ತಮ್ಮ ಮೊಂಡು ವಾದದಿಂದ ಮಗನಿಗೆ ಅನುಕೂಲಸ್ಥರ ಮನೆಯ ಹುಡುಗಿಯನ್ನೇ ತಂದು ಸೊಸೆಯಾಗಿಸಿಕೊಳ್ಳಬೇಕು, ಎಂದು ತಾಯಿ ತಂದೆ ಪಟ್ಟುಹಿಡಿದಿದ್ದಾಗ, ದಿವಾಕರ ತಾನು ಮೆಚ್ಚಿದ ಹುಡುಗಿಯನ್ನು ತನ್ನ ಆದರ್ಶದಂತೆ ಮದುವೆಯಾಗಲು ಹೂಡಿದ ಉಪಾಯವೇನು…..?
“ಹುಡುಗೀನ ಈಗಲೇ ಸರಿಯಾಗಿ ನೋಡಿಬಿಡಪ್ಪ ದಿವಾಕರ….. ಆಮೇಲೆ ಸರಿಯಾಗಿ ನೋಡಲಿಲ್ಲ ಇನ್ನೊಂದು ಸಲ ಕರೆಸಿ ಅನ್ನಬೇಡಪ್ಪ…. ಹ್ಞೂಂ ನೋಡು, ನೋಡು….. ನಿಸ್ಸಂಕೋಚವಾಗಿ ನೋಡು. ಏನಾದರೂ ಪ್ರಶ್ನೆ ಕೇಳೋದಿದ್ರೂ ಕೇಳು……” ಎಂದು ಮದುವೆ ಬ್ರೋಕರ್ ರಾಮನಾಥಯ್ಯ ತಮ್ಮ ಉಬ್ಬು ಹಲ್ಲಿನ ಜೊತೆ ವಸಡೂ ಕಾಣುವಷ್ಟು ದೊಡ್ಡದಾಗಿ ಬಾಯಿಬಿಟ್ಟು ನಕ್ಕರು.
ಎದುರಿಗೆ ಸ್ವಲ್ಪ ದೂರದಲ್ಲಿ ತಲೆಬಾಗಿಸಿ ಕುಳಿತಿದ್ದ ಹುಡುಗಿಯತ್ತ ದಿವಾಕರ ಕಂಡೂ ಕಾಣದ ಹಾಗೆ ತನ್ನ ನೋಟವನ್ನು ಹಾಯಿಸಿದ.
ಮೊದಲ ನೋಟಕ್ಕೆ ಸುಂದರಿ ಎನಿಸಬಹುದಾದಂತಹ ಚೆಲುವಾದ ಮೊಗ ನಾಚಿಕೆಯಿಂದ ಕೆಂಪಾಗಿತ್ತು. ತೆಳ್ಳಗೆ, ಎತ್ತರವಾದ ನಿಲುವು. ಒಂದು ಕ್ಷಣ ಅವನ ಕಂಗಳಲ್ಲಿ ಮಿಂಚು ಸುಳಿದರೂ ಅವನ ಮುಖ ಬಾಡಿ, ತಾಯಿಯ ದೃಷ್ಟಿಯೊಡನೆ ದೃಷ್ಟಿ ಬೆರೆತು ಪೆಚ್ಚು ನಗೆ ಬೀರಿದ. ಬಂದವರು ಮೇಲೆದ್ದರು.
“ವಾರದಲ್ಲಿ ಬೇಗ ತಿಳಿಸಿಬಿಡಿ….. ಬರ್ತೀವಿ……” ಎಂದು ಹುಡುಗಿಯ ತಂದೆ ಹೇಳಿದಾಗ, ಸರಬರ ಸೀರೆಯ ಸದ್ದು, ಗಾಜಿನ ಬಳೆ ಕಿಣಿಕಿಣಿ…. ಸ್ಯಾಂಡಲ್ ಚಪ್ಪಲಿಗಳ ಚರಕ್…. ಚರಕ್…. ಕ್ಷಣಾರ್ಧದಲ್ಲಿ ಎಲ್ಲವೂ ನಿಶ್ಶಬ್ದ.
“ಹುಡುಗಿ ಹೇಗಿದ್ದಾಳೆ ಅಂತ ಅನ್ನಿಸುತ್ತಿದೆ…… ಅದ್ರೂ ಏನೋ ಶುದ್ಧ ಬಡವರ ಕಳೆ ಹೊಳೆಯುತ್ತಿಲ್ವೇನೇ ಶ್ಯಾಮ್ಲೂ…. ಆ ಹುಡುಗೀ ಅತ್ತಿಗೆಯ ಮುಖದ ಮೇಲೆ…… ಅಲ್ಲಾ, ಹುಡುಗಿಯ ಮೈಮೇಲೆ ಒಂದು ಗುಲಗಂಜಿ ತೂಕದ ಬಂಗಾರಾನೂ ಬೇಡ್ವೇನೇ……?”
ರಮಾಬಾಯಿಯ ಏರುಕಂಠ ಕೇಳಿ, ಶ್ಯಾಮಲಾ ತತ್‌ಕ್ಷಣ ಗಾಬರಿಯಿಂದ ಚಿಮ್ಮಿ, “ಅಮ್ಮಾ…..” ಎಂದು ಪಿಸುಗುಟ್ಟಿ ತಾಯಿಯ ಬಾಯಿಯ ಮೇಲೆ ಕೈಯಿಟ್ಟಳು.
“ಸ್ವಲ್ಪ ಮೆತ್ತಗೆ ಮಾತಾಡಮ್ಮ…. ಇನ್ನೂ ಬಂದವರು ಗೇಟೂ ದಾಟಿಲ್ಲ….. ಆಗ್ಲೇ ನಿನ್ನ ಕಾಮೆಂಟ್ಸ್ ಶುರು ಮಾಡಿಬಿಟ್ಯಾ?” ಎಂದು ಮಗಳು ಹುಬ್ಬು ಗಂಟಿಕ್ಕಿ ತಾಯಿಯತ್ತ ಆಕ್ಷೇಪದ ನೋಟ ಬೀರಿದಳು.
ರಮಾಬಾಯಿಯ ಮುಖಭಾವ, ಆ ದಿನ ಬಂದಿದ್ದ ಹುಡುಗಿ ತಮಗೆ ಒಪ್ಪಿಗೆಯಾಗಿಲ್ಲವೆಂಬ ಅತೃಪ್ತಭಾವವನ್ನು ಗಾಢವಾಗಿ ಹೊರಚೆಲ್ಲುತ್ತಿತ್ತು. ಅನಿಸಿದ್ದನ್ನು ಬಾಯಲ್ಲಿ ಧಾರಾಳವಾಗಿ ಆಡಿಬಿಡುವ ಸ್ವಭಾವ ಅವರದು.
“ಲಕ್ಷಣವಾಗಿ ಕುತ್ತಿಗೇಲಿ ಒಂದೆರಡೆಳೆ ಚಿನ್ನದ ಸರ, ಬಳೆ, ಉಂಗರು, ಓಲೆ, ಜುಮುಕಿ ಒಂದೂ ಕೇಳಬೇಡ….. ಅದೇನು ವಾಕಿಂಗೋ, ಮಾರ್ಕೆಟಿಂಗೋ ಬಂದ ಹಾಗೆ ಕಿವೀಲಿ ಒಂದು ರಿಂಗ್ ತೂಗಿ ಹಾಕಿಕೊಂಡು ಬಂದಿದ್ದಾಳಲ್ಲ…..! ಹ್ಞೂಂ….. ಅದೂ ಚಿನ್ನದ್ದೋ ಹಿತ್ತಾಳೇಯದೋ….?”
ಶ್ರೀಕಂಠಯ್ಯನವರಿಗೆ ಹೆಂಡತಿಯ ಚಿನ್ನದ ವ್ಯಾಮೋಹ, ಆಸ್ತಿ ಐಶ್ವರ್ಯದ ಹುಚ್ಚು ತಿಳಿಯದ್ದೇನಲ್ಲ. ಕಳೆದ ಆರು ತಿಂಗಳುಗಳಿಂದ ಗಂಡಹೆಂಡತಿಗೆ ಇದೇ ತಿಕ್ಕಾಟ. ಮನೆಯ ಆಡಳಿತದಲ್ಲಿ ಆಕೆಯದೇ ಮೇಲುಗೈಯಾದ್ದರಿಂದ ಆತ ಆ ಬಗ್ಗೆ ಚಕಾರವೆತ್ತುತ್ತಿರಲಿಲ್ಲ. ತಿಂಗಳ ಮೊದಲಲ್ಲೇ ಹೆಂಡತಿಯ ಕೈಗೆ ಗಂಡನ ಸಂಬಳ ರವಾನೆಯಾಗುತ್ತಿತ್ತು. ರಮಾಬಾಯಿ ಅಚ್ಚುಕಟ್ಟಾಗಿ ಸಂಸಾರ ನಿಭಾಯಿಸಿಕೊಂಡು ಹೋಗುತ್ತ ಅದರಲ್ಲಿ ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನೂ ತೂಗಿಸಿ, ಮಿತವ್ಯಯ ಮಾಡಿ ಆಗೀಗ ಅಷ್ಟಿಷ್ಟು ಒಡವೆಗಳನ್ನೂ ಮಾಡಿಸಿಕೊಂಡಿದ್ದರು. ಮಗಳಿಗೂ ಒಂದು ಸೆಟ್ ಆಭರಣ ಮಾಡಿಸಿದ್ದರು. ಮಗಳ ಓದು ಮುಗಿದಿತ್ತು. ಮಗನೂ ಎಂಜಿನಿಯರಿಂಗ್ ಮುಗಿಸಿ ಒಂದು ಕೆಲಸ ಹಿಡಿದ ನಂತರ ಮತ್ತೆ ಅವರು ಹೊಸ ಮಾದರಿಯ ಒಡವೆಗಳನ್ನು ಮಾಡಲು ಹಾಕಿದ್ದರು.
ದಿವಾಕರ್ ಸಂಪಾದಿಸತೊಡಗಿ ಆಗಲೇ ಮೂರು ವರ್ಷಗಳು ಕಳೆದಿದ್ದವು. ಪ್ರತಿಯೊಂದು ವಿಷಯದಲ್ಲೂ ಹೆಂಡತಿಗೆ ವಿರುದ್ಧವಾಡದೆ ತೆಪ್ಪಗಿರುತ್ತಿದ್ದ ಶ್ರೀಕಂಠಯ್ಯನವರು, ಮಗನಿಗೆ ಹೆಣ್ಣು ತವರು ಅಭಿಪ್ರಾಯದಲ್ಲಿ ಮಾತ್ರ ಹೆಂಡತಿಯೊಡನೆ ಜಟಾಪಟಿ ಕುಸ್ತಿಗಿಳಿದಿದ್ದರು.
ಹತ್ತರಿಯದ ವಾಗ್ವಾದ …. ಎಳೆದಾಟ…..! ಹೆಂಡತಿಯಂತೆ ಆತನಿಗೂ, ತಮ್ಮ ಏಕಮಾತ್ರ ಪುತ್ರನಿಗೇ, ದೊಡ್ಡ ಅಧಿಕಾರದಲ್ಲಿ ಇರುವವರ ಸಂಬಂಧವೇ ಬೆಳೆಸಬೇಕೆಂಬಾಸೆ. ಅಂತಸ್ತು…. ಸ್ಟೇಟಸ್….. ಅವರ ಪಿತ್ತ ಹೊಕ್ಕಿತ್ತು. ಒಡವೆ ವಸ್ತುಗಳ ಆಡಂಬರವಿರದಿದ್ದರೂ ತಮ್ಮ ಭಾವೀ ಸೊಸೆ, ಡಿ.ಸಿ.ಯ ಮಗಳೋ, ಕಮೀಷನರ್ ತಂಗಿಯೋ ಅಥವಾ ಯಾವುದಾದರೂ ಫ್ಯಾಕ್ಟರಿ ಜಿ.ಎಂ. ಸಂಬಂಧಿಯಾದರೂ ಆಗಿರಬೇಕೆಂಬುದು ಆತನ ಹೆಬ್ಬಯಕೆ.
ನೋಡಿದ ಹೆಣ್ಣುಗಳಲ್ಲಿ ಅವರ ಆಸ್ತಿ, ಬಂಗಾರ, ಹಣ ಕಂಡು ರಮಾಬಾಯಿ ಮಾರುಹೋಗಿದ್ದು ಮೂವರು ಜನರಿಗಾದರೆ, ಶ್ರೀಕಂಠಯ್ಯನವರು ಪಟ್ಟುಹಿಡಿದದ್ದು ಒಂದು ಕೇಸಿನಲ್ಲಿ.
ಆ ಹೆಣ್ಣುಗಳ ಪಟ್ಟಿಯಲ್ಲಿ ರಾಮನಾಥಯ್ಯ ಇಂದು ವಧು ಪರೀಕ್ಷೆಗೆಂದು ಕರೆದು ತಂದಿದ್ದ ಮಂದಾಕಿನಿಯ ವರ್ಚಸ್ಸು ತೀರ ಸಪ್ಪೆ.
“ಹುಡುಗಿಗೆ ತಂದೆ ಇಲ್ಲ….. ಗುಮಾಸ್ತೆ ಅಣ್ಣನ ಆಸರೆಯಲ್ಲಿ ಇರುವವಳು. ಅವಳ ಮದುವೆ ಬಗ್ಗೆ ಅಣ್ಣ ಅತ್ತಿಗೆಯರಿಗೇನು ಆಸ್ಥೆ ಅಕ್ಕರೆ ಇರುತ್ತದೆ? ಜವಾಬ್ದಾರಿ ನೀಗಿದರೆ ಸಾಕು ಎಂದು ಕಾದಿರುತ್ತಾರೆ. ಪ್ರೈಮರಿ ಸ್ಕೂಲ್ ಮೇಷ್ಟರ ಮಗಳು ಎಷ್ಟು ತಾನೇ ಬಂಗಾರ ಹೊತ್ತು ತಂದಾಳು? ನೆಟ್ಟಗೆ ಮದುವೇನೂ ಮಾಡಿಕೊಡ್ತಾರೋ ಇಲ್ಲವೋ…..” ಎಂದು ರಮಾಬಾಯಿ ಅನುಮಾನ.
ನಿರಾಭರಣಳಾಗಿದ್ದರೂ ತನ್ನ ಸೌಮ್ಯ ಕಳೆಯಿಂದ ಆಕರ್ಷಕವಾಗಿದ್ದ ಮಂದಾಕಿನಿಯ ಸೌಂದರ್ಯ ಯಾರಿಗೂ ಗಣನೀಯ ಎಂದೆನಿಸಲಿಲ್ಲ. ಶ್ಯಾಮಲಾಳಿಗೆ ಬರುವ ಅತ್ತಿಗೆ ತುಂಬಾ ಮಾಡರ್ನ್ ಆಗಿ ಇರಬೇಕೆಂಬುದೊಂದೇ ಆಸೆಯಾಗಿದ್ದರೂ ಹೆತ್ತವರ ಕಾವೇರಿದ ಚರ್ಚೆ ವಾಗ್ವಾದದ ಮಧ್ಯೆ ತನ್ನ ಅಭಿಪ್ರಾಯ ತೂರಿಸುವಷ್ಟು ಎಂಟೆದೆ ಅವಳಿಗಿರಲಿಲ್ಲ. ಆದರೆ ಗಂಡಹೆಂಡತಿ ಮಾತ್ರ ತಮ್ಮ ಭಾವಿ ಸೊಸೆಯ ಮನೆತನ ಅಂತಸ್ತುಗಳ ಬಗ್ಗೆ ಮಂಥಿಸಿದ್ದೇ ಮಂಥಿಸಿದ್ದು.
ಬಾಯಿ ತೆರೆಯಲು ಅವಕಾಶ ಸಿಗದ ದಿವಾಕರ್ ಬೇಸರದಿಂದ ಅಲ್ಲಿಂದ ಜಾಗ ಖಾಲಿ ಮಾಡಿದ್ದ. ವಾರ ಕಳೆದಿತ್ತು. ಹುಡುಗಿಯ ಅಣ್ಣ ಎನಿಸಿಕೊಂಡ ಬಡಪ್ರಾಣಿ ಕಿರುಗುಟ್ಟಿತೋ ಇಲ್ಲವೋ ಎಂಬಂತೆ ಗೇಟನ್ನು ಮೆಲ್ಲನೆ ತೆರೆಯುತ್ತಾ, ಹಿಂಜರಿಕೆಯಿಂದಲೇ ಬೆಲ್ಲಿನ ಮೇಲೆ ಕೈಯಿಟ್ಟಿದ್ದ.
ಅಂಗಳದಲ್ಲಿ ಹೂ ಬಿಡಿಸುತ್ತಾ ನಿಂತಿದ್ದ ರಮಾಬಾಯಿ, ಬಂದವರು ಯಾರು ಎಂದು ತಿಳಿಯುತ್ತಲೇ ಮುಖ ಹಿಂಡಿ ಹುಳ್ಳಗೆ ಮಾಡಿದರು. ವರಾಂಡದಲ್ಲೇ ಪೇಪರ್ ಓದುತ್ತಾ ಕುಳಿತಿದ್ದ ಶ್ರೀಕಂಠಯ್ಯ, ಮೇಲೇಳು ನಟನೆಯೇ ಇಲ್ಲದೆ, “ಬನ್ನಿ…..” ಎಂದರು. ಆದರವಿಲ್ಲದ ದನಿಯಲ್ಲಿ ಬಂದರಿಗೆ ಏನು ಉತ್ತರಿಸುವುದೆಂದು ತೋಚದೆ ಉಗುಳು ನುಂಗುತ್ತಾ, “ನಮ್ಮ ಹುಡುಗ ಇನ್ನೂ ಏನೂ ಹೇಳಿಲ್ಲ ಮುಂದಿನ ವಾರ……” ಎನ್ನುವಷ್ಟರಲ್ಲಿ ಆತ ಪೆಚ್ಚುಮೋರೆ ಹಾಕಿಕೊಂಡು ಮೇಲಕ್ಕೆದ್ದೇ ಬಿಟ್ಟರು.
ಶೆಡ್ಡಿನಿಂದ ಸ್ಕೂಟರ್ ಹೊರತೆಗೆಯುತ್ತಿದ್ದ ದಿವಾಕರ್ ಆ ದೃಶ್ಯ ಕಂಡು, ಕಂಡೂ ಕಾಣದ ಹಾಗೆ ಅಲ್ಲಿಂದ ನಿಶ್ಶಬ್ದವಾಗಿ ಸರಿದುಹೋದ.
ಸಂಜೆ ಅವನು ಕೆಲಸದಿಂದ ಬರುತ್ತಿದ್ದ ಹಾಗೆ ರಮಾಬಾಯಿ ಅದಕ್ಕೇ ಕಾದಿದ್ದರಂತೆ ಅವನ ಮದುವೆಯ ಮಾತು ತೆಗೆದರು.
“ನೋಡಪ್ಪ ದಿವಾ….. ಇವತ್ತೇನಾದ್ರೂ ಒಂದು ನಿರ್ಧಾರ ಆಗಲೇಬೇಕು… ನಿಮ್ಮ ತಂದೆ ಹಟ ನೋಡಿದರೆ ಯಾಕೋ ದಿನೇ ದಿನೇ ಅತಿಯಾಗುತ್ತಿದೆ….. ಆ ಜಿಪುಣಾಗ್ರೇಸ ಶ್ಯಾಮರಾಯರ ನಿರ್ದೇಶಕ ಅನ್ನು ಹುದ್ದೆ ನೋಡಿ, ಇವರು ಮರುಳಾಗಿ ಅವರ ಮಗಳು ಕುಬ್ಜಿ ಪಂಕಜಾನೇ ತಂದುಕೊಳ್ಳೋಣ ಅಂತ ಪಟ್ಟುಹಿಡಿದಿದ್ದಾರೆ ಕಣೋ…. ಹೋಗಲಿ ಹುಡುಗಿ ಐಬು ಮುಚ್ಚುವುದಕ್ಕಾದರೂ ಆತ ವರದಕ್ಷಿಣೆವರೋಪಚಾರ ಕೊಡ್ತಾರಾ….? ಊಹ್ಞೂಂ….. ಒಂದೂ ಕೇಳಬೇಡ…. ಹೋಗಲಿ, ಗ್ರ್ಯಾಂಡ್ ಆಗಿ ಮದುವೆ ಮಾಡಿಕೊಡ್ತೀನಿ ಅಂತಾರಾ….? ಎಲ್ಲಾ ಸಿಂಪಲ್….. ಒಂದೇ ದಿನದಲ್ಲಿ ವರಪೂಜೆ, ಲಗ್ನ, ರಿಸೆಪ್ಷನ್ ಅಂತೆ……! ನನಗಂತೂ ಸುತರಾಂ ಈ ಸಂಬಂಧ ಒಪ್ಪಿಗೆಯಿಲ್ಲ… ಮಹಾ ಘಾಟಿ ಆತ!” ಎಂದು ಅವುಡುಗಚ್ಚಿದರಾಕೆ.
ದಿವಾಕರನಿಗೆ ಕುಡಿಯುತ್ತಿದ್ದ ಕಾಫಿ ಕಹಿ ಎನಿಸಿತು. ಈ ಮನೇಲಿ ನೆಮ್ಮದಿಯಾಗಿ ಒಂದು ತೊಟ್ಟು ಕಾಫಿ ಕುಡಿಯಲೂ ಆಗಲ್ಲ ಎಂದು ಗೊಣಗಿಕೊಂಡ ಗಂಟೆಯೊಳಗೆ.
ರಮಾಬಾಯಿಯರ ಲೆಕ್ಕಾಚಾರವೇ ಬೇರೆ. “ಅಲ್ಲಮ್ಮ ಕನಕಾಭಿಷೇಕ ಮಾಡಿಬಿಟ್ಟರೆ ಕಪ್ಪನೆಯ ಹುಡುಗೀರು ದಂತದ ಬಣ್ಣಕ್ಕೆ ತಿರುಗಿಬಿಡ್ತಾರಾ…..? ಕುಳ್ಳಿ ಕುರೂಪಿಯರು ಎತ್ತರವಾಗಿ ಸುಂದರವಾಗಿ ಬಿಡ್ತಾರಾ….? ಅಂತೂ ನಿನ್ನ ವರದಕ್ಷಿಣೆ ಕಾಸಿಗೆ ಅಂಥ ಮಾಂತ್ರಿಕ ಶಕ್ತಿ ಇದೆ ಅನ್ನು?!” ಶ್ಯಾಮಲಾ ವ್ಯಂಗ್ಯದ ನುಡಿಗಳಿಂದ ತಾಯಿಯನ್ನು ಕೆಣಕಿದಳು.
“ಶಕ್ತಿ ಇದೆಯೋ ಬಿಟ್ಟಿದೆಯೋ….. ನಾನೆಷ್ಟು ಕಷ್ಟಪಟ್ಟು ಗಂಡುಮಗ ಅಂತ ಚೆನ್ನಾಗಿ ಬೆಳೆಸಿ, ಬಿ.ಇ. ಓದಿಸಿ, ಸಾವಿರಾರು ರೂಪಾಯಿ ಸಂಪಾದಿಸುವ ಹಂತಕ್ಕೆ ತಂದು ತಲುಪಿಸಿದ್ದೀಲ್ಲ…..”
ತಾಯಿಯ ಉದ್ದನೆಯ ಭಾಷಣಕ್ಕೆ ಬ್ರೇಕ್ ಹಾಕುತ್ತಾ ಶ್ಯಾಮಲಾ, “ಓ…. ನೀನು ಗಂಡುಮಗನನ್ನ ಹೆತ್ತು ಹೊತ್ತು ಬೆಳೆಸಿ, ಓದಿಸಿ, ಬರೆಸಿದ್ದಕ್ಕೆ ಪರಿಹಾರ ಕೇಳ್ತಾ ಇದ್ದೀಯಾ….?! ಬರೀ ಪರಿಹಾರ ಸಾಕೋ ಅಥವಾ ಅದರ ಮೇಲೆ ಲಾಭ ಬೇಕೋ? ಅಂತೂ ಮಗನ್ನ ಖರೀದಿಗೆ ಇಟ್ಟಿದ್ದೀಯಾ ಅನ್ನು….. ಹ್ಞೂಂ…. ನಿರಾತಂಕವಾಗಿ ನಡೀಲಿ ನಿನ್ನ ವ್ಯಾಪಾರ,” ಎಂದೆನ್ನುತ್ತಾ ಅವಳು ಮತ್ತೊಂದು ಗಳಿಗೆಯೂ ಅಲ್ಲಿ ನಿಲ್ಲದೆ, ಅವರ ಮಾತನ್ನು ಕಿವಿಯ ಮೇಲೆ ಹಾಕಿಕೊಳ್ಳಲಿಚ್ಛಿಸದೆ, ಮುಖ ಸಿಂಡರಿಸಿ ದಿವಾಕರನತ್ತ ಅನುಕಂಪದ ನೋಟ ಬೀರಿ ಅಲ್ಲಿಂದ ಧಡಧಡನೆ ಹೊರ ನಡೆದಳು.
ದಿನ ಮನೆಯಲ್ಲಿ ನಡೆಯುತ್ತಿದ್ದ ತಾಯಿ ತಂದೆಯರ ಜಗಳ ತಿಕ್ಕಾಟ ಕಂಡು ದಿವಾಕರನಿಗೂ ತಲೆಚಿಟ್ಟು ಹಿಡಿದುಹೋಗಿತ್ತು!
“ಅಮ್ಮಾ…. ಸಾಕಮ್ಮ…. ದಿನಾ ನಿಮ್ಮ ಜಗಳ ನೋಡಿ ನೋಡಿ ನನ್ನ ತಲೆ ಗೊಬ್ಬರ ಆಗಿಹೋಗಿದೆ. ಇದುವರೆಗೂ ಏನಿಲ್ಲಾಂದರ್ರೂ ನೀವು ನನಗೆ 50-60 ಹೆಣ್ಣುಗಳನ್ನು ನೋಡಿದ್ದೀರಾ…. ಹೆಣ್ಣು ಹೆತ್ತವರ ಮನೆಗಳಿಗೆ ಹೋಗಿ ದಂಡಿಯಾಗಿ ಕೇಸರಿಭಾತು, ಬೋಂಡಾ, ಉಪ್ಪಿಟ್ಟು, ಬರ್ಫಿಗಳನ್ನು ಮೇಯ್ದು ಬಂದಿದ್ದೀರಾ…. ಆಮೇಲೆ ಅವರು ನಮ್ಮನೆಗೆ ಅಲೆದಾಡಿದ್ದೆಷ್ಟು….. ಆಗ ಬನ್ನಿ… ಈಗ ಬನ್ನಿ…. ಅಂತ ನೀವು ಅವರನ್ನು ವಿನಾಕಾರಣ ಸಸ್ಪೆನ್ಸ್ ನಲ್ಲಿಟ್ಟು ತಳಮಳಗೊಳಿಸಿದ್ದೆಷ್ಟು…..? ಊಹ್ಞೂಂ…. ನೋ ಐ ಡೋಂಟ್ ಲೈಕ್ ದಿಸ್…. ಈ ಕನ್ಯಾ ವೀಕ್ಷಣೆ ನಾಟಕದ ಅಂಕ ಇನ್ನಾದರೂ ಮುಗಿಯಲಿ. ಮದುವೆಯಾಗೋನು ನಾನು…. ನನ್ನ ಇಷ್ಟಾನೇ ಈ ವಿಷಯದಲ್ಲಿ ಕೊನೆಯದಾಗಬೇಕು,” ಎಂದ ದಿವಾಕರ.
ದಿವಾಕರ ಎಂದೂ ಇಷ್ಟು ನಿಷ್ಠೂರವಾಗಿ ಮಾತನಾಡಿರಲಿಲ್ಲ. ಮುಖ ಗಂಟು ಹಾಕಿಕೊಂಡವನೆ ಕೈಲಿದ್ದ ಪತ್ರಿಕೆಯನ್ನು ರಪ್ಪೆಂದು ಟೀಪಾಯಿಯ ಮೇಲೆ ಎಸೆದು, ಚಪ್ಪಲಿ ಮೆಟ್ಟಿಕೊಂಡು ಬಾಗಿಲು ದಾಟಿದಾಗ, `ನಿನ್ನಿಂದಲೇ ಇಷ್ಟೆಲ್ಲಾ ರಾದ್ಧಾಂತ,’ ಎನ್ನುವಂತೆ ಶ್ರೀಕಂಠಯ್ಯ ಹೆಂಡತಿಯನ್ನು ನೋಟದಲ್ಲೇ ತಿವಿದರು.
ರಮಾಬಾಯಿಯವರೂ ಮಗನ ಅನಿರೀಕ್ಷಿತ ನಡವಳಿಕೆಯಿಂದ ಪೆಚ್ಚಾಗಿದ್ದರು.
ಹೀಗೆ…. ದಿನ, ವಾರಗಳು ಕಳೆದರೂ ದಿವಾಕರನ ಕೋಪವಿನ್ನೂ ಆರಿರಲಿಲ್ಲ. ರಮಾಬಾಯಿಯವರಿಗೂ ಹೊಸ ವಧು ಪರೀಕ್ಷೆಗಳನ್ನು ಏರ್ಪಡಿಸಲು ಧೈರ್ಯವಾಗಲಿಲ್ಲ.
ಆ ಸಂಜೆ ದಿವಾಕರ್ ಕೆಲಸದಿಂದ ಎಂದಿಗಿಂತ ಕೊಂಚ ಬೇಗನೆ ಬಂದವನು ಉಲ್ಲಸಿತನಂತೆ ಕಂಡ. ಸಡಿಲವಾದ ಅವನ ಮುಖಭಾವದಿಂದ ಉತ್ತೇಜಿತಳಾದ ಶ್ಯಾಮಲಾ, ಅಣ್ಣನನ್ನು ಕೀಟಲೆ ಮಾಡಿದಳು.
“ಅಲ್ಲ ಕಣೋ ದಿವಾ…. ಮದುವೆ ಅಂದ್ರೆ ಮೂರು ವಾರ ಮಾತು ಬಿಟ್ಟುಬಿಡ್ತೀಯಲ್ಲ….. ನಿನಗೆ ಮದುವೆ ಅನ್ನೋದು ಅಲರ್ಜಿಯಾಗಿದೆ ಅಂದ್ರೆ ಅಮ್ಮ ಅಪ್ಪನಿಗೆ ನೇರವಾಗಿ ಹೇಳಿಬಿಡು. ಆ ವಿಷಯ ಮರೆತುಬಿಡಿ ಅಂತ….. ಮತ್ತೆ ನೀನು ಮರೆತು ಹೆಣ್ಣಿನ ಮುಂದೆ ಕೂತೋ… ಅವರು ಭೈರಿಗೆ ಕೊರೆಯೋದಂತೂ ಗ್ಯಾರಂಟಿ,” ಎಂದು ಶ್ಯಾಮಲಾ ಕಿಸಕ್ಕನೆ ನಕ್ಕಳು.
ದಿವಾಕರ ಇಂದು ಮುಖ ಕಿವುಚಲಿಲ್ಲ. ಬದಲಾಗಿ ನಗುತ್ತಾ, “ನಾಟ್ ಅಟ್ ಆಲ್….. ಇನ್ನುಂದೆ ಅದಕ್ಕೆ ಅವಕಾಶವೇ ಇರಲ್ಲ…… ಯಾಕಂದ್ರೆ ನಾನೇ ಒಂದು ಹುಡುಗೀನ ಆರಿಸಿಕೊಂಡಿದ್ದೀನಿ,” ಎಂದ ಅವನ ಮುಖ ಕೆಂಪಗಾಯಿತು.
ರಮಾಬಾಯಿಯ ಕಿವಿ ಚುರುಕಾಯಿತು. ಶ್ರೀಕಂಠಯ್ಯನವರೂ ಕೂಡ ತಾವು ಗಾಢವಾಗಿ ತಲ್ಲೀನರಾಗಿದ್ದ ಪೇಪರ್ ನ್ನು ಬದಿಗಿಟ್ಟು ಮಗನತ್ತ ಅಚ್ಚರಿಯ ನೋಟ ತುಳುಕಿಸಿದರು. ಮುಖದಲ್ಲಿ ಕುತೂಹಲ ಗಿಜಿಗುಡುತ್ತಿತ್ತು.
“ಹುಡುಗಿಯ ಮನೆಯವರು ಅನುಕೂಲವಂತರು ತಾನೇ…..?” ತಾಯಿ ಕುತೂಹಲದಿಂದ ಅವನ ಪಕ್ಕ ಬಂದು ಕುಳಿತರು.
“ಹುಡುಗಿ ತಂದೆ ಏನ್ಮಾಡ್ತಿದ್ದಾರೆ….?” ತಾಯಿ ತಂದೆಯರ ಪ್ರಶ್ನೆ ಒಟ್ಟಿಗೆ ತೂರಿಬಂದಿತು.
“ಹುಡುಗಿ ತಂದೆ ಎಕ್ಸೈಸ್ ಡಿಪಾರ್ಟ್ ಮೆಂಟ್ ನಲ್ಲಿ ಡೆಪ್ಯೂಟಿ ಕಮೀಷನರ್. ಒಬ್ಬಳೇ ಮಗಳು….. ಎಂ.ಎಸ್ಸಿ ಓದಿದ್ದಾಳೆ….. ಬಂಗಲೆ, ಕಾರು, ಆಸ್ತಿಪಾಸ್ತಿ, ಚಿನ್ನ ಬೆಳ್ಳಿ, ಹಣ ಎಲ್ಲವೂ ಬೇಕಾದ ಹಾಗಿದೆ,” ಎಂದು ದಿವಾಕರ ಸಾವಕಾಶವಾಗಿ ಸಮಾಧಾನದಿಂದ ಉತ್ತರಿಸಿದ.
“ಅಯ್ಯೋ ದಡ್ಡಮುಂಡೇದೆ….. ಮೊದಲೇ ಯಾಕೋ ಈ ವಿಷಯ ಹೇಳಲಿಲ್ಲ….. ? ನಾವು ಸುಮ್ಮನೆ ಯಾರು ಯಾರನ್ನೋ ನೋಡಿ ಕಂಠ ಶೋಷಣೆ ಮಾಡಿಕೊಂಡೆವಲ್ಲ…..” ಎನ್ನುತ್ತಾ ರಮಾಬಾಯಿ ಹಿಗ್ಗಿನಿಂದ ಮುಖವರಳಿಸಿ ನುಡಿದರು. ಅವರಿಗಾದ ಸಂತಸದ ಎಲ್ಲೇ ಎರಡೂ ಕಿವಿಗಳವರೆಗೆ ಹರಡಿತ್ತು.
ಶ್ರೀಕಂಠಯ್ಯನವರ ಮೊಗ ಕಾದ ಎಣ್ಣೆಗೆ ಹಾಕಿದ ಉದ್ದಿನ ಹಪ್ಪಳದಂತಾಗಿತ್ತು, “ನೀನೊಪ್ಪಿದ ಮೇಲೆ ಹುಡುಗಿ ಮುದ್ದಾಗಿಯೇ ಇರುತ್ತಾಳೆ. ಏನಾದರೂ ಆಗಲಿ, ಸಂಪ್ರದಾಯ ಬಿಡಕ್ಕಾಗಲ್ಲ…. ಅವಳ ತಂದೆಗೆ ಜಾತಕ ತೊಗೊಂಡು, ಮೊದಲು ಮನೆಗೆ ಬರಲಿಕ್ಕೆ ಹೇಳಪ್ಪ…. ಆಮೇಲೆ ಹುಡುಗೀನ ನೋಡುವ ಶಾಸ್ತ್ರ ಮುಗಿಸೋಣ,” ಎಂದರು.
ದಿವಾಕರನ ದನಿಯಲ್ಲಿ ಸಂತಸದ ಗೆಲುವು ಕುಣಿಯುತ್ತಿತ್ತು. ತಂದೆಯ ಮಾತು ಕೇಳುತ್ತಿದ್ದ ಹಾಗೆ ಅವನ ಮೊಗ ಅರಕ್ತವಾಯಿತು. ದನಿ ಗಂಟಲಲ್ಲೇ ಹೂತುಹೋಯಿತು.
ರಮಾಬಾಯಿ ಸಂಭ್ರಮದಿಂದ, “ಹುಡುಗಿ ಹೆಸರು ಏನೋ ದಿವಾ…..? ಅವರು ಯಾವ ಕಡೆಯವರಂತೆ…..?” ಎಂದು ಕೇಳಿದರು.
ಇದನ್ನು ಕೇಳಿದಾಗ, ದಿವಾಕರನ ಹಣೆಯ ಮೇಲೆ ಬೆವರ ಬಿಂದುಗಳು ಕಾಣಿಸಿಕೊಂಡವು! ತಾಯಿ ತಂದೆಯ ನೇರ ನೋಟ ತಪ್ಪಿಸಿ, ಅವನು ಎತ್ತಲೋ ನೋಡುತ್ತಾ ತಗ್ಗಿದ ಸ್ವರದಲ್ಲಿ, “ಹುಡುಗಿ ಹೆಸರು ಫರೀದಾಬಾನು…. ಅವಳಪ್ಪನ ಹೆಸರು ಅಬ್ದುಲ್ ಷಫಿ…..” ಎಂದ ದಿವಾಕರ.
ರಮಾಬಾಯಿ ಬೆಚ್ಚಿಬಿದ್ದರು! ಶ್ರೀಕಂಠಯ್ಯನವರ ಮುಖಭಾವ ಒಮ್ಮೆಲೇ ವಿಕಾರವಾಗಿ, “ಏ ಏನೋ ನೀನು ಹೇಳ್ತಿರೋದು….?” ಎಂದು ಕೋಪದಿಂದ ಅರಚಿದರು.
ದಿವಾಕರ ಅಷ್ಟೇ ತಣ್ಣಗೆ, “ಹೌದಪ್ಪ, ಫರೀದಾ ನನ್ನ ಫ್ರೆಂಡ್ ನ ಕಸಿನ್….. ತುಂಬಾ ಒಳ್ಳೆ ಹುಡುಗಿ. ನಾನವಳನ್ನು ಮೆಚ್ಚಿಕೊಂಡಿದ್ದೀನಿ. ನೀವು ಒಪ್ಪಿದರೆ ನನ್ನ ಮದುವೆ ನಡೆಯುತ್ತೆ….. ಇಲ್ಲದಿದ್ದರೆ ನಾನು ಆಜನ್ಮ ಬ್ರಹ್ಮಚಾರಿ……” ಎಂದು ಹೇಳುತ್ತಾ ದಿವಾಕರ್ ತಾಯಿ ತಂದೆಗೆ ಮುಂದೆ ಮಾತನಾಡಲು ಅವಕಾಶ ಕೊಡದೆ ಮೇಲೆದ್ದು ತನ್ನ ಕೋಣೆ ಸೇರಿಕೊಂಡ.
ಮಗನ ನಿರ್ಧಾರವನ್ನು ಕೇಳಿ ಗರಬಡಿದು ನಿಂತ ರಮಾಬಾಯಿಯ ಕಣ್ಣುಗಳು ಧುಡುಮ್ಮನೆ ತುಂಬಿಕೊಂಡವು.
“ಅಯ್ಯೋ ದೇವರೇ….. ಎಂಥ ಗತಿ ತಂದಿಟ್ಯಪ್ಪ ನಮಗೆ….? ಶಾಸ್ತ್ರ, ಸಂಪ್ರದಾಯ ಕಟ್ಟುನಿಟ್ಟಾಗಿ ಆಚರಿಸೋ ಮನೇಲಿ ಎಂಥ ಬಿರುಗಾಳಿ ಎಬ್ಬಿಸಿ ಬಿಟ್ಯಲ್ಪಪ್ಪ…..” ಎಂದು ಆಕೆ ಬಾಯಿಗೆ ಸೆರಗು ತುರುಕಿಕೊಂಡು ಬಿಕ್ಕಳಿಸಿದರು.
ಶ್ರೀಕಂಠಯ್ಯನವರ ನಾಲಿಗೆ ಲಕ್ವಾ ಹೊಡೆದಂತಾಗಿತ್ತು. ಮನೆಯಲ್ಲಿ ಕ್ಷಣಾರ್ಧದಲ್ಲಿ ಸ್ಮಶಾನ ಮೌನ ತುಂಬಿಕೊಂಡಿತು. ರಾತ್ರಿಯಿಡೀ ರಮಾಬಾಯಿ ಎದೆಯಲ್ಲಿ ತೂಫಾನು! ರೆಪ್ಪೆಗೆ ರೆಪ್ಪೆ ಕೂಡಲಿಲ್ಲ. ಒಂದೇ ಸಮನೆ ಯೋಚನೆ ಮಾಡಿ ಕಂಗೆಟ್ಟರು.
ನಿದ್ದೆ ಬಾರದೆ ಹಾಸಿಗೆಯಲ್ಲಿ ಹೊರಳಾಡುತ್ತಿದ್ದ ಶ್ರೀಕಂಠಯ್ಯನವರೂ ವಿಕ್ಷಿಪ್ತರಾಗಿದ್ದರು. ಮಠದ ಸ್ವಾಮಿಗಳ ಖಾಸಾ ಶಿಷ್ಯರಾದ ತಾವು ಇನ್ನು ಮುಂದೆ ತಲೆಯೆತ್ತಿ ತಿರುಗುವುದಾದರೂ ಹೇಗೆಂಬ ಚಿಂತೆ ಅವರ ತಲೆಯನ್ನು ಕೊರೆಯುತ್ತಿತ್ತು. ಭಾವಿ ಸೊಸೆಯ ಆಗಮನದ ಕಲ್ಪನೆಯಿಂದ ದಂಪತಿಗಳಿಬ್ಬರೂ ನಡುಗಿ ಹೋಗಿದ್ದರು! ಆದರೆ ದಿವಾಕರ ಮಾತ್ರ ಬಂಡೆಯಂತೆ ಅಚಲನಾಗಿದ್ದ! ತಾಯಿ ತಂದೆಯರಲ್ಲಾಗುತ್ತಿದ್ದ ಹೊಯ್ದಾಟ ಗಮನಿಸಿಯೂ ಅವನು ಮೆತ್ತಗಾಗಲಿಲ್ಲ.
ರಮಾಬಾಯಿ ಮಾತ್ರ ಮೌನದ ಮುದ್ದೆಯಾಗಿದ್ದ ಮಗನ ಮುಂದೆ ಮಕ್ಕಳಂತೆ ಅತ್ತು ಅವಲತ್ತುಕೊಂಡರು, “ನೀನು ಜಾತಿಯಲ್ಲದ ಜಾತಿ ಮನೆ ಹುಡುಗೀನ ಮದುವೆಯಾದರೆ ನಿನ್ನ ತಂಗೀನ ಯಾರಪ್ಪ ಮದುವೆ ಮಾಡ್ಕೋತಾರೆ ದಿವಾ…..? ನಿನ್ನಿಂದ ಅವಳ ಭವಿಷ್ಯಾನೇ ಮಣ್ಣುಗೂಡಿ ಹೋಗುತ್ತೆ…. ಯೋಚನೆ ಮಾಡಿ ನೋಡು…..” ಹಿಂದೆಂದೂ ಮಣಿಯದಿದ್ದಷ್ಟು ಮೆತ್ತಗಿನ, ದುಃಖದ ದನಿಯಲ್ಲಿ ಆಕೆ ಅವನನ್ನು ಬೇಡಿಕೊಂಡರು.
ತಂದೆಯೂ ದೈನ್ಯದ ಪ್ರತಿರೂಪವಾಗಿದ್ದರು, “ನಾವೇನೂ ಆಸ್ತಿಅಂತಸ್ತು ಆಸೆಪಟ್ಟಿದ್ದು ನಿಜಪ್ಪಾ ದಿವಾ. ಆದರೆ ಈಗ ನಮ್ಮ ಮಾನ, ಮರ್ಯಾದೆ ಉಳಿದರೆ ಸಧ್ಯ ಸಾಕಾಗಿದೆಯಪ್ಪ. ನಮ್ಮ ಆಸೆಗೆ ಬೆಂಕಿ ಬಿತ್ತು. ಲಕ್ಷಣವಾಗಿ ನಮ್ಮ ಜಾತಿಯ ಹುಡುಗಿ, ಬಡವಳೋ, ಶ್ರೀಮಂತಳೋ ನಮ್ಮನೆ ದೀಪವಾಗಿ ಬಂದು ಬೆಳಗಿದರೆ ಸಾಕು…. ವಂಶೋದ್ಧಾರಕ ನೀನು ನಮಗೆ ಸತ್ತ ಮೇಲೆ ಒಂದು ಹಿಡಿ ಕೂಳು ಪಿಂಡ ಹಾಕಿ ತಿಥಿಮಥಿ ಮಾಡಬೇಡ್ವೇನೋ…..?” ಎಂದು ದೀನರಾಗಿ ಕೇಳಿದರು.
ದಿವಾಕರನಿಗೆ ತಂದೆಯ ದೈನ್ಯತೆ ಕಂಡು ಪಿಚ್ಚೆನಿಸಿ ಹೃದಯ ಆರ್ದ್ರವಾಗತೊಡಗಿತು. ತಾಯಿ, ಹಿಂದೆಂದೂ ಕಾಣದಷ್ಟು ಕುಬ್ಜರಾಗಿ, ನಾದಿದ ಹಿಟ್ಟಿನಂತೆ ಮೆತ್ತಗಾಗಿ ಅವನೆದುರು ದೀನರಾಗಿ ನಿಂತಿದ್ದರು.
ಶ್ಯಾಮಲಾ ಕೂಡ, “ಅಣ್ಣಾ ಪ್ಲೀಸ್….. ಹೆತ್ತ ತಾಯಿ ತಂದೆಯರನ್ನು ಇಷ್ಟು ನೋಯಿಸಬಾರದು ನೋಡು. ನಮ್ಮನೆ ನೆಮ್ಮದಿಯನ್ನು ಕದಡಬೇಡಣ್ಣಾ……” ಎಂದು ಹನಿದುಂಬಿದ ಕಣ್ಣುಗಳಿಂದ ಕೇಳಿಕೊಂಡಳು.
ದಿವಾಕರ ಕೊಂಚ ಮೃದುವಾದರೂ, “ನನಗೆ ಯೋಚನೆ ಮಾಡೋಕೆ ಒಂದು ವಾರ ಟೈಂ ಕೊಡಿ,” ಎಂದು ಗಡುವು ಕೇಳಿದಾಗ, ರಮಾಬಾಯಿಯ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡ ಉಸಿರು ಕೊಂಚ ಸಡಿಲವಾಯಿತು.
ಏಳು ದಿನಗಳು ಕಳೆಯುವಷ್ಟರಲ್ಲಿ ಆಕೆ ಹತ್ತು ವರ್ಷ ಹೆಚ್ಚಾದಷ್ಟು ಮುಪ್ಪಾಗಿದ್ದರು. ಮಗ ಏನೆಂದು ನಿರ್ಧಾರ ತೆಗೆದುಕೊಳ್ಳುವನೋ ಎಂಬ ಆತಂಕ, ಹೆದರಿಕೆಯನ್ನು ಕುಕ್ಕಿ ಹಾಕಿದ್ದ. ಸದ್ಯ ಅವನ ಮನದಿಂದ ಆ ಹೆಣ್ಣು ಮರೆಯಾದರೆ ಸಾಕೆಂದು ಬೇಡಿಕೊಂಡು ರಾಯರಿಗೆ ತುಪ್ಪದ ದೀಪ ಹಚ್ಚಿಟ್ಟು ಮುಡುಪು ಕಟ್ಟಿಟ್ಟರು.
ಅವರ ಪಾಲಿಗೆ ಯುಗದಷ್ಟು ದೀರ್ಘವೆನಿಸಿದ್ದ ವಾರದ ಅವಧಿಯಂತೂ ಮುಗಿದಿತ್ತು. ದಿವಾಕರ ಅಂದು ತನ್ನ ನಿರ್ಧಾರವನ್ನು ಹೊರ ಹಾಕಲಿದ್ದ. ಶ್ರೀಕಂಠಯ್ಯನವರ ಎದೆಯೂ ಪುಕಪುಕ ಎನ್ನುತ್ತಿತ್ತು.
ದಿವಾಕರ ದೀರ್ಘಾಲೋಚನೆಯಲ್ಲಿ ಮುಳುಗಿದವನಂತೆ ತಲೆಬಾಗಿಸಿ ಕುಳಿತಿದ್ದ. ಅವನ ಮೇಲೆ ಪ್ರಭಾವ ಬೀರುವಂತೆ, ಅವನ ಹತ್ತಿರ ಸರಿದು ಅನುನಯ ಸ್ವರದಲ್ಲಿ ರಮಾಬಾಯಿ, “ಹೆತ್ತವರ ಮನಸ್ಸನ್ನು ನೀನು ನೋಯಿಸೋದಿಲ್ಲಾಂತ ನನಗೆ ಗೊತ್ತು ಕಣೋ ದಿವಾ….. ಅದು ನಿನಗೆ ಶ್ರೇಯಸ್ಸೂ ಅಲ್ಲ…… ಬೇಕಾದರೆ ನಾನು ಇಷ್ಟಪಟ್ಟಿರುವ ಶ್ರೀಮಂತರ ಮನೆ ಸಂಬಂಧ, ನಿಮ್ಮಪ್ಪ ಪಟ್ಟುಹಿಡಿದಿರೋ ಎಂ.ಡಿ. ಮಗಳನ್ನು ನೀನು ಒಪ್ಪಿಕೊಳ್ಳದಿದ್ದರೂ ಬೇಡ. ಆದರೆ ದಯವಿಟ್ಟು ನಮ್ಮ ಮನೆತನದ ಹೆಸರಿಗೆ ಮಾತ್ರ ಮಸಿ ಹಚ್ಚಬೇಡಪ್ಪ. ಅವಳೊಬ್ಬಳನ್ನು ಬಿಟ್ಟು ನಾವು ನೋಡಿರೋ ಹುಡುಗಿಯರಲ್ಲಿ, ಯಾವ ವರದಕ್ಷಿಣೆ ವರೋಪಚಾರ ಆಡಂಬರದ ಮದುವೇನೂ ಮಾಡಿಕೊಡಲು ಶಕ್ತರಲ್ಲದ ಆ ಗುಮಾಸ್ತನ ತಂಗಿ ಮಂದಾಕಿನಿಯನ್ನು ಬೇಕಾದರೆ ಒಪ್ಕೋ, ನಾವು ಸಂತೋಷವಾಗಿ ಮನೆ ತುಂಬಿಸ್ಕೋತೀವಿ. ಆದರೆ…. ಈ ಹುಡುಗಿ ಮಾತ್ರ…..” ಎನ್ನುವಷ್ಟರಲ್ಲಿ ಆಕೆಯ ಕಂಠ ಬಿಗಿದುಬಂದಿತ್ತು. ತಾಯಿಯ ಕಣ್ಣೀರನ್ನು ಇನ್ನೊಂದು ಕ್ಷಣ ವೀಕ್ಷಿಸಲಾರದ ದಿಾಕರ, ತಟಕ್ಕನೆ ತಾಯಿಯ ಕೈಹಿಡಿದುಕೊಂಡು, “ನೀನು ಕಣ್ಣಲ್ಲಿ ನೀರು ಮಾತ್ರ ಹಾಕಬೇಡಮ್ಮಾ ಪ್ಲೀಸ್….. ನಿನ್ನ ಇಷ್ಟದಂತೆ ಆಗಲಿ. ಆ ಮಂದಾಕಿನಿಯನ್ನೇ ಮದುವೆಯಾಗ್ತೀನಿ,” ಎಂದಾಗ ರಮಾಬಾಯಿಗೆ ಸ್ವರ್ಗಕ್ಕೆರಡೇ ಗೇಣು!
ಮಗನನ್ನು ಎದೆಗಪ್ಪಿಕೊಂಡು ಆಕೆ ಆನಂದ ತುಂದಿಲರಾಗಿ, “ನೂರ್ಕಾಲ ತಣ್ಣಗಿರು ನನ್ನ ಕಂದ,” ಎಂದು ಹರಸಿ, ರಾಯರಿಗೆ ತುಪ್ಪದ ದೀಪ ಬೆಳಗಲು ದೇವರ ಮನೆಯತ್ತ ಧಾವಿಸಿದರು.
ಶ್ರೀಕಂಠಯ್ಯನರಿಗೂ ಕಂಠ ಹೊಮ್ಮಿ ಬಂದು ಕಣ್ಣಲ್ಲಿ ಬಳಬಳನೆ ನೀರು! ಶ್ಯಾಮಲಾ ಕೃತಜ್ಞತೆಯಿಂದ ಮೌನವಾಗಿ ಅಣ್ಣನ ಕೈ ಕುಲುಕಿ, ಒಳಗೆ ಓಡಿ ಹೋಗಿ ಒಂದು ಹಿಡಿ ಸಕ್ಕರೆ ತಂದು ಅವನ ಬಾಯಿಗೆ ತುರುಕಿದಳು.
ಉಸಿರುಗಟ್ಟಿಸಿದ್ದ ವಾತಾವರಣ ಕ್ಷಣಾರ್ಧದಲ್ಲಿ ಹಗುರವಾಯಿತು. ಒಡನೆಯೇ ಅವಳಿಗೆ. ತನ್ನಂತೆ ಇನ್ನೊಬ್ಬ ಹೆಣ್ಣಾದ ಫರೀದಾಳ ಬಗ್ಗೆ ಅಂತಃಕರಣ ಕದಡಿ, ದಿವಾಕರನನ್ನು ಎಬ್ಬಿಸಿಕೊಂಡು ಹೊರಗೆ ಕರೆತಂದು ಅನುತಾಪದಿಂದ, “ಎಲ್ಲಾ ಸರಿ ಕಣೋ….. ಆದರೆ ಪಾಪ ನಿನ್ನನ್ನೇ ನಂಬಿಕೊಂಡಿರುವ ಆ ಫರಿದಾಳಿಗೆ ಈಗ ಏನು ಹೇಳ್ತೀಯಣ್ಣ….?” ಎಂದು ಕಳಕಳಿಯಿಂದ ಕೇಳಿದಳು ಶ್ಯಾಮಲಾ.
ದಿವಾಕರನ ಅರಳಿದ ಮೊಗದ ಮೇಲೆ ತೆಳುವಾದ ಮಂದಹಾಸವೊಂದು ಮಿನುಗಿತು. “ಆ್ಞಂ…. ಫರೀದಾ…..?! ಹ್ಞೂಂ ಅವಳಿಗಾ….? ಹೌದು ಅವಳಿಗೆ ಏನು ಹೇಳೋದು….?” ಎಂದು ಗಾಢವಾಗಿ ಆಲೋಚಿಸಿದವನಂತೆ ನಟಿಸುತ್ತಾ, ತಂಗಿಯ ಬೆನ್ನ ಮೇಲೊಂದು ಜೋರು ಗುದ್ದು ಹಾಕಿ ನಕ್ಕ.
“ಫರೀದಾ…….! ಹ್ಞೂಂ…. ಅವಳು ಇದ್ರಲ್ವೇನೇ ಅವಳಿಗೆ ಹೇಳೋಕೆ……” ದಿವಾಕರನ ಗೆಲುವಿನ ನಗೆಯೆ ಪುಂಖಾನುಪುಂಖವಾಗಿ ಸುತ್ತ ಹರಡಿತು.