ಮದುವೆಯ ದಿನ ಎಂಬುದು ಹೆಣ್ಣಿನ ಬಾಳಲ್ಲಿ ಅತಿ ಪ್ರಮುಖ ದಿನ. ಆ ದಿನ ಅವಳು ಎಂದಿಗಿಂತ ಹೆಚ್ಚು ಬ್ಯೂಟಿಫುಲ್ ಆಗಿ ಕಂಗೊಳಿಸ ಬಯಸುತ್ತಾಳೆ. ನವ ವಧುವಿನ ಶೃಂಗಾರದಲ್ಲಿ ಹೇರ್ ಸ್ಟೈಲ್ ಪ್ರಧಾನಪಾತ್ರ ವಹಿಸುತ್ತದೆ. ನೀವು ಈ ಚಳಿಗಾಲದಲ್ಲಿ ಮದುವೆ ಮುಹೂರ್ತ ಹೊಂದಿದ್ದು, ನಿಮ್ಮ ತಲೆಗೂದಲು ಅಧಿಕ ಸಿಕ್ಕಾಗಿದ್ದು, ಒರಟುಶುಷ್ಕವಾಗಿದ್ದರೆ, ಹೆಚ್ಚು ಹೊಳಪಿಲ್ಲದೆ, ಒತ್ತಾಗಿಲ್ಲದಿದ್ದರೆ ಈ ಕೆಳಗಿನ ಸಲಹೆಗಳನ್ನು ಖಂಡಿತಾ ಅನುಸರಿಸಿ :
ಮದುವೆಗೆ ಕೆಲವು ದಿನ ಬಾಕಿ ಇದೆ ಎನ್ನುವಾಗ ಎಲ್ಲಾ ನವ ವಧುಗಳೂ ನರ್ಸ್ ಆಗುತ್ತಾರೆ. ಟೆನ್ಶನ್, ಸ್ಟ್ರೆಸ್ ಹೆಚ್ಚುವುದರಿಂದ ಹೇರ್ ಫಾಲ್ ಸಮಸ್ಯೆ ಹೆಚ್ಚುತ್ತದೆ. ಹೀಗಾಗಿ ಸ್ಟ್ರೆಸ್ ತಗ್ಗಿಸಲು ಯೋಗ, ಧ್ಯಾನ, ಮಾರ್ನಿಂಗ್ ವಾಕ್, ವ್ಯಾಯಾಮ ಮಾಡಿ.
ಶಾಪಿಂಗ್ ಗಾಗಿ ಹೊರಗಿನ ಓಡಾಟ ಅನಿವಾರ್ಯ. ಹೊರಗಿನ ಧೂಳು, ಪರಿಸರ ಮಾಲಿನ್ಯಗಳಿಂದ, ಕೂದಲು ದುರ್ಬಲ, ಡ್ಯಾಮೇಜ್ ಆಗುತ್ತದೆ. ಜೊತೆಗೆ ಹೆಚ್ಚು ಹೊತ್ತು ಬಿಸಿಲಿನ ತಿರುಗಾಟದಿಂದಲೂ, ಕೂದಲಿನ ಆರ್ದ್ರತೆ ಹಾಳಾಗುತ್ತದೆ. ಇದರಿಂದ ಹೇರ್ ಫಾಲ್, ಸೀಳುತುದಿ ಸಮಸ್ಯೆ ತಪ್ಪದು. ಹೀಗಾಗಿ ಬಿಸಿಲಿನ ತಿರುಗಾಟ ತಪ್ಪಿಸಿ 30, 40 SPFಯುಕ್ತ ಸನ್ ಸ್ಕ್ರೀನ್ ಹಚ್ಚಿಕೊಂಡು, ತಲೆಗೆ ಸ್ಕಾರ್ಫ್ ಕಟ್ಟಿ ಓಡಾಡಿ.
ಮದುವೆಯ ಹಿಂದಿನ ದಿನದಿಂದಲೇ ಬಗೆಬಗೆಯ ಶಾಸ್ತ್ರಗಳಿಗಾಗಿ ವಧು ಹೊಸ ಹೊಸ ಹೇರ್ ಸ್ಟ್ಸೈಲ್ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಆದಷ್ಟೂ ಹೇರ್ ಡ್ರೈಯರ್, ಹಾಟ್ ರೋಲರ್ಸ್, ಫ್ಲಾಟ್ ಐರನ್, ಕರ್ಲಿಂಗ್ ಟ್ಯಾಂಗಲ್ಸ್ ಬಳಸಲೇಬೇಡಿ. ಮತ್ತೆ ಮತ್ತೆ ಹೇರ್ ಕಲರಿಂಗ್ ಮಾಡಿಸಲೇಬಾರದು. ಇದರ ಕೆಮಿಕಲ್ಸ್ ಕೂದಲನ್ನು ಹಾಳು ಮಾಡುತ್ತದೆ. ಹೇರ್ ಸ್ಟೈಲಿಂಗ್ ಟೂಲ್ಸ್ ಬಳಸಲೇಬೇಕಾದಲ್ಲಿ ಮೊದಲು ಆರ್ಗನ್ ಆಯಿಲ್ ಹಚ್ಚಿಕೊಳ್ಳಲು ಮರೆಯದಿರಿ. ಆದಷ್ಟೂ ಹರ್ಬಲ್ ಪ್ರಾಡಕ್ಟ್ಸ್ ಗೆ ಮಾತ್ರ ಮಹತ್ವ ಕೊಡಿ.
ನಿಮ್ಮ ದೇಹವನ್ನು ಸದಾ ಹೈಡ್ರೇಟೆಡ್ ಆಗಿರಿಸಿ, ಅಂದ್ರೆ ಧಾರಾಳ ನೀರು, ಪೌಷ್ಟಿಕ ದ್ರವ ಸೇವಿಸಬೇಕು. ಇದರಿಂದ ಕೂದಲು ಹೆಲ್ದಿ ಆಗಿರುತ್ತದೆ.
ಕೂದಲಿನ ಆರ್ದ್ರತೆ ಉಳಿಸಿಕೊಳ್ಳಲು ಡೀಪ್ ಕಂಡೀಶನಿಂಗ್ ಚಿಕಿತ್ಸೆ, ಕೂದಲು ಉದುರುವಿಕೆಗೆ ಆ್ಯಂಟಿಬ್ರೋಕರೇಜ್ ಚಿಕಿತ್ಸೆ ಪಡೆಯುತ್ತಿರಿ.
ಕೂದಲು ಆರೋಗ್ಯವಾಗಿರಲು ಸದಾ ಪೌಷ್ಟಿಕ ಆಹಾರ ಸೇವಿಸಬೇಕು. ಇದಕ್ಕಾಗಿ ವಿಟಮಿನ್‌ಸಿ, ಒಮೇಗಾ 3 ಫ್ಯಾಟಿ ಆ್ಯಸಿಡ್ಸ್, ಝಿಂಕ್ ಇತ್ಯಾದಿ ಅಂಶಗಳುಳ್ಳ ಆಹಾರ ಧಾರಾಳ ಸೇವಿಸಿ. ಝಿಂಕ್ ನಿಂದ ಅಗತ್ಯಕ್ಕೆ ಮೊದಲೇ ಬಿಳಿ ಕೂದಲು ಕಾಡುವುದಿಲ್ಲ, ಹೇರ್ ಫಾಲ್ ಆಗೋಲ್ಲ. ಟಾಕ್ಸಿನ್ಸ್ ಹೊರತೆಗೆಯಲು ಹೆಚ್ಚು ನೀರು ಸೇವಿಸಿ. ಇದರಿಂದ ಕೂದಲು ಮತ್ತು ಸ್ಕಾಲ್ಪ್ ಸದಾ ಹೈಡ್ರೇಟೆಡ್ ಆಗಿರುತ್ತದೆ. ಆಯಾ ಋತುಮಾನದ ಹಣ್ಣುಗಳನ್ನು ಸೇವಿಸುತ್ತಿರಿ, ಅದರ ವಿಟಮಿನ್ಸ್, ಮಿನರಲ್ಸ್ ಕೂದಲಿಗೆ ಲಾಭಕಾರಿ.
ಡ್ರೈಯರ್ ಇತ್ಯಾದಿ ಬಳಸಬಾರದು, ಬದಲಿಗೆ ಕೂದಲನ್ನು ಸಹಜವಾಗಿ ಒಣಗಿಸಿ. ಟವೆಲ್ ನಿಂದ ಚೆನ್ನಾಗಿ ಒರೆಸಿ, 15 ನಿಮಿಷ ಬಿಸಿಲಲ್ಲಿ ನಿಲ್ಲುವುದೇ ಉತ್ತಮ ಉಪಾಯ. ಆರ್ಗನ್ ಆಯಿಲ್ ಬಳಸಿ, ಅದು ಉತ್ತಮ ಹೇರ್ ಸೀರಂ ಆಗಿ ಕೆಲಸ ಮಾಡುತ್ತದೆ. ಅನಿವಾರ್ಯ ಆದರೆ ನಂತರ ಟೂಲ್ಸ್ ಬಳಸಿಕೊಳ್ಳಿ.
ತಲೆ ಬಾಚುವಾಗೆಲ್ಲ ಅಗತ್ಯ ಕೊಬ್ಬರಿ ಎಣ್ಣೆ ಅಥವಾ ಉತ್ತಮ ಗುಣಮಟ್ಟದ ಹೇರ್ ಆಯಿಲ್ ಬಳಸುತ್ತಿರಿ. ಕೂದಲಿನ ಉತ್ತಮ ಬೆಳವಣಿಗೆಗಾಗಿ ನಿಯಮಿತವಾಗಿ ತಲೆಗೆ ಎಣ್ಣೆ ಹಚ್ಚುತ್ತಿರಿ. ಇದರಿಂದ ತಲೆಯಲ್ಲಿ ರಕ್ತ ಸಂಚಾರ ಸುಗಮವಾಗುತ್ತದೆ. ಕೂದಲು ಫಳಫಳ ಹೊಳೆಯುತ್ತದೆ.
ಒದ್ದೆ ಕೂದಲನ್ನು ಬಾಚಬೇಡಿ. ಹೀಗೆ ಮಾಡುವುದರಿಂದ ಕೂದಲು ತುಂಡರಿಸುತ್ತದೆ.
ಕೂದಲಿನ ಆರೋಗ್ಯ ಸರಿಯಾಗಿರಲು ಹೇರ್ ಪ್ಯಾಕ್ಸ್ ಬಳಸಿಕೊಳ್ಳಿ. ಇದಕ್ಕಾಗಿ ಕೂದಲಿಗೆ ಮೆಹೆಂದಿ ಹಾಕಿಸಿ ಅಥವಾ ಮೊಟ್ಟೆ ಮೊಸರಿನ ಮಿಶ್ರಣದ ಪ್ಯಾಕ್ ಹಚ್ಚಿಕೊಳ್ಳಿ. ಇದರಿಂದ ಡ್ಯಾಂಡ್ರಫ್ ತೊಲಗುತ್ತದೆ, ಕೂದಲು ತುಂಡರಿಸುವುದಿಲ್ಲ.
ಮದುವೆಗೆ 1 ತಿಂಗಳ ಹಿಂದೆಯೇ ಮೆಹೆಂದಿ ಹಾಕಿಸುವುದು ಒಳ್ಳೆಯದು.
ಪೌಷ್ಟಿಕ ಊಟ ತಿಂಡಿಯ ಕಡೆ ನಿಮ್ಮ ಗಮನ ಇರಲಿ.
ಚಳಿಗಾಲದಲ್ಲಿ ಡ್ಯಾಂಡ್ರಫ್ ಕಾಟ ಹೆಚ್ಚು. ಇದಕ್ಕಾಗಿ ಆ್ಯಂಟಿ ಡ್ಯಾಂಡ್ರಫ್ ಶ್ಯಾಂಪೂ ಬಳಸಿಕೊಳ್ಳಿ ಅಥವಾ ನಿಂಬೆರಸ ತಿಕ್ಕಿ ಡ್ಯಾಂಡ್ರಫ್ ಓಡಿಸಿ.
ಮದುವೆಗೆ ಮೊದಲು ನಿಮಗೆ ಒಗ್ಗದ ಅನಗತ್ಯ ಹೇರ್ ಸ್ಟೈಲ್ ಗೆ ಪ್ರಯತ್ನಿಸಬೇಡಿ. ವಾರದಲ್ಲಿ ಕನಿಷ್ಠ 3 ಸಲ ಹರ್ಬಲ್ ಶಾಂಪೂ ಬಳಸಿ ತಲೆಗೆ ಸ್ನಾನ ಮಾಡಿ. ಶ್ಯಾಂಪೂ ನಂತರ ಕಂಡೀಶನರ್ ಬಳಸಿ.
ಒದ್ದೆ ಕೂದಲನ್ನು ಗಂಟು ಹಾಕಬೇಡಿ ಅಥವಾ ಸಿಕ್ಕು ಬಿಡಿಸಬೇಡಿ. ಹೇರ್ ಮಸಾಜ್ ಮಾಡಿಸಿ.
ಕೂದಲಿಗೆ ಎಣ್ಣೆ ಹಚ್ಚುವಾಗ ಆ್ಯಲೋವೇರಾ ಜೆಲ್ ಬಳಸಿರಿ. ಇದರಿಂದ ನೆತ್ತಿಗೆ ಒತ್ತಿ ಮಸಾಜ್ ಮಾಡಿ. ಇದು ತಲೆಯನ್ನು ಹೆಚ್ಚು ಹೈಡ್ರೇಟ್ ಮಾಡುತ್ತದೆ. 30 ನಿಮಿಷ ಹಾಗೇ ಬಿಡಿ. ನಂತರ ಮೈಲ್ಡ್ ಶ್ಯಾಂಪೂ ಬಳಸಿ ಸ್ನಾನ ಮಾಡಿ.
ಕೂದಲನ್ನು ತೊಳೆಯಲು ಎಂದೂ ಕುದಿ ನೀರನ್ನು ಬಳಸಬೇಡಿ. ಇದರಿಂದ ಕೂದಲಿಗೆ ಹಾನಿ ತಪ್ಪಿದ್ದಲ್ಲ.
– ಜಿ. ಪಂಕಜಾ