ಎರಡು ವರ್ಷಗಳಿಂದ ಕೊರೋನಾದ ದೆಸೆಯಿಂದ ಎಲ್ಲರೂ ಹೊರಗೆ ಬರಲು ಹೆದರುತ್ತಿದ್ದರು. ಪ್ರವಾಸೋದ್ಯಮ ನೆಲಕ್ಕೆ ಕಚ್ಚಿ ಹೋಗಿತ್ತು. ವಿದೇಶ ಪ್ರವಾಸವಿರಲಿ, ದೇಶದೊಳಗೆ, ಮನೆಯಿಂದ ಹೊರಗೆ ಹೋಗಲು ಜನ ಹೆದರುತ್ತಿದ್ದರು. ಆದರೆ ಅದು ಒಮ್ಮೆ ಕಡಿಮೆಯಾಗಿದ್ದೇ ಒಮ್ಮೆಲೇ ಜನರೆಲ್ಲಾ ಪ್ರವಾಸ ಹೋಗಲು ಆರಂಭಿಸಿದರು. ಆಗಲೂ ಅಷ್ಟೇ ಕ್ಷೇಮ ಎನಿಸುವ ತಾಣಗಳಿಗೆ ಎಲ್ಲರ ಭೇಟಿ. ಪ್ರಕೃತಿಯ ಮಡಿಲಲ್ಲಿ, ನದಿಯ ತಟದಲ್ಲಿ, ಮರಗಳ ನೆರಳಿನಲ್ಲಿ ಸಂಸಾರ ಸಮೇತ ಹೋಗುವ ತಾಣಗಳಿಗೆ ಆದ್ಯತೆ. ಅಂತಹ ಒಂದು ತಾಣ ಭೀಮೇಶ್ವರಿ ಪ್ರಕೃತಿ ಶಿಬಿರ.
ನಮ್ಮ ಮನೆಯಲ್ಲೂ ಎಲ್ಲಿಗಾದರೂ ಹೋಗೋಣ ಎನ್ನುವ ಯೋಜನೆ ಸಿದ್ಧವಾಯಿತು. ಆಗ ನಮ್ಮ ಮನಸ್ಸಿಗೆ ಬಂದದ್ದು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹಲಗೂರು ಹೋಬಳಿಯ ಬ್ಯಾಡರಹಳ್ಳಿ ಬಳಿ ಇರುವ ಭೀಮೇಶ್ವರಿ ಪ್ರಕೃತಿ ಧಾಮ ಅರ್ಥಾತ್ ಭೀಮೇಶ್ವರಿ ನೇಚರ್‌ಅಡ್ವೆಂಚರ್ ಕ್ಯಾಂಪ್. ಮನೆ ಮಂದಿಯೆಲ್ಲಾ ಬೆಳಗ್ಗೆ ಆರು ಗಂಟೆಗೆ ಹೊರಟೆವು. ಮಧ್ಯದಲ್ಲಿ ಬೆಳಗಿನ ಉಪಾಹಾರಕ್ಕೆ ಒಂದು ಗಂಟೆ ಬ್ರೇಕ್. ನಂತರ ಮುಂದೆ ಸಾಗಿ ತಲುಪುವಷ್ಟರಲ್ಲಿ ಹನ್ನೊಂದೂವರೆ ಆಯಿತು. ಹೋದೊಡನೆ ವೆಲ್ಕವ್ ಡ್ರಿಂಕ್ ನಿಂಬೆಹಣ್ಣಿನ ಪಾನಕ ನೀಡಿದರು. ನಂತರ ಅಲ್ಲಿನ ಸಾಹಸ ಕ್ರೀಡೆಗಳಿಗೆ ಅನುವು ಮಾಡಿದರು.
ಸಾಹಸ ಕ್ರೀಡೆಗಳಿಗೆ ಸಿದ್ಧತೆ
ಸಾಹಸವೆಂದರೆ ನಿಜಕ್ಕೂ ಸಾಹಸವೇ. ಯುವ ಜನತೆಗೆ ಹೆಚ್ಚು ಸೂಕ್ತ. ರಕ್ಷಣೆಯ ಸಲುವಾಗಿ ಎಲ್ಲರಿಗೂ ತಲೆಗೆ ಒಂದು ಶಿರಸ್ತ್ರಾಣ ಅಂದರೆ ಹೆಲ್ಮೆಟ್ ಮತ್ತು ಸೊಂಟಕ್ಕೆ ಒಂದು ಬೆಲ್ಟ್. ಅದರಿಂದಲೇ ಅವರ ನಿಯಂತ್ರಣ. ಎಲ್ಲರೂ ಯುದ್ಧಕ್ಕೆ ಸಿದ್ಧರಾದಂತೆ ಎಲ್ಲವನ್ನೂ ಧರಿಸಿ ಸಿದ್ಧರಾದರು.
ಜಿಪ್ ಲೈನ್ ನಲ್ಲಿ ಜಾರುತ್ತಾ ಸಾಗುವ ಒಂದು ದೊಡ್ಡ ಮರಕ್ಕೆ ಮರದ ನೇತಾಡುವ ಏಣಿಯನ್ನು ಕಟ್ಟಿರುತ್ತಾರೆ. ಅದನ್ನು ಹಿಡಿದು ಮೇಲೆ ಏರುವುದು, ಆಗ ನೀವು ಮರದ ಮೇಲೆ ನಿಲ್ಲಲು ಒಂದು ತಾಣನ್ನು ಸಿದ್ಧಪಡಿಸಿರುತ್ತಾರೆ. ಅಲ್ಲಿಂದ ಮತ್ತೊಂದು ಮರಕ್ಕೆ ಹಗ್ಗದ ಹಾದಿ, ಹಗ್ಗದ ಮೇಲೆ ಲೋಹದ ದುಂಡನೆಯ ತಟ್ಟೆಗಳನ್ನು ಇಟ್ಟಿರುತ್ತಾರೆ. ಅದರ ಮೇಲೆ ಕಾಲಿಟ್ಟುಕೊಂಡು ಮುಂದೆ ಮತ್ತೊಂದು ಮರದ ಹತ್ತಿರಕ್ಕೆ ಸಾಗಬೇಕು. ಸೊಂಟಕ್ಕೆ ಕಟ್ಟಿರು ಬೆಲ್ಟ್ ನಿಮ್ಮ ರಕ್ಷಣೆಗಾಗಿ ಇರುತ್ತದೆ. ನೀವು ಜಾರಿದರೂ ಕೆಳಗೆ ಬೀಳುವುದಿಲ್ಲ. ಮತ್ತೊಂದು ಮರದ ಮೇಲಿನ ಭಾಗಕ್ಕೆ ಹೋಗುತ್ತೀರಿ, ಅಲ್ಲೂ ಸಹ ನಿಲ್ಲಲು ಜಾಗ ಮಾಡಿರುತ್ತಾರೆ. ಅಲ್ಲಿಂದ ಮುಂದಿನ ಭಾಗ ಮತ್ತೂ ರೋಚಕ. ನೀವು ಜಿಪ್ ಲೈನ್ ಮೂಲಕ ಮತ್ತೊಂದು ಮರದ ಮೇಲ್ಗಡೆಗೆ ಜಾರುತ್ತಾ ತಲುಪುತ್ತೀರಿ, ಅಲ್ಲಿಂದ ಮತ್ತೊಂದು ಮರಕ್ಕೆ ಜಿಪ್ ಲೈನ್ ಮೂಲಕ ಜಾರಿ ಸಾಗವುದು. ನಿಜಕ್ಕೂ ಒಂದು ರೀತಿಯ ರೋಮಾಚನ. ಥ್ರಿಲ್ ಅಂದರೆ ಇದೆ ಏನೋ ಅಲ್ಲವೇ?
ಅದಲ್ಲದೆ ಮರದ ಮೇಲೆ ಜಿಪ್ ಲೈನ್ ನಲ್ಲಿ ಸಾಗಲು ಭಯಪಡುವವರಿಗೆ ಕೆಳಗಡೆ ಭೂಮಿಯ ಮೇಲೆ, ಅಲ್ಲಿಯೇ ಜಾರಲು ಜಿಪ್ ಲೈನ್ ಜೊತೆಗೆ ಟೈರಿನ ಮೇಲೆ ನಿಂತು ನೇತಾಡುವುದು. ಅಲ್ಲಲ್ಲಿ ತೂಗಾಡುವ ತೊಟ್ಟಿಲುಗಳು. ಅದರ ಮೇಲೆ ನಡೆದಾಡುವುದು, ಏತಭಾರ, ಒಟ್ಟಾರೆ ಮನರಂಜನೆಯ ಮಹಾಪೂರ. ಈ ರೀತಿ ಎಲ್ಲವನ್ನೂ ಆಡಿದ ಮೇಲೆ ನಿಮಗೆಂದೇ ಸಿದ್ಧವಾಗಿರುವ ಎಳನೀರು. ಇಲೆಲ್ಲಾ ಮುಗಿಯುವ ಹೊತ್ತಿಗೆ ಊಟದ ಸಮಯವಾಯಿತು. ಬಿಸಿ ಬಿಸಿ ಚಪಾತಿ, ಅನ್ನ ಸಾರು, ಹಪ್ಪಳ, ಪಾಯಸದ ಊಟ.
ತೆಪ್ಪದಲ್ಲಿ ಕೊರಾಕ್ ರೇಡ್
ನಂತರ ಸ್ವಲ್ಪ ಹೊತ್ತು ವಿಶ್ರಮಿಸಿದ ಮೇಲೆ ಕೊರಾಕ್ ರೇಡ್ ಅಂದರೆ ಬೆತ್ತದ ಒಂದು ತೆಪ್ಪದಲ್ಲಿ ಮೇಲೆ ನದಿಯ ಮೇಲೆ ಸಾಗುವುದು. ಇದಂತೂ ಮನಕ್ಕೆ ಬಹಳ ಮುದ ನೀಡುತ್ತದೆ. ಸುತ್ತಲೂ ಹಸಿರು ಮರಗಳು, ಜುಳು ಜುಳು ಹರಿಯುವ ಕಾವೇರಿ ನದಿ. ಒಂದರ್ಧ ಗಂಟೆಯಾದರೂ ಇಳಿಯಲು ಮನಸ್ಸಾಗುವುದೇ ಇಲ್ಲ. ನಂತರ ತಾವೇ ಹುಟ್ಟುಹಾಕಿಕೊಂಡು ಸಾಗುವ ಕಿಯಾಕಿನ್. ಇಬ್ಬಿಬ್ಬರು ಕುಳಿತುಕೊಳ್ಳುವ ದೋಣಿ. ಅದರಲ್ಲಿ ನಾವೇ ಹುಟ್ಟುಹಾಕುತ್ತಾ ಸಾಗಬೇಕು. ರಕ್ಷಣೆಗೆಂದು ಲೈಫ್ ಜಾಕೆಟ್ ಗಳನ್ನು ನೀಡಿರುತ್ತಾರೆ. ಇವೆಲ್ಲಾ ಮುಗಿಯುವ ಹೊತ್ತಿಗೆ ಬಿಸಿ ಬಿಸಿ ಬೋಂಡಾ ಬಜ್ಜಿ ತಯಾರಾಗಿರುತ್ತದೆ. ಅದರ ಜೊತೆಗೆ ಟೀ, ಕಾಫಿ ಎಲ್ಲವೂ ಲಭ್ಯ. ನಿಮಗೆ ಬೇಕಾದುದನ್ನು ಕುಡಿಯಬಹುದು.
ಅಂದಿಗೆ ನಿಮ್ಮ ಒಂದು ದಿನದ ವಿಹಾರ ಮುಕ್ತಾಯವಾಗುತ್ತದೆ. ನಂತರ ನಿಮ್ಮ ಗೂಡಿಗೆ ಸಾಗುವುದಾಗುತ್ತದೆ. ಮರಳಿ ಮನೆಗೆ ಬರಲೇ ಬೇಕಲ್ಲವೇ? ಮತ್ತೆ ಮಾರನೆಯ ದಿನ ಕರ್ತವ್ಯದ ಕರೆಗೆ ಓಗೊಡಲೇ ಬೇಕು ಅಲ್ಲವೇ? ಅಂತೂ ದಿನ ನಿತ್ಯದ ಜಂಜಡದಿಂದ, ನಗರದ ಗದ್ದಲದಿಂದ ಒಂದು ದಿನದ ಮಟ್ಟಿಗಾದರೂ ದೂರದ ಪ್ರಕೃತಿಯ ಮಡಿಲಿನಲ್ಲಿ ಕುಳಿತು ಬಂದ ಧನ್ಯತೆ ನಿಮ್ಮದಾಗುತ್ತದೆ. ಕಾವೇರಿ ನದಿಯಲ್ಲಿ ನಲಿದಾಡಿದ ಸಂತಸವಂತೂ ಮನದಲ್ಲಿ ಉಳಿಯುತ್ತದೆ. ಭವ್ಯವಾದ ಕಾವೇರಿ ನದಿಯ ಚಲನೆಯ ಹಾದಿಯಲ್ಲಿ ಜಲಸಿರಿಯ ತೀವ್ರ ಗತಿ, ಜಲಪಾತಗಳು, ದಟ್ಟ ಅರಣ್ಯಗಳು, ಕಣಿವೆಗಳು, ಹಸಿರು ಜೊತೆಗೆ ನಿಮಗೆ ಕಂಪನಿ ಅಥವಾ ಕಿರುಕುಳ ಎಂದುಕೊಳ್ಳಿ. ಒಂದಷ್ಟು ಮಂಗಗಳು, ಜೊತೆಗೆ ಆನೆ, ಜಿಂಕೆ, ಮೊಸಳೆ, ಹಾವು, ಆಮೆ ಎಲ್ಲವೂ ನೋಡ ಸಿಗುತ್ತದೆ ಎನ್ನುತ್ತಾರೆ. ಆದರೆ ನಾವು ಹೋಗಿದ್ದು ಬೆಳಗಿನಿಂದ ಸಂಜೆಯವರೆಗೆ ಮಾತ್ರ. ಆದ್ದರಿಂದ ನೋಡಲು ಸಿಕ್ಕ ಪ್ರಾಣಿಗಳು ಕಡಿಮೆಯೇ. ಇಷ್ಟವಿದ್ದರೆ ಪ್ರಕೃತಿಯ ಮಡಿಲಲ್ಲಿ ಒಂದರೆಡು ದಿನಗಳನ್ನೂ ಕಳೆಯಬಹುದು.
ಇವೆಲ್ಲದರ ಜೊತೆಗೆ ಭೀಮೇಶ್ವರಿ ಪ್ರಕೃತಿ ಧಾಮ ಜಲದೇವತೆ ಕಾವೇರಿಯನ್ನು ಸ್ತುತಿಸುವ ವಿಜಯಗೀತೆಯಂತಿದೆ. ಮುದ ನೀಡುವ ನಿಸರ್ಗದ ಸೊಬಗಿನ ಜೊತೆಗೆ ಸಾಹಸದ ಕ್ರೀಡೆಗಳು ದಿನ ನಿತ್ಯದ ಒಂದೇ ರೀತಿಯ ಸಪ್ಪೆ ಜೀವನದಿಂದ ದೂರವಾಗಿ ನಿಮ್ಮಲ್ಲಿ ಚೈತನ್ಯವನ್ನು ತುಂಬಿಸುತ್ತದೆ.
– ಮಂಜುಳಾ ರಾಜ್