ತಮಿಳು ಚಿತ್ರರಂಗದ ಖ್ಯಾತ ನಟ, ಅಭಿಮಾನಿಗಳ ದಳಪತಿ ವಿಜಯ್‌ ವಿರುದ್ಧ ಮುಸ್ಲಿಂ ಸಮುದಾಯ ತಿರುಗಿಬಿದ್ದಿದೆ. ತಮಿಳಗ ವೆಟ್ರಿ ಕಳಗಂ ಪಾರ್ಟಿ ಕಟ್ಟಿ ರಾಜಕೀಯಕ್ಕೆ ಧುಮುಕಿರುವ ವಿಜಯ್‌ ವಿರುದ್ಧ ಮೌಲ್ವಿಯೊಬ್ಬರು ಫತ್ವಾ ಹೊರಡಿಸಿದ್ದಾರೆ. 2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ವಿಜಯ್‌ ಪಕ್ಷಕ್ಕೆ ಇದರಿಂದ ಬಿಗ್ ಶಾಕ್ ಎದುರಾಗಿದೆ.

ಉತ್ತರಪ್ರದೇಶದ ಅಖಿಲ ಭಾರತ ಮುಸ್ಲಿಂ ಜಮಾಅತ್ ಮೌಲ್ವಿ ನಟ ವಿಜಯ್ ವಿರುದ್ಧ ಫತ್ವಾ ಹೊರಡಿಸಿದೆ. ತಮಿಳುನಾಡಿನಲ್ಲಿ ವಿಜಯ್ ಅವರಿಗೆ ನಮ್ಮ ಸಮುದಾಯದ ಬೆಂಬಲ ಇಲ್ಲ ಅನ್ನೋ ಆದೇಶವನ್ನು ನೀಡಿದೆ.

 

ಕ್ರಿಶ್ಚಿಯನ್ ಧರ್ಮದವರಾದ ಜೋಸೆಫ್‌ ವಿಜಯ್‌ ಅವರು ರಾಜಕೀಯಕ್ಕೆ ಬಂದ ಮೇಲೆ ಇತ್ತೀಚೆಗೆ ಇಫ್ತಾರ್ ಕೂಟ ಆಯೋಜನೆ ಮಾಡಿದ್ದರು. ಆ ಇಫ್ತಾರ್ ಈಗ ವಿವಾದಕ್ಕೆ ಗುರಿಯಾಗಿದೆ. ವಿಜಯ್ ಆಯೋಜನೆ ಮಾಡಿದ್ದ ಇಫ್ತಾರ್‌ನಲ್ಲಿ ಸಮಾಜಘಾತುಕ ವ್ಯಕ್ತಿಗಳಿಗೆ ಆಹ್ವಾನ ನೀಡಲಾಗಿತ್ತು. ಇಫ್ತಾರ್ ಸಂಪೂರ್ಣವಾಗಿ ಮುಸ್ಲಿಂ ವಿರೋಧಿಯಾಗಿತ್ತು ಎಂದು ಆರೋಪಿಸಲಾಗಿದೆ.

ನಟ ವಿಜಯ್ ಅವರು ತಮ್ಮ ಇಫ್ತಾರ್​ಗೆ ರಾಜಕೀಯ ಲಾಭಕೋಸ್ಕರ ಮದ್ಯವ್ಯಸನಿಗಳು, ಜೂಜುಕೋರರನ್ನು ಆಹ್ವಾನ ಮಾಡಿದ್ದರು. ಇದರಿಂದ ವಿಜಯ್ ಅವರು ಮುಸ್ಲಿಂ ಸಮುದಾಯದ ನಂಬಿಕೆಗೆ ಅರ್ಹರಲ್ಲ. ಯಾವುದೇ ರೀತಿಯ ಧಾರ್ಮಿಕ ಕಾರ್ಯಕ್ರಮಗಳಿಗೆ ನಮ್ಮ ಬೆಂಬಲ ಇಲ್ಲ ಎಂದು ಫತ್ವಾ ಹೊರಡಿಸಲಾಗಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿರುವ ಸುನ್ನಿ ಮುಸ್ಲಿಂ ಮೌಲ್ವಿ ಮೌಲಾನಾ ಶಹಾಬುದ್ದೀನ್ ರಜ್ವಿ ತನ್ನ ಫತ್ವಾದಲ್ಲಿ ಈ ಆದೇಶ ನೀಡಿದ್ದಾರೆ.

ರೋಜಾ ಇಫ್ತಾರ್ ಸಮಯದಲ್ಲಿ ಕುಡುಕರು, ಜೂಜುಕೋರರು ಮತ್ತು ಸಮಾಜ ವಿರೋಧಿಗಳನ್ನು ಆಹ್ವಾನಿಸುವುದು ಕಾನೂನುಬಾಹಿರ ಮತ್ತು ಪಾಪಕರ ಕೃತ್ಯ. ಫತ್ವಾದಲ್ಲಿ ಮೌಲಾನಾ ತಮಿಳುನಾಡಿನ ಮುಸ್ಲಿಮರೇ ಅಂತಹ ವ್ಯಕ್ತಿಯನ್ನು ನಂಬಬೇಡಿ ಮತ್ತು ಅವರನ್ನು ತಮ್ಮ ಕಾರ್ಯಕ್ರಮಗಳಿಗೂ ಆಹ್ವಾನಿಸಬೇಡಿ ಎಂದು ಕೇಳಿಕೊಂಡಿದ್ದಾರೆ.

ನಟ ವಿಜಯ್ ಅವರು ಚಲನಚಿತ್ರ ಪ್ರಪಂಚದಿಂದ ರಾಜಕೀಯಕ್ಕೆ ಪ್ರವೇಶಿಸಲು ಮುಸ್ಲಿಂ ಭಾವನೆಗಳನ್ನು ಬಳಸುತ್ತಿದ್ದಾರೆ. ಆದರೆ ಅವರ ಇತಿಹಾಸವು ಮುಸ್ಲಿಂ ವಿರೋಧಿ ಭಾವನೆಗಳಿಂದ ತುಂಬಿದೆ ಎಂದು ಬರೇಲ್ವಿ ಮೌಲಾನಾ ಹೇಳಿದ್ದಾರೆ.

ವಿಜಯ್ ನಟಿಸಿದ್ದ ‘ದಿ ಬೀಸ್ಟ್’ ಚಿತ್ರದಲ್ಲಿ, ಮುಸ್ಲಿಮರು ಮತ್ತು ಇಡೀ ಮುಸ್ಲಿಂ ಸಮುದಾಯವನ್ನು ಭಯೋತ್ಪಾದನೆ ಮತ್ತು ಉಗ್ರವಾದದೊಂದಿಗೆ ಜೋಡಿಸಿದ್ದಾರೆ. ಈ ಚಿತ್ರದಲ್ಲಿ ವಿಜಯ್ ಮುಸ್ಲಿಮರನ್ನು ಕೆಟ್ಟದಾಗಿ ತೋರಿಸಲು ಪ್ರಯತ್ನಿಸಿದ್ದಾರೆ.

ಈಗ ಅವರು ರಾಜಕೀಯಕ್ಕೆ ಪ್ರವೇಶಿಸುತ್ತಿರುವುದರಿಂದ ಮತ್ತು ಅವರಿಗೆ ಮುಸ್ಲಿಂ ಮತಗಳು ಬೇಕಾಗಿರುವುದರಿಂದ ಈಗ ಮುಸ್ಲಿಂ ತುಷ್ಟೀಕರಣವನ್ನು ಮಾಡುತ್ತಿದ್ದಾರೆ. ಇದಲ್ಲದೆ, ಅವರು ಇಸ್ಲಾಂ ಮತ್ತು ಮುಸ್ಲಿಮರನ್ನು ಗುರಿಯಾಗಿಸಿಕೊಂಡಿರುವ ಚಲನಚಿತ್ರಗಳನ್ನು ಸಹ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಫತ್ವಾದಿಂದ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷಕ್ಕೆ ಮತ್ತೊಂದು ಸವಾಲು ಎದುರಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ