ಬಾದಾಮಿ ಖೀರು
ಸಾಮಗ್ರಿ : 2 ಕಪ್ ಫ್ರಿಜ್ ಕೂಲ್ ಹಾಲಿನಲ್ಲಿ ಇಡೀ ರಾತ್ರಿ ನೆನೆಸಿದ ಬಾದಾಮಿ, 1 ಲೀ. ಗಟ್ಟಿ ಹಾಲು, ಹಾಲಲ್ಲಿ ನೆನೆಸಿದ ತುಸು ಕೇಸರಿ, ರುಚಿಗೆ ತಕ್ಕಷ್ಟು ಕಲ್ಲುಸಕ್ಕರೆ (ಪುಡಿ ಮಾಡಿಕೊಳ್ಳಿ), ಏಲಕ್ಕಿ ಪುಡಿ, ಬಾದಾಮಿ ಎಸೆನ್ಸ್, ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ, ಪಿಸ್ತಾ, ಬಾದಾಮಿ ಚೂರು (ಒಟ್ಟಾರೆ 1 ಕಪ್), ಅಲಂಕರಿಸಲು ತಾಜಾ ಗುಲಾಬಿ ದಳ.
ವಿಧಾನ : ಒಂದು ಬಾಣಲೆಯಲ್ಲಿ ಹಾಲು ಕಾಯಿಸಿ ಅದು ಅರ್ಧದಷ್ಟು ಹಿಂಗುವಂತೆ ಮಂದ ಉರಿಯಲ್ಲಿ ಕೈಯಾಡಿಸುತ್ತಿರಿ. ಕೆಳಗಿಳಿಸಿ ಚೆನ್ನಾಗಿ ಆರಲು ಬಿಡಿ. ನಂತರ 1 ಗಂಟೆ ಕಾಲ ಫ್ರಿಜ್ ನಲ್ಲಿರಿಸಿ, ಆಮೇಲೆ ನೆನೆಸಿದ ಬಾದಾಮಿಯೊಂದಿಗೆ ನುಣ್ಣಗೆ ಪೇಸ್ಟ್ ಮಾಡಿ. ಇದಕ್ಕೆ ಏಲಕ್ಕಿ ಪುಡಿ, ಸಕ್ಕರೆ ಬೆರೆಸಿ ಗೊಟಾಯಿಸಿ. ಅದೇ ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ. ಮಂದ ಉರಿಯಲ್ಲಿ ಡ್ರೈಫ್ರೂಟ್ಸ್ ಹುರಿಯಿರಿ. ಇದಕ್ಕೆ ಎಡಗೈಯಿಂದ ಬಾದಾಮಿ ಮಿಶ್ರಣ ಬೆರೆಸುತ್ತಾ, ಬಲಗೈಯಿಂದ ಗಂಟಾಗದಂತೆ ಕೆದಕುತ್ತಿರಿ. ನಂತರ ನೆನೆದ ಕೇಸರಿ, ಬಾದಾಮಿ ಎಸೆನ್ಸ್ ಬೆರೆಸಿಡಿ. ಚೆನ್ನಾಗಿ ಕುದಿ ಬಂದಾಗ ಇದನ್ನು ಕೆಳಗಿಳಿಸಿ, ಸಂಪೂರ್ಣ ಆರಲು ಬಿಡಿ. ಆಮೇಲೆ 2-3 ಗಂಟೆ ಕಾಲ ಫ್ರಿಜ್ ನಲ್ಲಿರಿಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ ತಣ್ಣಗೆ ಸವಿಯಲು ಕೊಡಿ.
ಕಸ್ಟರ್ಡ್ ಕಪ್ಸ್
ಸಾಮಗ್ರಿ : 5-6 ಬ್ರೆಡ್ ಸ್ಲೈಸ್, 1 ಕಪ್ ಮಾಗಿದ ಮಾವಿನ ಪೇಸ್ಟ್, 3-4 ಚಮಚ ಕಸ್ಟರ್ಡ್ ಪೌಡರ್, ಅಲಂಕರಿಸಲು ವಿಪ್ಡ್ ಕ್ರೀಂ, 4-5 ಚಮಚ ಸಕ್ಕರೆ, 3 ಕಪ್ ಗಟ್ಟಿ ಹಾಲು, 2 ಚಮಚ ಫ್ರೆಶ್ ಕ್ರೀಂ, ಗ್ರೀಸಿಂಗ್ ಗಾಗಿ ಬೆಣ್ಣೆ, ತುಸು ಪುದೀನಾ ಎಲೆ.
ವಿಧಾನ : ಬ್ರೆಡ್ ಸ್ಲೈಸ್ ನ್ನು ಗೋಲಾಕಾರದ ತುಂಡುಗಳಾಗಿಸಿ. ಇವಕ್ಕೆ ಕಪ್ ಶೇಪ್ ನೀಡಲು, ಬೆಣ್ಣೆ ಸರಿದ ಕೇಕ್ ಮೌಲ್ಡ್ಸ್ ನಲ್ಲಿಒತ್ತಿ ತೆಗೆಯಿರಿ. ಈ ಕಪ್ಸ್ ನ್ನು ಓವನ್ನಿನಲ್ಲಿ ಲೈಟ್ ಆಗಿ ಬೇಕ್ ಮಾಡಿ. ದಪ್ಪ ತಳದ ಪಾತ್ರೆಯಲ್ಲಿ ಹಾಲು ಕಾಯಿಸಿ, ಮಂದ ಉರಿಯಲ್ಲಿ ಅರ್ಧದಷ್ಟು ಹಿಂಗಿಸಿ. ಬೇರೆ ಕಾದಾರಿದ ಅರ್ಧ ಕಪ್ ಹಾಲಿಗೆ ಕಸ್ಟರ್ಡ್ ಪೌಡರ್ ಹಾಕಿ ಚೆನ್ನಾಗಿ ಕದಡಿಕೊಂಡು ಪೇಸ್ಟ್ ಮಾಡಿಡಿ. ನಂತರ ಒಲೆ ಮೇಲಿನ ಹಾಲಿಗೆ ಸಕ್ಕರೆ ಹಾಕಿ ಕದಡಿರಿ. ನಂತರ ಕಸ್ಟರ್ಡ್ ಪೇಸ್ಟ್ ನ್ನು ಹಾಲಿಗೆ ಬೆರೆಸುತ್ತಾ ಗಂಟಿಲ್ಲದಂತೆ ಕೈಯಾಡಿಸುತ್ತಾ 2 ನಿಮಿಷ ಕುದಿಸಿರಿ. ನಂತರ ಕೆಳಗಿಳಿಸಿ ಸಂಪೂರ್ಣ ಆರಲು ಬಿಡಿ. ನಂತರ ಇದಕ್ಕೆ ಫ್ರೆಶ್ ಕ್ರೀಂ, ಮಾವಿನ ಪೇಸ್ಟ್ ಹಾಕಿ ಕದಡಿರಿ. ಆಮೇಲೆ ಇದನ್ನು ಪೈಪಿಂಗ್ ಬ್ಯಾಗಿಗೆ ತುಂಬಿಸಿಕೊಂಡು, ಚಿತ್ರದಲ್ಲಿರುವಂತೆ ಬ್ರೆಡ್ ಕಪ್ಸ್ ಗೆ ತುಂಬಿಸಿ. ಇದರ ಮೇಲೆ ವಿಪ್ಡ್ ಕ್ರೀಂ ಬರಲಿ. ಕೊನೆಯಲ್ಲಿ ಪುದೀನಾ ಎಲೆ, ಮಾಗಿದ ಮಾವಿನ ತುಂಡುಗಳೊಂದಿಗೆ ಸವಿಯಲು ಕೊಡಿ.
ಫಲೂದಾ ಗುಲಾಬ್ ಜಾಮೂನು
ಸಾಮಗ್ರಿ : 4-5 ರೆಡಿಮೇಡ್ ಗುಲಾಬ್ ಜಾಮೂನು, ಅರ್ಧ ಪ್ಯಾಕೆಟ್ ಗುಲಾಬಿ ಫಲೂದಾ ಮಿಕ್ಸ್ (ರೆಡಿಮೇಡ್ ಲಭ್ಯ), 1 ಲೀ. ಗಟ್ಟಿ ಹಾಲು, 2 ಚಿಟಕಿ ಏಲಕ್ಕಿ ಪುಡಿ, ಅಲಂಕರಿಸಲು ತುಸು ಪಿಸ್ತಾ, ಬಾದಾಮಿ ಚೂರು, ವೆನಿಲಾ ಐಸ್ ಕ್ರೀಂ.
ವಿಧಾನ : ಮೊದಲು ಜಾಮೂನನ್ನು ಸಣ್ಣದಾಗಿ ತುಂಡರಿಸಿ. ಹಾಲನ್ನು ಕಾಯಿಸಿಕೊಂಡು, ಅದು ಅರ್ಧದಷ್ಟಾಗುವವರೆಗೂ ಮಂದ ಉರಿಯಲ್ಲಿ ಹಿಂಗಿಸಿ. ನಂತರ ಇದಕ್ಕೆ ಫಲೂದಾ ಮಿಕ್ಸ್ ಬೆರೆಸಿ, ಮಿಶ್ರಣ ಕ್ರೀಮೀ ಆಗುವವರೆಗೂ ಕೆದಕುತ್ತಿರಿ. ನಂತರ ಈ ಮಿಶ್ರಣಕ್ಕೆ ಏಲಕ್ಕಿ ಪುಡಿ, ಜಾಮೂನು ತುಂಡು ಸೇರಿಸಿ ಮತ್ತೆ 5-6 ನಿಮಿಷ ಕುದಿಸಿರಿ. ಆಮೇಲೆ ಕೆಳಗಿಳಿಸಿ, ಚೆನ್ನಾಗಿ ಆರಲು ಬಿಡಿ. ನಂತರ ಇದನ್ನು ಫ್ರಿಜ್ ನಲ್ಲಿ 2-3 ಗಂಟೆ ಕಾಲ ಕೂಲ್ ಮಾಡಿ. ಆಮೇಲೆ ಚಿತ್ರದಲ್ಲಿರುವಂತೆ ಗ್ಲಾಸುಗಳಿಗೆ ಫಲೂದಾ ತುಂಬಿಸಿ, ಅದರ ಮೇಲೆ ಒಂದಿಷ್ಟು ಜಾಮೂನು, ವೆನಿಲಾ ಐಸ್ ಕ್ರೀಂ ಹಾಕಿ, ಪಿಸ್ತಾದಿಂದ ಅಲಂಕರಿಸಿ. ಬಿಸಿಲಲ್ಲಿ ಬಂದ ಅತಿಥಿಗಳಿಗೆ ಸವಿಯಲು ಕೊಡಿ.
ಜೆಲಿ ಮೂಸ್
ಸಾಮಗ್ರಿ : 1 ಪ್ಯಾಕೆಟ್ ರಾಸ್ಪ್ ಬೆರಿ ಜೆಲಿ ಮಿಕ್ಸ್, 4-5 ಚಮಚ ಫ್ರೆಶ್ ಕ್ರೀಂ, ಒಂದಿಷ್ಟು ಪುದೀನಾ ಎಲೆ, ಅಲಂಕರಿಸಲು ಫ್ರೆಶ್ ರಾಸ್ಪ್ ಬೆರಿ ಹಣ್ಣಿನ ಚೂರು.
ವಿಧಾನ : ಪ್ಯಾಕೆಟ್ ನ ಸಾಮಗ್ರಿ ಹಾಗೂ ಪ್ರೀಮಿಕ್ಸ್ ಸ್ಯಾಶೆಯ (ರೆಡಿಮೇಡ್ ಲಭ್ಯ) ಸಾಮಗ್ರಿಗಳನ್ನು ಒಂದು ಬಟ್ಟಲಿಗೆ ಹಾಕಿಡಿ. ನಂತರ ಅರ್ಧ ಲೀ. ನೀರನ್ನು ಕುದಿಸಿ ಈ ಮಿಶ್ರಣಕ್ಕೆ ಬೆರೆಸಿ, ಚೆನ್ನಾಗಿ ಕದಡಿಕೊಳ್ಳಿ. ಇದನ್ನು ಚೆನ್ನಾಗಿ ಆರಲು ಬಿಡಿ. ನಂತರ ಚಿತ್ರದಲ್ಲಿರುವಂತೆ ಸೂಕ್ತ ಗ್ಲಾಸುಗಳಿಗೆ ತುಂಬಿಸಿ ಸೆಟ್ ಆಗಲು ಬಿಡಿ. ಹೀಗೆ 1 ಗಂಟೆ ಕಾಲ ಆದ ನಂತರ, ಮತ್ತೆ 1-2 ಗಂಟೆ ಕಾಲ ಫ್ರಿಜ್ ನಲ್ಲಿರಿಸಿ ಕೂಲ್ ಕೂಲ್ ಮಾಡಿ. ನಂತರ ಚಿತ್ರದಲ್ಲಿರುವಂತೆ ಪುದೀನಾ, ರಾಸ್ಪ್ ಬೆರಿಗಳಿಂದ ಅಲಂಕರಿಸಿ ತಣ್ಣಗೆ ಸವಿಯಲು ಕೊಡಿ.
ಜೆಲ್ಲಿ ಸಲಾಡ್
ಸಾಮಗ್ರಿ : 1 ಮ್ಯಾಂಗೋ ಜೆಲಿ ಪ್ಯಾಕೆಟ್, 1 ನಿಂಬೆ ಹಣ್ಣು, ಸೌತೇಕಾಯಿ, ಕ್ಯಾರೆಟ್, ಟೊಮೇಟೊ, ಕ್ಯಾಪ್ಸಿಕಂ, ಆ್ಯಪಲ್, ಅನಾನಸ್, ಮಾಗಿದ ಮಾವು, ತೆಂಗಿನ ತುರಿ, (ತಲಾ ಅರ್ಧರ್ಧ ಕಪ್ ಹೋಳುಗಳು), ಒಂದಿಷ್ಟು ಸಲಾಡ್ ಎಲೆ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು ಚಾಟ್ ಮಸಾಲ.
ವಿಧಾನ : ಒಂದು ಬೇಸನ್ನಿಗೆ ಹೆಚ್ಚಿದ ಎಲ್ಲಾ ಪದಾರ್ಥ, ತೆಂಗಿನ ತುರಿ ಸೇರಿಸಿ. ಇದಕ್ಕೆ ಉಪ್ಪು, ಮೆಣಸು, ಚಾಟ್ ಮಸಾಲ ಉದುರಿಸಿ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ, ಇದನ್ನು 1 ಗಂಟೆ ಕಾಲ ಫ್ರಿಜ್ ನಲ್ಲಿರಿಸಿ. ಒಂದು ಕಪ್ನೀರು ಕುದಿಸಿ, ಅದಕ್ಕೆ 1 ಪ್ಯಾಕೆಟ್ ಜೆಲಿ ಬೆರೆಸಿ, ಚೆನ್ನಾಗಿ ಗೊಟಾಯಿಸಿ, 1 ಗಂಟೆ ಕಾಲ ಸೆಟ್ ಆಗಲು ಬಿಡಿ. ಇದನ್ನು ಅರ್ಧ ಗಂಟೆ ಕಾಲ ಫ್ರಿಜ್ ನಲ್ಲಿರಿಸಿ. ನಂತರ ಸಲಾಡ್ ಮಿಶ್ರಣಕ್ಕೆ ಬೆರೆಸಿಕೊಳ್ಳಿ. ನಂತರ ಇದನ್ನು ಸಿಲಿಕಾನ್ ಮೌಲ್ಡ್ ಗೆ ಹಾಕಿ ಮಿಶ್ರಣ ಸೆಟ್ ಆಗಲು ಬಿಡಿ. ನಂತರ ಇದನ್ನು ಚಿತ್ರದಲ್ಲಿರುವೆತೆ ಸಲಾಡ್ ಎಲೆಗಳಿಂದ ಅಲಂಕರಿಸಿ ಊಟದ ಜೊತೆ ತಂಪಾಗಿ ಸವಿಯಲು ಕೊಡಿ.
ಮೋತಿಚೂರು ಲಡ್ಡು ಪರೋಟ
ಸಾಮಗ್ರಿ : 7-8 ಮೋತಿಚೂರು ಲಡ್ಡು (ಮ್ಯಾಶ್ ಗೊಳಿಸಿ), ಅರ್ಧರ್ಧ ಕಪ್ ಗೋಧಿಹಿಟ್ಟು, ಮೈದಾ, ಅಗತ್ಯವಿದ್ದಷ್ಟು ಕಾದಾರಿದ ಹಾಲು, ಉಪ್ಪು, ತುಪ್ಪ, ಅಲಂಕರಿಸಲು ಮ್ಯಾಶ್ಡ್ ಪೇಡ.
ವಿಧಾನ : ಗೋಧಿಹಿಟ್ಟಿಗೆ ಮೈದಾ, ಹಾಲು, ಉಪ್ಪು ಸೇರಿಸಿ ಮೃದುವಾದ ಪೂರಿ ಹಿಟ್ಟಿನ ಹದಕ್ಕೆ ಕಲಸಿಡಿ. ಇದಕ್ಕೆ ತುಪ್ಪ ಬೆರೆಸಿ ಚೆನ್ನಾಗಿ ನಾದಿಕೊಂಡು 1-2 ಗಂಟೆ ಕಾಲ ನೆನೆಯಲು ಬಿಡಿ. ನಂತರ ಇದರಿಂದ ಸಣ್ಣ ನಿಂಬೆ ಗಾತ್ರದ ಉಂಡೆ ಮಾಡಿ ಲಟ್ಟಿಸಿ, ಮಧ್ಯೆ 2-3 ಚಮಚ ಮ್ಯಾಶ್ಡ್ ಲಡ್ಡು ಹರಡಿ, ಅದನ್ನು ಮಡಿಚಿ, ತುಪ್ಪ ಸವರಿ ಮತ್ತೆ ಲಟ್ಟಿಸಿ. ಈ ರೀತಿ ಎಲ್ಲಾ ಪರೋಟ ಸಿದ್ಧಪಡಿಸಿಕೊಂಡು, ಎರಡೂ ಬದಿ ತುಪ್ಪ ಹಾಕಿ ಬೇಯಿಸಿ ತೆಗೆಯಿರಿ. ಇದನ್ನು ತಟ್ಟೆಗೆ ಹಾಕಿ, ಮೇಲೆ ಮ್ಯಾಶ್ಡ್ ಪೇಡ, ತುಪ್ಪ ಹಾಕಿ ಸವಿಯಲು ಕೊಡಿ.
ಪಾನ್ ಶಾಟ್
ಸಾಮಗ್ರಿ : 5-6 ಮೀಠಾ ಪಾನ್ ಬೀಡಾ (ಅಡಕೆ ಬೇಡ), 5-6 ಚಮಚ ವೆನಿಲಾ ಐಸ್ ಕ್ರೀಂ, 3-4 ಚಮಚ ಫ್ರೆಶ್ ಕ್ರೀಂ, ಅಗತ್ಯವಿದ್ದಷ್ಟು ಫ್ರಿಜ್ ಕೂಲ್ ವಾಟರ್, 4-5 ಐಸ್ ಕ್ಯೂಬ್ಸ್, ಗುಲಾಬಿ ದಳ.
ವಿಧಾನ : ಮೇಲಿನ ಎಲ್ಲವನ್ನೂ ಮಿಕ್ಸಿಗೆ ಹಾಕಿ ಚೆನ್ನಾಗಿ ಬ್ಲೆಂಡ್ ಮಾಡಿ. ನಂತರ ಇದನ್ನು ಎಲ್ಲಾ ಗ್ಲಾಸುಗಳಿಗೂ ತುಂಬಿಸಿ, ಮೇಲೆ ಗುಲಾಬಿ ದಳದಿಂದ ಅಲಂಕರಿಸಿ, ತಣ್ಣಗೆ ಸವಿಯಲು ಕೊಡಿ.