ನಮ್ಮ ಹಣೆಬರಹಕ್ಕೆ ಎಂತಹ ಉಪಾಯ ಕೂಡ ಅಪಾಯ ಆಗುತ್ತೆ…..
ಭಿಕ್ಷುಕ : ಅಮ್ಮಾ ತಾಯೀ… ಅಂತ ಬೇಡಿದರೆ ದಿನಾಲು ಭಿಕ್ಷೆ ಹಾಕ್ತೀರಿ….. ಆದರೆ ತಪ್ಪು ತಿಳೀಬೇಡಿ ಅಮ್ಮಾ….. ಉಪ್ಪು, ಹುಳಿ, ಖಾರ ಇಲ್ಲದೇ ದಿನಾಲು ಹೇಗಮ್ಮಾ ತಿನ್ನೋದು…..?!!
ಮನೆಯಾಕೆ : ನನ್ನ ಗಂಡನೇ ಒಂದು ದಿನ ಏನೂ ಹೇಳದೆ ಬಾಯಿ ಮುಚ್ಕೊಂಡು ತಿಂತಾರೆ… ನಿಂದೇನು ಕೊಂಕು…..?
ಭಿಕ್ಷುಕ : ಅಮ್ಮಾ… ನಿಮ್ಮ ಯಜಮಾನ್ರೇ…..ಇಪ್ಪತ್ತು ರೂಪಾಯಿ ಕೊಟ್ಟು ನಿಮ್ಮನ್ನು ಕೇಳು ಅಂದಿದ್ದು. ನೋಡಿ ಅಲ್ಲಿ ಕಾಂಪೌಂಡ್‌ಹಿಂದೆ ನಿಂತಿದ್ದಾರೆ……
ಸ್ಟೈಲಿಶ್ ಸಿತಾರಾ ಸರಸರನೆ ಹೊಸ ಚಪ್ಪಲಿ ಅಂಗಡಿಗೆ ಹೋದಳು. ಅಲ್ಲಿ ಸುಮಾರು ಒಂದೂವರೆ ಘಂಟೆ ಕಾಲ ಅಂಗಡಿಯಲ್ಲಿ ಇದ್ದಬದ್ದ ಚಪ್ಪಲಿಗಳನ್ನೆಲ್ಲ ಹೊರ ತೆಗೆಸಿ, ಹಾಕಿ ತೆಗೆದು ಮಾಡಿ, ಅಲ್ಲಿದ್ದ ಸೇಲ್ಸ್ ನವರ ಜೀವ ತಿಂದಳು.
ಕೊನೆಯಲ್ಲಿ ಆ ಹೊಸ ಚಪ್ಪಲಿಗಳ ಅಡಿಯಲ್ಲಿದ್ದ ಹಳೆ ಬ್ರಾಂಡಿನದೊಂದು ಅಂತೂ ಇಂತೂ ಅವಳ ಮೆಚ್ಚುಗೆ ಗಳಿಸಿತು. ಅದನ್ನು ಹಿಡಿದುಕೊಂಡು ಸಂಭ್ರಮದಿಂದ ಕ್ಯಾಶ್ ಕೌಂಟರ್ ನಲ್ಲಿದ್ದ ಮಾಲೀಕರ ಬಳಿ ಓಡಿಹೋಗಿ ತೋರಿಸಿದಳು, “ಇದರ ಬೆಲೆ ಎಷ್ಟು ಅಂತ ನೋಡಿ ಇವರೆ…. ಇದನ್ನೇ ಪ್ಯಾಕ್ ಮಾಡಿಸಿ!” ಎಂದಳು.
“ಏನೂ ಬೇಡ ತಾಯಿ…. ಇದು ನಮ್ಮ ಅಂಗಡಿಯದಲ್ಲ…. ನಿಮ್ಮದೇ ಕಾಲಿನ ಚಪ್ಪಲಿಗಳು!” ಎಂದಾಗ ಸಿತಾರಾ ಸ್ಟೈಲಿಶ್ ಆಗಿ ಅಲ್ಲಿಂದ ಹೊರನಡೆದಳು.
ನೀತಿ : ಇರೋ ಗಂಡನ್ನ ಬಿಟ್ಟು, ಹೊಸ ಗಂಡನನ್ನು ಹುಡುಕಿದರೆ ಇದೇ ಗತಿ!
ನವ ವಿವಾಹಿತ ಪತಿ ರೊಮ್ಯಾಂಟಿಕ್ ಮೂಡ್ ನಲ್ಲಿದ್ದ. ಅವನ ಪತ್ನಿ ಆಗ ತಾನೇ ಅಡುಗೆ ಕಲಿಯ ತೊಡಗಿದ್ದಳು. ಹಾಗೆಂದು ಅವಳ ಅಡುಗೆ ಸರಿ ಇಲ್ಲ ಎಂದು ಟೀಕಿಸಿ ಅವನು ನೆಮ್ಮದಿ ಕಾಣಲು ಸಾಧ್ಯವೇ?
ಪತ್ನಿ : ಏನ್ರಿ…. ಇವತ್ತಿನ ಅಡುಗೆ ಚೆನ್ನಾಗಿತ್ತು ಅಲ್ವೇ? ನೀವೇನಂತೀರಿ…? ಊಟ ಮಾಡುವಾಗ ಏನೂ ಹೇಳಲಿಲ್ಲ….
ಪತಿ : ನಿನ್ನ ಈ ಬಿರಿದ ಕೇಶರಾಶಿಯ ಹಾಗೆ, ಹರಡಿದ ಈ ಮೇಘಮಾಲೆಗೆ ಸರಿಸಾಟಿಯುಂಟೇ? ಹಾಗಾಗಿಯೇ ಇದು ಗ್ರೇವಿಯಿಂದ ಹಿಡಿದು ಚಪಾತಿಯವರೆಗೂ ಎಲ್ಲೆಲ್ಲೂ ತನ್ನ ಸೌಂದರ್ಯ ಪ್ರದರ್ಶಿಸಿದೆ, ಡಾರ್ಲಿಂಗ್!
ರೋಗಿ : ಡಾಕ್ಟ್ರೇ, ಮೊನ್ನೆ ನೀವು ಔಷಧಿ ಚೀಟಿ (ಪ್ರಿಸ್ ಕ್ರಿಪ್ಶನ್) ಬರೆದುಕೊಟ್ಟಿದ್ರಲ್ಲ, ಅದರ ಹಿಂದೆ ಕೊನೆ ಘಳಿಗೇಲಿ ಅವಸರದಲ್ಲಿ ಏನೋ ಬರೆದು ಕೊಟ್ರಿ. ಅದಕ್ಕಾಗಿ ಬೆಂಗಳೂರು ಪೂರ್ತಿ ಹುಡುಕಾಡಿದೆ, ಒಂದು ಅಂಗಡಿಯಲ್ಲಾದರೂ ಆ ಟಾನಿಕ್ ಸಿಕ್ಕಿದ್ದರೆ ಕೇಳಿ!
ಡಾಕ್ಟರ್: ಬಡ್ಕೊಂಡ್ರು…. ನನ್ನ ಪೆನ್ ಸರಿಯಾಗಿ ಬರೆಯುತ್ತಿರಲಿಲ್ಲ ಅಂತ ಚೀಟಿ ತಿರುವಿಹಾಕಿ ಹಿಂದೆ ಗೀಚಿದ್ದಷ್ಟೆ!
ಒಂದು ಖಾಸಗಿ ಕಂಪನಿಯ ನಡುವಯಸ್ಸು ಮೀರಿದ ಬಾಸ್, ತನಗಾಗಿ ಒಬ್ಬ ಅತಿ ಬ್ಯೂಟಿಫುಲ್, ಅಪ್ ಡೇಟೆಡ್, ಗ್ಲಾಮರಸ್ ವೈಯಾರಿಯನ್ನು ಹೊಸದಾಗಿ ಸೆಕ್ರೆಟರಿ ಆಗಿ ನೇಮಿಸಿಕೊಂಡರು.
ಅದಾಗಿ ಒಂದು ತಿಂಗಳ ನಂತರ, ಅದೇನಾಯಿತೋ ಏನೋ, ಬಾಸ್ ತಮ್ಮ 25ನೇ ಮಹಡಿಯ ಛೇಂಬರ್ ನಿಂದ ಕೆಳಗೆ ಹಾರಿ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದೇ….? ಅಲ್ಲಿಗೆ ಓಡಿಬಂದ ಪೊಲೀಸ್ ಪಡೆ ವಿಚಾರಣೆ ಆರಂಭಿಸಿತು.
ಇನ್ ಸ್ಪೆಕ್ಟರ್ : ಆ ಸಮಯದಲ್ಲಿ ಬಾಸ್ ಛೇಂಬರ್ ನಲ್ಲಿ ಯಾರು ಯಾರು ಇದ್ದರು?
ಸೆಕ್ರೆಟರಿ : ಬೇರೆ ಯಾರೂ ಇರಲಿಲ್ಲ…. ನಾನು ಮಾತ್ರ ಇದ್ದೆ….
ಇನ್ ಸ್ಪೆಕ್ಟರ್ : ಅಂದ್ರೆ….. ಅಸಲಿಗೆ ಆ ದಿನ ನಡೆದಿದ್ದಾದರೂ ಏನು?
ಸೆಕ್ರೆಟರಿ : ಸರ್, ಅವರು ಬಹಳ ಒಳ್ಳೆಯ ವ್ಯಕ್ತಿ. ಮೊದಲ ದಿನದಿಂದಲೇ ನನ್ನ ಮೇಲೆ ಜೀವ ಇಟ್ಟುಕೊಂಡಿದ್ದರು ಅಂತಾನೇ ಹೇಳಬಹುದು. ನಾನು ಸೇರಿದ 2ನೇ ವಾರವೇ ನನಗೆ 2 ಲಕ್ಷ ರೂ.ಗಳ ಹೊಸ ಗ್ಲಾಮರಸ್ ಡ್ರೆಸ್ ಗಿಫ್ಟ್ ಆಗಿ ನೀಡಿದರು. ಅದಾದ 2 ವಾರಗಳ ನಂತರ ನನಗೆ 15 ಲಕ್ಷದ ವಜ್ರದ ನೆಕ್ಲೇಸ್ ಪ್ರೆಸೆಂಟ್ ಮಾಡಿದರು. ಮೊನ್ನೆ ಅಂತೂ 50 ಲಕ್ಷ ಬೆಲೆ ಬಾಳುವ ಪ್ಲಾಟಿನಂ ಉಂಗುರ ತೊಡಿಸುತ್ತಾ, ನನ್ನನ್ನು ಮದುವೆ ಆಗ್ತೀಯಾ ಎಂದು ಪ್ರಪೋಸ್ ಮುಂದಿಟ್ಟರು.
ಇನ್ ಸ್ಪೆಕ್ಟರ್ : ಮತ್ತೆ….. ಮುಂದೇನಾಯಿತು?
ಸೆಕ್ರೆಟರಿ : ಅಷ್ಟರಲ್ಲಿ ಅದೇ ಸಮಯಕ್ಕೆ ನನ್ನ ತಂದೆ ಫೋನ್ ಮಾಡಿದರು. ಬಾಸ್ ಹೇಗೆ, ಏನು ಎತ್ತ… ಹೊಸ ಕಂಪನಿ ಬಗ್ಗೆ ವಿಚಾರಿಸಿದರು. ನಾನು ನನ್ನ ಬಾಸ್ ಬಗ್ಗೆ ವಿವರಿಸುತ್ತಾ, ಅವರು ಬಹಳ ಒಳ್ಳೆಯವರು ಎಂದು ವಿವರಿಸಿದೆ. `ಡ್ಯಾಡಿ, ನೀವು ಇಲ್ಲಿಗೆ ಬಂದು ನೋಡಬೇಕು…… ನನ್ನ ಬಾಸ್ ನನ್ನ ಮೇಲೆ ಪಂಚಪ್ರಾಣ ಇರಿಸಿಕೊಂಡು, ನನ್ನನ್ನು ಎಷ್ಟು ಪ್ರೀತಿಯಿಂದ ವಿಚಾರಿಸಿಕೊಳ್ತಾರೆ ಗೊತ್ತಾ? ನೀವು ನೋಡಿದ್ರೆ, ಯಾವಾಗಲೂ ನನ್ನನ್ನು ಹುಡುಗಿ ತರಹ ಮೇಕಪ್, ಡ್ರೆಸ್ ಮಾಡಿಕೊಂಡು ಊರೆಲ್ಲ ಅಲೆಯಬೇಡ! ಅಂತ ಬೈತಾ ಇರ್ತೀರ….’ ಅಂತ ಅವರಿಗೆ ಹೇಳಿ ಮುಗಿಸಿ ಇತ್ತ ತಿರುಗಿ ನೋಡ್ತೀನಿ, ಭ್ರಮನಿರಸನಕ್ಕೆ ಒಳಗಾದ ಬಾಸ್, ಒಂದೇ ಸಲ 25ನೇ ಮಹಡಿಯಿಂದ ಕೆಳಗೆ ದುಮುಕಿಬಿಡುವುದೇ?
ಗುಂಡೂರಾಯರ ಬೋಳುತಲೆಯ ಮೇಲೆ ಡಿಂಗ್ರಿ ನೊಣ ಬಂದು ಕುಳಿತಿತು. ಅದನ್ನು ಕಂಡು ಸುಂದ್ರಿ ನೊಣ ಹೇಳಿತು, “ಆಹಾ… ಎಂಥ ಭವ್ಯ ಮನೆ ಸಿಕ್ಕಿದೆ ನಿನಗೆ!”
ಅದಕ್ಕೆ ಡಿಂಗ್ರಿ ತುಸು ಬೇಸರದಿಂದ, “ಎಲ್ಲಿ ಬಂತು ಡಾರ್ಲಿಂಗ್…. ಈಗಿನ್ನೂ ಪ್ಲಾಟ್ ಕೊಂಡಿದ್ದೀನಷ್ಟೆ….” ಎಂದು ಗೊಣಗುವುದೇ?
ಕಿಟ್ಟಿಯ ಹೆಂಡತಿ ಮಹಾ ಘಟವಾಣಿ, ಗಯ್ಯಾಳಿ. ಮಾತು ಮಾತಿಗೆ ಗಂಡನ ಜೊತೆ ಜಗಳವಾಡಿ ತವರು ಸೇರುತ್ತಿದ್ದಳು.
ಕಿಟ್ಟಿ ಈ ಸಲ ತವರಿಗೆ ಹೋದ ಅವಳ ಬಗ್ಗೆ ವಿಚಾರಿಸಲು ನೇರ ಮಾವನಿಗೇ ಫೋನ್ ಮಾಡಿದ.
ಕಿಟ್ಟಿ : ಮಾವ… ಅವಳು ತವರಿಗೆ ಬಂದು ಈಗಾಗಲೇ 3 ವಾರ ಆಯ್ತು. ಇನ್ನಾದರೂ ಅವಳನ್ನು ಕಳಿಸಬಾರದೇ?
ಮಾವ : ಖಂಡಿತಾ ಅನಳು ಬರಲ್ಲ ಕಣಯ್ಯ…. ಜಪ್ಪಯ್ಯ ಅಂದ್ರೂ ಗಂಡನ ಮನೆಗೆ ಹೋಗಲಾರೆ ಅಂತ ಕುಳಿತಿದ್ದಾಳೆ!
ಕಿಟ್ಟಿ ಅದಾಗಿ 3 ವಾರ ಬಿಟ್ಟು ಮಾವನಿಗೆ ಮತ್ತೆ ಫೋನ್ ಮಾಡಿದ.
ಕಿಟ್ಟಿ : ಮಾವ, ಈಗಲಾದರೂ ಅವಳನ್ನು ಕಳಿಸಬಾರದೇ?
ಮಾವ : ಖಂಡಿತಾ ಅವಳು ಬರಲ್ಲ ಕಣಯ್ಯ…. ಹೋಗೋದೇ ಇಲ್ಲ ಅಂತಾಳೆ.
ಕಿಟ್ಟಿ : ಈ ಮಾತನ್ನು ಮತ್ತೆ ಮತ್ತೆ ನಿಮ್ಮ ಬಾಯಲ್ಲಿ ಕೇಳೋಕ್ಕೆ ಎಷ್ಟು ಖುಷಿ ಆಗ್ತಿದೆ ಗೊತ್ತೇ…..?
ಪತ್ನಿ : ನೋಡ್ರಿ…. ನಮ್ಮ ಹಳೇ ಮರದ ಮೇಲೆ ಎಷ್ಟೊಂದು ಹಕ್ಕಿಗಳು ಗೂಡು ಕಟ್ಟಿಕೊಂಡು ಎಷ್ಟು ಪ್ರೀತಿಯಿಂದ ಸಂಸಾರ ಮಾಡುತ್ತಾ, ಸದಾ ಕಲರವದಿಂದ ನಸುನಗುತ್ತಿರುತ್ತವೆ. ಮನುಷ್ಯರಾಗಿ ನಾವು ಇದ್ದೇವೆ, ಅವುಗಳ ಮುಂದೆ ದಂಡಕ್ಕೆ! ಸದಾ ಕಿತ್ತಾಡೋದೇ ಆಗೋಯ್ತು……
ಪತಿ : ಆದರೆ ಡಾರ್ಲಿಂಗ್, ನೀನೊಂದು ವಿಷಯ ಗಮನಿಸಿದ್ದೀಯಾ? ಇಲ್ಲಿ ಬರುವ ಜೋಡಿ ಹಕ್ಕಿಗಳಲ್ಲಿ ಯಾವುದೂ ರಿಪೀಟ್ ಇರೋಲ್ಲ, ಪುಣ್ಯ ಮಾಡಿವೆ…. ಹಾಯಾಗಿ ದಿನಾ ಜೋಡಿ ಬದಲಾಯಿಸಿ ಜೀವಿಸುತ್ತವೆ!
ಆ ಬ್ಯಾಚುಲರ್ ಗ್ಯಾಂಗ್ ನಲ್ಲಿ ಕಿಟ್ಟಿಯೇ ಮೊದಲು ಮದುವೆ ಆದದ್ದು. ಹನೀಮೂನ್ ಕಳೆದು, ಮದುವೆಯ ಜೋಶ್ ಇಳಿದು, ಮತ್ತೆ ಸ್ನೇಹಿತರನ್ನು ಸಂಜೆ ಭೇಟಿ ಆಗಲೆಂದು ಬರುವಷ್ಟರಲ್ಲಿ 6 ತಿಂಗಳು ಕಳೆಯಿತು.
ನಾಣಿ : ಯಾಕಯ್ಯ ಕಿಟ್ಟಿ ಡಲ್ ಆಗಿದ್ದೀಯಾ?
ಕಿಟ್ಟಿ : ಏನೂ ಇಲ್ಲ ಕಣೋ… ಹೀಗೇ….
ವೆಂಕಿ : ಅದೇನೂಂತಾ ಹೇಳಬಾರದೇ? ನೀನಾದರೋ ಸಂಸಾರಸ್ಥ…. ನಾವೆಲ್ಲ ಇನ್ನೂ ಗುಂಡ್ರುಗೋವಿಗಳು…..
ಕಿಟ್ಟಿ : ನಿಮ್ಮತ್ತಿಗೆ ಜೊತೆ ಸ್ವಲ್ಪ ವಾದ ವಿವಾದ ಆಯ್ತು… ಸಂಸಾರ ಅಂದ ಮೇಲೆ ಇದ್ದೇ ಇರುತ್ತಲ್ಲ….
ಸೀನ : ಅವಳು ಹೇಳಿದ್ದಕ್ಕೆಲ್ಲ ಗೋಣು ಆಡಿಸಿ ಬಂದಿರ್ತೀಯಾ….. ಬಹುಶಃ 15 ದಿನ ನಿಮ್ಮತ್ತೆ ಬಂದು ಟೆಂಟ್ ಹಾಕ್ತಾರೆ ಅಂತ ಕಾಣ್ಸುತ್ತೆ….
ಕಿಟ್ಟಿ : ………….
ಗುಂಡ : ಸಾರ್, ಈಗಲಾದರೂ ನನ್ನ ಸಂಬಳ ಜಾಸ್ತಿ ಮಾಡಿ ನನಗೆ ಮದುವೆ ಫಿಕ್ಸ್ ಆಗಿದೆ.
ಮ್ಯಾನೇಜರ್ : ಆಗಲ್ಲ…. ಆಫೀಸ್ ಹೊರಗೆ ನಡೆಯುವ ದುರ್ಘಟನೆಗೆ ಕಂಪನಿ ಖಂಡಿತಾ ಹೊಣೆಯಲ್ಲ!