ತುಂಬಿದ ಮನೆಯ ಒಡತಿಯಾದ ಭಾವನಾ ತನ್ನ ಹಳೆಯ ಪ್ರೇಮಿ ಹರಿಯನ್ನು ಮರೆಯಲಾಗದೆ, ಅವನು ವಿವಾಹಿತನಾಗಿದ್ದರೂ ಮತ್ತೆ ತನ್ನ ಪ್ರೇಮ ಪ್ರಸಂಗ ಮುಂದುವರಿಸಿದಳು. ಈ ಅತಾರ್ಕಿಕ ಪ್ರಸಂಗಕ್ಕೆ ಭಾವನಾಳ ಆಪ್ತ ಗೆಳತಿಯಾದ ಅಶ್ವಿನಿ ಒತ್ತಾಸೆ ನೀಡಲಿಲ್ಲ. ಹರಿಯ ಪತ್ನಿ ವಾಣಿಯ ನೊಂದ ಮನದ ಮಾತುಗಳು ಅಶ್ವಿನಿಯ ಮೇಲೆ ಪ್ರಭಾವ ಬೀರಿದ್ದು ಹೇಗೆ? ಮುಂದೆ ಭಾವನಾ ಹರಿಯ ಸಂಬಂಧ ಏನಾಯಿತು.....?
ಮಧ್ಯಾಹ್ನದ ಕಿರು ನಿದ್ರೆ ಮುಗಿಸಿದ ಅಶ್ವಿನಿ ಹಾಯಾಗಿ ಕಾಫಿಯನ್ನು ಆಸ್ವಾದಿಸುತ್ತಾ ಮೊಬೈಲ್ ಕೈಗೆತ್ತಿಕೊಂಡಳು. ಅನ್ ನೋನ್ ನಂಬರ್ ನಿಂದ ಮೂರು ಮಿಸ್ಡ್ ಕಾಲ್ ಗಳು.... ಯಾರಿದು....? ಎಂದುಕೊಳ್ಳುತ್ತಾ ಟ್ರೂ ಕಾಲರ್ ನಲ್ಲಿ ಚೆಕ್ ಮಾಡಿದಾಗ ಯಾವ ಮಾಹಿತಿಯೂ ಫೆಚ್ ಆಗಲಿಲ್ಲ. ಕುತೂಹಲಕ್ಕೆ ತೆರೆ ಎಳೆಯುವಂತೆ ಮತ್ತೆ ಫೋನ್ ರಿಂಗಾಯಿತು.
``ಹಲೋ.... ಅಶ್ವಿನಿಯವರಾ.....?'' ಯಾವುದೋ ಅಪರಿಚಿತ ಮಹಿಳೆಯ ಧ್ವನಿ.
``ಯಾರು....?'' ಎಂದಳು ಕುತೂಹಲದಿಂದ.
``ಮೇಡಂ, ನಾನು ಹರಿಪ್ರಸಾದ್ ರವರ ಮಿಸೆಸ್ ವಾಣಿ ಪ್ರಸಾದ್. ನಿಮ್ಮ ಜೊತೆ ಸ್ವಲ್ಪ ಮಾತಾಡಬೇಕಿತ್ತು. ಮೀಟ್ ಮಾಡೋಣ ಅಂದ್ರೆ ಸ್ವಲ್ಪ ತೊಂದರೆ ಇದೆ.... ನೀವು ಫ್ರೀ ಇದೀರಾ....?'' ಅವಳ ಧ್ವನಿಯಲ್ಲಿದ್ದ ಆತಂಕವನ್ನು ಸುಲಭವಾಗಿ ಗುರುತಿಸಿದ ಅಶ್ವಿನಿ, ``ಹೇಳಿ ವಾಣಿ..... ಹೇಗಿದೀರಾ....? ನಿಮ್ಮ ಫ್ಯಾಮಿಲಿ ಫೋಟೋವನ್ನು ಎಫ್ ಬಿನಲ್ಲಿ ನೋಡಿದೀನಿ. ವೆರಿ ಬ್ಯೂಟಿಫುಲ್ ಫ್ಯಾಮಿಲಿ...... ನಿಮ್ಮ ಪರಿಚಯ ಆದದ್ದು ತುಂಬಾ ಸಂತೋಷ. ಹೇಳಿ..... ಏನು ವಿಷಯ...?'' ಕೇಳಿದಳು.
ಅಶ್ವಿನಿಯ ಮಾತಿನಿಂದ ಸಮಾಧಾನಗೊಂಡ ವಾಣಿ, ``ನಿಮ್ಮ ಹತ್ರ ಒಂದು ಮುಖ್ಯವಾದ ವಿಷಯ ಹೇಳಬೇಕು..... ಹೇಗೆ ಶುರು ಮಾಡೋದು ತಿಳೀತಿಲ್ಲ..... ತುಂಬಾ ಪರ್ಸನ್, ನಮ್ಮಿಬ್ಬರ ಮಧ್ಯೆಯೇ ಇರಲಿ.....'' ಎಂದಳು ಅನುಮಾನಿಸುತ್ತಾ.
``ಓ.ಕೆ. ಹೆಸಿಟೇಟ್ ಮಾಡ್ಕೋಬೇಡಿ.... ಮೂರನೆಯವರಿಗೆ ಈ ವಿಷಯ ರೀಚ್ ಆಗಲ್ಲ. ಬಿಲೀವ್ ಮೀ..... ಧೈರ್ಯವಾಗಿ ಹೇಳಿ....'' ಎಂದಳು ಅಶ್ವಿನಿ.
``ನೋಡಿ ಅಶ್ವಿನಿ, ಅದ್ಯಾರೋ ಭಾವನಾ ಅಂತ ನಿಮ್ಮ ಕ್ಲೋಸ್ ಫ್ರೆಂಡ್ ಅಂತೆ.... ಅವ್ರಿಗೂ ಹರಿಗೂ ಸ್ಕೂಲ್ ಡೇಸ್ ನಿಂದ ಏನೋ ಆಕರ್ಷಣೆ ಇತ್ತು ಅಂತ ಕೇಳಿದ್ದೆ..... ಲಾಸ್ಟ್ ಮಂತ್ ನೀವೆಲ್ಲಾ ಓಲ್ಡ್ ಸ್ಟೂಡೆಂಟ್ಸ್ ಮೀಟ್ ಅಂತ ರೆಸಾರ್ಟ್ ನಲ್ಲಿ ಮೀಟ್ ಆದಾಗಿನಿಂದ ಇವರು ತುಂಬಾ ಚೇಂಜ್ ಆಗಿದ್ದಾರೆ.....'' ಬಿಕ್ಕಳಿಕೆಯ ಸದ್ದು.
``ಓಹ್.....! ಕೂಲ್ ವಾಣಿ.... ಕೂಲ್..... ಹೇಳಿ.....'' ಸಂತೈಸಿದಳು.
``..... ಯಾವಾಗಲೂ ಫೋನ್ ನಲ್ಲೇ ಇರ್ತಾರೆ. ಮಕ್ಕಳ ಬಗ್ಗೆ, ನನ್ನ ಬಗ್ಗೆ ಇಂಟ್ರೆಸ್ಟ್ ಕಳ್ಕೊಂಡಿದ್ದಾರೆ. ಈಗಾಗಲೇ ಎರಡು ಮೂರು ಬಾರಿ ಎಲ್ಲೆಲ್ಲಿಯೋ ಮೀಟ್ ಆಗಿ ಬಂದಿದ್ದಾರೆ. ಏನ್ ಕೇಳಿದ್ರೂ ರೇಗಾಡ್ತಾರೆ. ಹೀಗಾದರೆ ಮುಂದೆ ನಮ್ಮ ಮಕ್ಕಳ ಭವಿಷ್ಯ
ವೇನು....? ನೀವು ಆ ಭಾವನಾಗೆ ತುಂಬಾ ಕ್ಲೋಸ್ ಅಂತ ಗೊತ್ತಾಯ್ತು..... ಅವ್ರಿಗೆ ಸ್ವಲ್ಪ ಬುದ್ಧಿ ಹೇಳಿ ನನ್ನ ಸಂಸಾರ ಉಳಿಸ್ಕೊಡಿ....'' ವಾಣಿ ಗದ್ಗದಿತಳಾದಳು.
ಅವಳ ದನಿಯಲ್ಲಡಗಿದ್ದ ದುಗುಡ ಅವಳ ಆಳವಾದ ನೋವಿಗೆ ಸಾಕ್ಷ್ಯ ನೀಡುವಂತಿತ್ತು. ಆ ಗಾಢ ವಿಷಾದ ಮನಸ್ಸಿಗೆ ನಾಟುವಂತಿತ್ತು.