ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ‘ಕಾಂತಾರ: ಚಾಪ್ಟರ್ 1’ ಚಿತ್ರದ ಶೂಟಿಂಗ್ ವೇಳೆ ಅವಘಡ ಸಂಭವಿಸಿದೆ. ಸಿನಿಮಾ ಸೆಟ್​ನಲ್ಲಿದ್ದ ಜೂನಿಯರ್ ಆರ್ಟಿಸ್ಟ್​ ಕಪಿಲ್ ನಿಧನರಾಗಿದ್ದಾರೆ. ನೀರಿನಲ್ಲಿ ಮುಳುಗಿ ಅವರು ಮೃತಪಟ್ಟಿದ್ದು, ಕೊಲ್ಲೂರಿನಲ್ಲಿ ಈ ಘಟನೆ ನಡೆದಿದ್ದು, ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದೆ.

ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಶೂಟಿಂಗ್ ವೇಳೆ ಈ ವಿಘ್ನ ಎದುರಾಗಿದೆ. ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಜೂನಿಯರ್ ಆರ್ಟಿಸ್ಟ್ ಕಪಿಲ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಉಡುಪಿ ಜಿಲ್ಲೆಯ ಬೈಂದೂರಿನ ಕೊಲ್ಲೂರಿನಲ್ಲಿ ಈ ಘಟನೆ ನಡೆದಿದೆ. ಇದರಿಂದ ಸಿನಿಮಾ ತಂಡಕ್ಕೆ ವಿಘ್ನ ಎದುರಾಗಿದೆ.

ಶೂಟಿಂಗ್ ಮುಗಿಸಿದ ಬಳಿಕ ಕೊಲ್ಲೂರಿನ ಸೌಪರ್ಣಿಕ ನದಿಯಲ್ಲಿ ಕಪಿಲ್ ಅವರು ತಮ್ಮ ತಂಡದವರ ಜೊತೆ ಈಜಲು ತೆರಳಿದ್ದರು. ನೀರಿನ ಆಳ ತಿಳಿಯದೇ ಅವರು ನದಿಗೆ ಇಳಿದಿದ್ದಾಗ ಈ ಅವಘಡ ಸಂಭವಿಸಿದೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾ ತಂಡಕ್ಕೆ ಒಂದಲ್ಲ ಒಂದು ಗಂಡಾಂತರ ಎದುರಾಗುತ್ತಲೇ ಇವೆ. ಈ ಮೊದಲು ದೈವ ನುಡಿದಂತೆಯೇ ಚಿತ್ರೀಕರಣಕ್ಕೆ ಹಲವು ಸಂಕಷ್ಟಗಳು ಎದುರಾಗುತ್ತಿವೆ. ಈ ಹಿಂದೆ ಕೊಲ್ಲೂರಿನಲ್ಲೇ ಜೂನಿಯರ್ ಆರ್ಟಿಸ್​ಟ್​ಗಳಿದ್ದ ಬಸ್ ಪಲ್ಟಿಯಾಗಿ ಅಪಘಾತ ಸಂಭವಿಸಿತ್ತು. ಬಳಿಕ ಗಾಳಿ ಮಳೆಗೆ ಬೃಹತ್ ಸೆಟ್ ಹಾರಿ ಹೋಗಿತ್ತು. ಇಂಥ ಘಟನೆಗಳ ಬೆನ್ನಲ್ಲೇ ಜೂನಿಯರ್ ಆರ್ಟಿಸ್ಟ್ ಸಾವು ಸಂಭವಿಸಿದೆ.

‘ಹೊಂಬಾಳೆ ಫಿಲ್ಮ್ಸ್’ ಮೂಲಕ ‘ಕಾಂತಾರ: ಚಾಪ್ಟರ್ 1’ ಸಿನಿಮಾ ನಿರ್ಮಾಣವಾಗುತ್ತಿದೆ. ಈ ಸಿನಿಮಾ ಮೇಲೆ ಜನರಿಗೆ ಹೆಚ್ಚು ನಿರೀಕ್ಷೆ ಇದೆ. ‘ಕಾಂತಾರ’ ಸಿನಿಮಾದ ಪ್ರೀಕ್ವೆಲ್ ಆಗಿ ಈ ಚಿತ್ರ ಮೂಡಿಬರುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತಯಾರಾಗುತ್ತಿದೆ. ಆದರೆ ಶೂಟಿಂಗ್ ಸಂದರ್ಭದಲ್ಲಿ ಅನೇಕ ತೊಂದರೆಗಳನ್ನು ಎದುರಿಸುವಂತಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ