– ರಾಘವೇಂದ್ರ ಅಡಿಗ ಎಚ್ಚೆನ್.
ಬಿಗ್ ಬಾಸ್ ಕನ್ನಡ ಸೀಸನ್ 11 ಧರ್ಮ ಕೀರ್ತಿರಾಜ್ಗೆ (Dharma Keerthiraj) ದೊಡ್ಡ ಬ್ರೇಕ್ ಕೊಟ್ಟಿದೆ. ಎಂಟನೇ ವಾರಕ್ಕೆ ಎಲಿಮಿನೇಟ್ ಆದರೂ ಇವರೀಗ ಸಿನಿಮಾ ಇಂಡಸ್ಟ್ರಿಯಲ್ಲಿ ಟ್ರೆಂಡ್ ಸೃಷ್ಟಿಸಿದ್ದಾರೆ. ಹೊಸ ಚಿತ್ರಗಳ ಆಫರ್ ಹುಡುಕಿಕೊಂಡು ಬರುತ್ತಿದೆ. ಆದರೆ, ಈವರೆಗೆ ಧರ್ಮಾ ಅವರು ತಮ್ಮ ಮುಂಬರುವ ಸಿನಿಮಾ ಕುರಿತು ಯಾವುದೇ ಹೊಸ ಅಪ್ಡೇಟ್ ಕೊಟ್ಟಿರಲಿಲ್ಲ. ಇದೀಗ ಧರ್ಮ ಕೀರ್ತಿರಾಜ್ ಇದೀಗ ಹೊಸ ಸುದ್ದಿ ಕೊಟ್ಟಿದ್ದಾರೆ. ಧರ್ಮ ಕೀರ್ತಿರಾಜ್ ಅವರು ಈಗ ಟಾಲಿವುಡ್ಗೆ ಗ್ರ್ಯಾಂಡ್ ಆಗಿ ಕಾಲಿಟ್ಟಿದ್ದಾರೆ.
ಧರ್ಮ ಕೀರ್ತಿರಾಜ್ ನಟನೆಯ ಮೊದಲ ತೆಲುಗು ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಚಿತ್ರದ ಹೆಸರು ಬ್ಲಡ್ ರೋಸಸ್ ಎಂದು. ಈ ಕ್ರೈಮ್ ಥ್ರಿಲ್ಲರ್ ಸಿನಿಮಾದಲ್ಲಿ ಧರ್ಮ ಕೀರ್ತಿರಾಜ್ ಅವರು ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಸಿಕೊಂಡಿದ್ದಾರೆ. ಅದರ ಫಸ್ಟ್ ಲುಕ್ ರಿಲೀಸ್ ಆಗಿದೆ. ಹೈದರಾಬಾದ್‌ನಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆದಿದೆ. ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲೂ ಈ ಸಿನಿಮಾದ ಶೂಟಿಂಗ್ ಮಾಡಲಾಗಿದೆ.
ಟಾಲಿವುಡ್‌ನ ಬೋಲ್ಡ್ ಬ್ಯೂಟಿ ಅಪ್ಸರ ರಾಣಿ ಜೊತೆ ಧರ್ಮ ತೆರೆಹಂಚಿಕೊಂಡಿದ್ದಾರೆ. ಟಾಲಿವುಡ್ನಲ್ಲಿ ಹಲವು ಬೋಲ್ಡ್ ಪಾತ್ರಗಳನ್ನು ಮಾಡಿದವರು ಅಪ್ಸರಾ ರಾಣಿ. ಅವರು ಈಗ ಸಾಮಾನ್ಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪ್ರೆಸ್‌ಮೀಟ್‌ನಲ್ಲಿ ಚಿತ್ರದ ನಾಯಕಿ ಜೊತೆ ಧರ್ಮ ಕೀರ್ತಿರಾಜ್ ಪೋಸ್ ಕೊಟ್ಟಿದ್ದಾರೆ. ಧರ್ಮ ಹಾಗೂ ಅಪ್ಸರಾ ಕೆಮಿಸ್ಟ್ರಿ ನೋಡಿ ಫ್ಯಾನ್ಸ್ ಇಷ್ಟಪಟ್ಟಿದ್ದಾರೆ. ಚಿತ್ರದ ನಾಯಕಿ ಕೂಡ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದಾರೆ.
ಬ್ಲಡ್ ರೋಸಸ್ ಸಿನಿಮಾವನ್ನು ಟಿಬಿಆರ್ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಹರೀಶ್ ಕೆ ನಿರ್ಮಾಣ ಮಾಡಿದ್ದು, ಎಂ ಗುರುರಾಜನ್ ಅವರು ನಿರ್ದೇಶನ ಮಾಡಿದ್ದಾರೆ. ಶ್ರೀಲು, ಸುಮನ್, ಟಾರ್ಜನ್, ಘರ್ಷಣ ಶ್ರೀನಿವಾಸ್, ಜಗದೀಶ್ವರಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಶಿವಕುಮಾರ್ ಛಾಯಾಗ್ರಹಣ ಇರುವ ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳು ಭರದಿಂದ ಸಾಗಿವೆ.
ಸದ್ಯದಲ್ಲೇ ಚಿತ್ರದ ರಿಲೀಸ್ ಬಗ್ಗೆ ತಂಡ ಅಪ್‌ಡೇಟ್ ನೀಡಲಿದೆ. ತೆಲುಗಿನ ಜೊತೆ ಕನ್ನಡದಲ್ಲೂ ಈ ಸಿನಿಮಾ ಬರಲಿದೆಯಾ ಎಂದು ನೋಡಬೇಕಿದೆ. ಕನ್ನಡ ಚಿತ್ರರಂಗದ ಪ್ರಸಿದ್ಧ ಖಳನಟ ಕೀರ್ತಿರಾಜ್ ಮಗನಾದ ಧರ್ಮ ಕೀರ್ತಿರಾಜ್ ನವಗ್ರಹ ಸಿನಿಮಾ ಮೂಲಕ ಗಮನ ಸೆಳೆದರು. ನಂತರ ಒಲವೇ ವಿಸ್ಮಯ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಹೊರಹೊಮ್ಮಿದರು. ಬಳಿಕ ಹಲವಾರು ಸಿನಿಮಾಗಳಲ್ಲಿ ನಟಿಸಿದರೂ ಕೂಡ ಅವು ಹಿಟ್ ಆಗಲಿಲ್ಲ. ಈಗ ಬಿಗ್ ಬಾಸ್ಗೆ ಹೋಗಿ ಬಂದ ಬಳಿಕ ಹೊಸ ಸಿನಿಮಾ ರಿಲೀಸ್ಗೆ ರೆಡಿಯಾಗಿದ್ದು, ಯಶಸ್ಸು ಸಿಗುತ್ತ ಎಂಬುದು ಕಾದುನೋಡಬೇಕಿದೆ.