ಮದುವೆಯಾಗಿ 4-5 ತಿಂಗಳು ಕಳೆಯುತ್ತಿದ್ದಂತೆ ನವದಂಪತಿಗಳಿಗೆ ಪ್ರತಿಯೊಬ್ಬರೂ ಕೇಳುವ ಪ್ರಶ್ನೆಯೇನೆಂದರೆ, `ಗುಡ್ ನ್ಯೂಸ್‌ಯಾವಾಗ ಕೊಡ್ತಿಯಾ?' `ಬಹುಬೇಗ ಬಾಯಿ ಸಿಹಿ ಮಾಡು,' `ನಾನು ಬಹಳ ಬೇಗ ಅಜ್ಜಿ ಅನಿಸಿಕೊಬೇಕು,' `ಒಳ್ಳೆಯದಕ್ಕೆ ತಡ ಮಾಡಬೇಡ ಮುಂದೆ ತೊಂದರೆಯಾಗಬಹುದು,' ಎಂಬಂತಹ ಪ್ರಶ್ನೆಗಳನ್ನು ಕೇಳಿ ಕೇಳಿ ಕಿವಿ ಕಿವುಡಾಗಿ ಬಿಟ್ಟಂತೆ ಅನ್ನಿಸಿದೆ. ಇಂತಹ ಪ್ರಶ್ನೆಗಳು ಒಮ್ಮೊಮ್ಮೆ ಸಂಬಂಧದಲ್ಲಿ ಮನಸ್ತಾಪಕ್ಕೂ ಕಾರಣವಾಗಬಹುದು. ಅಂತಹ ಪ್ರಶ್ನೆಗಳಿಗೆ ನೀವು ಕಸಿವಿಸಿಗೊಳ್ಳದೆ ಬಹಳ ಸ್ಮಾರ್ಟ್ ಆಗಿ ಉತ್ತರ ಕೊಡಬೇಕು. ಅದರಿಂದ ಯಾರಿಗೂ ಕೆಡುಕೆನಿಸದು ಹಾಗೂ ನಿಮ್ಮನ್ನು ನೀವು ಸ್ಟ್ರೆಸ್ ನಿಂದ ದೂರ ಇಡಲು ಅನುಕೂಲವಾಗುತ್ತದೆ.
ಸ್ಮಾರ್ಟ್ ನಿರ್ವಹಣೆ
ಡಿನ್ನರ್ ಟೇಬಲ್ ನಲ್ಲಿರುವಾಗ : ಸಾಮಾನ್ಯವಾಗಿ ಡಿನ್ನರ್ ಟೇಬಲ್ ಬಳಿ ಇರುವಾಗಲೇ ಇಂತಹ ಪ್ರಶ್ನೆಗಳು ಕೇಳಿಬರುತ್ತವೆ. ಏಕೆಂದರೆ ಅಲ್ಲಿ ಇಡೀ ಕುಟುಂಬದವರು ಇರುತ್ತಾರೆ. ಹಾಗೆಯೇ ಎಲ್ಲರೂ ರಿಲ್ಯಾಕ್ಸ್ ಮೂಡ್ ನಲ್ಲಿರುತ್ತಾರೆ. ಅಂತಹ ಸ್ಥಿತಿಯಲ್ಲಿ ನಿಮ್ಮ ತಾಯಿ ನಿಮಗೆ ಈಗ ಫ್ಯಾಮಿಲಿ ಪ್ಲಾನಿಂಗ್ ಬಗ್ಗೆ ಯೋಚಿಸು ಎಂದು ಹೇಳಿದರೆ, ನೀವು ನಿಮ್ಮ ಮೂಡ್ ಹಾಳು ಮಾಡಿಕೊಳ್ಳದೆ ಅವರ ಪ್ರಶ್ನೆಗೆ ಉತ್ತರಿಸಿ. ಏಕೆಂದರೆ ಹಿರಿಯರಿಂದ ನಾವು ಆ ತೆರನಾದ ಪ್ರಶ್ನೆಗಳನ್ನು ಕೇಳಿಸಿಕೊಳ್ಳುವುದು ಸಹಜ. ಅಂತಹ ಸಂದರ್ಭದಲ್ಲಿ ನೀವು ವಿಷಯಾಂತರ ಮಾಡುವುದರ ಮೂಲಕ ಮಾತನ್ನು ಬೇರೆ ದಿಕ್ಕಿಗೆ ಹೀಗೆ ತಿರುಗಿಸಿ, ``ಅಮ್ಮಾ, ಇವತ್ತು ನೀವು ಮಾಡಿದ ಅಡುಗೆ ಸೂಪರ್, ನೀವಂತೂ ಜಗತ್ತಿನ ಬೆಸ್ಟ್ ಶೆಫ್,'' ಎಂದು ಹೇಳಿ ಅವರ ಗಮನವನ್ನು ಬೇರೆಡೆಗೆ ತಿರುಗಿಸಿ.
ತಮಾಷೆಯಲ್ಲಿಯೇ ಮಾತು ನಿಲ್ಲಿಸಿ : ಭಾರತೀಯ ಸಮಾಜದ ಸಂಸ್ಕೃತಿ ಹೇಗಿದೆಯೆಂದರೆ, ಇಲ್ಲಿನ ಜನರಿಗೆ ತಮ್ಮ ಬಗೆಗಿಂತ ಬೇರೆಯವರ ಬಗ್ಗೆಯೇ ಹೆಚ್ಚು ಕಾಳಜಿ. `ನಿಮ್ಮ ಮಗನಿಗೆ/ಮಗಳಿಗೆ ಅಷ್ಟು ವಯಸಾಯ್ತು. ಇನ್ನೂ ಮದುವೆಯಾಗಿಲ್ಲವಲ್ಲ,' `ನಿಮ್ಮ ಮಗಳಿಗೆ ಮದುವೆಯಾಗಿ 4 ವರ್ಷ ಆಯ್ತು, ಇನ್ನೂ ಮಗು ಆಗಲಿಲ್ಲವಲ್ಲ,' ಎಂಬಂತಹ ಪ್ರಶ್ನೆಗಳು ಕೇಳಿಬರುತ್ತವೆ. ಒಮ್ಮೊಮ್ಮೆ ಸ್ನೇಹಿತರಿಂದಲೂ ಈ ತೆರನಾದ ಪ್ರಶ್ನೆಗಳು ಕೇಳಲ್ಪಡುತ್ತವೆ. ಇಂತಹದರಲ್ಲಿ ಅವರ ಮಾತುಗಳಿಂದ ಗಲಿಬಿಲಿಗೊಳಗಾಗದೆ, ಅವರಿಗೆ ತಮಾಷೆ ಮಾಡುತ್ತಲೇ ಉತ್ತರ ಕೊಡಿ, ``ನೀವು ನನ್ನ ಮಗುವನ್ನು ಪೋಷಣೆ ಮಾಡ್ತೀರಾ ಅಂದ್ರೆ ನಾನು ಇವತ್ತೇ ಪ್ಲಾನ್ ಮಾಡ್ತೀನಿ.'' ಈ ಉತ್ತರ ಕೇಳಿ ಅವರು ನಕ್ಕು ನಕ್ಕು ಸುಸ್ತಾಗುತ್ತಾರೆ. ಜೊತೆಗೆ ಅವರ ಬಾಯಿಯೇ ಬಂದ್ ಆಗುತ್ತದೆ.
ಸಂಬಂಧಿಕರ ಎದುರು ಧೈರ್ಯಗುಂದದಿರಿ : ಕುಟುಂಬದವರೆಲ್ಲ ಒಂದು ಕಡೆ ಸೇರಿದಾಗ ಅವರಿಂದ ಈ ತೆರನಾದ ಪ್ರಶ್ನೆ ಏಳುವುದು ಸಹಜವೇ. ಎಲ್ಲರೂ ಬಹಳ ದಿನಗಳ ಬಳಿಕ ಒಂದೆಡೆ ಸೇರಿದಾಗ ಸಂಬಂಧಿಕರು ತಮಾಷೆಯ ಶೈಲಿಯಲ್ಲಿಯೇ `ನಮ್ಮ ಮನೆಗೆ ಹೊಸ ಅತಿಥಿ ಆಗಮನ ಯಾವಾಗ?' ಎಂದು ಕೇಳದೇ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ನೀವು ಕೋಪಗೊಂಡು ಖುಷಿಯಿಂದ ಕೂಡಿದ ವಾತಾವರಣವನ್ನು ಹಾಳುಗೆಡುಹಬೇಡಿ. ಆಗ ನೀವು ``ನಾವಿನ್ನೂ ಚಿಕ್ಕವರು, ನಮಗಿನ್ನೂ ಆಡೋ ವಯಸ್ಸು,'' ಎಂದು ಹೇಳುತ್ತಿದ್ದಂತೆ ಅವರಿಗೆ ಮುಂದೆ ಪ್ರಶ್ನೆ ಮಾಡುವ ಧೈರ್ಯ ಬರುವುದಿಲ್ಲ.