– ರಾಘವೇಂದ್ರ ಅಡಿಗ ಎಚ್ಚೆನ್.
ಸುಮಂತ್ ಭಟ್ ನಿರ್ದೇಶನದ, ಮಿಥ್ಯ ಸಿನಿಮಾವನ್ನು ರಕ್ಷಿತ್ ಶೆಟ್ಟಿ ತಮ್ಮ ಹೋಮ್ ಬ್ಯಾನರ್ ಪರಂವಹ ಸ್ಟುಡಿಯೋಸ್ ಅಡಿಯಲ್ಲಿ ನಿರ್ಮಿಸಿದ್ದಾರೆ. 2023ರ ಸಿನಿಮಾ ಇದಾಗಿದ್ದು 024ರ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ಅನೇಕ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಚಿತ್ರದಲ್ಲಿ ಬಾಲಕನ ದೃಷ್ಟಿಕೋನದಿಂದ ಕೌಟುಂಬಿಕ ಕಲಹ ಪ್ರಕರಣವನ್ನು ಪ್ರಸ್ತುತಪಡಿಸಲಾದ ರೀತಿಯು ಅದರ ಪ್ರಬುದ್ದ ಭಾವನಾತ್ಮಕ ಕಥೆಯ ಕಾರಣ ಪ್ರಶಂಸೆಗೆ ಪಾತ್ರವಾಗಿತ್ತು.
ಸಿನಿಮಾವು ತನ್ನ ಜೀವನದ ಅತ್ಯಂತ ನಿರ್ಣಾಯಕ ಹಂತದಲ್ಲಿ ಹೊಸ ಸ್ಥಳ, ಹೊಸ ಭಾಷೆ ಮತ್ತು ಹೊಸ ಕುಟುಂಬಕ್ಕೆ ಹೊಂದಿಕೊಳ್ಳುವ ಸಮಯದಲ್ಲಿ ತಂದೆ ತಾಯಿ ಇಬ್ಬರೂ ಇಲ್ಲದೆ ಹೊಸ ಕುಟುಂಬದೊಡನೆ ಹೊಂದಿಕೊಳ್ಳಬೇಕಾದ ಕಠಿಣ ಪರಿಸ್ಥಿತಿಯನ್ನು ಎದುರಿಸುವ ಹನ್ನೊಂದು ವರ್ಷದ ಬಾಲಕನ ಜೀವನವನ್ನು ತೆರೆ ಮೇಲೆ ತಂದಿದೆ.
ಚಲಿಸುವ ರೈಲಿನ ಬಾಗಿಲಲ್ಲಿ ನಿಂತಿರುವ ಹುಡುಗನೊಂದಿಗೆ ಕಥೆ ಪ್ರಾರಭವಾಗುತ್ತದೆ. ಚಿಕ್ಕ ಹುಡುಗಿಯನ್ನು ಹೊತ್ತ ಮಹಿಳೆ ಆ ಹುಡುಗನನ್ನು ಬಾಗಿಲಿನಿಂದ ಒಳಗೆ ಕರೆದೊಯ್ಯುತ್ತಾಳೆ. ಅಲ್ಲೇಕೆ ಒಬ್ಬನೇ ನಿಂತಿದ್ದೆ ಎಂದು ಕೇಳುವಾಗಲೂ ಆ ಹುಡುಗ ಏನೂ ಮಾತನಾಡುವುದಿಲ್ಲ.
ಮಿಥುನ್ (ಅಥಿಶ್ ಶೆಟ್ಟಿ) ಯನ್ನು ಎಲ್ಲರೂ ಪ್ರೀತಿಯಿಂದ ಮಿಥ್ಯ ಎಂದು ಕರೆಯುತ್ತಿರುತ್ತಾರೆ.
ಅವನ ಹೆತ್ತ ತಂದೆ ತಾಯಿ ಸಾವನ್ನಪ್ಪಿದ ನಂತರ ಮುಂಬೈನಿಂದ ಉಡುಪಿಗೆಅವನನ್ನು ಕರೆತರಲಾಗಿದೆ. ತನ್ನ ಗಂಡನ ಮರಣದ ನಂತರ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡು ಮಿಥ್ಯನ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಗ ಮಿಥ್ಯ ಹಾಗೂ ಅವನ ತಂಗಿ ವಂದನಾಳನ್ನು ಚಿಕ್ಕಮ್ಮ ಮತ್ತು ಆಕೆಯ ಕುಟುಂಬ ಸಾಕಲು ತೊಡಗುತ್ತದೆ. ಮಿಥ್ಯ ಹೊಸ ಪರಿಸರಕ್ಕೆ ಹೊಂದಿಕೊಳ್ಳುತ್ತಿದ್ದಂತೆ ಅವನ ಮನದಾಳದ ನೋವು ಹಾಗೂ ದುಃಖವನ್ನು ಸಹ ಚಿತ್ರ ಎಳೆ ಎಳೆಯಾಗಿ ಬಿಡಿಸುತ್ತಾ ಹೋಗುತ್ತದೆ.
ಪ್ರಮುಖ ಪಾತ್ರದಲ್ಲಿ ಬಾಲನಟನಿರುವ ಕಾರಣ ಚಿತ್ರದ ನಿರೂಪಣೆ ಸರಳವಾಗಿದೆ. , ಆಗಾಗ್ಗೆ ದುಃಖ ಮತ್ತು ಭಾವನಾತ್ಮಕ ಸನ್ನಿವೇಶ ಚಿತ್ರದ ಪ್ರಮುಖ ಅಂಶವಾಗಿದೆ. ಮಿಥ್ಯ ಪಾತ್ರದ ಮನದಾಲದ ದುಃಖವನ್ನೇ ಹೆಚ್ಚು ಪ್ರತಿಫಲಿಸುವಂತೆ ಕಥೆ ಹೆಣೆಯಲಾಗಿದೆ. ಸವಾಲುಗಳನ್ನು ಎದುರಿಸುವ ಹನ್ನೊಂದು ವರ್ಷದ ಮಗುವಿನ ಮನಸ್ಥಿತಿಯ ಮೂಲಕ ಅದನ್ನು ಅನ್ವೇಷಿಸುತ್ತದೆ.
ಸುಮಂತ್ ಭಟ್ ಅವರ ಕಥೆ ಮತ್ತು 11 ವರ್ಷದ ಬಾಲಕನ ಕಠಿಣ ಮಾನಸಿಕ ಯಾತನೆಯನ್ನು ಚಿತ್ರಿಸುವ “ಮಿಥ್ಯ” ನಾವು ನೀವೆಲ್ಲಾ ನೋಡಬೇಕಾದ ಸಿನಿಮಾ. ಮಕ್ಕಳ ಅಭಿನಯವನ್ನೊಳಗೊಂಡ ಈ ಚಿತ್ರವು ಕೇವಲ ಮಕ್ಕಳ ಚಲನಚಿತ್ರವಲ್ಲ, ಇದು ಪ್ರೇಕ್ಷಕರ ಹೃದಯವನ್ನು ತಟ್ಟುತ್ತದೆ ಮತ್ತು ಅನೇಕ ಪ್ರಶ್ನೆಗಳನ್ನು ಉ:ಳಿಸಿ ಹೋಗುತ್ತದೆ.