ಆಕಸ್ಮಿಕ ಭೇಟಿಯಿಂದ ನಿರೀಕ್ಷಾಳಲ್ಲಿ ಅನುರಕ್ತನಾದ ಅಮರ್‌, ಮದುವೆಯ ವಿಷಯವಾಗಿ ತಂದೆಯ ಬಳಿ ಮಾತನಾಡಲು ಬಂದಾಗ, ನಡೆದದ್ದೇ ಬೇರೆ. ವಿಧಿಯ ಕೈವಾಡದಿಂದ ಅನಿವಾರ್ಯವಾಗಿ ಅಗಲಿದ ಅಮರ್ನಿರೀಕ್ಷಾರ ಬಾಳಲ್ಲಿ ಮುಂದೆ ನಡೆದದ್ದಾದರೂ ಏನು…….?

ಕಾರು ಮಡಿಕೇರಿಯ ನಿರೀಕ್ಷಣಾ ಮಂದಿರದ ಮುಂದೆ ಬಂದು ನಿಂತಿತು. ನಿರೀಕ್ಷಾ ರೋಮಾಂಚನಗೊಂಡಳು. ಜಿಟಿ ಜಿಟಿ ಮಳೆ ಹನಿಗಳು ಮೈಮೇಲೆ ಬೀಳಲು ಗತ ಜೀವನದ ಚಿತ್ರಗಳು ನಾ ಮುಂದು, ತಾ ಮುಂದು ಎನ್ನುತ್ತಾ ನುಗ್ಗತೊಡಗಿದ. ಮಳೆ ಹನಿಯೊಂದಿಗೆ ಅವಳ ಕಣ್ಣೀರು ಸೇರಿತು.

“ಲಾ….ಲಾ…. ಅಮ್ಮಾ, ಏನಿದು…. ಎಲ್ಲಿ ನೋಡಿದಲ್ಲಿ ಹಸಿರು ಸೀರೆ ಹೊತ್ತ ಭೂತಾಯಿ, ಮುಂಜಾವಿನ ಮಳೆ ಸ್ವರ್ಗವಿದು,” ಎಂದು ಉತ್ಸಾಹದಿಂದ ಹೇಳಿದಾಗಲೇ ವಾಸ್ತವಕ್ಕೆ ಬಂದಳು ನಿರೀಕ್ಷಾ.

“ನಮಸ್ಕಾರ ಸರ್‌,” ಪ್ರಣವ್ ಕುಣಿದಾಡುವುದನ್ನು ನಿಲ್ಲಿಸಿ ಗಂಭೀರನಾದ.

ಆ ವ್ಯಕ್ತಿ ಮುಗುಳ್ನಕ್ಕು, ಲಗೇಜ್‌ ಎತ್ತಿಕೊಳ್ಳುತ್ತಾ…… “ಪ್ರಣವ್ ಸರ್‌ ನೀವೇ ಅಲ್ಲವೇ…?” ಎಂದು ಕೇಳಿದ.

ಪ್ರಣವ್ ಹೌದು ಎಂಬಂತೆ ತಲೆ ಆಡಿಸಿದ.

“ಬನ್ನಿ ಸಾರ್‌ ಕಾಫಿ ನಾಡಿಗೆ ಸ್ವಾಗತ. ನನ್ನ ಹೆಸರು ರಾಮಯ್ಯ. ನಿಮ್ಮ ಸೇವೆಯೇ ನನ್ನ ಆದ್ಯ ಕರ್ತವ್ಯ,” ಎಂದು ನಾಟಕೀಯವಾಗಿ ನಗುತ್ತಾ ಹೇಳಿದ.

ಪ್ರಣವ್ ಪ್ರತಿ ನಕ್ಕ. ಅಷ್ಟರಲ್ಲಿಯೇ 60 ವರ್ಷ ಆಸುಪಾಸಿನ ವ್ಯಕ್ತಿಯೊಬ್ಬರು ಬಂದು, “ರಾಮಯ್ಯ ಶುರುವಾಯಿತಾ ನಿನ್ನ ಮಾತು…..,” ಎನ್ನುತ್ತಾ, “ನಮಸ್ಕಾರ ಸಾರ್‌, ನಾನು ಇಲ್ಲಿಯ ಮೇಲ್ವಿಚಾರಕ. ನನ್ನ ಹೆಸರು ನಂಜುಂಡಯ್ಯ,” ಎಂದು ತನ್ನನ್ನು ಪರಿಚಯಿಸಿಕೊಂಡರು.

“ನಮಸ್ಕಾರ. ನಾನು ಪ್ರಣವ್, ಇವರು ನನ್ನ ತಾಯಿ,” ಎಂದ ಪ್ರಣವ್.

ಕನ್ನಡಕ ಸರಿ ಮಾಡಿಕೊಂಡು ನಿರೀಕ್ಷಾಳನ್ನು ನೋಡುತ್ತಾ, “ನಮಸ್ಕಾರ ತಾಯಿ,” ಎಂದರು ನಂಜುಂಡಯ್ಯ.

ನಿರೀಕ್ಷಾ ಅವರನ್ನು ನೋಡಿ ಗರ ಬಡಿದವಳಂತೆ ಹಾಗೆ ನಿಂತುಬಿಟ್ಟಳು. ಮಗ ತಾಯಿಯ ಭುಜ ಹಿಡಿದು ಅಲುಗಾಡಿಸಿದಾಗ ವಾಸ್ತವಕ್ಕೆ ಬಂದ ನಿರೀಕ್ಷಾ, “ನಮಸ್ಕಾರ” ಎಂದಷ್ಟೇ ಹೇಳಿ ಮುಖ ಕೆಳಗೆ ಹಾಕಿದಳು.

“ಬನ್ನಿ ನಿಮಗೆ ಗೆಸ್ಟ್ ಹೌಸ್‌ ತೋರಿಸ್ತೀನಿ. ಅಲ್ಲೆಲ್ಲಾ ವ್ಯವಸ್ಥೆಯಾಗಿದೆ ಸಾರ್‌.”

“ನೀವು ವಯಸ್ಸಿನಲ್ಲಿ ತುಂಬಾ ದೊಡ್ಡವರು. ನನ್ನನ್ನ ಸರ್‌ ಅನ್ನಬೇಡಿ…. ಪ್ರಣವ್ ಎಂದರೆ ಸಾಕು,” ಎಂದು ಮುಗುಳ್ನಕ್ಕ ಪ್ರಣವ್.

“ಆಯಿತು. ನಿನ್ನಿಷ್ಟ,” ಎನ್ನುತ್ತಾ, ನಿರೀಕ್ಷಾಳನ್ನೇ ನೋಡುತ್ತಾ ಒಳನಡೆದರು ನಂಜುಂಡಯ್ಯ.

ಸರ್ಕಾರಿ ಎಂಜಿನಿಯರ್‌ ಹುದ್ದೆಯಲ್ಲಿದ್ದ ಪ್ರಣವ್ ಕೆಲಸದ ನಿಮಿತ್ತ ಒಂದು ತಿಂಗಳ ಮಟ್ಟಿಗೆ ಮಡಿಕೇರಿಗೆ ಬಂದಿದ್ದ. ಜೊತೆಗೆ ತಾಯಿಯನ್ನೂ ತನ್ನೊಂದಿಗೆ ಕರೆತಂದಿದ್ದ.

ನಿರೀಕ್ಷಾ ಭಾರವಾದ ಹೆಜ್ಜೆಗಳನ್ನಿಡುತ್ತಾ ಮಗನನ್ನು ಹಿಂಬಾಲಿಸಿದಳು. ಮಳೆಯ ಪ್ರತಿಯೊಂದು ಹನಿಯಲ್ಲೂ ಒಂದೊಂದು ನೆನಪು ಅಡಗಿದೆ. ಮಧುರ ನೆನಪುಗಳ ಜೊತೆಗೆ ಆ ಘಟನೆ ಬೇಡ ಬೇಡ ಎಂದರೂ ನೆನಪಾಗುತ್ತಿತ್ತು. ಇಲ್ಲಿಗೆ ಬರುವ ಮೊದಲು, ನಿರ್ಧರಿಸಿದ ಹಾಗೆ ಪ್ರಣವ್ ಗೆ ತನ್ನ ಭೂತಕಾಲವನ್ನು ಹೇಳುವ ಕಾಲ ಹತ್ತಿರ ಬಂದಿದೆ, ಎಂದುಕೊಳ್ಳುತ್ತಾ ಗೆಸ್ಟ್ ಹೌಸ್‌ ಒಳಗೆ ನಡೆದಳು.

“ಅಮ್ಮಾ, ನಾನು ಇಲ್ಲೇ ಸುತ್ತಾಡಿ ಬರುವೆ,” ಎಂದ ಪ್ರಣವ್.

“ಸ್ವಲ್ಪ ಹೊತ್ತು ವಿಶ್ರಾಂತಿ ತಗೋ ಪ್ರಣವ್, ಆಮೇಲೆ ಹೋಗುವಿಯಂತೆ,” ಎಂದಳು ನಿರೀಕ್ಷಾ.

“ಇಲ್ಲಮ್ಮ….. ಈ ಪ್ರಕೃತಿಯ ಸೊಬಗನ್ನು ನೋಡಲು ಹಾತೊರೆಯುತ್ತಿದ್ದೇನೆ. ನೀನು ಮಲಗಿರು, ಅಡುಗೆ ಮಾಡಲು ಒಬ್ಬಳು ಬರುತ್ತಾಳೆ,” ಎನುತ್ತಲೇ ಹೊರಗೆ ಓಡಿದ ಪ್ರಣವ್.

`ಎಲ್ಲಾ ಅಮರ್‌ ಹಾಗೇನೆ….  ಈ ಮಳೆ, ಕಾಡು, ಹಸಿರು ಎಂದರೆ ಅವರೂ ಹೀಗೆ ಆಡುತ್ತಿದ್ದರು,’ ಎಂದು ಹಳೆಯದನ್ನು ನೆನೆಸಿಕೊಂಡು ಕಿಟಕಿಯ ಹತ್ತಿರ ಬಂದು ಹೊರಗಡೆ ನೋಡುತ್ತಾ ನಿಂತಳು ನಿರೀಕ್ಷಾ. ಮಳೆ ಜೋರಾಗಿ ಸುರಿಯಲಾರಂಭಿಸಿತು. ಜೊತೆಗೆ ಹಳೆಯ ನೆನಪು.

“ನಿರೀ…. ಏನು ನಿನ್ನದು…..?” ಹಿನ್ನೆಲೆಯಲ್ಲಿ, `ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ಸೂತಿ ಹಿಡಿದು ಸುರಿಯುತ್ತಿತ್ತು…..’ ಹಾಡು ಗುನುಗುತ್ತಿತ್ತು.

“ಮತ್ತೆ, ಬಾರೆ….. ಈ ಹಾಡು ನಿನಗೆ  ಇಷ್ಟ ಅಲ್ವಾ…..”

“ಹೌದು….”

“ಅದಕ್ಕೆ….. ಬಾರೆ ಮಳೆಯಲಿ ನೆನೆಯೋಣ……”

“ಮತ್ತೆ…..! ಅಮ್ಮು ನಿಮ್ಮ ತಲೆಕೆಟ್ಟಿದೆಯಾ? ಮೊನ್ನೆ ತಾನೇ ಮಳೆಯಲಿ ನೆಂದು ಜ್ವರ ಬಂದು ನಿನ್ನೆ ತಾನೇ ಜ್ವರ ಬಿಟ್ಟಿದೆ. ಈಗ ಮತ್ತೆ ನೆನೆಯುವುದು ಬೇಡ. ನಾನೂ ಬರಲ್ಲ, ನೀವು ಹೋಗುವುದು ಬೇಡ.”

“ತುಂತುರು ಇಲ್ಲಿ ನೀರ ಹಾಗೇ ಕಂಪನ…..”

“ಗೊತ್ತು ಈ ಎಲ್ಲಾ ಹಾಡು ನನಗೆ ಇಷ್ಟ. ಆದರೆ ಬೇಡ ಅಂದ್ರೆ ಬೇಡ.” ಮುಖ ಊದಿಸಿಕೊಂಡು ಕಿಟಕಿಯಲ್ಲಿ ಕೈ ಹಾಕಿ ಮಳೆ ನೀರನ್ನು ಹಿಡಿಯುತ್ತಾ ನಿಂತ. ಹಿಂದಿನಿಂದ ಅವರನ್ನು ಅಪ್ಪಿಕೊಂಡು, “ಸಿಟ್ಟಾ ಅಮ್ಮು, ಸಾರಿ ಕಣೋ. ನೋಡಿ ಇನ್ನು ಮೈ ಬೆಚ್ಚಗಿದೆ. ಮಲೆನಾಡ ಮಳೆ ಇದು. ನೀನು ಬಿಟ್ಟರೂ ಅದು ನಿನ್ನನ್ನು ಬಿಡಲ್ಲ…… ಹುಷಾರ್‌ ಆದ ಮೇಲೆ ಮತ್ತೆ ಮನೆಯಲ್ಲಿ ಕುಣಿಯುವೆ.”

“ನಿಜ, ಓ…. ಮೈ ಲವ್,” ಎನ್ನುತ್ತಾ ಮುದ್ದಾಡಿ ಅಪ್ಪಿಕೊಂಡ.

ಮಳೆಯೆಂದರೆ ಅಮರನಿಗೆ ಎಲ್ಲಿಲ್ಲದ ಇಷ್ಟ. ಎಷ್ಟು ನೆಂದರೂ ಸಾಲದು ಅವನಿಗೆ.

“ಅಮ್ಮೋರೆ……. ” ಶಬ್ದ ಬಂದಾಗ ವಾಸ್ತವಕ್ಕೆ ಬಂದು ಹಿಂದೆ ತಿರುಗಿದಳು.

ಅವಳಿಗೆ ಆಶ್ಚರ್ಯವಾಗಿತ್ತು! ಎದುರಿಗೆ ವೈದಾ ನಿಂತಿದ್ದಳು. ವಯಸ್ಸಾಗಿತ್ತು. ಮುಖದ ತುಂಬಾ ನೆರಿಗೆ, ಆದರೆ ಅದೇ ಕಣ್ಣು, ಅದೇ ನಗು ಮರೆಯಲಾಗದು. `ತನ್ನನ್ನು ಗುರುತು ಹಿಡಿಯುವಳಾ….?’ ಎಂದುಕೊಳ್ಳುತ್ತಾ ಮುಂದೆ ಹೋಗಿ ನಿಂತಳು ನಿರೀಕ್ಷಾ.

“ನಾನು ಅಡುಗೆ ವೇದಾ… ವೆಜ್‌ ಬೇಕಾ, ನಾನ್‌ ವೆಜ್‌ ಬೇಕಾ,” ಎಂದು ಕೇಳಿ ನಕ್ಕಳು.

ವೇದಾ ಇವಳನ್ನೇ ದಿಟ್ಟಿಸಿ ನೋಡಿದಳು. ನಿರೀಕ್ಷಾ ಅವಳ ಹತ್ತಿರ ಹೋಗಿ ಅವಳ ಕೈಹಿಡಿದು,“ನೆನಪಾಗುತ್ತಿಲ್ವಾ ವೇದಾ….,” ಎಂದು ಕೇಳಿದಳು ನಿರೀಕ್ಷಾ.

“ನಿರೀ….. ಅಮರ್‌ ಸಾಬ್‌ ಕೆ ನಿರೀ…..” ಎನ್ನುತ್ತಾ ಅಪ್ಪಿಕೊಂಡಳು. ಇಬ್ಬರೂ ತುಂಬಾ ಹೊತ್ತು ಅತ್ತರು.

“ಅವನು…..”

“ನನ್ನ ಮಗ….”

“ಅಮರ್‌ ಸಾಬ್‌ ಅವರ ಮಗ ಇಷ್ಟು ದೊಡ್ಡವನಾ….” ಉದ್ಗರಿಸಿದಳು ವೇದಾ.

ನಿರೀಕ್ಷಾ ಅಳುತ್ತಾ ಹೌದು ಎಂಬಂತೆ ಗೋಣು ಆಡಿಸಿದಳು.

“ಹೇಗಿದ್ದೀಯಾ ವೇದಮ್ಮಾ…..”

“ಚೆನ್ನಾಗಿದ್ದೀನಿ…..”

“ನೀನು….. ನಿನ್ನ ನೋಡಿ ಖುಷಿಯಾಯಿತು” ಎಂದಳು ಕಣ್ಣೊರೆಸಿಕೊಳ್ಳುತ್ತ.

“25 ವರ್ಷಗಳು ಕಳೆದ,” ಎಂದಳು.

ಪ್ರಣವ್ ಒಳ ಬರುತ್ತಿದ್ದಂತೆ ಇಬ್ಬರೂ ಸುಮ್ಮನಾದರು.

“ಅಜ್ಜಿ….. ನನ್ನ ತಾಯಿ ಪ್ಯೂರ್‌ ವೆಜ್‌, ನಾನೂ ಕೂಡ,” ಕಣ್ಣು ಪಿಳುಕಿಸಿದ ಪ್ರಣವ್.

ಪ್ರಣವ್ ನ ಗಲ್ಲ ಮುಟ್ಟಿ ಮನಸ್ಸಲ್ಲೇ, `ಸುಖವಾಗಿರುವ ಕಂದ,’ ಎಂದು ಅಡುಗೆಮನೆಗೆ ಹೋದಳು ವೇದಾ.`ಏನು…,’ ಎನ್ನುತ್ತಾ ಸನ್ನೆ ಮಾಡಿ ಕೇಳಿದ ಪ್ರಣವ್.

“ವಯಸ್ಸಾದವರು ಆಶೀರ್ವಾದ ಮಾಡಿರಬೇಕು ಬಿಡು,” ಎಂದಳು.

ಮಾರನೇ ದಿನ ಮಗ ಕೆಲಸಕ್ಕೆ ಹೋದ ನಂತರ, ವೇದಾಳ ಜೊತೆ ರಾಜಾಸೀಟ್‌ ನೋಡಲು ಹೊರಟಳು ನಿರೀಕ್ಷಾ.

ಗೇಟಿನ ಬಳಿ ಬರುತ್ತಿದ್ದಂತೆ ಅಮರ್‌ ನ ನೆನಪು ಬಂದು ಕಣ್ಣು ಮಂಜಾದವು. ಇದು ನಾನು ನನ್ನ ಅಮ್ಮು ಪ್ರತಿದಿನ ಕೈಕೈ ಹಿಡಿದು ಅಡ್ಡಾಡುತ್ತಿದ್ದ ಜಾಗ.

`ನನ್ನ ತೊಡೆಯ ಮೇಲೆ ಕುಳಿತುಕೋ.’

`ಯಾಕೋ…?’

`ಇದು ನಿನ್ನ ರಾಜಾಸೀಟ್‌…. ನನ್ನ ರಾಣಿಗಾಗಿ,’ ಎನ್ನುತ್ತಿದ್ದ.

`ಬರಲಿ ಒಂದು ಹಾಡು.’

`ಮಳೆ ಎಂದರೆ ಹಾಡು ಬರುವುದು.’

`ಪ್ಲೀಸ್‌ ಕಣೋ…. ನನಗಾಗಿ ಒಂದು ಹಾಡು.’

`ಹಾಗಾದರೆ ಬಂದು ನನ್ನ ತೊಡೆಯ ಮೇಲೆ ಕುಳಿತುಕೋ ಮತ್ತೆ….’

`ಏನು…?’ ಗಲ್ಲದ ಮೇಲೆ ಬೆಟ್ಟು ಇಟ್ಟುಕೊಳ್ಳುತ್ತಿದ್ದ ನಾನು ನಾಚಿ ನೀರಾಗುತ್ತಿದ್ದೆ.

`ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ ಮಹಾರಾಣಿಯ ಹಾಗೆ…..’ ಹಾಡುತ್ತಾ ತನ್ನ ತೊಡೆಯ ಮೇಲೆ ಕೂರಿಸಿಕೊಳ್ಳುತ್ತಿದ್ದರು. ನಿರೀಕ್ಷಾ ಒಮ್ಮೆಲೇ ತನಗೆ ಅರಿವಿಲ್ಲದೆ ನಕ್ಕಳು.

“ಅಮರ್‌ ಸರ್‌ ನೆನಪಾಗುತ್ತಿದ್ದಾರಾ….?” ವೇದಾ ಕೇಳಿದಳು.

“ಹೌದು….” ಎನ್ನುತ್ತಾ ಮುಂದೆ ನಡೆದಳು.

“ಪ್ರಣವ್ ಗೆ ಅಪ್ಪನ ಬಗ್ಗೆ ಗೊತ್ತಾ…..”

“ಇಲ್ಲ…. ಆದರೆ ಇಂದಲ್ಲ, ನಾಳೆ ಗೊತ್ತಾಗುತ್ತೆ. ಈ ಜೀವನದಲ್ಲಿ ಯಾವ ಊರಿಗೆ ಬರುವುದಿಲ್ಲ ಎಂದುಕೊಂಡಿದ್ದೆನೋ ಆ ಊರಿಗೆ ಮತ್ತೆ ಬರುವಂಥ ಪರಿಸ್ಥಿತಿ ಬಂದಿದೆ. ಇಲ್ಲಿಯೇ ಅವನ ಅಪ್ಪನ ಬಗ್ಗೆ ಎಲ್ಲವನ್ನೂ ಹೇಳುವೆ, ಹೇಳಲೇಬೇಕು,” ತನ್ನ ಗಟ್ಟಿ ನಿರ್ಧಾರವನ್ನು ವೇದಾಳ ಮುಂದೆ ತೆರೆದಿಟ್ಟಳು ನಿರೀಕ್ಷಾ.

ಯಾರ ಅಪ್ಪಣೆ ಇಲ್ಲದೆ ದಿನಗಳು ಹಾಗೆಯೇ ಮುಂದೆ ಸಾಗುತ್ತಿದ್ದವು. ಪ್ರಣವ್ ನ ಕೆಲಸ ಮುಂದುವರಿದಿತ್ತು. ಮಧ್ಯೆ ಮಧ್ಯೆ ತಾಯಿಗೆ ಕೊಡಗಿನ ಸೌಂದರ್ಯವನ್ನು ವರ್ಣಿಸುತ್ತಿದ್ದವು.

ಇತ್ತ ನಿರೀಕ್ಷಾ ಅಮರ್‌ ನ ನೆನಪಲ್ಲಿ, ಮಗನಿಗೆ ಇಂದು ಹೇಳಬೇಕೋ, ನಾಳೆ ಹೇಳಬೇಕೋ ಎಂಬ ಗೊಂದಲದಲ್ಲಿ ದಿನಗಳನ್ನು ದೂಡುತ್ತಿದ್ದಳು.

“ಅಮ್ಮಾ, ನಾಳೆ ಬೆಳಗ್ಗೆ ಬೇಗ ಎಬ್ಬಿಸು, ತಲಕಾವೇರಿಗೆ ಹೋಗಬೇಕು,” ಎಂದ ಪ್ರಣವ್.

“ಆಯಿತು ಪ್ರಣವ್, ನಾಳೆ ಭಾನುವಾರ. ಅಲ್ಲಿಂದ ನೇರ ಮನೆಗೆ ಬಾ. ನಿನ್ನೊಂದಿಗೆ ಮಾತನಾಡುವುದಿದೆ,” ಎಂದಳು.

“ಆಯಿತು ಅಮ್ಮಾ,” ಎಂದು ಗುಡ್‌ ನೈಟ್‌ ಹೇಳಿ ಮಲಗಿದ.

ಬೆಳಗ್ಗೆ ನಿರೀಕ್ಷಾ ಮಗನನ್ನು ಬೇಗನೆ ಎಬ್ಬಿಸಿದಳು.

“ಮಧ್ಯಾಹ್ನ ನೇರ ಮನೆಗೆ ಬಾ,” ಎಂದು ಹೇಳಲು ಮರೆಯಲಿಲ್ಲ, `ಹುಷಾರು,’ ಎಂದಿತು ತಾಯಿಯ ಮನ.

ಮಧ್ಯಾಹ್ನ ಮಗನ ದಾರಿ ಕಾಯುತ್ತಾ ಕುಳಿತಿದ್ದ ನಿರೀಕ್ಷಾಳಿಗೆ, “ಬನ್ನಿ, ಒಳಗೆ ಬನ್ನಿ….” ಎನ್ನುವ ಮಾತು ಕೇಳಿ ಹೊರಗೆ ಬಂದಳು.

ಹೊರಗೆ ಪ್ರಣವ್ ಜೊತೆ ಒದ್ದೆಯಾದ ಬಟ್ಟೆಯಲ್ಲಿ ಗಡ್ಡಧಾರಿ ಮನುಷ್ಯ ಮುಖ ಕೆಳಗೆ ಹಾಕಿಕೊಂಡು ಒಳಬರುತ್ತಿದ್ದ.

“ಓ….. ಅಮ್ಮಾ ಇಲ್ಲೇ ಇದ್ದೀಯಾ….. ಹೊರಗಡೆ ಧಾರಾಕಾರ ಮಳೆ ಬರುತ್ತಿದೆ. ದೇವಾಲಯದ ಪಕ್ಕ ಒಂದು ಪಾಳುಬಿದ್ದ ಮನೆ ಇದೆಯಲ್ಲ ಅಲ್ಲಿ ಇವರು ನಡುಗುತ್ತಿದ್ದರು….” ಎಂದ ಪ್ರಣವ್.

“ಜ್ವರ ಬಂದಿದೆಯಾ….?”

“ಹೌದಮ್ಮಾ…. ಅದಕ್ಕೆ ಆಸ್ಪತ್ರೆಗೆ ಹೋಗಿ ಮಾತ್ರೆ, ಔಷಧಿ ಎಲ್ಲ ತೆಗೆದುಕೊಂಡು ಬಂದಿದ್ದೇನೆ. ಅಮ್ಮಾ….. ನಿನಗೆ ಒಂದು ವಿಷಯ ಮುಚ್ಚಿಟ್ಟಿದ್ದೆ…..” ಎಂದ ಪ್ರಣವ್ ನಿರೀಕ್ಷಾ ಕಣ್ಣನ್ನು ಅಗಲಿಸಿ ಭಯ ಆತಂಕದಿಂದ ಮಗನನ್ನು ನೋಡಿದಳು.

“ಹೋದ ವಾರ ಮಧ್ಯಾಹ್ನ ಕೆಲಸವೆಲ್ಲಾ ಮುಗಿದಿತ್ತು. ಹೊರಗಡೆ ಮಳೆ ಸುರಿಯುತ್ತಿತ್ತು. ನಿನಗೆ ಗೊತ್ತಲ್ಲ….. ನನಗೆ ಮಳೆಯೆಂದರೆ ಎಷ್ಟು ಇಷ್ಟ ಅಂತ. ಅದಕ್ಕೆ ಮಳೆಯಲಿ ಜೀಪು ತೆಗೆದುಕೊಂಡು ಕಣ್ಣಿಗೆ ಕಾಣುವ ಆ ಬೆಟ್ಟಕ್ಕೆ ಹೋದೆ. ಬೆಟ್ಟದ ತುದಿಯಲ್ಲಿ ಜೀಪು ನಿಲ್ಲಿಸಿ ಮಳೆಯಲ್ಲಿ ಮನಸೋ ಇಚ್ಛೆ ನೆನೆದೆ. ಮಳೆಯಲ್ಲಿ ಮೈ ಮರೆತಾಗ ಬೆಟ್ಟದ ತುದಿಗೆ ಬಂದಿದ್ದು ಗೊತ್ತಾಗಲಿಲ್ಲ…. ಆಗ ಕಾಲು ಜಾರಿತು……. ಅಷ್ಟರಲ್ಲಿ ಯಾರೋ ಕೈಯನ್ನು ಹಿಡಿದು ಎಳೆದು ಮುಂದೆ ಬಾಗಿ ಅಪ್ಪಿಕೊಂಡರು. ನನಗೆ ಜೀವದಾನ ಮಾಡಿದ ವ್ಯಕ್ತಿ ಇರೇ…..”

ಒಂದು ಕ್ಷಣ ನಿರೀಕ್ಷಾಳ ಎದೆ ಬಡಿತ ನಿಂತ ಹಾಗಾಯ್ತು. “ಪ್ರಣವ್, ನಿನಗೇನೂ ಆಗಲಿಲ್ಲ ತಾನೇ….” ಎಂದು ಓಡಿಬಂದು ಮಗನನ್ನು ಅಪ್ಪಿಕೊಂಡಳು.

“ನೀನು ಹೀಗೆ ಭಯಪಡುತ್ತೀಯಾ ಅಂತಲೇ ನಾನು ನಿನಗೆ ಹೇಳಿರಲಿಲ್ಲ…. ನೋಡು ನಾನೀಗ ಫಿಟ್‌ ಅಂಡ್‌ ಫೈನ್‌….” ಎಂದ ಪ್ರಣವ್.

“ನಿನಗೆ ಹೇಳಿದ್ದೆ ಮಳೆಯಲ್ಲಿ ಎಲ್ಲೂ ಹೋಗಬೇಡ ಅಂತ. ಆದರೂ ನೀನು ಕೇಳುವುದಿಲ್ಲ…..” ಸಿಟ್ಟಾದಳು.

“ಸಿಟ್ಟಾಗಬೇಡ ಅಮ್ಮಾ…… ಪ್ಲೀಸ್‌ ಇನ್ನೊಮ್ಮೆ ಅಲ್ಲಿ ಹೋಗಲ್ಲ  ಆಯ್ತಾ…..”

`ಆ ದಿನ ನನ್ನ ಅಮ್ಮುಗೂ ಇದೇ ರೀತಿ  ಆಪದ್ಭಾಂದ ಸಿಕ್ಕಿದ್ದಿದ್ದರೆ…..’ ಎಂದಿತು ಅವಳ ಮನ.

“ಜ್ವರ ಕಡಿಮೆಯಾಗಿದೆಯಾ?” ಯಾಕೋ ನಿರೀಕ್ಷಾಳ ಮನಕ್ಕೆ ಸಂಕಟ ಆಗುತ್ತಿತ್ತು ಆ ಮನುಷ್ಯನನ್ನು ನೋಡಿ.

“ಈಗ ಕಡಿಮೆಯಾಗಿದೆ…. ಇವತ್ತೊಂದು ದಿನ ನಮ್ಮ ಮನೆಯಲ್ಲೇ ಇರಲಿ,” ಎಂದ.

“ಆಯಿತು ರೂಮ್ ನಲ್ಲಿ ಮಲಗಿಸು.”

ಆ ಮನುಷ್ಯನನ್ನು ಮಲಗಿಸಿ ಬಂದ ಮಗನನ್ನು ಒಳಗೆ ಕರೆದು, “ಪ್ರಣವ್, ಅವರ ತಲೆ ಸರಿ ಇದೆಯಾ?” ಸಣ್ಣ ದನಿಯಿಂದ ಕೇಳಿದಳು.

“ಆಮ್ಮಾ, ಅವರು ಚೆನ್ನಾಗಿ ಇದ್ದಾರೆ. ಆದರೆ ಜನಸಂಪರ್ಕ ಬೇಡವಂತೆ. ಅದೇ ಗುಡ್ಡದ ಮೇಲೆ ಚಿಕ್ಕ ಮನೆ ಮಾಡಿಕೊಂಡಿದ್ದಾರೆ. ಅವರಿಗೂ ಮಳೆಯೆಂದರೆ ಇಷ್ಟವಂತೆ,” ಎಂದ ಪ್ರಣವ್ ಒಳ ಹೋದ.

`ನಿರೀ…… ಈ ಬೆಟ್ಟ ನನಗೆ ತುಂಬಾ ಇಷ್ಟವಾದ ಸ್ಥಳ. ನಾವು ಇಲ್ಲೇ ಚಿಕ್ಕ ಮನೆ ಕಟ್ಟಿಕೊಂಡು ಇರೋಣ. ಮಳೆ ಬಂದ ಕೂಡಲೇ ಓಡಿ ನೆನೋಣ, ಈ ಹಸಿರು ಸೊಬಗನ್ನು ಆಸ್ವಾದಿಸೋಣ,’ ಅಮರ್‌ ನ ತೊಡೆಯ ಮೇಲೆ ತಲೆಯಿಟ್ಟು ಮಲಗಿ, ಅವನ ಕೈ ಬೆರಳುಗಳೊಂದಿಗೆ ಆಟ ಆಡುತ್ತಾ ಅವನ ಮಾತು ಕೇಳಿ ನಕ್ಕಳು.

`ನೋಡು ನಿರೀ….. ನೀನೇನಾದರೂ ನನ್ನನ್ನು ಬಿಟ್ಟು  ಹೋದರೆ ನಾನಂತೂ ಇದೇ ಬೆಟ್ಟದ ಮೇಲೆ ಇರುವೆ.’

`ಅಮ್ಮು…. ಬಿಟ್ಟು ಹೋಗುವ ಮಾತೇಕೆ?’ ನಿರೀಕ್ಷಾಳ ಎದೆ ಧಸಕ್ಕೆಂದಿತು.

“ಅಮ್ಮಾ….. ಹಸಿವೆ,” ಎಂದು ಪ್ರಣವ್ ನ ಸ್ವರಕ್ಕೆ ವಾಸ್ತವಕ್ಕೆ ಬಂದಳು ನಿರೀಕ್ಷಾ.

ಮಗನಿಗೆ ಊಟ ಬಡಿಸಲೆಂದು ತಟ್ಟೆ ತೆಗೆದುಕೊಂಡು, ರೂಮಿಗೆ ಹೊರಟಳು.

“ಅಮ್ಮಾ, ಬೇಡ ಬಾ ಇಲ್ಲಿ……. ಮೊದಲೇ ಜನರನ್ನು ನೋಡಿದರೆ ಇಷ್ಟ ಆಗಲ್ಲ…. ಅದ್ಹೇಗೋ ನನ್ನನ್ನು  ಹತ್ತಿರ ಬಿಟ್ಟುಕೊಂಡಿದ್ದಾರೆ. ಉದ್ದ ಗಡ್ಡ, ಕೂದಲು ನೋಡಿ ನಿನಗೆ ಭಯವಾಗಬಹುದು,” ಎನ್ನುತ್ತಾ ತಾಯಿಯನ್ನು ತಡೆದ.

ಆದರೂ ನಿರೀಕ್ಷಾಳ ಕಾಲು ರೂಮಿನೊಳಗೆ ಹೋಗಲು ಹವಣಿಸುತ್ತಿದ್ದವು. ತಟ್ಟೆಯನ್ನು ತಂದು ಮಗನ ಮುಂದೆ ಇಟ್ಟು, ಮಗನನ್ನೇ ನೋಡುತ್ತಾ ಕುಳಿತಳು.

`ಎಲ್ಲಾ ಅಮರ್‌ ನ ಪಡಿಯಚ್ಚು….. ಅವರಿಗೇನು ಇಷ್ಟವೋ ಇವನಿಗೂ ಅದೇ ಇಷ್ಟ. ಇವತ್ತು ಯಾಕೋ ಅಮ್ಮು ತುಂಬಾ ನೆನಪಾಗುತ್ತಿದ್ದೀಯಾ…..? ಈ ನೋವಿನ ನೆನಪಲ್ಲಿಯೂ ಇಂದು ಏನೋ ಒಂದು ತರಹ ಮನದಲ್ಲಿ ಖುಷಿಯಾಗುತ್ತಿದೆ. ಅದೇನು ಅಂತ ಗೊತ್ತಾಗುತ್ತಿಲ್ಲ,’ ಎಂದು ಮನದಲ್ಲಿ ಯೋಚಿಸಿದಳು.

“ಅಮ್ಮಾ, ನೀನು ಊಟ ಮಾಡಿ ಮಲಗು,” ಎಂದ ಪ್ರಣವ್.

“ಆಯಿತು…..,” ಎನ್ನುತ್ತಾ ಗೋಣು ಆಡಿಸಿದಳು.

ರಾತ್ರಿಯೆಲ್ಲಾ ಹೊರಳಾಡಿ ಹೊರಳಾಡಿ ಮಲಗಿದರೂ ನಿರೀಕ್ಷಾಳಿಗೆ ನಿದ್ರೆ ಬರಲಿಲ್ಲ. ಎದ್ದು ರೂಮಿನಿಂದ ಹೊರಗೆ ಬಂದಳು. ಪ್ರಣವ್ ಸೋಫಾ ಮೇಲೆ ಮಲಗಿದ್ದ. ಮಗ ಕರೆತಂದಿದ್ದ ವ್ಯಕ್ತಿಯನ್ನು ನೋಡಬೇಕೆನ್ನಿಸಿ ಸಾವಕಾಶವಾಗಿ ರೂಮಿನ ಬಾಗಿಲು ತೆರೆಯಲು ಕೈ ಮುಂದೆ ಚಾಚಿದಳು. ಮಗ ಹೇಳಿದ ಮಾತು ನೆನಪಾದವು. ಹಿಂದೆ ಸರಿದು ಮಲಗಲು ಹೋದಳು.

ಹೊರಗಡೆ ಭೋರ್ಗರೆಯುವ ಮಳೆಯ ಶಬ್ದ ಹೆಚ್ಚಾಗುತ್ತಿತ್ತೇ ವಿನಾ ಕಡಿಮೆಯಾಗುತ್ತಿರಲಿಲ್ಲ. ಬೆಳಗ್ಗೆ ಮಳೆ ಸ್ವಲ್ಪ ಕಡಿಮೆಯಾಗಿತ್ತು. ಪ್ರಣವ್ ಕ್ಷೌರಿಕನನ್ನು ಕರೆಸಿ, ಕರೆತಂದಿದ್ದ ಆ ವ್ಯಕ್ತಿಯ ಗಡ್ಡ, ಕೂದಲು ತೆಗೆಯಲು ಹೇಳಿದ. ಆ ವ್ಯಕ್ತಿ ಬೇಡ ಎಂದಿದ್ದಕ್ಕೆ, “ನಾವಿಬ್ಬರೂ ಗೆಳೆಯರು ಅಲ್ಲವೇ…. ಗೆಳೆಯನ ಮಾತು ಕೇಳಬೇಕು,” ಎನ್ನುತ್ತಾ ಒಪ್ಪಿಸಿದ.

ಹೊಸ ಬಟ್ಟೆ ತಂದಿದ್ದ ಪ್ರಣವ್, ಆ ವ್ಯಕ್ತಿಗೆ ಸ್ನಾನ ಮಾಡಿ ಬಟ್ಟೆ ಹಾಕಿಕೊಂಡು ಬರಬೇಕು ಜೊತೆಗೆ ನೀವಿಂದು ಜಗತ್ತನ್ನು ನೋಡಬೇಕು ಎಂದು ತಾಕೀತು ಮಾಡಿದ.

ಪ್ರಣವ್ ಗೂ ಏನೋ ಒಂದು ಸೆಳೆತ. ಆ ವ್ಯಕ್ತಿಯು ತನಗೆ ತುಂಬಾ ಹತ್ತಿರದವರು ಎನ್ನುವ ಫೀಲ್ ‌ಆಗುತ್ತಿತ್ತು. ಆ ಮನುಷ್ಯ ಹೇಗಿರಬಹುದು ಎಂದು ಆತನನ್ನು ನೋಡಲು ಹಾತೊರೆಯುತ್ತಾ ಕುಳಿತಿದ್ದ.

ನಿನ್ನೆ ಹೇಳಲಾಗದಿದ್ದ  ತನ್ನ ಗತವನ್ನು ಇಂದಾದರೂ ಹೇಳೋಣ ಎನ್ನುತ್ತಾ ನಿರೀಕ್ಷಾ ಯೋಚಿಸುತ್ತಾ ಕುಳಿತಿದ್ದಳು.

ಬಾಗಿಲು ತೆರೆದ ಶಬ್ದಕ್ಕೆ ಪ್ರಣವ್ ಆ ಮನುಷ್ಯನನ್ನು ನೋಡಿದವನೇ ಒಮ್ಮೆಲೇ ಕುಳಿತಿದ್ದವನು ಎದ್ದು ನಿಂತು, “ಅಮ್ಮಾ……” ಎಂದು ಕಿರುಚಿದ.

ನಿರೀಕ್ಷಾ ಓಡಿಬಂದಳು. ಅವಳ ಕಣ್ಣನ್ನು ಅವಳೇ ನಂಬದಾದಳು.

`ಅಮ್ಮಾ, ಇವರು ನನ್ನ ತರನೇ ಇದ್ದಾರೆ!” ಎಂದು ಆಶ್ಚರ್ಯದಿಂದ ಕೂಗಿ ಹೇಳಿದ.

“ಅಮ್ಮು….. ಹೌದು ಇವರು ನನ್ನ ಅಮ್ಮು,” ಕಣ್ಣಿಂದ ನೀರು ಸುರಿಯುತ್ತಿತ್ತು. ಕೈಯನ್ನು ಬಾಯಿಯ ಮೇಲೆ ಇಟ್ಟು ಆಶ್ಚರ್ಯದಿಂದ  ನೋಡುತ್ತಾ ನಿರೀಕ್ಷಾ ಸಂತೋಷದಿಂದ ಅಳುತ್ತಿದ್ದಳು.

“ನೀವು ಅಮರ್‌ ಸಾರ್‌……” ವೇದಾ ಹೇಳಿದಳು.

`ಅಮರ್‌’ ಎಂಬ ಹೆಸರನ್ನು ಕೇಳಿದ ತಕ್ಷಣ ಆ ವ್ಯಕ್ತಿ ತಲೆ ಎತ್ತಿ ಎದುರಿಗೆ ನಿಂತ ಪ್ರಣವ್, ಅವನ ಹಿಂದೆ ನಿಂತ ನಿರೀಕ್ಷಾಳನ್ನು ಕಂಡು ಚಕಿತನಾದ.ಸಣ್ಣ ಧ್ವನಿಯಲ್ಲಿ, “ನಿರೀ….. ನನ್ನ ನಿ……ರೀ……” ನಿರೀಕ್ಷಾ ಓಡಿ ಬಂದು,

“ಅಮ್ಮು….,” ಎಂದು ಅಪ್ಪಿಕೊಂಡಳು. ಇಬ್ಬರೂ ತುಂಬಾ ಹೊತ್ತು ಅತ್ತರು.

“ಅಮ್ಮು…. ನಿಮಗೆ ನಾನು ಇನ್ನೂ ನೆನಪಿದೆ ತಾನೇ…..?” ಎರಡು ಕೈಗಳಲ್ಲಿ ಅವನ ಮುಖವನ್ನು ಹಿಡಿದು ಕೇಳಿದಳು.

“ನಿನ್ನ ಮರೆತ ದಿನವೇ ನನಗೆ ಸಾವು.”

“ಅಮ್ಮು, ಹಾಗನ್ನಬೇಡಿ,” ಎನ್ನುತ್ತಾ ತನ್ನ ಕೈಯಿಂದ ಅವನ ಬಾಯಿ ಮುಚ್ಚಿದಳು.

ನಂತರ ಅವನಿಂದ ಸರಿದು, “ಪ್ರಣವ್ ನಮ್ಮ ಮಗ,” ಎಂದಳು.

ಪ್ರಣವ್ ಗೆ ಏನು ನಡೆಯುತ್ತಿದೆ ಎಂದು ಗೊತ್ತಾಗಲಿಲ್ಲ. ಅವನು ಮುಂದೆ ಬಂದು, “ಅಮ್ಮಾ, ಯಾರಿವರು? ನೋಡಲು ನನ್ನ ತರಹವೇ ಇದ್ದಾರೆ….?” ಎಂದು ಗೊಂದಲದಲ್ಲಿ ಕೇಳಿದ.

“ಪ್ರಣವ್, ನಿನ್ನೆಯಿಂದ ನಿನಗೆ ನಿಮ್ಮಪ್ಪನ ಬಗ್ಗೆ ಹೇಳಬೇಕೆಂದಿದ್ದೆ. ಆದರೆ ಭಗವಂತ ನಿನ್ನ ತಂದೆಯನ್ನು ನಿನ್ನ ಮುಂದೆಯೇ ನಿಲ್ಲಿಸಿದ್ದಾನೆ,” ಎಂದಳು ನಿರೀಕ್ಷಾ.

“ನಮ್ಮ ಮಗ ಪ್ರಣವ್…,” ಅಮರ್‌ ಮಗನ ಮುಖ, ಭುಜ ಮುಟ್ಟಿ ನೇವರಿಸುತ್ತಾ ಅಪ್ಪಿಕೊಂಡನು. ಬಹಳ ಹೊತ್ತು ಅತ್ತು ಮನಸ್ಸಿನ ಭಾರವನ್ನು ಹಗುರ ಮಾಡಿಕೊಂಡರು ತಂದೆ ಮಗ.

“ಇಷ್ಟು ವರ್ಷ ಎಲ್ಲಿ…..? ಹೇಗೆ…..? ಅಮ್ಮನನ್ನು ಕೇಳಿದರೆ ತಂದೆಯಿಲ್ಲ. ನಮ್ಮನ್ನಗಲಿ ತುಂಬಾ ವರ್ಷವಾಯಿತು ಎನ್ನುತ್ತಿದ್ದರು,” ಎಂದು  ಹೇಳಿದ.

“ಹೌದು ಪ್ರಣವ್, ವಿಧಿ ನಮ್ಮ ಜೀವನದಲ್ಲಿ ಏನೆಲ್ಲಾ ಆಟ ಆಡಿಸಿದೆ ನೋಡು. ಆದರೆ ನನ್ನ ಅಮ್ಮು, ನನಗೆ ಮರಳಿ ಸಿಗುತ್ತಾರೆ ಎನ್ನುವ ಕಲ್ಪನೆಯೂ ನನಗೆ ಇರಲಿಲ್ಲ. ಭಗವಂತ ಇನ್ನೂ ನೀನಿದ್ದಿಯಾ ಅಂತ ತೋರಿಸಿಕೊಟ್ಟೆ, ನಿನಗೆ ಸಾಷ್ಟಾಂಗ ನಮಸ್ಕಾರ,” ಎಂದು ಕಣ್ಣೊರೆಸಿಕೊಂಡಳು ನಿರೀಕ್ಷಾ.

“ಬನ್ನಿ ಅಪ್ಪಾ…. ಕುಳಿತುಕೊಳ್ಳಿ,” ಎಂದು ತಂದೆಯನ್ನು ಕೈಹಿಡಿದು ಕುಳ್ಳಿರಿಸಿದ.

“ಪ್ರಣವ್…. ನಿನ್ನ ಎಲ್ಲಾ ಪ್ರಶ್ನೆಗಳಿಗೂ ಇವತ್ತು ನಾನು ಉತ್ತರ ಕೊಡುತ್ತೇನೆ,” ಎಂದ ಅಮರ್‌.

“25 ವರ್ಷಗಳ ಹಿಂದೆ ನಾನು ನಿನ್ನ ಹಾಗೆ ಈ ಊರಿಗೆ ಕೆಲಸದ ನಿಮಿತ್ತ ಬಂದಿದ್ದೆ. ಪ್ರವಾಸಕ್ಕೆಂದು ಬಂದಿದ್ದ ನಿರೀಕ್ಷಾ ಮೊದಲ ನೋಟದಲ್ಲೇ ಮನಸೂರೆಗೊಂಡಳು. ಅವಳ ವಿಳಾಸ ತೆಗೆದುಕೊಂಡು ಮೈಸೂರಿಗೆ ಹೋದೆ. ನನ್ನ ಊರು ಮಂಡ್ಯ. ಪ್ರೀತಿ ಮಾಡುವ ಎಲ್ಲ ಪ್ರೇಮಿಗಳ ಮಧ್ಯೆ ಒಬ್ಬ ವಿಲನ್‌ ಇದ್ದೇ ಇರುತ್ತಾನೆ. ಅದೇ ರೀತಿ ನಮ್ಮಿಬ್ಬರ ಮಧ್ಯೆ ನನ್ನ ಅತ್ತೆ ಮಗಳು. ನಿರೀಕ್ಷಾಳ ಮುಂದೆ ನನ್ನ ಪ್ರೇಮ ನಿವೇದನೆಯನ್ನು ಹೇಳಿದೆ. ಅವಳು ನನ್ನನ್ನು ಒಪ್ಪಿಕೊಂಡಳು. ಅವಳ ತಾಯಿ ತಂದೆಗೆ ಈ ವಿಷಯ ಹೇಳಿದೆ. ಅವರೂ ಮಗಳ ಖುಷಿಯೇ ನಮ್ಮ ಖುಷಿ ಎಂದರು.

“ಇತ್ತ ನನ್ನ ತಂದೆ ತನ್ನ ತಂಗಿಯ ಮಗಳಿಗೆ ನನ್ನನ್ನು ಮದುವೆಯಾಗಲು ಬಲವಂತ ಮಾಡುತ್ತಿದ್ದರು. ನನಗೋ ತಾಯಿ ನೆನಪೇ ಇಲ್ಲ…. ಆದರೆ ನನ್ನನ್ನು ಬೆಳೆಸಿದ್ದು ನನ್ನ ಅತ್ತೆ. ಅದೇ ಅಧಿಕಾರದಿಂದ ಅವರು ಮಗಳನ್ನು ಮದುವೆಯಾಗಲು ಒತ್ತಾಯಿಸಿದರು. ನಾನು ನಿರೀಕ್ಷಾಳನ್ನು ಪ್ರೀತಿಸುತ್ತಿದ್ದೇನೆ ಎಂದು ಗೊತ್ತಾದಾಗ ನನ್ನನ್ನು ರೂಮ್ ನಲ್ಲಿ ಕೂಡಿಹಾಕಿ ಮದುವೆ ಮಾಡಲು ನಿಂತರು. ಆದರೆ ನಾನು ಗೆಳೆಯರ ಸಹಾಯದಿಂದ ತಪ್ಪಿಸಿಕೊಂಡು ಬಂದು ರಿಜಿಸ್ಟ್ರಾರ್‌ ಆಫೀಸ್‌ ನಲ್ಲಿ ನಿನ್ನ ತಾಯಿಯ ಕೈಹಿಡಿದೆ. ನನ್ನ ತಂದೆ ಅಂದೇ ನನ್ನನ್ನು ಮನೆಯಿಂದ ಹೊರಗೆ ಹಾಕಿದರು.

“ನನ್ನ ಕೆಲಸ ಮಡಿಕೇರಿಯಲ್ಲಿ ಇದ್ದಿದ್ದರಿಂದ ಇಲ್ಲಿಗೆ ಬಂದೆವು. ಒಂದು ವರ್ಷ ಹೇಗೆ ಕಳೆಯಿತೋ ಇಬ್ಬರಿಗೂ ಗೊತ್ತಾಗಲಿಲ್ಲ. ನಮ್ಮ ಪ್ರೀತಿಯ ಸಂಸಾರದಲ್ಲಿ ಏರುಪೇರುಗಳು ಇರಲಿಲ್ಲ…… ಪ್ರೀತಿ ಮಾತ್ರ ತುಂಬಿತ್ತು. ಅದಕ್ಕೆ ಈ ಮಡಿಕೇರಿಯ ಮಳೆಯೇ ಸಾಕ್ಷಿ.” ಒಂದು ನಿಮಿಷ ನಿರೀಕ್ಷಾಳ ಮುಖ ನೋಡಿ ಮತ್ತೆ ಮುಂದುವರಿಸಿದ, “ಮಳೆ ಎಂದರೆ ನನಗೆ ತುಂಬಾ ಇಷ್ಟ. ಅದು ಆ ಬೆಟ್ಟದ ಮೇಲೆ ಮಳೆ ಬರುತ್ತಿರುತ್ತಿತ್ತು. ಬೇಡವೆಂದರೂ ಅವಳನ್ನು ಪ್ರತಿ ಭಾನುವಾರ ಕರೆದುಕೊಂಡು ಅಲ್ಲಿಗೆ ಹೋಗುತ್ತಿದ್ದೆ. ಆದರೆ ಆ ಭಾನುವಾರ ಆದದ್ದೇ ಬೇರೆ, ಮಳೆಯಲ್ಲಿ ನೆನೆದು ನನ್ನ ಪ್ರೀತಿಯ ನಿರೀಯ ಜೊತೆ, `ನೀ….. ಅಮೃತಧಾರೆ ಒಲವು….’ ಹಾಡು ಹಾಡುತ್ತಾ ನೆನೆಯುತ್ತಿದ್ದೆ.

“ತುಂಬಾ ದೊಡ್ಡ ದೊಡ್ಡ ಹನಿಯ ಮಳೆ. ಅಷ್ಟರಲ್ಲಿ ಯಾರೋ ನಮ್ಮನ್ನು ಬೇರ್ಪಡಿಸದ ಹಾಗೆ ನಿರೀಯ ಕೈಬಿಟ್ಟೆ. ನಾನು ಕಾಲು ಜಾರಿ ಪ್ರಪಾತಕ್ಕೆ ಬಿದ್ದಿದ್ದೆ.”

ನಿರೀಕ್ಷಾಳ ಕಣ್ಣಿಂದ ನೀರು ಸುರಿಯುತ್ತಿತ್ತು. ಪ್ರಣವ್ ತಾಯಿಯನ್ನು ಹಿಡಿದುಕೊಂಡ. “ಸಾಬ್‌…. ನೀವು ಕಾಲು ಜಾರಿ ಬಿದ್ದದ್ದಲ್ಲ…. ನಿಮ್ಮನ್ನು ಬೇಕು ಅಂತ ತಳ್ಳಿದ್ದು…..” ವೇದಾ ಹೇಳಿದಳು.

“ವೇದಾ ಮಾ! ಹೇಗಿದ್ದೀಯಾ…..?” ಅದೇ ನಗುಮುಖದಿಂದ ಕೇಳಿದ ಅಮರ್‌, ಅವಳ ಹತ್ತಿರ ಬಂದು, “ಏನು…. ಏನು ಹೇಳ್ತಿದ್ದೀ….? ನನ್ನನ್ನು ಯಾಕೆ…?  ನನ್ನನ್ನು ತಳ್ಳಿದ್ದು ಯಾರು……?”

“ಗೊತ್ತಿಲ್ಲ…..!” ಎನ್ನುತ್ತಾ ನಿರೀಕ್ಷಾಳನ್ನು ನೋಡಿದಳು ವೇದಾ.

“ಸಾಬ್‌…. ಇಲ್ಲಿನ ಜನರೆಲ್ಲಾ ಮಾತನಾಡಿದ್ದೇ ಹೀಗೆ…..” ವೇದಾ ತೊದಲಿದಳು.

“ವೇದಮ್ಮಾ, ಈಗೇಕೆ ಅದೆಲ್ಲ ಬೇಡ ಮಾ…..” ನಿರೀಕ್ಷಾ ತಡವರಿಸಿದಳು.

“ಅಮ್ಮಾ, ಏನಾಯಿತು ಹೇಳಿ…. ಎಲ್ಲಾ ವಿಷಯ ಇಂದು ನನಗೂ, ಅಪ್ಪನಿಗೂ ಗೊತ್ತಾಗಲೇಬೇಕು ಪ್ಲೀಸ್‌ ಅಮ್ಮಾ…….,” ಎನ್ನುತ್ತಾ ತಾಯಿಯನ್ನು ಗಟ್ಟಿಯಾಗಿ ಹಿಡಿದ ಪ್ರಣವ್.

“ಅಮ್ಮು ಹೇಳಿದ ಹಾಗೆ ಅಂದು ಅವರೇ ಕಾಲು ಜಾರಿ ಬಿದ್ದರೋ ಇಲ್ಲ ಯಾರು ತಳ್ಳಿದರೋ ನನಗೂ ಗೊತ್ತಿಲ್ಲ…. ಆದರೆ ತಳ್ಳಿದ ಆಪಾದನೆ ನನ್ನ ಮೇಲೆ ಬಂತು,” ನಿರೀಕ್ಷಾ ಅಳುತ್ತಾ ಹೇಳಿದಳು.

“ಏನು ಹೇಳುತ್ತಿದ್ದಿ ನಿರೀ…….!” ಆಶ್ಚರ್ಯದಿಂದ ಕೇಳಿದ ಅಮರ್‌.

“ಹೌದು, ನಾನು ನನ್ನ ಗಂಡನನ್ನು ತಳ್ಳಿದೆ ಎಂದು ನನ್ನನ್ನು ಪೊಲೀಸರಿಗೆ ಒಪ್ಪಿಸಿದರು,” ಎಂದು ಬಿಕ್ಕಿದಳು.

ಅಮರ್‌ ಓಡಿಬಂದು ಹೆಂಡತಿಯ ಮುಖವನ್ನು ಬೊಗಸೆಯಲ್ಲಿ ಹಿಡಿದು, “ಯಾರು…. ಯಾರು ಹಾಗೆ ಮಾಡಿದ್ದು?” ಎಂದು ಕೇಳಿದ.

“ನಿಮ್ಮ ಮನೆಯವರು…. ಪೊಲೀಸ್‌ ಸ್ಟೇಷನ್‌ ನಲ್ಲಿ ಒಂದು ಕಡೆ ನಿಮ್ಮನ್ನು ಕಳೆದುಕೊಂಡ ಆಘಾತ…. ಅಂದು ನನ್ನ ಪರಿಸ್ಥಿತಿ ಮಾತಿನಿಂದ ಹೇಳಲಾಗದೆ  ಹುಚ್ಚಿಯಂತಾಗಿದ್ದೆ. ಅಲ್ಲಿ ಏನು ನಡೆಯುತ್ತಿದೆ ಒಂದೂ ನನಗೆ ಗೊತ್ತಾಗುತ್ತಿರಲಿಲ್ಲ……. ನಾನು ಬಹಳ ದುಃಖಿತಳಾಗಿದ್ದೆ. ಅತ್ತು ಅತ್ತು ತಲೆಸುತ್ತಿ ಬಿದ್ದುಬಿಟ್ಟೆ ಎಂದು ನನ್ನನ್ನು ಆಸ್ಪತ್ರೆಗೆ ಸೇರಿಸಿದರು. ಆಗ ಪ್ರಣವ್ ನನ್ನ ಹೊಟ್ಟೆಯಲ್ಲಿ ಅಂಕುರಿಸಿದ್ದಾನೆಂದು ಗೊತ್ತಾಯಿತು,” ಬಿಕ್ಕಿದಳು ನಿರೀಕ್ಷಾ.

“ದೇವರು ನನ್ನ ಸರ್ವಸ್ವವಾದ ನಿಮ್ಮನ್ನು ನನ್ನಿಂದ ಕಿತ್ತುಕೊಂಡ. ಹಾಗೆಯೇ ನಿಮ್ಮ ನೆನಪಿಗಾಗಿ ನಿಮ್ಮ ಕುರುಹನ್ನು ನನ್ನ ಮಡಿಲಲ್ಲಿ ತುಂಬಿದ. ಪ್ರಣವ್ ನನ್ನಲ್ಲಿ ಇಲ್ಲ ಅಂದಿದ್ದರೆ ನಾನು ಇಂದು ನಿಮ್ಮ ಮುಂದೆ ಜೀವಂತ ಇರುತ್ತಿರಲಿಲ್ಲ. ನಮ್ಮ ಮಗ ನನ್ನ ಜೀವ ಉಳಿಸಿದ.”

“ಅಯ್ಯೋ ದೇವರೇ, ನನ್ನ ನಿರೀಗೆ ಎಷ್ಟು ಕಷ್ಟ ಕೊಟ್ಟೆ…..” ಅಮರ್‌ ಪ್ರಲಾಪಿಸಿದ.

ಪ್ರಣವ್ ಓಡಿ ಬಂದು ತಾಯಿಯನ್ನು ಅಪ್ಪಿಕೊಂಡ.

ನಿರೀಕ್ಷಾ ಬಿಕ್ಕುತ್ತಾ, “ನನ್ನ ವಿರುದ್ಧ ಯಾವ ಸಾಕ್ಷ್ಯಾಧಾರಗಳು ಸಿಗದಿದ್ದಾಗ ಜೊತೆಗೆ ನಾನು ಗರ್ಭಿಣಿಯಾಗಿದ್ದರಿಂದ ನನ್ನನ್ನು ಬಿಟ್ಟುಬಿಟ್ಟರು. ನಾನು ಪುನಃ ಇದೇ ಊರಿಗೆ ಬರುವ ಧೈರ್ಯ ಮಾಡಲಿಲ್ಲ. ಆದರೆ ನನ್ನ ಮನಸ್ಸು ಇಲ್ಲೇ ಇತ್ತು,” ಎಂದು ಗಂಡನ ಮುಖ ನೋಡುತ್ತಾ, “ನಿಮ್ಮ ಕುರುಹಾದ ನಮ್ಮ ಮಗುವನ್ನು ಭೂಮಿಗೆ ತರಲೇಬೇಕಿತ್ತು. ಅದಕ್ಕಾಗಿ ಮನಸ್ಸನ್ನು ಗಟ್ಟಿ ಮಾಡಿಕೊಂಡು ಅಮ್ಮ ಅಪ್ಪನ ಜೊತೆ ಮೈಸೂರಲ್ಲಿ ಜೀವನ ಶುರು ಮಾಡಿದೆ,” ಎಂದಳು ನಿರೀಕ್ಷಾ.

“ಏನೆಲ್ಲಾ ಅನುಭವಿಸಿಬಿಟ್ಟಿದ್ದೀಯಾ,” ಎಂದು ಅಮರ್‌ ಹೆಂಡತಿಯನ್ನು ಅಪ್ಪಿಕೊಂಡ.

“ಇನ್ನೂ ನಿಮಗೆ ತಿಳಿಯದ ಒಂದು ಸತ್ಯ ಇದೆ,” ಎನ್ನುತ್ತಾ ಒಳ ಬಂದರು ನಂಜುಂಡಯ್ಯ.“ಸರ್‌…. ನೀವು ಬನ್ನಿ ಒಳಗೆ.”

“ನಿರೀಕ್ಷಾ ನನ್ನನ್ನು ಕ್ಷಮಿಸಮ್ಮ….. ನಾನು ನಿನ್ನನ್ನು ತಪ್ಪಾಗಿ ತಿಳಿದುಕೊಂಡೆ,” ಎಂದು ಕೈಮುಗಿದರು ನಂಜಂಡಯ್ಯ.

“ನೀವು ದೊಡ್ಡವರು ಹಾಗೆಲ್ಲ ಕೈ ಮುಗಿಯಬಾರದು,” ಎಂದಳು ನಿರೀಕ್ಷಾ.

ಎಲ್ಲರೂ ಒಬ್ಬರ ಮುಖ ಒಬ್ಬರು ನೋಡಿಕೊಂಡರು.

“ಆದರೆ, ನಿನ್ನನ್ನು ತಳ್ಳಲು ಅಂದರೆ ನಿನ್ನನ್ನು ಕೊಲ್ಲಲು ಬಂದಿದ್ದಲ್ಲ….. ನಿನ್ನ ಹೆಂಡತಿ ನಿರೀಕ್ಷಾಳನ್ನು ಕೊಲ್ಲಲು ಬಂದಿದ್ದು…..” ಎಂದ ನಂಜುಂಡಯ್ಯನವರನ್ನು ಎಲ್ಲರೂ ಆಶ್ಚರ್ಯದಿಂದ ನೋಡಿದರು.

ಅವರು ಮುಂದುವರಿಸಿದರು, “ಧೋ ಎಂದು ಸುರಿಯುತ್ತಿದ್ದ ಮಳೆ, ಬೆಟ್ಟದ ಮೇಲೆ ಗಾಳಿಯ ಆರ್ಭಟದ ಮಧ್ಯೆ ನಿರೀಕ್ಷಾಳನ್ನು ತಳ್ಳಲು ಹೋಗಿ ನಿನ್ನನ್ನು ತಳ್ಳಿದ್ದರು ಪಾಪಿಗಳು…..”

“ಯಾರು…. ಯಾರು ಹಾಗೆ ಮಾಡಿದ್ದು……?”

“ನಿನ್ನನ್ನು ಸಾಕಿ, ಕೈ ತುತ್ತು ಕೊಟ್ಟು ಬೆಳೆಸಿದ ನಿನ್ನ ಅತ್ತೆ ಮತ್ತು ಅವಳ ಗಂಡ ಅಂದರೆ ನಿನ್ನ ಮಾವ….” ಎಂದು ಹೇಳಿದರು ನಂಜುಂಡಯ್ಯ.

“ಅಯ್ಯೋ ದೇವರೇ, ನನ್ನ ಜೀವನವನ್ನು ನನ್ನ ಮನೆಯವರೇ ಹಾಳು ಮಾಡಿಬಿಟ್ಟರಾ….? ನನ್ನ ಮಗನಿಂದ 25 ವರ್ಷ ನನ್ನನ್ನು ದೂರ ಇಟ್ಟರಾ….? ನನ್ನ ಬದುಕು, ನನ್ನ ಜೀವವಾದ ನಿರೀಯನ್ನು ಕೊಲ್ಲಲು ಮಾಡಿದ ಸಂಚಾ ಇದು……” ಅಮರ್‌ ಗೊಂದಲ ಮತ್ತು ದುಃಖದಿಂದ ಬಡಬಡಿಸುತ್ತಿದ್ದ.

ಪ್ರಣವ್ ತಂದೆಯ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡು, “ಅಪ್ಪಾ, ಮತ್ತೆ ನೀವು ಬದುಕಿ ಬಂದಿದ್ದಾರೂ ಹೇಗೆ…..?”

“ದೇವರ ದಯೆ ಪ್ರಣವ್, ಒಂದು ಮರದ ಬುಡವನ್ನು ಹಿಡಿದು ಕುಳಿತಿದ್ದೆ. ಮತ್ತೆ ಅಲ್ಲಿಂದ ಜಾರುತ್ತಾ ಕೆಳಗಿದ್ದ ಕೊಂಬೆಗಳನ್ನು ಹಿಡಿದು ಅರೆಪ್ರಜ್ಞಾವಸ್ಥೆಯಲ್ಲಿ ನರಳುತ್ತಾ ಜೋತಾಡುತ್ತಿದ್ದ ನನ್ನನ್ನು ಅಲ್ಲಿಗೆ ಬಂದ ಲಂಬಾಣಿ ಜನರು ಹೇಗೋ ಪ್ರಯಾಸದಿಂದ ಕಾಪಾಡಿದರು. ಅಷ್ಟರಲ್ಲಿ ನಾನು ಸಂಪೂರ್ಣ ಮೂರ್ಛೆ ಹೋಗಿದ್ದೆ. ಅಷ್ಟು ಮಾತ್ರವೇ ನನಗೆ ಗೊತ್ತು.

“ನಂತರ ಆ ಜನರೇ ನನ್ನನ್ನು ಕರೆದುಕೊಂಡು ಹೋಗಿದ್ದರು. ಅಲ್ಲೇ ಇದ್ದರೆ ಪೊಲೀಸ್‌ ಕೇಸ್‌ ಆಗಬಹುದು, ಅದರಿಂದ ತಮಗೇನಾದರೂ ತೊಂದರೆ ಆಗಬಹುದೆಂಬ ಭಯಕ್ಕೆ ಅವರು ನನ್ನನ್ನು ತಮ್ಮ ಜೊತೆಗೆ ಕರೆದುಕೊಂಡು ಹೋದರಂತೆ. ತಲೆಗೆ ತುಂಬಾ ಪೆಟ್ಟು ಬಿದ್ದುದ್ದರಿಂದ ನಾನು ನನ್ನ ನೆನಪಿನ ಶಕ್ತಿಯನ್ನು ಕಳೆದುಕೊಂಡಿದ್ದೆ. ಈಗ್ಗೆ ಕೆಲವು ವರ್ಷಗಳ ಹಿಂದೆ ನನಗೆ ನೆನಪು ಮರುಕಳಿಸಿತು. ಹುಚ್ಚನಂತೆ ನನ್ನ ನಿರೀಯನ್ನು ಹುಡುಕಲು ಆರಂಭಿಸಿದೆ. ಮೈಸೂರಿನ ಆ ಮನೆಯಲ್ಲಿ ನೀವಿಲ್ಲ ಎಂದು ಗೊತ್ತಾದ ಮೇಲೆ ಎಲ್ಲೆಡೆ ಹುಡುಕಿದೆ. ಅದರಿಂದ ಮೊದಲೇ ನಿನಗೆ ಹೇಳಿದಂತೆ…. ಇಲ್ಲೇ ಬಂದು ಬೆಟ್ಟದ ಮೇಲೆ ಜನ ಸಂಪರ್ಕವಿಲ್ಲದ ಹಾಗೆ ಉಳಿದುಬಿಟ್ಟೆ,” ಎನ್ನುತ್ತಾ ನಿರೀಕ್ಷಾಳನ್ನು ನೋಡುತ್ತಾ, “ಆ ವಿಧಿ ನಮ್ಮ ಜೀವನದಲ್ಲಿ ಏನೆಲ್ಲಾ ಆಟ ಆಡಿತು,” ಎಂದ ಅಮರ್. “ಹೌದು ಅಮ್ಮು, ಆದರೆ ನಿಮ್ಮಿಷ್ಟದ ಈ ಮಳೆ ಮತ್ತೆ ನಮ್ಮನ್ನು ಒಂದುಗೂಡಿಸಿದೆ. ಅದು ಬಹಳ ಸಂತೋಷವಾಗಿದೆ,” ಎಂದು ಮೂವರು ಅಪ್ಪಿಕೊಂಡರು.

“ಅಮ್ಮಾ, ಅಪ್ಪಾ…. ನಾವೆಲ್ಲರೂ ಇಲ್ಲಿಯೇ ಇರೋಣ,” ಎಂದ ಪ್ರಣವ್

“ಆ ದೇವರು ನಿಮ್ಮನ್ನು ಸುಖವಾಗಿ ಇಟ್ಟಿರಲಿ. ಅದನ್ನೆಲ್ಲ ಮರೆತು ಮಗನೊಂದಿಗೆ ಹೊಸ ಜೀವನ ಶುರು ಮಾಡಿ,” ವೇದಾ ಕುಂಕುಮ ಹಿಡಿದು ಮುಂದೆ ಬಂದಳು. ಅಮರ್‌ ನಿರೀಕ್ಷಾಳ ಹಣೆಗೆ ಕುಂಕುಮವಿಟ್ಟ. ಕಳೆದುಹೋದ ಕೊಂಡಿಗಳು ಮತ್ತೆ ಮಲೆನಾಡ ಮಳೆಯಲ್ಲಿ ಒಂದಾದವು.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ