ಬಿಳಿಯ ಸಮುದ್ರವನ್ನೇ ನೋಡುತ್ತಿದ್ದ ಕಂಗಳಿಗೆ ಹಿತ ಮುದ ನೀಡಿತು, ಈ ನೀಲಿ ಸಮುದ್ರ. ದಡಕ್ಕಪ್ಪಳಿಸು ನೀಲ ವರ್ಣದ ದೊಡ್ಡ ದೊಡ್ಡ ಅಲೆಗಳು. ಸ್ವಚ್ಛ ಸುಂದರ ಮನಮೋಹಕ ಕಡಲ ತೊರೆಗಳು. ಅಪ್ಪಳಿಸಿ ಬರುವ ಆ ಅಲೆಗಳಲ್ಲಿ ಹಲವಾರು ಖುಷಿಯ ಸಂಗತಿಗಳು, ರಸಿಕ ಮನದ ಭಾಗಗಳು, ಹೆಣ್ಣಿನ ಮನದ ತಲ್ಲಣಗಳು! ಸುಂದರ ಹಳೆಯ ಪ್ರೇಮದ ನೆನಪುಗಳನ್ನು ಮೆಲುಕು ಹಾಕುತ್ತಿದ್ದ ಅಜ್ಜ ಅಜ್ಜಿಯರು, ಜೊತೆ ಜೊತೆಗ ಎಂಥವರನ್ನೂ ರೊಚ್ಚಿಗೆಬ್ಬಿಸೋ ನೀರಾಟಗಳು! ಸ್ವಾತಂತ್ರ್ಯ ಯೋಧರ ಸಾಹಸಗಾಥೆಗಳು, ಅವವರ ನರಳಾಟದ ಕೂಗುಗಳ ಯಶೋಗಾಥೆಗಳು! ಎಲ್ಲಿ ಎಂದಿರಾ? ಹೌದು ಇದುವೇ ಅಂಡಮಾನ್!
ಮಗಳ ಪರೀಕ್ಷೆ ಮುಗಿಯಿತು. ಓದಿ ದಣಿದ ಅವಳಿಗೆ ಸ್ವಲ್ಪ ರಿಲ್ಯಾಕ್ಸ್ ಕೊಡೋಣವೆಂದು ಈ ಟೂರ್ ಗೆ ಹೊರಟೆವು. ಮಗ ಎಲ್ಲವನ್ನೂ ಅಚ್ಚುಕಟ್ಟಾಗಿ ಪ್ಲಾನ್ ಮಾಡಿದ್ದ. ಪ್ಯಾಕೇಜ್ ಟೂರೇ! ಬೆಂಗಳೂರಿನಿಂದ ಆಕಾಶ ಮಾರ್ಗವಾಗಿ ಸಾಗಿ ಪೋರ್ಟ್ ಬ್ಲೇರ್ ನಲ್ಲಿ ಇಳಿದೆವು. ಬಹಳ ಪುಟ್ಟ ದ್ವೀಪವದು! ವಿಮಾನ ನಿಲ್ದಾಣದ ಪಕ್ಕದಲ್ಲೇ ಇದ್ದ ಒಳ್ಳೆಯ ಹೋಟೆಲ್ ಗೆ ಕರೆದೊಯ್ದರು. ಒಳ ಅಡಿಯಿಡುತ್ತಿದ್ದಂತೆ ಸ್ವಾಗತ ಪೇಯ ಹಿತವಾಗಿತ್ತು.
ಊಟ ಮಾಡಿ ವಿಶ್ರಾಂತಿ! ಸಂಜೆ 4ಕ್ಕೆ ಸೆಲ್ಯುಲರ್ ಜೈಲ್ ವೀಕ್ಷಣೆ. ನನ್ನ ದೊಡ್ಡಪ್ಪ ಹೇಳ್ತಿದ್ರು, ಪುಣ್ಯ ಕ್ಷೇತ್ರಗಳಿಗೆ ಹೋದಾಗ ನಾವು ಎಷ್ಟು ದಕ್ಷಿಣೆ ಹಾಕ್ತೀವೋ ಅಷ್ಟೂ ಒಳ್ಳೆಯದು, ನಮ್ಮ ಪಾಪ ಕರ್ಮಗಳು ಕಳೆಯುತ್ತದೆಂದು. ಇದೂ ಒಂದು ಪುಣ್ಯ ಕ್ಷೇತ್ರವೇ ಎನಿಸಿತು.
ಕಾಲಾಪಾನಿ ಸೆಲ್ಯುಲರ್ ಜೈಲ್
ಅಲ್ಪಸ್ವಲ್ಪ ತಿಳಿದಿದ್ದರೂ ಕೂಡಾ ಯಾತ್ರಿಕರನ್ನೇ ನಂಬಿಕೊಂಡಿರುವ ಜೀವನ, ಗೈಡ್ ಗಳದ್ದು. ಹಾಗಾಗಿ ಗೈಡ್ ಒಬ್ಬರನ್ನು ಬುಕ್ ಮಾಡಿಕೊಂಡೆವು. ದಕ್ಷಿಣೆಯೆಂದು ಅವರಿಗೆ ಕಾಣಿಕೆ ನೀಡಿದೆ. ಕಾಲಾಪಾನಿಯ ಬಗ್ಗೆ ಗೂಗಲ್ ನಲ್ಲಿ ನಾವನೇ ನೋಡಿದ್ದರೂ ಸಹ, ಅಲ್ಲಿ ಎದುರಿಗೆ ನಿಂತು ನೋಡೋದು, ಅದನ್ನು ಅವರು ವಿವರಿಸುವ ಪರಿ, ನೋವುಂಟು ಮಾಡುತ್ತವೆ ಕಣ್ರೀ! ಅವರ ಮಾರ್ಗದರ್ಶನದಲ್ಲಿ ಸೆಲ್ಯುಲರ್ ಜೈಲ್ ನೋಡಲು ಹೊರಟೆವು. ಮಕ್ಕಳಾದಿಯಾಗಿ ಎಲ್ಲರೂ ತಿಳಿಯಲೇಬೇಕಾದ ಸಂಗೀತಗಳು ಹಲವಾರು. ಶಾಲಾ ದಿನಗಳಲ್ಲಿ ಓದಿದ ನೆನಪು. ದೇಶ ದೇಶಪ್ರೇಮ ದೇಶಪ್ರೇಮಿ, ಇದೇ ವಿಷಯಗಳೇ ತುಂಬಿದ್ದವು. ಆತ ಹೇಳುತ್ತಿದ್ದ ಮಾತುಗಳನ್ನು ಮನಸಾರೆ ಆಲಿಸುತ್ತಿದ್ದೆವು. ಮಗಳು ಅದರಲ್ಲಿ ತನ್ಮಯಳಾಗಿದ್ದಳು. ಮಗ ಫೋಟೋಗಳನ್ನು ತೆಗೆದುಕೊಳ್ಳುವುದರಲ್ಲಿ ತಲ್ಲೀನನಾಗಿದ್ದ. ಕಟ್ಟಡದ ವಿನ್ಯಾಸವೇ ಒಂದು ವಿಸ್ಮಯ. ಒಂದು ಭಾಗದಲ್ಲಿರುವ ದೇಶಪ್ರೇಮಿಗಳಿಗೆ ಮಗದೊಂದು ಭಾಗದವರು ಕಾಣಬಾರದು ಮತ್ತು ಅವರೊಟ್ಟಿಗೆ ಯಾವುದೇ ರೀತಿಯ ಸಂವಹನ ನಡೆಸಬಾರದೆಂಬ ಉದ್ದೇಶದಿಂದ ಮುಂಭಾಗಕ್ಕೆ ಹಿಂಭಾಗ ಎದುರಾಗುವಂತೆ ಕಟ್ಟಿದ್ದು ವಿಶೇಷವಾಗಿತ್ತು. 7 ಭಾಗಗಳಾಗಿ ಕಟ್ಟಿದ್ದ ಈ ಜೈಲಿನ ವಿನ್ಯಾಸ ಮನಸೆಳೆಯಿತು. ಈಗ ಅದನ್ನು ನವೀಕರಣಗೊಳಿಸುತ್ತಿದ್ದಾರೆ. ಅಲ್ಲಲ್ಲಿ ಕಟ್ಟಡ ಕಾರ್ಯಗಳು ನಡೆಯುತ್ತಿವೆ. ಇನ್ನು ಜೈಲು ವಾಸಿ ಆದರೆಂದರೆ ಆಯ್ತು ಅಲ್ಲಿಗೆ ಅವರ ಜೀವನ ಮುಕ್ತಾಯ ಎಂಬ ನಿರ್ಧಾರಕ್ಕೆ ಬರುತ್ತಿದ್ದರು. ಅದು ಸತ್ಯ ಹೌದು! ಕಠಿಣ ಶಿಕ್ಷೆಗಳ ಆಗರ ಈ ಜೈಲು! ಒಂದೊಂದು ಕೊಠಡಿಯೊಳಗೆ ಒಬ್ಬೊಬ್ಬರೇ ಇರುವ ವ್ಯವಸ್ಥೆ. ಒಂದು ತಟ್ಟೆ, ಲೋಟ ಹಾಗೂ ಒಂದು ಮಡಕೆ. ಮಡಕೆ ಏಕೆಂದರೆ ರಾತ್ರಿ ಏನಾದರೂ ಮಲಮೂತ್ರ ಮಾಡಬೇಕಾದಲ್ಲಿ ಅದರಲ್ಲಿ ಮಾಡಿ ಕೊಠಡಿಯೊಳಗೇ ಇಟ್ಟುಕೊಳ್ಳಬೇಕಾದಂತಹ ಸ್ಥಿತಿ, ಶೋಚನೀಯ. ವೀರ ಸಾವರ್ಕರ್ ಎಲ್ಲ ಭಾರತೀಯ ಯೋಧರಿಗಾಗಿ ಹೋರಾಡಿದ ಧೀಮಂತ ನಾಯಕನಾಗಿ ನಮ್ಮ ಕಣ್ಣೆದುರಿಗೆ ಬಂದು ನಿಲ್ಲುತ್ತಾರೆ. ಒಟ್ಟಿನಲ್ಲಿ ಭೂಮಿ ಮೇಲಿನ ನರಕ ಸೆಲ್ಯುಲರ್ ಜೈಲ್.
ಲೈಟ್ಸೌಂಡ್ ಶೋ
ಲೈಟ್ಸೌಂಡ್ ಶೋ ಬಹಳ ಅರ್ಥಗರ್ಭಿತವಾಗಿತ್ತು. ಜೈಲಿನ ಸಮಗ್ರ ಚಿತ್ರಣವನ್ನೂ ಕಣ್ಣಿಗೆ ಕಟ್ಟುವಂತೆ ಹೇಳಿತು. ಅಲ್ಲೊಂದು ಬೃಹತ್ತಾದ ಮರ! ಅಲ್ಲಿದ್ದ ಎಲ್ಲರ ಕಥೆ ವ್ಯಥೆಗಳನ್ನು ಕೇಳಿದ್ದ ಮರ! ಅದರಡಿಯಲ್ಲಿ ಕುಳಿತು ಆ ಶೋ ನೋಡುವುದೇ ಒಂದು ರೋಮಾಂಚನಕಾರಿ! ಯೋಧರನ್ನು ಕಟ್ಟಿಹಾಕಿ ಅವರ ಹಿಂಭಾಗಕ್ಕೆ ಛಡಿ ಏಟು ನೀಡುತ್ತಿದ್ದ ಬೊಂಬೆಯೊಂದನ್ನು ಅಲ್ಲಿಟ್ಟಿದ್ದಾರೆ. ಕರುಳೇ ಕಿತ್ತು ಬರುತ್ತದೆ. ಗಾಣಕ್ಕೆ ಯೋಧರನ್ನು ಬಳಸುವ ಪದ್ಧತಿಯನ್ನು ಕಂಡು ದುಃಖ ಉಮ್ಮಳಿಸಿತು. ಇಂತಹ ಹಲವಾರು ಚಿತ್ರಣಗಳು ನಮ್ಮ ಕಣ್ಣುಗಳಲ್ಲಿ ನಿಂತುಬಿಟ್ಟವು. ನಂತರ ಮ್ಯೂಸಿಯಂ ಕೂಡಾ ಅಲ್ಲಿದೆ. ನಂತರ ಬೆಳಕು ಮತ್ತು ದನಿಯ ಶೋ ಸಮಯ. ದಿನಕ್ಕೆ 4 ಶೋಗಳು, 2 ಇಂಗ್ಲಿಷ್, 2 ಹಿಂದಿ. ಮೊದಲೇ ಬುಕ್ ಮಾಡಬೇಕು!
ಸ್ವಾತಂತ್ರ್ಯ ಯೋಧರ ನೆನಪು
ಈ ಶೋ ಮುಗಿದ ಮೇಲೆ ಕಿವಿಯಲ್ಲಿ ಸ್ವಾತಂತ್ರ್ಯ ಯೋಧರ ದನಿ ಮಾರ್ದನಿಸುತ್ತಲೇ ಇತ್ತು. ಅವನ ಚೀತ್ಕಾರ, ವ್ಯಥೆ ತುಂಬಿದ ನೋವಿನ ದನಿ. ತನ್ನವರನ್ನು ಕೊನೆಗಳಿಗೆಯಲ್ಲಿ ಕಾಣುವ ಹಂಬಲದ, ದೀನತೆಯ ದನಿ. ಅಬ್ಬಾ! ಹೇಗೆ ಹೇಳುವುದೋ ನಮ್ಮ ಯೋಧರ ವ್ಯಥೆಯ ಕಥೆಗಳನ್ನು. ತೀರಾ ಹೋರಾಟ ಮಾಡುವವರನ್ನು ಸಮುದ್ರದ ಮಧ್ಯದಲ್ಲಿ ಎಸೆದು ಬರುತ್ತಿದ್ದರಂತೆ. ಎಂಥ ಕ್ರೂರ ಮನಸ್ಥಿತಿ ಬ್ರಿಟಿಷರದ್ದು. ಧಿಕ್ಕಾರವಿರಲಿ ಅವರಿಗೆ! ಅಲ್ಲಿ ಕಳೆದ ಸಮಯ, ಕೇಳಿದ ಕಥೆಗಳನ್ನು ಮನಸ್ಸಲ್ಲಿ ಹೊತ್ತು ಭಾರದ ಹೆಜ್ಜೆಗಳೊಂದಿಗೆ ಹೊರಬಂದೆವು. ರಾತ್ರಿಯಿಡೀ ಕಾಡಿದ ಯೋಧರ ಚೀತ್ಕಾರಗಳು ನೋವಿನ ಸಂಕಟದ ದನಿಗಳು ಮನದಲ್ಲಿ ಗುಂಗಿಡುತ್ತಲೇ ಇತ್ತು. ಎಲ್ಲೇ ಸುತ್ತಾಡಬೇಕೆಂದರೂ ಕೂಡಾ ನಾನಿ ಈ ಸೆಲ್ಯುಲರ್ ಜೈಲ್ ಮುಖಾಂತರವೇ ಹೋಗಬೇಕಿತ್ತು. ಅಲ್ಲಿದ್ದಷ್ಟು ದಿನ ಅದರ ದರ್ಶನವಾಗುತ್ತಲೇ ಇತ್ತು.
ಪೋರ್ಟ್ ಬ್ಲೇರ್
ಪೋರ್ಟ್ ಬ್ಲೇರ್ ಹಲವಾರು ಕಾರಣಗಳಿಗೆ ಪ್ರಮುಖವಾಗಿದೆ. ಇದು ಭಾರತದ ಟ್ರೈ ಸರ್ವೀಸ್ ಕಮಾಂಡ್ ನ ಕೇಂದ್ರ ಕಾರ್ಯಾಲಯ ಆಗಿದೆ. ಇಲ್ಲಿ ಭಾರತೀಯ ವಾಯುಪಡೆ ನೌಕಾಪಡೆ ಹಾಗೂ ಭೂಸೈನ್ಯದ ಸೇನೆಗಳಿವೆ. ಇಲ್ಲಿಂದ ನಮ್ಮ ಕ್ರೂಝ್ ಯಾನ ಆರಂಭವಾಯಿತು. ಅದ್ಭುತ ಅನುಭವದ ಯಾನ, ನೀಲಿ ನೀರ ಮೇಲೆ ಓಡುವ ಹಡುಗಿನ ಪಯಣವೇ ಒಂದು ಥ್ರಿಲ್ಲಿಂಗ್. ಪೋರ್ಟ್ ಬ್ಲೇರ್ ನಿಂದ ಹ್ಯಾವ್ ಲಾಕ್ ಕಡೆಗೆ ನಮ್ಮ ಪಯಣ. ನೀಲ ಕಡಲ ಮೇಲೆ ಸುಮಾರು ಒಂದು ಗಂಟೆಯ ಪಯಣ, ಕ್ರೂಝ್ ನಲ್ಲೇ ತಿಂಡಿ ಕಾಫಿಗಳು ದೊರೆಯುತ್ತವೆ. ರೋಮಾಂಚನಕಾರಿ ಅನುಭವದ ಕಣ್ಣಿಗೆ ಹಬ್ಬೀ ಹಬ್ಬ!
ಟೈಮ್ಸ್ ನಿಯತಕಾಲಿಕೆಯು 2004ರಲ್ಲಿ ಇದಕ್ಕೆ ಏಷ್ಯಾದ ಅತ್ಯಂತ ಸುಂದರ ಕಡಲತೀರವೆಂದೂ ಜಗತ್ತಿನ ಏಳನೇ ಅದ್ಭುತ ಕಡಲತೀರವೆಂಬ ಪಟ್ಟವನ್ನು ಕೊಟ್ಟಿದೆ. ಅಲ್ಲದೇ, ಪರಿಸರ ಸ್ನೇಹಿ ರಾಜಾ ತಾಣ ಎಂಬ ಬಿರುದಿಗೂ ಪಾತ್ರವಾಗಿದೆ. ಸ್ಕೂಬಾ ಡೈವಿಂಗ್ ಇಲ್ಲಿನ ಪ್ರಮುಖ ಆಕರ್ಷಣೆಯ ಜಲಕ್ರೀಡೆ, ಯುವಕ ಯುವತಿಯರಾದಿಯಾಗಿ ಮುದುಕರವರೆಗೂ ಹುಚ್ಚೆದ್ದು ಆಡುತ್ತಾರೆ. ರೋಮಾಂಚಕಾರಿ ಅನುಭನ್ನು ನೀಡುತ್ತದೆ. ಸಮುದ್ರದೊಳಗೆ ಮಾರ್ಗದರ್ಶಕರ ನೇತೃತ್ವದಲ್ಲಿ, ಜಲಚರಗಳನ್ನು ನಗ್ನನೇತ್ರದಿಂದ ನೋಡುವ ಅವಕಾಶ ದೊರೆಯಿತು. ಅದ್ಭುತ ಅನುಭವ ನೀಡಿತು. ಸ್ವಚ್ಚಂಧವಾಗಿ ವಿಹರಿಸುವ ಪ್ಯಾರೆಟ್ ಮೀನುಗಳು, ಫೆದರ್ಸ್ಟಾರ್ ಎಂಬ ನಕ್ಷತ್ರ ಮೀನು, ಪೈನಾಪಲ್ ಸೀ ಕುಕುಂಬರ್ ಎಂಬ ವಿಶಿಷ್ಟ ಜಲಚರ, ಬಟರ್ ಫ್ಲೈ ಹೆಸರಿನ ಸುಂದರ ಮೀನುಗಳನ್ನು ಕಂಡ ಕಣ್ಣುಗಳು ಸಂತಸಗೊಂಡೆವು! ಜೊತೆಯಲ್ಲಿ ನಾವು ನಾಲ್ವರೂ ಕೈ ಕೈ ಹಿಡಿದು ಸಮುದ್ರದೊಳಗೆ ಹಾಗೆ ಮೀನಿನಂತೆ ಸಾಗಿದ್ದು ಅವುಗಳಿಗೇ ಪೈಪೋಟಿ ಎಂಬಂತೆ ಭಾಸವಾಯಿತು ನಮಗೆ!
ಅದ್ಭುತ ಪ್ರವಾಸದ ಆನಂದ
ಒಟ್ಟಿನಲ್ಲಿ ಅಂಡಮಾನ್ ಪ್ರವಾಸ ಒಂದು ಅದ್ಭುತ ಅನುಭವ ನೀಡಿತು. ಬೆಂಗಳೂರಿನ ಜಂಜಾಟದ ಯಾಂತ್ರಿಕ ಬದುಕಿಗೊಂದು ಬ್ರೇಕ್ ನೀಡಿತ್ತು. ಓದಿ ಬಳಲಿದ್ದ ಮಗಳಿಗೊಂದು ರಿಲ್ಯಾಕ್ಸ್ ನೀಡಿತ್ತು. ಎಲ್ಲೆಲ್ಲಿ ನೋಡಲಿ ಮೋಜು ಮಸ್ತಿಗಳದ್ದೇ ಕಾರುಬಾರು. ಒಳ್ಳೊಳ್ಳೆ ರೆಸಾರ್ಟ್ಸ್ ಗಳಿವೆ. ಹಣಕ್ಕೆ ತಕ್ಕಂತೆ ರೂಮುಗಳು ದೊರೆಯುತ್ತವೆ. ಸ್ಕೂಬಾ ಡೈವ್ ಪ್ರಮುಖ ಆಕರ್ಷಣೆ. ಮಗ ಮಗಳು ನೀರಾಟಗಳೆಲ್ಲದರಲ್ಲೂ ಭಾಗಿಯಾದರು. ಮಗಳು ಬೈಕ್ ರೈಡ್ ಮಾಡಿದ್ದು ಬಹಳವೇ ಖುಷಿಕೊಟ್ಟಿತು. ಜೊತೆಗೆ ಸ್ಕೂಬಾ ಡೈವ್, ಸಮುದ್ರದ ಆಳದವರೆಗೂ ಕರೆದುಕೊಂಡು ಹೋಗುವುದು ಇದರ ವಿಶೇಷ. ಜೊತೆಗೆ ಟ್ರೇನರ್ ಇರುತ್ತಾರೆ. ಅವರ ಮಾರ್ಗದರ್ಶನದಲ್ಲಿ ಎಲ್ಲವೂ ಸುಸೂತ್ರವಾಗೇ ಸಾಗುತ್ತದೆ. ಕೊನೆಗೆ ನಮಗೊಂದು ವಿಡಿಯೋ ಫೋಟೋಗಳನ್ನು ನೀಡುತ್ತಾರೆ. ನೆನಪುಗಳಿಗೊಂದು ಆಧಾರ!
ಅಲ್ಲೊಬ್ಬ ತಂದೆ ತಮ್ಮ ಹದಿಹರೆಯದ ವಿಶೇಷ ಮಗುವಿನೊಂದಿಗೆ ಬೆರೆತು ಕಲೆತು ವಾಟರ್ ಗೇಮ್ಸ್ ನಲ್ಲಿ ನಿರತರಾಗಿದ್ದು ಕಂಡು ಮನಸ್ಸು ಭಾರವಾಯಿತು. ಮಗದೊಂದೆಡೆಗೆ ಹೆಮ್ಮೆ ಎನಿಸಿತು. ಆ ಮಗು ಜಲಕ್ರೀಡೆಯಾಡುತ್ತಾ ಅದೆಷ್ಟು ಆನಂದ ಅನುಭವಿಸಿತು, ಅದೆಂಥ ಖುಷಿಪಟ್ಟಿತು. 70ರ ಹರೆಯದ ಅಜ್ಜಿಯೊಬ್ಬರು ವಾಟರ್ ಬೈಕ್ ರೈಡ್ ನಲ್ಲಿ ಪಟ್ಟ ಆನಂದ ಅಷ್ಟಿಷ್ಟಲ್ಲ! ಆ ಅಜ್ಜಿಯಲ್ಲಿ ಅದೇನು ಹುರುಪು ಅದೇನು ಖುಷಿ! ಸೂಪರ್ ಅಜ್ಜಿ! ಇಂಥಹ ಸಾಹಸ ದೃಶ್ಯಾವಳಿಗಳಿಗೇನೂ ಕಮ್ಮಿಯಿಲ್ಲ! ಒಮ್ಮೆ ನೋಡಲೇಬೇಕಾದ ಪ್ರವಾಸಿ ತಾಣ ಅಂಡಮಾನ್!
– ಸವಿತಾ ನಾಗೇಶ್