಹಿಸಲಿದ್ದಾರೆ. ಸತಿ ಸುಲೋಚನಾ ಚಿತ್ರದ ಗೀತೆಗಳನ್ನು ಹಿರಿಯ ರಂಗಗಾಯಕ ಲಕ್ಷ್ಮಣದಾಸ್ ಪ್ರಸ್ತುತಪಡಿಸಲಿದ್ದಾರೆ.
‘ಬೆಂಗಳೂರಿನಲ್ಲಿ ಜಗತ್ತು’ ಎಂಬ ಶೀರ್ಷಿಕೆಯಡಿ ವಿದೇಶಿ ಚಿತ್ರಗಳ ಪ್ರದರ್ಶನ ನಡೆಯಲಿದೆ. ಉದ್ಘಾಟನಾ ಚಿತ್ರವಾಗಿ ಹಿಂದಿಯ ಪಯರ್ ಚಿತ್ರ ರಾತ್ರಿ 8ಕ್ಕೆ ಪ್ರದರ್ಶನವಾಗಲಿದೆ. ಉಳಿದಂತೆ ಮಾರ್ಚ್ 2ರಿಂದ ರಾಜಾಜಿನಗರದ ಓರಾಯನ್ ಮಾಲ್‍ನ 11 ಸ್ಕ್ರೀನ್‍ಗಳಲ್ಲಿ ಸಾರ್ವಜನಿಕರಿಗೆ ಸಿನಿಮಾಗಳ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಕಲಾ ಭವನ, ಸುಚಿತ್ರಾ ಫಿಲಂ ಸೊಸೈಟಿ ಚಿತ್ರಮಂದಿರಗಳಲ್ಲಿ ಚಲನಚಿತ್ರಗಳು ಪ್ರದರ್ಶನ ಕಾಣಲಿವೆ.
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿ ನಟ ಕಿಶೋರ್ ಕುಮಾರ್, ಪೋಲೆಂಡ್ ರಾಯಭಾರಿ ಮೌಗುಜ್ಹಾತ ವೈಸಿಸ್ ಗೋವಿನ್ಟಿಯಾಖ್, ನಟಿ ಪ್ರಿಯಾಂಕ್ ಮೋಹನ್ ಸೇರಿದಂತೆ ಚಲನಚಿತ್ರದ ದಿಗ್ಗಜರು ಪಾಲ್ಗೊಳ್ಳಲಿದ್ದಾರೆ.
ಚಿತ್ರೋತ್ಸವವು 7 ದಿನಗಳ ಕಾಲ ನಡೆಯಲಿದ್ದು, ಸಿನಿಮಾ ಆಸಕ್ತರು ಪಾಸ್ ಪಡೆದುಕೊಂಡು ಚಲನಚಿತ್ರೋತ್ಸವದಲ್ಲಿ ಭಾಗಿಯಾಗಬಹುದು. ಪಾಸ್‌ಗೆ ಸಾರ್ವಜನಿಕರಿಗೆ 800 ರೂ. ಹಾಗೂ ವಿದ್ಯಾರ್ಥಿ, ಹಿರಿಯ ನಾಗರಿಕರು, ಚಿತ್ರೋದ್ಯಮದ ಸದಸ್ಯರಿಗೆ 400 ರೂ. ಶುಲ್ಕವಿರಲಿದೆ. ಚಿತ್ರೋತ್ಸವದ ಜಾಲತಾಣದ ಮೂಲಕ ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು.
ಆನ್‍ಲೈನ್‍ನಲ್ಲಿ ನೋಂದಾಯಿಸಿಕೊಂಡ ಪ್ರತಿನಿಧಿಗಳು ಫೆ.18 ರಿಂದ ನಂದಿನಿ ಲೇಔಟ್‍ನಲ್ಲಿರುವ ಚಲನಚಿತ್ರ ಅಕಾಡೆಮಿ ಹಾಗೂ ಶಿವಾನಂದ ಸರ್ಕಲ್‍ನಲ್ಲಿರುವ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಪ್ರತಿನಿಧಿ ಕಾರ್ಡ್‍ಗಳನ್ನು ಪಡೆಯಬಹುದು. ಮಾ.8ರಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಂದು ಏಷಿಯನ್, ಭಾರತೀಯ ಹಾಗೂ ಕನ್ನಡ ಚಲನಚಿತ್ರಗಳ ಸ್ಪರ್ಧಾ ವಿಭಾಗದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸಾಧು ಕೋಕಿಲ ಮಾತನಾಡಿ, ಚಿತ್ರೋತ್ಸವದಲ್ಲಿ ಏಷಿಯನ್, ಇಂಡಿಯನ್ ಹಾಗೂ ಕನ್ನಡ ಚಲನಚಿತ್ರಗಳ ಸ್ಫರ್ಧಾ ವಿಭಾಗಗಳಿದ್ದು, ಮೂರು ವಿಭಾಗಗಳಲ್ಲಿ ತಲಾ ಮೂರು ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. ಚಿತ್ರೋತ್ಸವದಲ್ಲಿ ಮಾರ್ಚ್ 3ರಂದು ಎಐ ಕುರಿತ ವಿಶೇಷ ಕಾರ್ಯಾಗಾರ ನಡೆಯಲಿದೆ. ತಜ್ಞರು ಕಾರ್ಯಾಗಾರ ನಡೆಸಿಕೊಡಲಿದ್ದಾರೆ.
ಹಿಂದಿನ ಕಾಲದಲ್ಲಿ ಇದ್ದ ಟೆಂಟ್ ಸಿನಿಮಾ ರೀತಿಯಲ್ಲಿ ಕೆಲ ಸಿನಿಮಾ ಪ್ರದರ್ಶನಗೊಳ್ಳಲಿವೆ. ಜೊತೆಗೆ ಒಟಿಟಿ, 2024ರ ಹಿಟ್ ಚಿತ್ರಗಳ ನಿರ್ದೇಶಕರೊಂದಿಗೆ ಸಂವಾದ, ಚಿತ್ರರಂಗದ ಸಾಧಕರೊಂದಿಗೆ ಮಾತುಕತೆ, ಚಿತ್ರ ವಿತರಣೆ, ನಿರ್ಮಾಣ, ಚಲನಚಿತ್ರಗಳನ್ನು ವಿತರಿಸುವಾಗ ಎದುರಾಗುವ ಸಮಸ್ಯೆಗಳು, ಚಲನಚಿತ್ರ ಸಬ್ಸಿಡಿ ಮತ್ತು ವಿದೇಶಗಳಲ್ಲಿ ಚಿತ್ರೀಕರಣ ಮತ್ತು ಅದರಿಂದಾಗುವ ಲಾಭಗಳ ಕುರಿತು ಸಂವಾದಗಳು ನಡೆಯಲಿದೆ ಎಂದು ವಿವರಿಸಿದರು. *