ಸೋಮಾರಿ ಸೊಸೆಗೆ ಹೇಗಾದರೂ ಬುದ್ಧಿ ಕಲಿಸಲೇಬೇಕು ಅಂತ ಅತ್ತೆ ನಿರ್ಧರಿಸಿದರು.
ಅತ್ತೆ : ಮಗ, ನಾಳೆ ಬೆಳಗ್ಗೆ ನಾನೇ ಕಸ ಗುಡಿಸಿ, ಪಾತ್ರೆ ತೊಳೆಯಲು ಶುರು ಮಾಡುವೆ. ಆಗ ನೀನು ಬಂದು, `ವಯಸ್ಸಾದ ನೀನು ಯಾಕಮ್ಮ ಇದೆಲ್ಲ ಮಾಡಬೇಕು? ನಾನೇ ಮಾಡ್ತೀನಿ ಬಿಡು,' ಅನ್ನು. ಆಗ ಈ ಸೋಮಾರಿ ಸೊಸೆಗೆ ನಾಚಿಕೆ ಆಗಿ, ತಾನಾಗಿ ಕೆಲಸ ಕಲಿಯುತ್ತಾಳೆ!
ಮಗ : ಹಾಗೇ ಆಗಲಮ್ಮ. ಮಾರನೇ ದಿನ ಅತ್ತೆ ಕಸಗುಡಿಸಿ, ಪಾತ್ರೆ ತೊಳೆಯಲು ಶುರು ಮಾಡಿದ ತಕ್ಷಣ ಮಗರಾಯ ಅವರನ್ನು ತಡೆಯುತ್ತಾ, ``ವಯಸ್ಸಾದ ನೀನು ಯಾಕಮ್ಮ ಇದೆಲ್ಲ ಮಾಡಬೇಕು? ನಾನೇ ಮಾಡ್ತೀನಿ ಬಿಡು!''
ಸೊಸೆಮುದ್ದು : ಅಯ್ಯೋ.... ಪಾಪ, ಅವರನ್ನು ಯಾಕೆ ಹಾಗೆ ತಡೆಯುತ್ತೀರಿ? ಹೋಗಲಿ ಬಿಡಿ, ಇವತ್ತು ಅವರೇ ಮಾಡಲಿ, ನಾಳೆ ನೀವು ಮಾಡಿ, ಹೀಗೆ ದಿನ ಬಿಟ್ಟು ದಿನ ನೀವಿಬ್ಬರೂ ಮಾಡಿ!
ಪತ್ನಿ : ಅಲ್ಲ... ನಿಮ್ಮ ಶರ್ಟ್ ನಲ್ಲಿ ಒಂದಾದರೂ ನೀಳ ತಲೆಗೂದಲು ಸಿಗೋದೇ ಇಲ್ಲ ಅಂತೀನಿ!
ಪತಿ : ಸರಿ..... ಅದಕ್ಕೆ ಏನೀಗ?
ಪತ್ನಿ : ಏನೂ ಅಲ್ಲ..... ಯಾರವಳು ನಿಮ್ಮ ಬಾಲ್ಡಿ ಗರ್ಲ್ ಫ್ರೆಂಡ್ ಅಂತ ನಾನೇನು ಈಗ ಕೇಳಿದ್ನಾ.....?
ವರ : ನಾನು ನಿಮ್ಮ ಮಗಳನ್ನು ಮದುವೆ ಆಗಲೇ!
ಕನ್ಯಾಪಿತೃ : ಅದು ಸರಿ, ನೀನು ನನ್ನ ಹೆಂಡತಿಯನ್ನು ಭೇಟಿ ಆಗಿದ್ದೀಯಾ?
ವರ : ಇಲ್ಲ.... ಇಲ್ಲ... ನನಗೆ ನಿಮ್ಮ ಮಗಳು ಮಾತ್ರ ಒಪ್ಪಿಗೆ!
ವರನ ಕಡೆಯುವರು : ಅದು ಸರಿ, ನಿಮ್ಮ ಮಗಳು ಏನೆಲ್ಲ ಮಾಡುತ್ತಾಳೆ?
ವಧುವಿನ ಕಡೆಯವರು : ಅವಳನ್ನು ಎಷ್ಟು ಅಂತ ಹೊಗಳೋದು? ಯಾರಾದರೂ ಬಾಳೆಹಣ್ಣು ಸುಲಿದು ಕೊಟ್ಟರೆ ತಿನ್ನುತ್ತಾಳೆ. ಸೆಲ್ಛಿ ತೆಗೆದುಕೊಳ್ಳುವಾಗ 5-6 ವಿಧದಲ್ಲಿ ಸೊಟ್ಟ ಮುಖ ಮಾಡುತ್ತಾಳೆ. ಹಾಸಿಗೆ ಹಾಸಿ ಕೊಟ್ಟರೆ ಅಚ್ಚುಕಟ್ಟಾಗಿ ಗೊರಕೆ ಹೊಡೆಯುತ್ತಾಳೆ!
ಗುಂಡನ ಮದುವೆಯಾಗಿ 2 ವರ್ಷ ಆಗಿತ್ತು. ವಿವಾಹ ವ್ಯವಸ್ಥೆ ಬಗ್ಗೆ ಒಂದು ಲೇಖನ ಸಿದ್ಧಪಡಿಸಲೆದು ಮರಿ ವರದಿಗಾರ ಇವನನ್ನು ಪ್ರಶ್ನಿಸಿದ, ``ಮದುವೆಗೆ ಮುಂಚೆ ನೀವು ಏನು ಮಾಡುತ್ತಿದ್ರಿ?''
ಗುಂಡನ ಕಂಗಳಲ್ಲಿ ಕಂಬನಿ ತುಳುಕುವುದೊಂದು ಬಾಕಿ. ಗದ್ಗದ ಕಂಠದಿಂದ, ``ನನ್ನ ಮನಸ್ಸು ಬಯಸಿದ್ದನ್ನು ಮಾಡುತ್ತಿದ್ದೆ!'' ಎಂದು ಹೇಳಿದ.
ಮದುವೆಯ ಆರತಕ್ಷತೆ ವೈಭವದಿಂದ ನಡೆದಿತ್ತು. ವೇದಿಕೆ ಮೇಲಿದ್ದ ವಧೂವರರಿಗೆ ಶುಭ ಕೋರಿ, ಉಡುಗೊರೆ ನೀಡಲು ಜನ ಸಾಲಾಗಿ ಬರುತ್ತಿದ್ದರು.
ವರನ ಗೆಳೆಯರ ಗುಂಪು ಬಂದಾಗ, ವಧು ಪಕ್ಕ ಅವಳ ತಂಗಿ ಸಹ ನಿಂತಿದ್ದಳು. ವರ ಅವಳನ್ನು ಗೆಳೆಯರಿಗೆ ಪರಿಚಯಿಸುತ್ತಾ, ``ಇವಳು ನನ್ನ ನಾದಿನಿ, ನಾನು ಇವಳ ಅಕ್ಕನ ಗಂಡನಾದ್ದರಿಂದ ಅರ್ಧ ಭಾಗ ಹೆಂಡತಿ ಆದ ಹಾಗೇ....'' ಎಂದಾಗ ಎಲ್ಲರೂ ಜೋರಾಗಿ ನಕ್ಕು ನಲಿದಾಡಿದರು.
ಮತ್ತೊಂದು ಗುಂಪು ವಧುವಿನ ಗೆಳತಿಯರದಾಗಿತ್ತು. ಈ ಬಾರಿ ವರನ ಪಕ್ಕ ಅವನ ಅವನ ತಮ್ಮ ನಿಂತಿದ್ದ. ವಧು ಅವನನ್ನು ಗೆಳತಿಯರಿಗೆ ಪರಿಚಯಿಸುತ್ತಾ, ``ಇವರು ನನ್ನ ಮೈದುನ, ದುಬೈನಲ್ಲಿ ಕೆಲಸದಲ್ಲಿದ್ದಾರೆ. ಲಕ್ಷಾಂತರ ಸಂಪಾದಿಸುತ್ತಾರೆ... ನಾನು ಇವರ ಅಣ್ಣನ ಹೆಂಡತಿ ಆದ್ದರಿಂದ, ಇವರು ನನಗೆ ಅರ್ಧ ಭಾಗ ಪತಿ ಪರಮೇಶ್ವರ ಆದ ಹಾಗೇನೇ....!'' ಎಂದಾಗ ವರ ಕಕ್ಕಾಬಿಕ್ಕಿಯಾಗಿ ಕಣ್ಕಣ್ಣು ಬಿಟ್ಟ.





