ಕಡಿಮೆ ಬಂಡವಾಳದಿಂದ ದೊಡ್ಡ ಹೂಡಿಕೆಯ ಅಡಿಪಾಯ ಹಾಕಲು ಈ ವಿಧಾನಗಳು ನಿಮಗೆ ಉಪಯುಕ್ತ ಆಗಬಹುದು.

`ಸಿಸ್ಟಮ್ಯಾಟಿಕ್‌ ಇನ್‌ ವೆಸ್ಟ್ ಮೆಂಟ್‌ ಪ್ಲ್ಯಾನ್‌’ನ್ನು ಸಂಕ್ಷಿಪ್ತವಾಗಿ ಎಸ್‌ಐಪಿ ಹೆಸರಿನಿಂದ ಕರೆಯುತ್ತಾರೆ. ಇದು ಆವರ್ತ ಜಮೆ ಅಂದರೆ ರೆಕರಿಂಗ್‌ ಡೆಪಾಸಿಟ್‌ ಥರ. ಇದರಲ್ಲಿ ನೀವು ಪ್ರತಿ ತಿಂಗಳು ಸ್ವಲ್ಪ ಮೊತ್ತವನ್ನು ಜಮೆ ಮಾಡುತ್ತೀರಾ? ನೀವು ಒಂದೇ ಸಲಕ್ಕೆ ದೊಡ್ಡ ಮೊತ್ತವನ್ನು ಹೂಡಿಕೆ ಮಾಡುವ ಬದಲು ಮ್ಯೂಚುವಲ್ ‌ಫಂಡ್‌ ನಲ್ಲಿ ಕಡಿಮೆ ಅವಧಿಯ ಮಾಸಿಕ ಅಥವಾ ತ್ರೈಮಾಸಿಕವಾಗಿ ಹೂಡಿಕೆ ಮಾಡಬೇಕಿರುತ್ತದೆ. ಉದಾಹರಣೆಗಾಗಿ ನೀವು ಒಂದು ಮ್ಯೂಚುವಲ್ ‌ಫಂಡ್‌ ನಲ್ಲಿ 10,000 ರೂ. ಹೂಡಿಕೆ ಮಾಡುವ ಬದಲಿಗೆ 1,000 ರೂ.ನಂತೆ 10 ಭಾಗಗಳಲ್ಲಿ ಹೂಡಿಕೆ ಮಾಡುವ ಸೌಲಭ್ಯ ಇರುತ್ತದೆ.

ಇದರಿಂದಾಗಿ ನೀವು ನಿಮ್ಮ ಇತರೆ ಹಣಕಾಸು ಜವಾಬ್ದಾರಿಗಳಿಗೆ ಯಾವುದೇ ವ್ಯತ್ಯಯ ಉಂಟಾಗದ ರೀತಿಯಲ್ಲಿ ಹೂಡಿಕೆ ಮಾಡಬಹುದು. ಸಿಸ್ಟಮ್ಯಾಟಿಕ್‌ ಇನ್‌ ವೆಸ್ಟ್ ಮೆಂಟ್‌ ಪ್ಲಾನ್‌ ನ ಮಾಧ್ಯಮದ ಮುಖಾಂತರ ಚಿಕ್ಕಪುಟ್ಟ ಉಳಿತಾಯ ಮಾಡುವುದು ಮೊದಲ ಬಾರಿಗೆ ಆಕರ್ಷಕ ಅನ್ನಿಸದೇ ಇರಬಹುದು. ಆದರೆ ಇದು ಹೂಡಿಕೆದಾರರಿಗೆ ಉಳಿತಾಯದ ಅಭ್ಯಾಸ ಮಾಡಿಸುತ್ತದೆ. ಕೆಲವು ನಿಗದಿತ ಸಮಯದ ಬಳಿಕ ಒಳ್ಳೆಯ ರಿಟರ್ನ್ಸ್ ದೊರೆಯುತ್ತದೆ.

ಆರ್‌ ಡಿ ಮತ್ತು ಎಫ್‌ ಡಿ ಹೂಡಿಕೆಯ ಬಗ್ಗೆ ಪ್ರಸ್ತಾಪ ಬಂದಾಗ ಸಾಮಾನ್ಯವಾಗಿ ಎಲ್ಲರೂ ಸುರಕ್ಷಿತ ಹೂಡಿಕೆಗೆ ವೊದಲ ಆದ್ಯತೆ ಕೊಡುತ್ತಾರೆ. ಬಹು ದೊಡ್ಡ ವರ್ಗ ಸುರಕ್ಷಿತ ಹೂಡಿಕೆ ಮಾಡುತ್ತದೆ. ಅದಕ್ಕೆ ಪ್ರತಿಯಾಗಿ ಬಡ್ಡಿಯಲ್ಲಿ ಒಂದಿಷ್ಟು ಹಾನಿಯಾದರೂ ಅವರಿಗೆ ಅದರ ಚಿಂತೆ ಇರುವುದಿಲ್ಲ. ಆರ್‌ ಡಿ ಹಾಗೂ ಎಫ್‌ ಡಿಗಳು ಇಷ್ಟೊಂದು ಜನಪ್ರಿಯವಾಗಲು ಕಾರಣ ಒಂದು ನಿರ್ದಿಷ್ಟ ಅವಧಿಗಾಗಿ ಇದರಲ್ಲಿ ಹೂಡಿಕೆ ಮಾಡಲಾಗುತ್ತದೆ. ಹಣ ಜಮೆ ಮಾಡುವಾಗ ಗ್ರಾಹಕನಿಗೆ ನಿಗದಿತ ಸಮಯದ ಬಳಿಕ ನಿಖರವಾಗಿ ಎಷ್ಟು ಮೊತ್ತ ಬರಲಿದೆ ಎನ್ನುವುದು ತಿಳಿಯುತ್ತದೆ.

ಎಫ್‌ ಡಿಗಾಗಿ ಬೇರೆ ಬೇರೆ ಬ್ಯಾಂಕುಗಳಲ್ಲಿ ಕನಿಷ್ಠ ಹಾಗೂ ಗರಿಷ್ಠ ಸಮಯಕ್ಕಾಗಿ 15 ದಿನಗಳಿಂದ ಹಿಡಿದು 3 ವರ್ಷದ ಮೇಲ್ಪಟ್ಟು ಇರುತ್ತದೆ. ಬ್ಯಾಂಕುಗಳ ಬಡ್ಡಿ ದರ ಬದಲಾಗುತ್ತಾ ಹೋಗುತ್ತಿರುವುದರಿಂದ 3 ವರ್ಷಗಳ ಕಾಲಾವಕಾಶ ಹೂಡಿಕೆಗೆ ಉತ್ತಮ ಎನಿಸಿದೆ.

ಎಫ್ಡಿ ಮೂಲಕ ಸುರಕ್ಷಿತ ಹೂಡಿಕೆ

ಎಫ್‌ ಡಿಯಲ್ಲಿ ಹೂಡಿಕೆ ಮಾಡುವ ಮೊದಲು, ತಮಗೆ ಆ ಹಣ ಯಾವಾಗ ವಾಪಸ್ಸು ಬೇಕು ಎಂಬುದನ್ನು ನಿರ್ಧರಿಸಿಕೊಂಡೇ ಜನ ಕಾಲಾವಕಾಶ ಆಯ್ಕೆ ಮಾಡಬೇಕು. ಹೂಡಿಕೆದಾರರಿಗೆ ತಿಂಗಳಿಗೊಮ್ಮೆ, 3 ಅಥವಾ 6 ತಿಂಗಳಿಗೆ ಇದರ ಬಡ್ಡಿ ಬರುವಂತೆ ನಮೂದಿಸಬೇಕು. ಈ ರೀತಿ ಅವರ ಮೂಲ ಬಂಡವಾಳ ಬ್ಯಾಂಕಿನಲ್ಲಿ ಎಫ್‌ ಡಿ ಆಗಿ ಸುರಕ್ಷಿತವಾಗಿರುತ್ತದೆ. ಬಡ್ಡಿ ಹಣದಲ್ಲಿ ತಮ್ಮ ಖರ್ಚನ್ನು ನಿರ್ವಹಿಸಬಹುದು.

ಹೂಡಿಕೆದಾರರಿಗೆ ತಮ್ಮ ಹಣ 1, 2 ಅಥವಾ 5 ವರ್ಷಗಳ ನಂತರ ಒಟ್ಟು ಮೊತ್ತವಾಗಿ ಸಿಗಲಿ ಎಂಬ ಅಭಿಪ್ರಾಯವಿದ್ದರೆ, ಅಂತಹ ಅವಕಾಶವನ್ನೇ ಆರಿಸಿಕೊಳ್ಳಿ. ಉದಾ : ನಿಮ್ಮ ಮಗಳ ಮದುವೆ/ಶಿಕ್ಷಣಕ್ಕಾಗಿ 5 ವರ್ಷಗಳ ನಂತರ ಒಂದು ದೊಡ್ಡ ಮೊತ್ತ ಬೇಕು ಎನಿಸಿದರೆ, ಹೀಗೆ ಹೂಡಿಕೆ ಮಾಡುವುದರಿಂದ ಹೆಚ್ಚಿನ ಲಾಭವಿದೆ.

ಸಣ್ಣ ಉಳಿತಾಯಕ್ಕಾಗಿ ಆರ್ಡಿ

ಆರ್‌ ಡಿ ಅಥವಾ ರೆಕರಿಂಗ್‌ ಡೆಪಾಸಿಟ್‌ ಸಣ್ಣಪುಟ್ಟ ಉಳಿತಾಯಗಳಿಗೆ ಬಲು ಅವಶ್ಯಕ, ಸುರಕ್ಷಿತ ವಿಧಾನವೂ ಹೌದು. ಇದನ್ನು ಬ್ಯಾಂಕು, ಅಂಚೆ ಕಛೇರಿಗಳಲ್ಲಿ ಪಡೆಯಬಹುದು. ಪ್ರತಿ ತಿಂಗಳೂ 100 ರೂ.ನಿಂದ 50 ಸಾವಿರದವರೆಗೂ ನಿಮ್ಮ ಶಕ್ತಿಗೆ ತಕ್ಕಂತೆ ಕಟ್ಟಬಹುದು. ಸಾಮಾನ್ಯವಾಗಿ ಜನ 1, 2  ಅಥವಾ 3 ವರ್ಷಗಳ ಆರ್‌ ಡಿ ಮಾಡಿಸುತ್ತಾರೆ.

ಮ್ಯೂಚುವಲ್ ‌ಫಂಡ್‌ ಮಾರ್ಕೆಟ್‌ ಸಹ ಆರ್‌ ಡಿ ತರಹದ್ದೇ ಎಸ್‌ ಐಪಿ ಸ್ಕೀಂ ಮಾಡಿದೆ. ಇವೆರಡರಲ್ಲಿನ ಒಂದೇ ವ್ಯತ್ಯಾಸವೆಂದರೆ, ಎಸ್‌ಐಪಿಯಲ್ಲಿ ಬಡ್ಡಿಯ ದರ ಮಾರ್ಕೆಟ್‌ ರೇಟ್‌ ನಂತೆ ಹೆಚ್ಚು ಕಡಿಮೆ ಆಗುತ್ತಿರುತ್ತದೆ. ಆದರೆ ಆರ್‌ ಡಿಯಲ್ಲಿ ಮೊದಲೇ ತಿಳಿಸಲಾಗುವ ಬಡ್ಡಿ ದರ ಖಾಯಂ ಆಗಿರುತ್ತದೆ. ಹೂಡಿಕೆದಾರರು ಇವೆರಡರಲ್ಲೂ ಹಣ ಹೂಡಿ ತಮ್ಮ ಸಣ್ಣ ಮೊತ್ತವನ್ನು ದೊಡ್ಡದಾಗಿಸಿಕೊಳ್ಳಬಹುದು. ಸಾಮಾನ್ಯ ಜನರು ತಮ್ಮ ಬಳಿ ಇರುವ ಮೊತ್ತದಲ್ಲಿ ಏನು ಉಳಿತಾಯ ಸಾಧ್ಯ ಎಂದು ನಿರ್ಲಕ್ಷಿಸದೆ, ಹನಿ ಹನಿ ಕೂಡಿದರೆ ಹಳ್ಳ ಎಂದು ಹೀಗೆ ಆರ್‌ ಡಿ ಮುಖಾಂತರ ಉಳಿತಾಯ ಮಾಡಿದರೆ ಅದು ದೊಡ್ಡ ಮೊತ್ತವಾಗಿ, ಅದನ್ನು ಎಫ್‌ ಡಿಗೆ ವರ್ಗಾಯಿಸಿದರೆ ಇನ್ನೂ ದೊಡ್ಡ ಮೊತ್ತವಾಗಿಸಿಕೊಳ್ಳಬಹುದು.

ಈ ರೀತಿ ನಿಯಮಿತ ಉಳಿತಾಯ ಸಣ್ಣಪುಟ್ಟ ವ್ಯಾಪಾರ ಮಾಡುವವರು, ಮಧ್ಯಮ ವರ್ಗದವರಿಗೆ ಅತ್ಯಗತ್ಯ ಬೇಕು. ಹೀಗಾಗಿ ಈ ಕಡೆ ಹೆಚ್ಚಿನ ಗಮನ ಕೊಡಿ. ಆ ಸಮಯ ಬಂದಾಗ ನೋಡಿಕೊಳ್ಳೋಣ ಬಿಡು, ಎಂದು ಕೈಯಲ್ಲಿದ್ದುದನ್ನು ಖರ್ಚು ಮಾಡುತ್ತಾ ಹೋದರೆ ಮುಂದೆ ಸಾಲ ಕಟ್ಟಿಟ್ಟ ಬುತ್ತಿ. ಹೀಗಾಗಿ ಸಣ್ಣ ಉಳಿತಾಯ ಅಧಿಕ ಲಾಭಕ್ಕೆ ದಾರಿ!

ಶೈಲಜಾ 

ಆರ್‌ಡಿ ಅಂದ್ರೆ ರೆಕರಿಂಗ್‌ ಡೆಪಾಸಿಟ್‌, ಸಣ್ಣಪುಟ್ಟ ಉಳಿತಾಯಕ್ಕೆ ಬಲು ಅತ್ಯಗತ್ಯ ಹಾಗೂ ಸುರಕ್ಷಿತ ಕೂಡ! ಒಂದು ನಿಶ್ಚಿತ ಮೊತ್ತ ಕೈಗೆ ಸಿಗುವ ಭರವಸೆಯಿಂದಲೇ ಆರ್‌ಡಿ, ಎಫ್‌ಡಿ ಹೆಚ್ಚು ಸುರಕ್ಷಿತ ಹೂಡಿಕೆ ಎಂದು ನಂಬಲಾಗಿದೆ. ನೀವು ನಿಮ್ಮ ಇತರ ವಾಣಿಜ್ಯ ಜವಾಬ್ದಾರಿಗಳನ್ನು ಪ್ರಭಾವಿತಗೊಳಿಸದೆಯೇ, ಮ್ಯೂಚುವಲ್ ‌ಫಂಡ್‌ ನಲ್ಲಿ ಹೂಡಿಕೆ ಮಾಡಬಹುದು. ಸಣ್ಣಪುಟ್ಟ ಉಳಿತಾಯ ಮಾಡುವುದು ಮೊದಲಲ್ಲಿ ಬಹುಶಃ ಆಕರ್ಷಕ ಎನಿಸಲಾರದು, ಆದರೆ ಇದು ಆರ್‌ ಡಿ, ಎಫ್‌ ಡಿಗಳಲ್ಲಿ ದೊಡ್ಡ ಲಾಭ ತರುವುದು ನಿಶ್ಚಿತ!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ