ಫಸ್ಟ್ ಇಂಪ್ರೆಶನ್‌ ಈಸ್‌ ದಿ ಲಾಸ್ಟ್ ಇಂಪ್ರೆಶನ್‌, ಎನ್ನುವ ಹಾಗೆ ಯಾವುದೇ ಬಾಂಧವ್ಯವಿರಲಿ, ಅದನ್ನು ಮೊದಲಿನಿಂದಲೇ ಮಧುರವಾಗಿಸಿಕೊಂಡು ಸಂಬಂಧದಲ್ಲಿ ಗಟ್ಟಿತನ ಉಳಿಸಿಕೊಳ್ಳುತ್ತಾ, ನಮ್ಮ ದಾಂಪತ್ಯದ ಮೊದಲ ವರ್ಷವನ್ನು ಬೆಸ್ಟ್ ಇಂಪ್ರೆಶನ್‌ ಆಗಿಸಿಕೊಳ್ಳಬೇಕು.

ಈ ಮೊದಲ ವರ್ಷವನ್ನು ನಾವು ಬೆಸ್ಟ್ ಇಂಪ್ರೆಶನ್‌ ಆಗಿ ಕಳೆದುಬಿಟ್ಟರೆ, ಮದುವೆಯ ಲಾಸ್ಟ್ ಇಂಪ್ರೆಶನ್‌ ಸದಾ ಸ್ಮರಣೀಯ ಆಗುತ್ತದೆ. ಹೀಗಾಗಿ ಮದುವೆಯ ಮೊದಲ ವರ್ಷ ನಿಮ್ಮ ಮುಂದಿನ ಜೀವನವನ್ನು ಸುಖಮಯ ಅಥವಾ ಅಸಹನೀಯ ಆಗಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ.

ಎಲ್ಲಕ್ಕೂ ಮೊದಲು ಯಾವುದೇ ಹೊಸ ದಂಪತಿ ಇರಲಿ, ತಮ್ಮ ಮದುವೆಯನ್ನು 3 ಭಾಗಗಳಾಗಿ ವಿಂಗಡಿಸಿ ನೋಡಿಕೊಳ್ಳಬಹುದು, ತಾವು ವೈವಾಹಿಕ ಜೀವನವನ್ನು ಹೇಗೆ ನಿಭಾಯಿಸುತ್ತಿದ್ದೇವೆ, ಅದರಿಂದ ತಮ್ಮ ಮುಂದಿನ ಭವಿಷ್ಯದ ದಿನಗಳು ಸದಾ ಸುಖಮಯ ಆಗಿಸುವುದು ಹೇಗೆ ಅಂತ…..

ಗುಡ್ಮ್ಯಾರೇಜ್‌ (ಸುಖೀ ದಾಂಪತ್ಯ)

ಇದೆಂಥ ಮದುವೆ ಸಂಬಂಧ ಅಂದ್ರೆ, ಪತಿ ಪತ್ನಿ ಇಬ್ಬರೂ ತಮ್ಮ ದಾಂಪತ್ಯ ಜೀವನವನ್ನು ಖುಷಿಖುಷಿಯಾಗಿ ಕಳೆಯುತ್ತಿದ್ದಾರೆ ಅಂತ. ಪ್ರತಿ ಕ್ಷಣ, ಪ್ರತಿ ಸಂದರ್ಭದಲ್ಲೂ ಪರಸ್ಪರ ಸಹಕರಿಸುತ್ತಾ, ಕಷ್ಟಸುಖವನ್ನು ಅನ್ಯೋನ್ಯವಾಗಿ ಹಂಚಿಕೊಳ್ಳುತ್ತಾ, ಇರುವುದರಲ್ಲಿಯೇ ನೆಮ್ಮದಿಯಾಗಿದ್ದಾರೆ ಎನ್ನಬಹುದು. ಎರಡೂ ಕುಟುಂಬಗಳ ಮಧ್ಯೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಹೋಗುತ್ತಾ, ಅಕಸ್ಮಾತ್‌ ಏನಾದರೂ ಕಹಿ ಪ್ರಸಂಗ ಬಂದರೂ ಅದನ್ನು ದೊಡ್ಡದಾಗಿ ಬೆಳೆಸದೆ, ಇರುವುದರಲ್ಲಿಯೇ ಸರಿಪಡಿಸಿಕೊಂಡು ಮುಂದಿನ ಸುಂದರ ಭವಿಷ್ಯದ ಬಗ್ಗೆ ಚಿಂತಿಸುವುದು.

ಇದರಿಂದ ಕುಟುಂಬದಲ್ಲಿ ಸದಾ ಖುಷಿ ಖುಷಿಯಾದ ವಾತಾವರಣ ತುಂಬಿರುತ್ತದೆ. ಪತಿ ಪತ್ನಿ ತಮ್ಮ ದಾಂಪತ್ಯ ಜೀವನದ ಆರಂಭವನ್ನು ಎಷ್ಟು ಚೆನ್ನಾಗಿ ಮಾಡುತ್ತಾರೆಂದರೆ, ಅವರು ಒಂದು ಸಲ ಪರಸ್ಪರರನ್ನು, ಮನೆಯವರನ್ನೂ ಚೆನ್ನಾಗಿ ಅರಿತುಕೊಂಡ ಮೇಲೆ, ಮುಂದೆ ತಮ್ಮ ಜೀವನದಲ್ಲಿ ಏನೇ ಏರುಪೇರು ಬಂದರೂ, ಅದನ್ನು ಸಮಾಧಾನಕರವಾಗಿ ಎದುರಿಸುವ ತಾಕತ್ತು ಗಳಿಸುತ್ತಾರೆ. ಮುಂದೆ ತಮ್ಮಿಬ್ಬರ ನಡವಳಿಕೆಯಿಂದ ತೊಂದರೆಗಳು ಎದುರಾಗದಂತೆ ಅಷ್ಟೇ ಎಚ್ಚರಿಕೆ ವಹಿಸುತ್ತಾರೆ. ಆಗ ಸಹಜವಾಗಿಯೇ ಸಂಬಂಧದಲ್ಲಿ ಪರಸ್ಪರ ಪ್ರೀತಿ, ಗೌರವಾದರ, ಆತ್ಮೀಯತೆ, ಅರಿತು ನಡೆದುಕೊಳ್ಳುವಿಕೆ ಮುಂತಾದವು ಮೈಗೂಡುತ್ತವೆ. ನಿಮ್ಮ ಜೀವನದಲ್ಲಿ ಇದು ಸಹಜವಾಗಿದ್ದರೆ ನೀವು ಭಾಗ್ಯಶಾಲಿಗಳೇ ಸರಿ. ಸಂಸಾರವನ್ನು ಸುಖೀ ಪಥದಲ್ಲಿ ನಡೆಸುತ್ತಾ, ಮುಂದಿನ ಭವಿಷ್ಯವನ್ನು ಬಂಗಾರವಾಗಿಸಲಿದ್ದೀರಿ!

ಬೋರಿಂಗ್ಮ್ಯಾರೇಜ್‌ (ಅನಿವಾರ್ಯ ಬಂಧನ)

ಇಂಥ ವೈವಾಹಿಕ ಜೀವನದಲ್ಲಿ ಪ್ರೀತಿ, ಪ್ರೇಮಗಳ ಜಾಗದಲ್ಲಿ  ಬಲವಂತದ ಹೊಂದಾಣಿಕೆ ಕೃತಕವಾಗಿ ನಿಭಾಯಿಸಲ್ಪಡುತ್ತದೆ. ತಾನು ಬಯಸಿದ ಸಂಗಾತಿ ಸಿಗದೆ ಇರುವುದರಿಂದ ಅಥವಾ ಪರಸ್ಪರ ಬಾಂಡಿಂಗ್‌ ಸರಿಯಾಗಿ ಆಗದಿರುವುದರಿಂದಲೂ ಇರಬಹುದು. ಕಾರಣ ಏನೇ ಇರಲಿ, ವೈವಾಹಿಕ ಸಂಬಂಧ ನಿಭಾಯಿಸಬೇಕು ಎಂಬ ಒಂದೇ ಸೂತ್ರಕ್ಕೆ ಬದ್ಧರಾಗಿ ಹೇಗೋ ಸಂಸಾರದ ಗಾಡಿ ಎಳೆದುಕೊಂಡು ಹೋಗುತ್ತಿರುತ್ತಾರೆ. ಈ ತರಹದ ದಂಪತಿಗಳು ಪ್ರವಾಸಕ್ಕೆಂದು ಹೊರಗೆ ಹೋಗುವುದಿರಲಿ, ಒಂದಿಷ್ಟು ಹೊತ್ತು ಪರಸ್ಪರ ಆರಾಮವಾಗಿ ಮಾತನಾಡಲಿಕ್ಕೂ ಬಯಸುವುದಿಲ್ಲ.

ಹೀಗೆ ದಂಪತಿಗಳ ನಡುವೆಯೇ ಪರಸ್ಪರ ಭಿನ್ನಾಭಿಪ್ರಯ ತುಂಬಿರುವಾಗ, ಇವರು ತಮ್ಮ ಕುಟುಂಬದ ಇನ್ನಿತರರಿಗೆ ಏನು ತಾನೇ ಹೇಳಿಯಾರು? ಮದುವೆ ಆದ ಮೇಲೆ ದಾಂಪತ್ಯ ಸಂಬಂಧ ಮುಂದುವರಿಸದಿರಲಾದೀತೇ? ಅದು ಹೇಗೋ ನಡೆದು 2 ಮಕ್ಕಳಾದರೂ ಮನಸ್ಸು ಮಾತ್ರ ಬೆರೆಯುವುದಿಲ್ಲ. ತಮ್ಮಿಬ್ಬರ ನಡುವಿನ ಬೋರಿಂಗ್‌ ನ್ನು ಗೊಣಗಿಕೊಂಡೇ ಜಗಳ ಆಡುತ್ತಾ ಕಿತ್ತಾಡುತ್ತಾ ಹೇಗೋ ದಿನ ತಳ್ಳುತ್ತಾರೆ. ಯಾಕಪ್ಪ ಈ ಮದುವೆ ಆಯ್ತು ಎಂದು ಗೋಳಾಡುವುದರಲ್ಲಿ ಆಗಿಹೋಗುತ್ತದೆ.

ಬ್ಯಾಡ್ಮ್ಯಾರೇಜ್‌ (ವಿಚ್ಛೇದನದ ಕಡೆಗೆ)

ಇಂಥ ವೈವಾಹಿಕ ಜೀವನ ನಿಜಕ್ಕೂ ಕಷ್ಟಕರ, ನುಂಗಲಾರದ ತುತ್ತು ಎಂದಾಗುತ್ತದೆ. ಇಲ್ಲಿ ದಂಪತಿ ಪರಸ್ಪರ ಅರಿತುಕೊಳ್ಳುವ ಬದಲು ಸದಾ ದೂಷಿಸುತ್ತಾ ಕಿತ್ತಾಡುತ್ತಾ, ಕೈ ಮಾಡುವ ಹಂತ ತಲುಪುತ್ತಾರೆ. ಪರಸ್ಪರರತ್ತ ದೋಷಾರೋಪಣೆ, ಇಬ್ಬರ ಮನೆಯವರನ್ನೂ ಸದಾ ಹೀಗಳೆದು ಟೀಕಿಸುವುದು, ಅಶ್ಲೀಲ ಆರೋಪ, ಅವಾಚ್ಯ ಶಬ್ದಗಳು…… ಎಲ್ಲ ಮಾಮೂಲಾಗುತ್ತದೆ.

ಇಂಥ ದುರ್ಭರ ದಾಂಪತ್ಯ ಹೆಚ್ಚು ದಿನ ಬಾಳಲಾರದು. ಸಹನೆ ಇಬ್ಬರಿಗೂ ಇರುವುದಿಲ್ಲ, ಹೀಗಾಗಿ ಎತ್ತು ಏರಿಗಿಳಿದರೆ, ಕೋಣ ನೀರಿಗೆ ಅಂತಾಗುತ್ತದೆ. ಯಾವಾಗ ಅಸಹನೆ ಮಿತಿ ಮೀರುತ್ತದೋ, ಈ ವೈವಾಹಿಕ ಜೀವನ ಅತಿ ದುರ್ಬಲಗೊಂಡು ಬಿರುಕು ಬಿಡುತ್ತದೆ. ದಿನೇ ದಿನೇ ಕಚ್ಚಾಡುವ ಬದಲು ವಿಚ್ಛೇದನವೇ ಬೆಟರ್‌ ಆಗುತ್ತದೆ. ಇಂಥ ದುರ್ಬಲ ದಾಂಪತ್ಯ ನಡೆಸುವವರಿಗೆ ಹಿರಿಯರು ಏನು ಸಲಹೆ ನೀಡಿದರೂ ಎಷ್ಟೇ ಪ್ಯಾಚಪ್‌ ಮಾಡಿದರೂ, ಮೂರೇ ದಿನಗಳಲ್ಲಿ ಎಲ್ಲಾ ಕಿತ್ತುಹೋಗುತ್ತದೆ.

ಇಂಥ ವೈವಾಹಿಕ ಜೀವನ ಪರಸ್ಪರರ ವ್ಯವಹಾರದಿಂದ ಬೇಸತ್ತು ಕೋರ್ಟಿನ ಕಟಕಟೆ ಹತ್ತಬೇಕಾಗುತ್ತದೆ. ವಿಚ್ಛೇದನ ಆದ ನಂತರವೇ ಕೆಲವು ಮಂದಿ ತಮ್ಮ ತಪ್ಪು ಗುರುತಿಸುತ್ತಾರೆ, ಎಷ್ಟೋ ಜನ ಅದು ಕೂಡ ಇಲ್ಲ! ಇಂಥ ಒಂದು ವೈವಾಹಿಕ ಜೀವನ ಯಾರಿಗೂ ಬರಬಾರದು. ಇನ್ನೂ ಕೆಲವು ಕಾರಣಗಳಿದ್ದು, ಅವನ್ನೂ ನಿರ್ಲಕ್ಷಿಸುವಂತಿಲ್ಲ.

ರೊಮಾನ್ಸ್ ಕೊರತೆ

ಮದುವೆಯ 1-2 ವರ್ಷ ಬಹಳ ರೋಮಾಂಚಕಾರಿ ಎನಿಸುತ್ತದೆ. ಸಂಗಾತಿಗಳು ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು, ಪರಸ್ಪರರ ಜೊತೆ ಕ್ವಾಲಿಟಿ ಟೈಂ ಕಳೆಯಲು ಎಲ್ಲಾ ಕಡೆ ಸುತ್ತಾಡುತ್ತಾರೆ, ಹೆಚ್ಚು ರೊಮ್ಯಾಂಟಿಕ್‌ ವ್ಯವಹಾರ, ಲೈಂಗಿಕ ತೃಪ್ತಿ ಹೊಂದಲು ಯತ್ನಿಸುತ್ತಾರೆ. ಇದರಿಂದ ಇಬ್ಬರ ನಡುವೆ ನಿಕಟತೆ ಹೆಚ್ಚುತ್ತದೆ, ಭಾವನಾತ್ಮಕವಾಗಿಯೂ ಪರಸ್ಪರ ಬಂಧಿಸಲ್ಪಡುತ್ತಾರೆ. ಒಮ್ಮೊಮ್ಮೆ ಸೆಕ್ಸ್ ಇಬ್ಬರ ಮಧ್ಯೆ ನಿರೀಕ್ಷಿತ ಪರಿಣಾಮ ತರದೆ, ಬಯಸಿದ ಸಾಂಗತ್ಯ ಸಿಗಲಿಲ್ಲ ಎನಿಸುತ್ತದೆ.

ಸಾಮಾನ್ಯವಾಗಿ ಗಂಡ ತನ್ನ ಪತ್ನಿಯಿಂದ ದಿನ ಸೆಕ್ಸ್ ಬಯಸಿದರೆ, ಕೆಲವು ಕಡೆ ಪತ್ನಿ ಪತಿಯಿಂದ, ಆದರೆ ಬೋರಿಂಗ್‌ ಯಾ ಬ್ಯಾಡ್‌ ಮ್ಯಾರೇಜ್‌ ಸ್ಥಿತಿ ಇದ್ದರೆ ಸಹಜವಾಗಿಯೇ ವಿವಾಹೇತರ ಸಂಬಂಧಗಳತ್ತ ಮನಸ್ಸು ವಾಲುತ್ತದೆ. ಈ ಕಾರಣದಿಂದಾಗಿ ರೊಮಾನ್ಸ್ ಸೆಕ್ಸ್ ಎರಡೂ ಬೇಡವಾಗುತ್ತದೆ. ಪರಸ್ಪರರಿಂದ ದೂರ, ಅರಿತುಕೊಳ್ಳಲು ಯತ್ನಿಸದಿರುವುದು, ನನ್ನವರು ತನ್ನವರು ಎಂಬ ಭಾವನೆಯ ಕೊರತೆ, ಎಗ್ಸೈಟ್‌ ಮೆಂಟ್‌ ಔಟ್‌ ಆದಂತೆ, ಸಂಬಂಧದ ಆರಂಭದಲ್ಲೇ ಅದರ ಅಂತ್ಯ ಕಾಣತೊಡಗುತ್ತದೆ.

ಅಪರಿಪಕ್ವತೆಯೂ ಕಾರಣ

ಎಷ್ಟೋ ಸಲ ತಾಯಿ ತಂದೆಯರ ಒತ್ತಾಯಕ್ಕೆ ಮಣಿದು ಮದುವೆ ಏನೋ ನಡೆದುಹೋಗುತ್ತದೆ. ಅವರ ವಯಸ್ಸು ಹೆಚ್ಚಿಲ್ಲದೆ ಇರಬಹುದು, ಮದುವೆಗೆ ಸಿದ್ಧರಿಲ್ಲದೆ ಇರಬಹುದು, ಸಂಗಾತಿ ತನಗೆ ಸೂಕ್ತವಲ್ಲ ಎನ್ನಲು ನಾನಾ ಕಾರಣಗಳಿರಬಹುದು, ಈ ಸಂಬಂಧ ಮುಂದುವರಿಸಿಕೊಂಡು ಹೋಗಲು ಅವರಲ್ಲಿ ಅರಿವಿನ ಕೊರತೆ ಇರಬಹುದು. ಹೀಗಾದಾಗ ದಂಪತಿ ಮಧ್ಯೆ ಪರಿಪಕ್ವತೆಯ ಕೊರತೆ ಕಾಡುತ್ತದೆ. ಈ ಕಾರಣದಿಂದ ಮದುವೆ ನಡೆದು ಹೋದರೂ ಪರಸ್ಪರರತ್ತ ಜವಾಬ್ದಾರಿ, ಭಾವನಾತ್ಮಕತೆ, ಕೌಟುಂಬಿಕ ಜವಾಬ್ದಾರಿ….. ಇತ್ಯಾದಿ ಏನೂ ಬರುವುದೇ ಇಲ್ಲ. ಹೀಗಾಗಿ ಸಂಬಂಧದಲ್ಲಿ ಮಾಧುರ್ಯ ಬೆಳೆಯದೆ, ದುರ್ಬಲ ಸಂಬಂಧ ಮುರಿಯುವ ಸ್ಥಿತಿಗೆ ಬಂದುಬಿಡುತ್ತದೆ.

ಅವಿಭಕ್ತ ಕುಟುಂಬ

ಇಂದಿನ ಆಧುನಿಕ ದಂಪತಿಗಳ ಬಗ್ಗೆ ಹೇಳುವುದಾದರೆ, ಮದುವೆ ಆದ ತಕ್ಷಣ ಹುಟ್ಟಿದ ಮನೆಯಿಂದ ಬೇರೆಯಾಗಿ ತಮ್ಮದೇ ಆದ ಪ್ರತ್ಯೇಕ ಮನೆ ಹೂಡಿ, ಅತ್ತೆ ಮನೆಯವರು ಯಾರೂ ಸುಳಿಯದಂತೆ ತಮ್ಮದೇ ಲೋಕದಲ್ಲಿ ಇದ್ದುಬಿಡುತ್ತಾರೆ. ಅತ್ತೆ ಮನೆಯಲ್ಲಿ ಒಂದೇ ಕಡೆ ಇದ್ದರೆ ಕೆಲಸ, ಜವಾಬ್ದಾರಿ ಹೆಚ್ಚು. ಆ ಗೊಡವೆಯೇ ಬೇಡ ಎನಿಸುತ್ತದೆ. ಹೀಗಾಗಿ ಬೇರೆ ಹೋಗುವುದೇ ಘನ ಕಾರ್ಯ ಎಂದು ಭಾವಿಸುತ್ತಾರೆ. ಆದರೆ ಹೀಗೆ ಹೊರಬಂದ ಪತಿ ಪತ್ನಿ ಮಧ್ಯೆ ತಕರಾರು ಶುರುವಾದಾಗ, ಅವರಿಬ್ಬರ ನಡುವೆ ರಾಜಿ ಮಾಡಿಸುವ ಅಥವಾ ಬುದ್ಧಿವಾದ ಹೇಳಿ ಹೊಸ ಸಂಸಾರವನ್ನು ತಿದ್ದಿ ತೀಡುವ ಹಿರಿಯರು ಯಾರೂ ಜೊತೆಗೆ ಇರುವುದಿಲ್ಲ. ಇದರಿಂದ ಸಂಬಂಧದ ಮಧ್ಯೆ ಬಿರುಕು ಕ್ರಮೇಣ ಹೆಚ್ಚುತ್ತಾ ಅದು ವಿಚ್ಛೇದನಕ್ಕೆ ದಾರಿ ಮಾಡುತ್ತದೆ.

ಪರಸ್ಪರ ಗೌರವಾದರಗಳಿಲ್ಲ

ಲವ್ ಅಥವಾ ಅರೇಂಜ್ಡ್ ಮ್ಯಾರೇಜ್‌ ಇರಲಿ, ಸಂಬಂಧದ ನಡುವೆ ಪರಸ್ಪರ ಗೌರವಾದರ ಇಲ್ಲದಿದ್ದರೆ, ಆ ಸಂಬಂಧ ಗಟ್ಟಿಗೊಳ್ಳಲು ಸಾಧ್ಯವೇ ಇಲ್ಲ. ಇಬ್ಬರಲ್ಲಿ ಒಬ್ಬರ ಪರ್ಸನಾಲಿಟಿ ಹೆಚ್ಚು ಆಕರ್ಷಕ ಅಲ್ಲದಿದ್ದರೆ, ಪತ್ನಿ ಪತಿಗಿಂತ ಹೆಚ್ಚು ಗಳಿಸುತ್ತಿದ್ದರೆ, ಆ ಸಮಯದಲ್ಲಿ ಏನೂ ಯೋಚಿಸದೆ, ಪರಿವಾರದ ಉತ್ತಮ ಸ್ಟಾಂಡರ್ಡ್‌ ಗಮನಿಸಿ ಮದುವೆ ಮಾಡಿಕೊಂಡು ಬಿಡುತ್ತಾರೆ. ಆದರೆ ನಂತರ ಮಾತು ಮಾತಿಗೂ ವ್ಯಂಗ್ಯ, ಟೀಕೆ, ಹಂಗರಣೆ, ವ್ಯಾಜ್ಯ ಇದೇ ಆಗಿಹೋಗುತ್ತದೆ. ಹೀಗೆ ಸಂಬಂಧದಲ್ಲಿ ದಿನೇದಿನೇ ಕಹಿ ಹೆಚ್ಚುತ್ತಾ ಹೋಗುತ್ತದೆ.

ಇವೆಲ್ಲ ಹೇಗೋ ಕೊಂಚ ಕಾಲ ನಡೆಯಬಹುದು. ಆದರೆ ಕಾಲ ಕಳೆದಂತೆ ಸಂಬಂಧ ಹಳೆಯದಾದಾಗ, ಎಲ್ಲ ಹಳಸಿಕೊಳ್ಳುತ್ತದೆ, ಗೌರವಾದರ ಇನ್ನಿಲ್ಲವಾಗುತ್ತದೆ, ಸಂಬಂಧ ಮುರಿಯುತ್ತದೆ.

ತಾಯಿ ತಂದೆಯರ ಅವಲಂಬನೆ

ಮದುವೆ ಎಂಬುದು 2 ಜೀವಗಳ ಬೆಸುಗೆ. ಪ್ರತಿಯೊಬ್ಬರೂ ಬಯಸುವುದು ಸಂಗಾತಿ ತನ್ನನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಿ, ತನ್ನ ಮಾತಿಗೆ ಗೌರವ ಕೊಟ್ಟು ನಂಬಿಕೆ ಇಡಲಿ, ತನ್ನ ಹೆಜ್ಜೆಗೆ ಹೆಜ್ಜೆ ಕೂಡಿಸಲಿ, ಅಂತ. ಆದರೆ ಇಬ್ಬರಲ್ಲಿ ಯಾರೇ ಆಗಲಿ ಸದಾ ಹೆತ್ತವರ ಮಾತಿಗೆ ಕೋಲೆ ಬಸವನಂತೆ ತಲೆ ಆಡಿಸುತ್ತಾ ಕುಳಿತರೆ, ನನ್ನ ತಾಯಿ ತಂದೆ ಹಾಗೆ ಹೇಳಿದರು, ಹೀಗೆ ಹೇಳಿದರು ಅಂತ ಪುನರಾವರ್ತಿಸಿದರೆ, ನೀನೂ ಅದರಂತೆಯೇ ನಡೆದುಕೊಳ್ಳಬೇಕು ಎಂದೆಲ್ಲ ಬಯಸಿದರೆ, ಸಹಜವಾಗಿಯೇ ಇಬ್ಬರ ನಡುವೆ ಆತ್ಮೀಯತೆಯ ತಂತು ತುಂಡವರಿಸುತ್ತದೆ. ನಿಧಾನವಾಗಿ ಬೂದಿ ಮುಚ್ಚಿದ ಕೆಂಡ ಹೊಗೆ ಆಡಲು ಆರಂಭಿಸುತ್ತದೆ, ಸಂಬಂಧ ದುರ್ಬಲ ಆಗುತ್ತದೆ.

ಭಾವನಾತ್ಮಕ ಅವಲಂಬನೆ

ಮಾನಸಿಕ, ಆರ್ಥಿಕ, ಲೈಂಗಿಕ ಅವಲಂಬನೆಗಳು ವೈವಾಹಿಕ ಜೀವನದಲ್ಲಿ ಅತಿ ಪ್ರಧಾನ ಪಾತ್ರ ವಹಿಸಿ, ಗಾಡಿ ಸುಗಮವಾಗಿ ಸಾಗಲು ಸಹಕರಿಸುತ್ತವೆ. ಇಬ್ಬರು ಅಪರಿಚಿತರು ಮದುವೆ ಆದಾಗ, ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ಮಾನಸಿಕವಾಗಿ ಆರೋಗ್ಯವಾಗಿರುವುದರ ಜೊತೆಯಲ್ಲೇ ಮುಕ್ತವಾಗಿ ಪರಸ್ಪರ ಪ್ರೀತಿ, ಪ್ರೇಮ, ಕಾಮಗಳ ಬಯಕೆ ತೋಡಿಕೊಳ್ಳಬೇಕು. ಸಂಗಾತಿ ಬಗ್ಗೆ ಪೂರ್ಣ ಭರವಸೆ ಇರಬೇಕು, ವಿಶ್ವಾಸ ಎಂದೆಂದೂ ಬದಲಾಗಬಾರದು. ಮದುವೆಯಾದ 6 ತಿಂಗಳಲ್ಲಿ ಎಲ್ಲವೂ ಸರಿಯಾಗಿ ನಡೆಯುತ್ತಿದೆ ಎನಿಸಿದರೆ, ಇಬ್ಬರೂ ಕೆಲಸದಲ್ಲಿದ್ದರೆ, ಸಂಬಳ ಸಹ ಹಂಚಿಕೊಳ್ಳಬೇಕು. ಇದರಿಂದ ಪರಸ್ಪರ ನಿಷ್ಠೆ, ನಂಬಿಕೆ ದೃಢವಾಗುತ್ತದೆ. ಈ ಸಂಬಂಧದಲ್ಲಿ ಮುಚ್ಚಿಟ್ಟುಕೊಳ್ಳುವ ರಹಸ್ಯಗಳೇನೂ ಇರಬಾರದು.

ನೆಂಟರಿಷ್ಟರನ್ನು ಆದರಿಸಿ

ಹೊಸ ಸಂಬಂಧ ಮುಂದುವರಿದಂತೆ ಎರಡೂ ಕಡೆ ನೆಂಟರಿಷ್ಟರ ಬಳಗ ಹೆಚ್ಚುತ್ತದೆ. 4 ಬಗೆಯ ಜನ ಅಂದ ಮೇಲೆ 4 ತರಹದ ಮಾತುಗಳು ಬಂದು ಹೋಗುತ್ತವೆ. ಇವರೆಲ್ಲರ ಜೊತೆ ಹೊಂದಾಣಿಕೆ ಮೂಡಿಸಿಕೊಂಡು, ಎಲ್ಲಾ ಕಡೆ ಸೈ ಎನಿಸಿಕೊಳ್ಳುವುದು ತುಸು ಕಷ್ಟದ ವಿಚಾರವೇ ನಿಜ, ಆದರೆ ಅಸಂಭವ ಅಲ್ಲ. ಹೀಗಾಗಿ ಹೊಸ ಸೊಸೆ ಕೇವಲ ತನ್ನ ತವರಿನ ನೆಂಟರನ್ನು ಮಾತ್ರ ಆದರಿಸಿ, ಗಂಡನ ಕಡೆಯವರು ತನಗೆ ಅಪರಿಚಿತರು ಎಂದು ನಿರ್ಲಕ್ಷಿಸುವುದು ಖಂಡಿತಾ ಸರಿಯಲ್ಲ. ಅದೇ ತರಹ ಗಂಡ ಸಹ ಮಾವನ ಮನೆಯವರೆಂಬ ನಿರ್ಲಕ್ಷ್ಯ ತೋರಬಾರದು. ಹೊಸ  ಸಂಬಂಧ, ಹೊಸ ಜನರನ್ನು ಅರಿತುಕೊಳ್ಳಲು ಸ್ವಲ್ಪ ಸಮಯ ಬೇಕು, ಎರಡೂ ಕಡೆ ಒಳ್ಳೆಯ ಹೆಸರು ಪಡೆಯಿರಿ.

ವಿಶ್ವಾಸ ಇರಲಿ

ಮದುವೆಯಾದ ಮೊದಲ ವರ್ಷ ನಿಜಕ್ಕೂ ಬಲು ರೋಚಕ, ದಿನಗಳು ಕ್ಷಣಗಳಾಗಿ ಉರುಳಿ ಹೋಗುತ್ತವೆ. ಈ ಮೊದಲ ವರ್ಷದಲ್ಲಿ ಪರಸ್ಪರರನ್ನು ಚೆನ್ನಾಗಿ ಅರಿತುಕೊಂಡರೆ, ವಿಶ್ವಾಸ ಬೆಳೆಸಿಕೊಂಡರೆ, ಮುಂದಿನ ಭವಿಷ್ಯದ ದಿನಗಳು ಖಂಡಿತಾ ಸುಖಕರವಾಗಿ ಇರುತ್ತವೆ ಎಂಬ ಗ್ಯಾರಂಟಿ ಸಿಗುತ್ತದೆ. ಅನಿವಾರ್ಯ ಸಂದರ್ಭಗಳಲ್ಲಿ ನವ ವಧೂವರರು ಪರಸ್ಪರರಿಂದ ಕೆಲವೊಂದು ವಿಷಯ ಮುಚ್ಚಿಡಬಹುದು, ನಂತರ ಅದು ತಿಳಿಯಬಹುದು, ಆದರೆ ಅದರಲ್ಲಿ ಏನೋ ಹುಳುಕಿದೆ ಎಂದು ದೂಷಿಸುವುದು ಬೇಡ.

ಹಂಚಿಕೊಂಡು ಕೆಲಸ ಮಾಡಿ

ಮನೆಯ ಕೆಲಸ ಕಾರ್ಯ ಯಾರು ನಿರ್ವಹಿಸಬೇಕು ಎಂಬ ವಿಷಯದಲ್ಲಿ ದಂಪತಿ ಕಿತ್ತಾಡುವುದು ಹೆಚ್ಚು, ಅದರಲ್ಲೂ ಇಬ್ಬರೂ ವರ್ಕಿಂಗ್‌ ಆಗಿದ್ದರೆ ಈ ಕಷ್ಟ ತಪ್ಪಿದ್ದಲ್ಲ. ಆದ್ದರಿಂದ ಮೊದಲಿನಿಂದಲೇ ಇಬ್ಬರೂ ಕೆಲಸಗಳನ್ನು ಸರಿಯಾಗಿ ಹಂಚಿಕೊಂಡು ನಿರ್ವಹಿಸಿ. ಇದರಿಂದ ಇಬ್ಬರಿಗೂ ಮನೆಗೆಲಸ ಅಂದ್ರೆ ಹೊರೆ ಎನಿಸುವುದಿಲ್ಲ. ಕೆಲಸ ಹಂಚಿಕೊಂಡು ಮಾಡುವುದರಿಂದ ಅದು ಬೇಗ ಮುಗಿಯುತ್ತದೆ, ಇಬ್ಬರೂ ಒಟ್ಟಿಗೆ ಹೆಚ್ಚು ಕ್ವಾಲಿಟಿ ಟೈಂ ಕಳೆಯಲು ಸಹಕಾರಿ. ಇಲ್ಲದಿದ್ದರೆ, ಒಬ್ಬರ ಮೇಲೆಯೇ ಕೆಲಸದ ಹೊರೆ ಹೆಚ್ಚಾಗಿ, ಇಬ್ಬರಲ್ಲೂ ವಿರಸ ಮೂಡಲು ಆರಂಭಿಸುತ್ತದೆ.

ಪರಸ್ಪರ ದೋಷಾರೋಪಣೆ ಬೇಡ

ನೀನು ಅದನ್ನು ಹೀಗೆ ಮಾಡಿದೆ, ನೀನು ನನಗೆ ಯಾಕೆ ಹೇಳಲಿಲ್ಲ, ಇದನ್ನು ಹೇಳಲು ನಿನಗೆಷ್ಟು ಧೈರ್ಯ……. ತಮಾಷೆಗಾಗಿಯೂ ಇಂಥ ಮಾತುಗಳ ಜಾಲಕ್ಕೆ ಸಿಲುಕಬೇಡಿ. ಪರಸ್ಪರರ ಮಾತನ್ನು ತುಂಬಾ ಡೀಪ್‌ ಆಗಿ ತೆಗೆದುಕೊಂಡು ಯಾವತ್ತೋ ಕೋಪದಲ್ಲಿ ಆಡಿದ ಮಾತನ್ನೇ ಹಗೆ ಸಾಧಿಸುತ್ತಾ ಇರಬೇಡಿ. ಹೀಗೆ ಸಣ್ಣಪುಟ್ಟ ವಿಷಯಕ್ಕೂ ಪರಸ್ಪರ ಮನಸ್ಸು ಮುರಿದುಕೊಂಡರೆ, ಸಂಸಾರದಲ್ಲಿ ಸಾರವೇ ಉಳಿಯುವುದಿಲ್ಲ. ಹೀಗಾಗಿ ಇಂಥ ಅವಘಡಗಳಿಗೆ ಎಂದೂ ಅವಕಾಶ ಕೊಡಲೇ ಬೇಡಿ.

ಏನೇ ಆಗಲಿ, ಇಬ್ಬರ ಮಧ್ಯೆ ಏನೇ ಸಣ್ಣಪುಟ್ಟ ಭಿನ್ನಾಭಿಪ್ರಾಯ, ವೈಮನಸ್ಯ ತಲೆದೋರಿದರೂ, ಇಬ್ಬರೂ ಮುಕ್ತವಾಗಿ ಆ ಕುರಿತು ಮಾತನಾಡಿ ಇತ್ಯರ್ಥ ಮಾಡಿಕೊಳ್ಳಿ. ಇಂದಿನ ವಾಗ್ವಾದ ಮುಂದೆ ಎಂದೋ ಭುಗಿಲೇಳುವುದು ಬೇಡ!

DR_KEDAR_TILWE

ಪಾರ್ವತಿ ಭಟ್

ವಿಶೇಷಜ್ಞರ ಸಲಹೆಗಳು

ಈ ಕುರಿತು ಮಾನಸಿಕ ತಜ್ಞರು ವಿವಿಧ ಸಲಹೆಗಳನ್ನು ನೀಡುತ್ತಾರೆ. ಹುಡುಗ ಹುಡುಗಿ ಒಮ್ಮತದಿಂದ ಮದುವೆಯ ನಿರ್ಧಾರ ಕೈಗೊಂಡಾಗ, ಜೀವನವಿಡೀ ಈ ಸಂಬಂಧ ನಿಭಾಯಿಸಬೇಕಿರುವುದರಿಂದ, ಇಬ್ಬರೂ ಪರಸ್ಪರರ ಜವಾಬ್ದಾರಿ ಹೊರಬೇಕಾಗುತ್ತದೆ. ಇಬ್ಬರ ಕುಟುಂಬದವರನ್ನೂ ಅರ್ಥ ಮಾಡಿಕೊಳ್ಳಬೇಕು. ಹೀಗಾಗಿ ಯಶಸ್ವೀ ವೈವಾಹಿಕ ಜೀವನದ ಮೊದಲ ಹೆಜ್ಜೆ ಎಂದರೆ ಪ್ರೀತಿಪ್ರೇಮ, ಪರಸ್ಪರ ಹೊಂದಾಣಿಕೆಯೇ ಆಗಿದೆ.

ಈ ಎರಡೂ ವಿಷಯಗಳು ನಿಮ್ಮ ಸಂಬಂಧದಲ್ಲಿ ತಳವೂರಿದರೆ, ನಿಮ್ಮ ವೈವಾಹಿಕ ಜೀವನಕ್ಕೆ ಗಟ್ಟಿಯಾದ ಅಡಿಪಾಯ ಹಾಕಿದಂತೆ. ಜೊತೆಗೆ ಸಾಮಾಜಿಕ ಜವಾಬ್ದಾರಿಗಳನ್ನು ನಿಭಾಯಿಸಲು ಪರಸ್ಪರರ ಸಹಾಯ ಪಡೆಯಿರಿ. ಪರಸ್ಪರರಿಂದ 100% ಅಪೇಕ್ಷಿಸುತ್ತಾ, ಅದನ್ನು ಪರಸ್ಪರ ನೀಡದಿದ್ದರೆ ಆಗ ವಾದವಿವಾದ ಶುರು! ಇದು ಕ್ಷಣ ಮಾತ್ರದಲ್ಲಿ ಆಗಿಹೋಗುವ ಪ್ರಕ್ರಿಯೆ, ಚಮತ್ಕಾರ ಅಲ್ಲ. ಇದಕ್ಕೆ ಸೂಕ್ತ ಕಾಲಾವಕಾಶ ಬೇಕು.

ಹೀಗಾಗಿ ನಿಮ್ಮ ಸಂಬಂಧದಲ್ಲಿ ಗಾಢ ಆತ್ಮೀಯತೆ ಇರಲಿ. ಅಗತ್ಯಕ್ಕಿಂತ ಹೆಚ್ಚಾಗಿ ಸಂಗಾತಿಯಿಂದ ಅಪೇಕ್ಷಿಸಿ, ಸಂಬಂಧದಲ್ಲಿ ಕಹಿ ತಂದುಕೊಳ್ಳಬೇಡಿ. ಯಾವಾಗ ಏನೇ ಕಷ್ಟ ಬಂದರೂ, ಪರಸ್ಪರ ದೋಷಾರೋಪಣೆ ಮಾಡುವ ಬದಲು, ಪರಸ್ಪರರನ್ನು ಅರಿತುಕೊಳ್ಳಿ ಸಹಾಯಕರಾಗಿರಿ. ನಿಮ್ಮ ಈ ತಿಳಿವಳಿಕೆ ನಿಮ್ಮಿಬ್ಬರ ನಿಕಟತೆ ಹೆಚ್ಚಿಸಲಿದೆ.

ನಿಮ್ಮ ಸಂಬಂಧವನ್ನು ಮತ್ತಷ್ಟು ಮಧುರಗೊಳಿಸಲು ಪರಸ್ಪರ ಕ್ವಾಲಿಟಿ ಟೈಂ ನೀಡಿ. ಅದರಲ್ಲಿ ಪರಸ್ಪರರನ್ನು ಚೆನ್ನಾಗಿ ಅರಿಯಿರಿ. ಎಲ್ಲಿ ತುಸು ಭಿನ್ನಾಭಿಪ್ರಾಯ ಕಂಡರೂ ಸರಿಪಡಿಸಿಕೊಳ್ಳಿ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ