ಅನಿವಾರ್ಯ ಕಾರಣಗಳಿಂದ ಗಂಡನಿಂದ ದೂರವಾಗಿದ್ದ ಮೈನಾ, ತನ್ನ ಮಗ ತಂದೆಯಿಲ್ಲದೆ ಕೊರಗಬಾರದು ಎಂಬ ಕಾರಣಕ್ಕಾಗಿ ಕೊನೆಗೂ ತನ್ನನ್ನು ಹುಡುಕಿಕೊಂಡು ಬಂದ ಗಂಡನೊಂದಿಗೆ ಕಾಂಪ್ರಮೈಸ್ ಆದಳೇ......?
``ಯಶವಂತ್ ಸ್ಕೂಲ್ ವ್ಯಾನ್ ಬಂದಿದೆ ಬಾರೋ.... ಬೇಗ ಹತ್ತು.... ಮೆಲ್ಲಗೆ ಹುಷಾರ್. ತಗೋ ಇದು ಲಂಚ್ ಬ್ಯಾಗ್..... ಹತ್ತಿದ್ಯಾ ಬೈ...ಬೈ....,'' ಎನ್ನುತ್ತಾ ಮಗನನ್ನು ಸ್ಕೂಲ್ ವ್ಯಾನಿಗೆ ಹತ್ತಿಸಿ ಬಂದ ಮೈನಾ ಮನೆಯೊಳಗೆ ಕಾಲಿಡುತ್ತಾ, ``ಅಮ್ಮಾ, ಬ್ಯಾಗ್ ನಲ್ಲಿ ಎಕ್ಸ್ ಟ್ರಾ ಮಾಸ್ಕ್, ಸ್ಯಾನಿಟೈಸರ್ ಎಲ್ಲಾ ಹಾಕಿದ್ದೀಯಾ? ಎಂದು ಕೇಳಿದಳು.
``ಅವನ ಡೈರಿ ನೋಡಿ ಎಲ್ಲಾ ಹಾಕಿದ್ದೀನಿ ಕಣೆ,'' ಎಂದರು ಅವರಮ್ಮ.
``ಸರಿ ಹಾಗಿದ್ರೆ. ಇದೆ ಮೊದಲು ಅಲ್ವಾ ಅವನನ್ನು ಶಾಲೆಗೆ ಕಳುಹಿಸುತ್ತಾ ಇರೋದು ಸ್ವಲ್ಪ ಆತಂಕ ಅಲ್ವಾ,'' ಎನ್ನುತ್ತಾ ಮೈನಾ ಲಿವಿಂಗ್ ರೂಮಿನ ಸೋಫಾ ಮೇಲೆ ಕುಳಿತು ಪೇಪರ್ ಓದಲು ಆರಂಭಿಸಿದಳು.
ಆ ಪೇಪರಿನ ಒಂದು ಬದಿಯಲ್ಲಿ ನಾಳೆ ಪೋಷಕರ ದಿನವಾದ್ದರಿಂದ ನೀವು ಪೋಷಕರೊಂದಿಗೆ ಸೆಲ್ಛಿ ತೆಗೆದು ಸಂಜೆ ನಾಲ್ಕು ಗಂಟೆಯೊಳಗೆ ಕೆಳಕಂಡ ವಾಟ್ಸ್ ಆ್ಯಪ್ ನಂಬರ್ ಗೆ ಕಳುಹಿಸಿ ಎಂದಿತ್ತು.
``ಅಮ್ಮ ಬಾ, ಅಪ್ಪ ನೀವು ಬನ್ನಿ,'' ಎಂದು ಸೆಲ್ಛಿ ತೆಗೆದುಕೊಂಡಳು. ಮೂರ್ನಾಲ್ಕು ಸೆಲ್ಛಿ ಒಟ್ಟಿಗೆ ನೋಡುತ್ತಲೇ ಮಗ ಯಶವಂತ್ ನ ನೆನಪಾಗಿ, ``ಛೇ.... ನನ್ ಮಗನಿಗೆ ಈ ಅದೃಷ್ಟ ಇಲ್ವೇ.....'' ಎಂದು ಹನಿಗಣ್ಣಾದಳು.
ಅಷ್ಟರಲ್ಲಿ ಮೈನಾಳ ಅಮ್ಮ, ``ಇದೇನೇ ಹೀಗೆ ಕೂತಿದ್ದೀಯಾ.... ಮೈ ಹುಷಾರಿಲ್ವಾ,'' ಕೇಳಿದರು.
``ಹ್ಞೂಂ.... ಹೋಗು ನೀನು,'' ಎಂದಳು ಮೈನಾ.
``ಹೌದು ಕಣೆ, ನೀನು ಈಗ ಹೋಗು ಹೋಗು ಅಂತಿದ್ದೀಯ. ಎಲ್ಲಿಗೆ ಹೋಗ್ಲಿ ಹೇಳು. ಅದೂ ಸರಿ, ಕೆಲಸಕ್ಕೆ ಅಂತ ನಿನ್ನನ್ನು ಹೈದರಾಬಾದ್ ಗೆ ಕಳಿಸಿದ್ದು ಗೊತ್ತು. ಅಲ್ಲಿಂದ ಮುಂದೆ ನೀನು ಎಲ್ಲಿ ಹೋಗಿದ್ದೆ ಹೇಳು. ಇವತ್ತಾದರೂ ಹೇಳು. ನಿನ್ನ ಗಂಡ ಯಾರು? ಅವನು ಏನು ಮಾಡ್ತಿದ್ದ ಅಂತ. ಎರಡು ಸರ್ತಿ ಲಾಕ್ ಡೌನ್ ಆಯ್ತು. ನೀನು ಅವನನ್ನು ನೆನಪಿಸಿಕೊಂಡು ಕೊರಗ್ತಿದ್ದೆ. ಹೆತ್ತ ಕರುಳಿಗೆ ಅಷ್ಟೂ ಅರ್ಥವಾಗಲ್ವಾ....? ಮಗು ಎದುರು ಮಾತಾಡಕ್ಕಾಗ್ಲಿಲ್ಲ ಈಗ ಹೇಳು,'' ಎನ್ನುತ್ತಾ ಅಮ್ಮ ಸಿಟ್ಟಿನಿಂದ ಮಗಳನ್ನು ಗದರುತ್ತಾ ಅವಳ ಬಳಿ ಬಂದು ಕುಳಿತರು.
ಮೊದಲೇ ಗಂಡ ಅಭಿಯ ವಿಚಾರದಲ್ಲಿ ನೊಂದಿದ್ದ ಮೈನಾ, ``ಸುಮ್ನೆ ಇರಮ್ಮಾ ..... ಸುಮ್ನಿರು. ಮತ್ತೆ ಮತ್ತೆ ಕೇಳ್ಬೇಡ ನೋವಾಗುತ್ತೆ,'' ಎಂದು ಕಿರುಚಿದಳು.
ಹಠಕ್ಕೆ ಬಿದ್ದವರಂತೆ ಮೈನಾಳ ಅಮ್ಮ, ``ಅಲ್ಲ ಕಣೆ ನೀನು ಹೇಳಲೇಬೇಕು. ನಿನ್ನ ಅಣ್ಣಂಗೆ ಮದುವೆ ಮಾಡಬಾರದಾ....? ಅವನಿಗೆ ಈಗಲೇ ಹುಡ್ಗೀರ ಪ್ರೊಫೈಲ್ ಗಳು ಬರ್ತಿವೆ. ಬಂದ ಹುಡುಗಿ ಕೇಳಿದ್ರೆ ಹೇಳ್ತೀಯಾ....? ಅವಾಗ ಬೇಜರಾಗಲ್ವಾ.... ಸಿಟ್ ಬರಲ್ವಾ.....'' ಎಂದು ಇನ್ನಿಲ್ಲದ ಹಾಗೆ ಮಗಳ ಮೇಲೆ ರೇಗಾಡಿದರು.
ನಂತರ ಅಡುಗೆ ಮನೆಯಲ್ಲಿ ಬೇಕೆಂತಲೇ ಸದ್ದು ಮಾಡಿ ಬಂದು ಪುನಃ, ``ಅಯ್ಯೋ... ಮದುವೆ ಆಗಿದಿಯೋ ಇಲ್ವೋ ಏನೂಂತ ಹೇಳು. ಯಾವಾಗ ಕರೆದ್ರೂ ಆಗ ಬರ್ತೀನಿ, ಈಗ ಬರ್ತೀನಿ ಅಂತಿದ್ದೆ. ಕೊರೋನಾ ಸ್ಟಾರ್ಟ್ ಆಗೋ ಟೈಮಿಗೆ ಇಲ್ಲೇ ಬೆಂಗಳೂರಲ್ಲೇ ಕೆಲಸ ಹುಡುಕಿಕೊಂಡು ಮನೆಗೆ ಬಂದೆ. ಇನ್ನೆಷ್ಟು ದಿನ ನಾನೂ ಸುಮ್ಮನೆ ಇರಲಿ? ನಿಮ್ಮತ್ತೆ ಮಕ್ಕಳು ನಿಮ್ಮಪ್ಪನಿಗೆ ಎಲ್ಲೋ ಸಿಕ್ಕಾಗ ಮೈನಾ ಲಿವ್ ಇನ್ ಇದ್ದು, ಮದುವೆ ಆಗಿಲ್ಲ. ಮಗು ಹುಟ್ಟೋ ಟೈಮಿಗೆ ಸರಿಯಾಗಿ ಅವನು ಕೈ ಕೊಟ್ಟ. ಅವಳು ಒಬ್ಬಳೇ ಸಂಭಾಳಿಸ್ಕೊಂಡು ಎಲ್ಲಾ ಸರಿ ಇದೆ ಅನ್ನೋ ಹಂಗೆ ಡ್ರಾಮಾ ಮಾಡ್ತಿದ್ದಾಳೆ ಅಂದ್ರಂತೆ.