ಮದುವೆಯಾಗಿ 4-5 ತಿಂಗಳು ಕಳೆಯುತ್ತಿದ್ದಂತೆ ನವದಂಪತಿಗಳಿಗೆ ಪ್ರತಿಯೊಬ್ಬರೂ ಕೇಳುವ ಪ್ರಶ್ನೆಯೇನೆಂದರೆ, `ಗುಡ್‌ ನ್ಯೂಸ್‌ಯಾವಾಗ ಕೊಡ್ತಿಯಾ?’ `ಬಹುಬೇಗ ಬಾಯಿ ಸಿಹಿ ಮಾಡು,’ `ನಾನು ಬಹಳ ಬೇಗ ಅಜ್ಜಿ ಅನಿಸಿಕೊಬೇಕು,’ `ಒಳ್ಳೆಯದಕ್ಕೆ ತಡ ಮಾಡಬೇಡ ಮುಂದೆ ತೊಂದರೆಯಾಗಬಹುದು,’ ಎಂಬಂತಹ ಪ್ರಶ್ನೆಗಳನ್ನು ಕೇಳಿ ಕೇಳಿ ಕಿವಿ ಕಿವುಡಾಗಿ ಬಿಟ್ಟಂತೆ ಅನ್ನಿಸಿದೆ. ಇಂತಹ ಪ್ರಶ್ನೆಗಳು ಒಮ್ಮೊಮ್ಮೆ ಸಂಬಂಧದಲ್ಲಿ ಮನಸ್ತಾಪಕ್ಕೂ ಕಾರಣವಾಗಬಹುದು. ಅಂತಹ ಪ್ರಶ್ನೆಗಳಿಗೆ ನೀವು ಕಸಿವಿಸಿಗೊಳ್ಳದೆ ಬಹಳ ಸ್ಮಾರ್ಟ್‌ ಆಗಿ ಉತ್ತರ ಕೊಡಬೇಕು. ಅದರಿಂದ ಯಾರಿಗೂ ಕೆಡುಕೆನಿಸದು ಹಾಗೂ ನಿಮ್ಮನ್ನು ನೀವು ಸ್ಟ್ರೆಸ್‌ ನಿಂದ ದೂರ ಇಡಲು ಅನುಕೂಲವಾಗುತ್ತದೆ.

ಸ್ಮಾರ್ಟ್ನಿರ್ವಹಣೆ

ಡಿನ್ನರ್ಟೇಬಲ್ ನಲ್ಲಿರುವಾಗ : ಸಾಮಾನ್ಯವಾಗಿ ಡಿನ್ನರ್‌ ಟೇಬಲ್ ಬಳಿ ಇರುವಾಗಲೇ ಇಂತಹ ಪ್ರಶ್ನೆಗಳು ಕೇಳಿಬರುತ್ತವೆ. ಏಕೆಂದರೆ ಅಲ್ಲಿ ಇಡೀ ಕುಟುಂಬದವರು ಇರುತ್ತಾರೆ. ಹಾಗೆಯೇ ಎಲ್ಲರೂ ರಿಲ್ಯಾಕ್ಸ್ ಮೂಡ್‌ ನಲ್ಲಿರುತ್ತಾರೆ. ಅಂತಹ ಸ್ಥಿತಿಯಲ್ಲಿ ನಿಮ್ಮ ತಾಯಿ ನಿಮಗೆ ಈಗ ಫ್ಯಾಮಿಲಿ ಪ್ಲಾನಿಂಗ್‌ ಬಗ್ಗೆ ಯೋಚಿಸು ಎಂದು ಹೇಳಿದರೆ, ನೀವು ನಿಮ್ಮ ಮೂಡ್‌ ಹಾಳು ಮಾಡಿಕೊಳ್ಳದೆ ಅವರ ಪ್ರಶ್ನೆಗೆ ಉತ್ತರಿಸಿ. ಏಕೆಂದರೆ ಹಿರಿಯರಿಂದ ನಾವು ಆ ತೆರನಾದ ಪ್ರಶ್ನೆಗಳನ್ನು ಕೇಳಿಸಿಕೊಳ್ಳುವುದು ಸಹಜ. ಅಂತಹ ಸಂದರ್ಭದಲ್ಲಿ ನೀವು ವಿಷಯಾಂತರ ಮಾಡುವುದರ ಮೂಲಕ ಮಾತನ್ನು ಬೇರೆ ದಿಕ್ಕಿಗೆ ಹೀಗೆ ತಿರುಗಿಸಿ, “ಅಮ್ಮಾ, ಇವತ್ತು ನೀವು ಮಾಡಿದ ಅಡುಗೆ ಸೂಪರ್‌, ನೀವಂತೂ ಜಗತ್ತಿನ ಬೆಸ್ಟ್ ಶೆಫ್‌,” ಎಂದು ಹೇಳಿ ಅವರ ಗಮನವನ್ನು ಬೇರೆಡೆಗೆ ತಿರುಗಿಸಿ.

ತಮಾಷೆಯಲ್ಲಿಯೇ ಮಾತು ನಿಲ್ಲಿಸಿ : ಭಾರತೀಯ ಸಮಾಜದ ಸಂಸ್ಕೃತಿ ಹೇಗಿದೆಯೆಂದರೆ, ಇಲ್ಲಿನ ಜನರಿಗೆ ತಮ್ಮ ಬಗೆಗಿಂತ ಬೇರೆಯವರ ಬಗ್ಗೆಯೇ ಹೆಚ್ಚು ಕಾಳಜಿ. `ನಿಮ್ಮ ಮಗನಿಗೆ/ಮಗಳಿಗೆ ಅಷ್ಟು ವಯಸಾಯ್ತು. ಇನ್ನೂ ಮದುವೆಯಾಗಿಲ್ಲವಲ್ಲ,’ `ನಿಮ್ಮ ಮಗಳಿಗೆ ಮದುವೆಯಾಗಿ 4 ವರ್ಷ ಆಯ್ತು, ಇನ್ನೂ ಮಗು ಆಗಲಿಲ್ಲವಲ್ಲ,’ ಎಂಬಂತಹ ಪ್ರಶ್ನೆಗಳು ಕೇಳಿಬರುತ್ತವೆ. ಒಮ್ಮೊಮ್ಮೆ ಸ್ನೇಹಿತರಿಂದಲೂ ಈ ತೆರನಾದ ಪ್ರಶ್ನೆಗಳು ಕೇಳಲ್ಪಡುತ್ತವೆ. ಇಂತಹದರಲ್ಲಿ ಅವರ ಮಾತುಗಳಿಂದ ಗಲಿಬಿಲಿಗೊಳಗಾಗದೆ, ಅವರಿಗೆ ತಮಾಷೆ ಮಾಡುತ್ತಲೇ ಉತ್ತರ ಕೊಡಿ, “ನೀವು ನನ್ನ ಮಗುವನ್ನು ಪೋಷಣೆ ಮಾಡ್ತೀರಾ ಅಂದ್ರೆ ನಾನು ಇವತ್ತೇ ಪ್ಲಾನ್‌ ಮಾಡ್ತೀನಿ.” ಈ ಉತ್ತರ ಕೇಳಿ ಅವರು ನಕ್ಕು ನಕ್ಕು ಸುಸ್ತಾಗುತ್ತಾರೆ. ಜೊತೆಗೆ ಅವರ ಬಾಯಿಯೇ ಬಂದ್‌ ಆಗುತ್ತದೆ.

ಸಂಬಂಧಿಕರ ಎದುರು ಧೈರ್ಯಗುಂದದಿರಿ : ಕುಟುಂಬದವರೆಲ್ಲ ಒಂದು ಕಡೆ ಸೇರಿದಾಗ ಅವರಿಂದ ಈ ತೆರನಾದ ಪ್ರಶ್ನೆ ಏಳುವುದು ಸಹಜವೇ. ಎಲ್ಲರೂ ಬಹಳ ದಿನಗಳ ಬಳಿಕ ಒಂದೆಡೆ ಸೇರಿದಾಗ ಸಂಬಂಧಿಕರು ತಮಾಷೆಯ ಶೈಲಿಯಲ್ಲಿಯೇ `ನಮ್ಮ ಮನೆಗೆ ಹೊಸ ಅತಿಥಿ ಆಗಮನ ಯಾವಾಗ?’ ಎಂದು ಕೇಳದೇ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ನೀವು ಕೋಪಗೊಂಡು ಖುಷಿಯಿಂದ ಕೂಡಿದ ವಾತಾವರಣವನ್ನು ಹಾಳುಗೆಡುಹಬೇಡಿ. ಆಗ ನೀವು “ನಾವಿನ್ನೂ ಚಿಕ್ಕವರು, ನಮಗಿನ್ನೂ ಆಡೋ ವಯಸ್ಸು,” ಎಂದು ಹೇಳುತ್ತಿದ್ದಂತೆ ಅವರಿಗೆ ಮುಂದೆ ಪ್ರಶ್ನೆ ಮಾಡುವ ಧೈರ್ಯ ಬರುವುದಿಲ್ಲ.

ಮಾನಸಿಕವಾಗಿ ಸಿದ್ಧರಾಗಿ : ಮದುವೆಯಾಗಿದೆ ಎಂದರೆ ಮಕ್ಕಳೂ ಆಗುತ್ತವೆ. ಆ ಬಗ್ಗೆ ಪ್ರಶ್ನೆಗಳನ್ನು ಕೇಳಿಯೇ ಕೇಳುತ್ತಾರೆ. ಯಾರಾದರೂ ಈ ಬಗ್ಗೆ ಪ್ರಶ್ನೆ ಮಾಡಿದಾಗ, ಮುಖ ಊದಿಸಿಕೊಳ್ಳುವುದಕ್ಕಿಂತ ಅವರಿಗೆ ಪ್ರೀತಿಯಿಂದಲೇ, “ಈಗಷ್ಟೇ ನಮ್ಮ ಹೊಸ ಜೀವನ ಶುರುವಾಗಿದೆ. ನಾವು ಸಾಕಷ್ಟು ವಿಷಯಗಳಲ್ಲಿ ಸೆಟಲ್ ಆಗಬೇಕು. ಎಲ್ಲವೂ ಸರಿ ಹೋಗುತ್ತಿದ್ದಂತೆ ಪ್ಲಾನ್ ಮಾಡಬೇಕು,” ಎಂದು ಹೇಳಿ. ಆ ನಿಮ್ಮ ಉತ್ತರದಿಂದ ಅವರು ಮತ್ತೊಮ್ಮೆ ಪ್ರಶ್ನೆ ಕೇಳುವುದಿಲ್ಲ.

ಯಾವಾಗಲಾದರೂ ಈ ವಿಷಯದ ಬಗ್ಗೆ ಕೇಳಿದರೆ, ಅದರ ಬಗ್ಗೆ ಸಂಕೋಚಪಡದೆ ಇಲ್ಲಿ ಅಲ್ಲಿಂದ ಎದ್ದು ಬೇರೆ ಕಡೆ ಹೋಗದೆ ತುಸು ಜಾಣತನದಿಂದ ಉತ್ತರ ಕೊಡಿ. ಆ ವಿಷಯದ ಬಗ್ಗೆ ಮಾತನಾಡಲು ಅಳುಕು ಉಂಟಾಗಬಹುದು. ಆದರೆ ಜನರ ಮುಂದೆ ಆಗಲೇ ನೀವು ಮಾತನಾಡದೇ ಇದ್ದರೆ ಅವರು ಅದರ ಬಗ್ಗೆ ಬೇರೆಯದೇ ರೀತಿಯಲ್ಲಿ ಅರ್ಥ ಮಾಡಿಕೊಳ್ಳುತ್ತಾರೆ. ಒಂದು ಸಂಗತಿ ನಿಮ್ಮ ಗಮನದಲ್ಲಿರಲಿ. ಅದರ ಬಗ್ಗೆ ನಿರ್ಧರಿಸುವವರು ನೀವೇ. ಯಾರೇ ಆಗಲಿ ತಮ್ಮ ನಿರ್ಧಾರವನ್ನು ನಿಮ್ಮ ಮೇಲೆ ಹೇರಲಾಗದು. ಹಾಗಾಗಿ “ನಾವಿನ್ನೂ ಆ ಬಗ್ಗೆ ಯೋಚಿಸಿಲ್ಲ. ಏನಾದರೂ ಸಿಹಿ ಸುದ್ದಿ ಇದ್ದಾಗ ಎಲ್ಲಕ್ಕೂ ಮೊದಲೇ ನಿಮಗೆ ತಿಳಿಸಲಾಗುತ್ತದೆ,” ಎಂದು  ಹೇಳಿ.

ಪರಸ್ಪರ ಜೊತೆಗಿರಿ : ಮದುವೆಯಾಗಿ ಅನೇಕ ವರ್ಷಗಳೇ ಆಗಿದೆ. ಗರ್ಭ ಧರಿಸಲು ಸಮಸ್ಯೆ ಆಗುತ್ತಿದ್ದರೆ, ಅದು ದಂಪತಿಗಳಿಗೆ ಒಳಗೊಳಗೆ ಕಸಿವಿಸಿಯನ್ನುಂಟು ಮಾಡುತ್ತಿರುತ್ತದೆ. ಅಂತಹ ಸ್ಥಿತಿಯಲ್ಲಿ ಬೇರೆಯವರು ಈ ಬಗ್ಗೆ ಮೇಲಿಂದ ಮೇಲೆ ಕೇಳುತ್ತಿದ್ದರೆ, ಕೋಪದಿಂದ ಅವರಿಗೆ ತಕ್ಕ ಉತ್ತರ ಕೊಟ್ಟು ಬಿಡೋಣ ಎನಿಸುತ್ತದೆ.

ಆದರೆ ಅಪ್ಪಿತಪ್ಪಿಯೂ ಹಾಗೆ ಉತ್ತರ ಕೊಡಬೇಡಿ. ಏಕೆಂದರೆ ಅವರು ಎಲ್ಲರೆದುರು ನಿಮ್ಮ ಪ್ರತಿಷ್ಠೆಗೆ ಧಕ್ಕೆ ತರುವ ಕೆಲಸ ಮಾಡಬಹುದು. ಹೀಗಾಗಿ ನೀವು ಪರಸ್ಪರ ಧೈರ್ಯ ಕೊಡಿ. ಯಾವಾಗಲೂ ಜೊತೆ ಜೊತೆಗೆ ಇರುವುದಕ್ಕೆ ಪ್ರಯತ್ನ ಮಾಡಿ. ಯಾರಾದರೂ ಈ ಪ್ರಶ್ನೆ ಕೇಳಿದರೆ, ನಾವು ಏನನ್ನು ಉತ್ತರಿಸಬೇಕು ಎಂಬ ಬಗ್ಗೆ ಇಬ್ಬರೂ ಸೇರಿಯೇ ನಿರ್ಧರಿಸಿ. ನಿಮ್ಮ ಇದೇ ನಿರ್ಧಾರ ನಿಮ್ಮನ್ನು ಒಳಗೊಳಗೆ ಗಟ್ಟಿಗೊಳಿಸುವ ಕೆಲಸ ಮಾಡುತ್ತದೆ. ಬೇರೆಯವರೆದುರು ಬೋಲ್ಡ್ ಆಗಿ ಉತ್ತರಿಸಲು ಅವಕಾಶ ಕೊಡುತ್ತದೆ.

ಪಾರ್ವತಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ