ಸ್ಪೆಷಲ್ ಮೈದಾ ರೋಲ್ಸ್
ಸಾಮಗ್ರಿ : 2 ಕಪ್ ಮೈದಾ, ಅರ್ಧ ಸೌಟು ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಖಾರ, ಅರಿಶಿನ, ಕರಿಯಲು ಎಣ್ಣೆ.
ವಿಧಾನ : ಮೇಲಿನ ಎಲ್ಲಾ ಸಾಮಗ್ರಿ ಬೆರೆಸಿ, ನೀರು ಚಿಮುಕಿಸುತ್ತಾ ಮೃದು ಪೂರಿ ಹಿಟ್ಟಿನ ಹದಕ್ಕೆ ಕಲಸಿ, ತುಪ್ಪ ಹಾಕಿ ಚೆನ್ನಾಗಿ ನಾದಿಕೊಳ್ಳಿ. ಅರ್ಧ ಗಂಟೆ ನೆನೆದ ನಂತರ, ಸಣ್ಣ ಉಂಡೆ ಮಾಡಿ, ತೆಳುವಾದ ಪೂರಿ ಲಟ್ಟಿಸಿ. ಇದನ್ನು ಚಾಕುವಿನಿಂದ ಮಧ್ಯೆ ಮಧ್ಯೆ ಕತ್ತರಿಸಿ, ಒಂದೆಡೆ ಎಲ್ಲವನ್ನೂ ಹಿಡಿದಿಡುವಂತೆ ಮಾಡಿ, ಚಿತ್ರದಲ್ಲಿರುವಂತೆ ಸುರುಳಿ ಸುತ್ತಿಕೊಳ್ಳಿ. ಇವನ್ನು ಕಾದ ಎಣ್ಣೆಯಲ್ಲಿ ಹೊಂಬಣಕ್ಕೆ ಗರಿಗರಿಯಾಗಿ ಕರಿದು, ಗಾಳಿಯಾಡದ ಡಬ್ಬಕ್ಕೆ ತುಂಬಿಸಿಡಿ. ಬೇಕೆನಿಸಿದಾಗ, ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.
ಚೀಝೀ ಪಾಲಕ್ ಬಾಲ್ಸ್
ಸಾಮಗ್ರಿ : 1-1 ಕಪ್ ತುರಿದ ಚೀಝ್, ಹೆಚ್ಚಿದ ಪಾಲಕ್ ಸೊಪ್ಪು, ಬೇಯಿಸಿ ಮಸೆದ ಆಲೂ, ಹೆಚ್ಚಿದ ಪನೀರ್, ಹೆಚ್ಚಿದ 2 ಈರುಳ್ಳಿ, ತುಸು ಶುಂಠಿ, ಹಸಿ ಮೆಣಸು, ಕೊ.ಸೊಪ್ಪು, ಪುದೀನಾ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಚಾಟ್‌ಮಸಾಲ, ಟೊಮೇಟೊ ಸಾಸ್, ಕರಿಯಲು ಎಣ್ಣೆ.
ವಿಧಾನ : ಪನೀರ್ ಬಿಟ್ಟು ಉಳಿದೆಲ್ಲ ಸಾಮಗ್ರಿಗಳನ್ನು ಒಂದು ಬೇಸನ್ನಿಗೆ ಬೆರೆಸಿಕೊಳ್ಳಿ. ಇದನ್ನು ಪೂರಿ ಹಿಟ್ಟಿನ ಮಿಶ್ರಣದಂತೆ ಗಟ್ಟಿಯಾಗಿ ಕಲಸಿಕೊಳ್ಳಿ. ಇದರಿಂದ ಸಣ್ಣ ನಿಂಬೆಗಾತ್ರದ ಉಂಡೆ ಹಿಡಿದು, ಅರ್ಧ ಗಂಟೆ ಫ್ರಿಜ್ ನಲ್ಲಿ ಇರಿಸಿಬಿಡಿ. ಹೊರ ತೆಗೆದು ಸ್ವಲ್ಪ ಹೊತ್ತು ಆದಮೇಲೆ, ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಅದೇ ರೀತಿ ಪನೀರ್ ಕ್ಯೂಬ್ಸ್ ಸಹ ಲಘು ಕರಿಯಿರಿ. ಚಿತ್ರದಲ್ಲಿರುವಂತೆ ಒಂದು ಪ್ಲೇಟಿನಲ್ಲಿ ಎಲ್ಲವನ್ನೂ ಬೆರೆಸಿಕೊಂಡು, ಮೇಲೆ ಟೊಮೇಟೊ ಸಾಸ್ ಹಾಕಿ ಸವಿಯಲು ಕೊಡಿ.
ಪೊಟೇಟೋ ಸ್ನ್ಯಾಕ್ಸ್
ಸಾಮಗ್ರಿ : 15-20 ಬೇಬಿ ಆಲೂ, 4 ಚಮಚ ಕಾರ್ನ್ ಫ್ಲೋರ್, 2-3 ಹೆಚ್ಚಿದ ಈರುಳ್ಳಿ, 7-8 ಜಜ್ಜಿದ ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಟೊಮೇಟೊ ಸಾಸ್, ಸೋಯಾ ಸಾಸ್, ಪೆಪ್ಪರ್, ವಿನಿಗರ್, ರೆಡ್ ಚಿಲೀ ಪೇಸ್ಟ್, ಕರಿಯಲು ಎಣ್ಣೆ.
ವಿಧಾನ : ಸಿಪ್ಪೆ ಹೆರೆಯದೆ ಆಲೂಗಳನ್ನು ಸುಮಾರಾಗಿ ಬೇಯಿಸಿ. ಇದನ್ನು ನೀರಿನಿಂದ ಬೇರ್ಪಡಿಸಿ, ಪೋರ್ಕ್ ನಿಂದ ಅಲ್ಲಲ್ಲಿ ಚುಚ್ಚಿ ರಂಧ್ರ ಮಾಡಿ. ಕಾರ್ನ್ ಫ್ಲೋರ್ ಗೆ ತುಸು ಉಪ್ಪು, ಖಾರ, ನೀರು ಬೆರೆಸಿ ಗಟ್ಟಿಯಾದ ಬೋಂಡಾ ಮಿಶ್ರಣ ಕಲಸಿ, ಅದರಲ್ಲಿ ಈ ಆಲೂ ಅದ್ದಿ ಕರಿದು ತೆಗೆಯಿರಿ. ಅದೇ ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಉಳಿಸಿಕೊಂಡು ಈರುಳ್ಳಿ, ಬೆಳ್ಳುಳ್ಳಿ ಹಾಕಿ ಬಾಡಿಸಿ. ನಂತರ ಒಂದೊಂದಾಗಿ ಎಲ್ಲಾ ಮಸಾವೆ ಹಾಕುತ್ತಾ ಕೆದುಕುತ್ತಿರಬೇಕು. 2 ಚಮಚ ಕಾರ್ನ್ ಫ್ಲೋರ್ ಗೆ ತುಸು ಬೆಚ್ಚಗಿನ ಹಾಲು ಬೆರೆಸಿ, ಇದಕ್ಕೆ ಸೇರಿಸಿ ಕೈಯಾಡಿಸಿ. 1-2 ಕುದಿ ಬಂದಾಗ, ಮಂದ ಉರಿ ಮಾಡಿ ಕರಿದ ಆಲೂ ಸೇರಿಸಿ, ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ಅಗತ್ಯ ಎನಿಸಿದರೆ ಯಾವುದಾದರೂ ರೆಡಿಮೇಡ್‌ಮಿಕ್ಸ್ ಮಸಾಲ ಸಹ ಬೆರೆಸಿಕೊಳ್ಳಬಹುದು. ಚಿತ್ರದಲ್ಲಿರುವಂತೆ ಫ್ರೆಶ್ ಕ್ರೀಂ, ಹೆಚ್ಚಿದ ಕೊ.ಸೊಪ್ಪು ಬೆರೆಸಿ ಸವಿಯಲು ಕೊಡಿ.
ಬಟರ್ ಪನೀರ್
ಸಾಮಗ್ರಿ : 250 ಗ್ರಾಂ ಪನೀರ್, ಉದ್ದಕ್ಕೆ ಹೆಚ್ಚಿದ 10-12 ಈರುಳ್ಳಿ, 1 ತುಂಡು ಶುಂಠಿ, 5-6 ಎಸಳು ಬೆಳ್ಳುಳ್ಳಿ, ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು (ಒಟ್ಟಾಗಿ ಅರ್ಧ ಕಪ್), 2 ಚಮಚ ಗಸಗಸೆ, ಏಲಕ್ಕಿ, ಲವಂಗ, ಮೊಗ್ಗು, ಚಕ್ಕೆ (ಒಟ್ಟಾಗಿ 1 ದೊಡ್ಡ ಚಮಚ), 8-10 ಎಸಳು ಕೇಸರಿ (ಹಾಲಲ್ಲಿ ನೆನೆಸಿಡಿ), ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹುಳಿ ಮೊಸರು, ಟೊಮೇಟೊ ಪೇಸ್ಟ್, ಕಸೂರಿ ಮೇಥಿ, ಪನೀರ್ ಬಟರ್ ಮಸಾಲ, ತುಸು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಕರಿಬೇವು, 1 ಸೌಟು ಬೆಣ್ಣೆ, ಅರ್ಧ ಸೌಟು ರೀಫೈಂಡ್ ಎಣ್ಣೆ.
ವಿಧಾನ : ಡ್ರೈಫ್ರೂಟ್ಸ್, ಗಸಗಸೆಯನ್ನು ತುಸು ಬೆಚ್ಚಗಿನ ಹಾಲಲ್ಲಿ ನೆನೆಹಾಕಿಡಿ. ನಂತರ ಇದಕ್ಕೆ ಮೊಸರು, ಕೇಸರಿ ಸೇರಿಸಿ ನುಣ್ಣಗೆ ಪೇಸ್ಟ್ ಮಾಡಿ. ಪನೀರ್ ನ್ನು ಸಣ್ಣ ಕ್ಯೂಬ್ಸ್ ಆಗಿ ತುಂಡರಿಸಿ, ನೀರಲ್ಲಿ ನೆನೆ ಹಾಕಿಡಿ. ಮಂದ ಉರಿಯಲ್ಲಿ ಬಾಣಲೆ ಇರಿಸಿ ಎಣ್ಣೆ, ಬೆಣ್ಣೆ ಒಟ್ಟಿಗೆ ಬಿಸಿ ಮಾಡಿ. ಇದಕ್ಕೆ ಶುಂಠಿ, ಬೆಳ್ಳುಳ್ಳಿ ಹಾಕಿ ಬಾಡಿಸಿ. ಇದನ್ನು ಹೊರ ತೆಗೆದು ಆರಿಸಿ, ಬೇರೆಯಾಗಿ ಪೇಸ್ಟ್ ಮಾಡಿಡಿ. ನಂತರ ಬಾಣಲೆಗೆ ಈರುಳ್ಳಿ ಹಾಕಿ ಬಾಡಿಸಿ, ನಂತರ ಟೊಮೇಟೊ ಪೇಸ್ಟ್ ಹಾಕಿ ಬಾಡಿಸಿ. ಆಮೇಲೆ ಗೋಡಂಬಿ ಮಿಶ್ರಣ, ಶುಂಠಿ ಮಿಶ್ರಣ, ನಂತರ ಒಂದೊಂದಾಗಿ ಉಳಿದ ಮಸಾಲೆ ಹಾಕಿ ಬಾಡಿಸಿ. ಆಮೇಲೆ ನೀರಿನಿಂದ ಶೋಧಿಸಿ ಬೇರ್ಪಡಿಸಿದ ಪನೀರ್ ನ್ನು ಇದಕ್ಕೆ ಸೇರಿಸಿ ಕೈಯಾಡಿಸಿ ಇದಕ್ಕೆ ಅರ್ಧ ಕಪ್ ನೀರು ಬೆರೆಸಿ 5 ನಿಮಿಷ ಕುದಿಯಲು ಬಿಡಿ. ಕಸೂರಿಮೇಥಿ, ಕೊ.ಸೊಪ್ಪು, ಪುದೀನಾ ಉದುರಿಸಿ ಎಲ್ಲ ಬೆರೆತುಕೊಳ್ಳುವಂತೆ ಮಾಡಿ ಕೆಳಗಿಳಿಸಿ. ಚಿತ್ರದಲ್ಲಿರುವಂತೆ ಅಲಂಕರಿಸಿ ಸ್ಟಾರ್ಟರ್ ಆಗಿ ಸವಿಯಲು ಕೊಡಿ.
ಕಡಲೆಕಾಳಿನ ಪಲಾವ್
ಸಾಮಗ್ರಿ : ಅರ್ಧ ಸೌಟು ತುಪ್ಪ, ಒಗ್ಗರಣೆಗೆ ಸಾಸುವೆ, ಜೀರಿಗೆ, ಸೋಂಪು, ಕರಿಬೇವು, ಲವಂಗ, ಏಲಕ್ಕಿ, ಚಕ್ಕೆ, ಮೊಗ್ಗು (ಒಟ್ಟಾರೆ ಅರ್ಧ ಕಪ್), ತುಸು ಕೇದಗೆ ಎಸೆನ್ಸ್, ತೇದ ಜಾಯಿಕಾಯಿ, 4 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, 4 ಹೆಚ್ಚಿದ ಟೊಮೇಟೊ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅರಿಶಿನ, ಧನಿಯಾಪುಡಿ, ಹುಳಿ ಮೊಸರು, ಹೆಚ್ಚಿದ ಹಸಿ ಮೆಣಸು, ಕೊ.ಸೊಪ್ಪು, ಪುದೀನಾ, 2 ಕಪ್ ನೆನೆಸಿ ಬೇಯಿಸಿದ ಕಾಬೂಲ್ ಕಡಲೆಕಾಳು, 500 ಗ್ರಾಂ ಅಕ್ಕಿ (ಅರ್ಧ ಗಂಟೆ ನೀರಲ್ಲಿ ನೆನೆಸಿಡಿ), ಹಾಲಲ್ಲಿ ನೆನೆಸಿದ ಕೇಸರಿ, ಹೆಚ್ಚಿದ 4 ಈರುಳ್ಳಿ ಹುರಿದಿಡಿ.
ವಿಧಾನ : ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಒಗ್ಗರಣೆ ಕೊಡಿ. ನಂತರ ಲವಂಗ ಇತ್ಯಾದಿ ಹಾಕಿ ಚಟಪಟಾಯಿಸಿ. ಆಮೇಲೆ ಇದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ನಂತರ ಟೊಮೇಟೊ ಹಾಕಿ ಬಾಡಿಸಿ. ಆಮೇಲೆ ಉಪ್ಪು, ಖಾರ, ಉಳಿದೆಲ್ಲ ಮಸಾಲೆ ಬೆರೆಸುತ್ತಾ ಕೈಯಾಡಿಸಿ. ನಂತರ ಮೊಸರು ಬೆರೆಸಿ ಕೆದಕಬೇಕು. ನಂತರ ಕಡಲೆಕಾಳು ಹಾಕಿ (ನೀರಿನ ಸಮೇತ) ಎಲ್ಲವೂ ಬೆರೆತುಕೊಳ್ಳುವಂತೆ ಕೈಯಾಡಿಸಿ. ನಂತರ ಹುರಿದ ಈರುಳ್ಳಿ, ಹಸಿ ಮೆಣಸು, ಕೊ.ಸೊಪ್ಪು, ಪುದೀನಾ ಹಾಕಿ ಕೆದಕಿರಿ. ನಂತರ ಅಕ್ಕಿ ಬೆರೆಸಿ ಅದರ ಮೇಲೆ ಕೇಸರಿ, ಕೇದಗೆ ಎಸೆನ್ಸ್. ಉಳಿದ ಫ್ರೈಡ್ ಈರುಳ್ಳಿ ಎಲ್ಲಾ ಹಾಕಿ, ಅಗತ್ಯವಿದ್ದಷ್ಟು ನೀರು ಬೆರೆಸಿ, 20 ನಿಮಿಷ ಮುಚ್ಚಳ ಮುಚ್ಚಿರಿಸಿ ಬೇಯಿಸಿ. ಕೊನೆಯಲ್ಲಿ ಕೆಳಗಿಳಿಸಿ, ಚೆನ್ನಾಗಿ ಬೆರೆತುಕೊಳ್ಳುವಂತೆ ಕೆದಕಿ, ಚಿತ್ರದಲ್ಲಿರುವಂತೆ ಅಲಂಕರಿಸಿ ಬಿಸಿ ಬಿಸಿಯಾಗಿ ಸವಿಯಲು ಕೊಡಿ.
ಇನ್ ಸ್ಟೆಂಟ್ ರಾಜ್ಮಾ ಪಲಾವ್
ಸಾಮಗ್ರಿ : ಅರ್ಧ ಸೌಟು ತುಪ್ಪ, 1 ಲವಂಗದ ಎಲೆ, ತುಸು ಜೀರಿಗೆ, ಏಲಕ್ಕಿ, ಕಾಳುಮೆಣಸು, ಚಕ್ಕೆ, ಮೊಗ್ಗು, ಹೆಚ್ಚಿದ 2 ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರಿಶಿನ, ಗರಂ ಮಸಾಲ, ಧನಿಯಾಪುಡಿ, 1 ಕಪ್ ಬಾಸುಮತಿ ಅಕ್ಕಿ (ನೀರಲ್ಲಿ ನೆನೆಸಿಡಿ), 2 ಕಪ್ ನೆನೆಸಿ ಬೇಯಿಸಿದ ರಾಜ್ಮಾ (ಒಣ ಹುರುಳಿಬೀಜ), ಹೆಚ್ಚಿ ಫ್ರೈ ಮಾಡಿದ 4 ಈರುಳ್ಳಿ ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಟೊಮೇಟೊ.
ವಿಧಾನ : ಪ್ರೆಶರ್ ಕುಕ್ಕರ್ ನಲ್ಲಿ ಮೊದಲು ತುಪ್ಪ ಬಿಸಿ ಮಾಡಿ ಚಕ್ಕೆ ಮೊಗ್ಗು ಇತ್ಯಾದಿ ಎಲ್ಲಾ ಹಾಕಿ ಚಟಪಟಾಯಿಸಿ. ನಂತರ ಇದಕ್ಕೆ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಿ. ನಂತರ ಬೆಂದ ರಾಜಾ, ಬಾಕಿ ಮಸಾಲೆ, ಉಪ್ಪು, ಅರಿಶಿನ ಎಲ್ಲಾ ಸೇರಿಸಿ ಕೆದಕಬೇಕು. ನಂತರ ಅಕ್ಕಿ ಹಾಕಿ, ಅನ್ನ ಉದುರುದುರಾಗುವಂತೆ ನೀರು ಬೆರೆಸಿ, 2 ಸೀಟಿ ಬರುವಂತೆ ಬೇಯಿಸಿ. ಇದನ್ನು ತೆರೆದ ನಂತರ, ಚಿತ್ರದಲ್ಲಿರುವಂತೆ ಹೆಚ್ಚಿದ ಸಾಮಗ್ರಿ ಉದುರಿಸಿ, ಅಲಂಕರಿಸಿ ಸವಿಯಲು ಕೊಡಿ.
ನವರತ್ನ ಪಲಾವ್
ಮೂಲ ಸಾಮಗ್ರಿ : 1 ದೊಡ್ಡ ಸೌಟು ತುಪ್ಪ, ಬೀನ್ಸ್, ಕ್ಯಾರೆಟ್, ಆಲೂ, ಹಸಿ ಬಟಾಣಿ, ಹೂಕೋಸು, ಗೆಡ್ಡೆಕೋಸು, ಕ್ಯಾಪ್ಸಿಕಂ (ಹೆಚ್ಚಿದ್ದು ತಲಾ ಅರ್ಧರ್ಧ ಕಪ್), 3-4 ಈರುಳ್ಳಿ, 100 ಗ್ರಾಂ ಪನೀರ್, ತುಪ್ಪದಲ್ಲಿ ಹುರಿದ ಬಾದಾಮಿ, ಪಿಸ್ತಾ, ಗೋಡಂಬಿ, ದ್ರಾಕ್ಷಿ, ಅಖರೋಟು, ಹಸಿ ಖರ್ಜೂರದ ಚೂರು (ಒಟ್ಟಾಗಿ 1 ಕಪ್), ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹಸಿ ಮೆಣಸು, ಕಾಳು ಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ನಿಂಬೆರಸ, 2 ಲವಂಗದೆಲೆ, ಏಲಕ್ಕಿ, ಲವಂಗ, ಚಕ್ಕೆ, ಮೊಗ್ಗು (ಒಟ್ಟಾಗಿ ಅರ್ಧ ಕಪ್), 4 ಕಪ್‌ಉದುರುದುರಾದ ಅನ್ನ.
ಟಾಪಿಂಗ್ ಸಾಮಗ್ರಿ : ತುಸು ತುಪ್ಪ, ಜೀರಿಗೆ, ಹಾಲಲ್ಲಿ ನೆನೆಸಿದ ಕೇಸರಿ.
ಗಾರ್ನಿಶ್ ಸಾಮಗ್ರಿ : ಹೆಚ್ಚಿದ ತುಸು ಕೊ.ಸೊಪ್ಪು, ಪುದೀನಾ, ಈರುಳ್ಳಿ, ಟೊಮೇಟೊ, ನಿಂಬೆ ಹೋಳು.
ವಿಧಾನ : ಮೊದಲು ಕುಕ್ಕರ್ ಗೆ ತುಸು ತುಪ್ಪ ಹಾಕಿ ಡ್ರೈ ಫ್ರೂಟ್ಸ್ ಹುರಿದು ತೆಗೆಯಿರಿ. ನಂತರ ಇನ್ನಷ್ಟು ತುಪ್ಪ ಹಾಕಿ ಪನೀರ್ ಬಾಡಿಸಿ ತೆಗೆಯಿರಿ. ಮತ್ತೆ ತುಪ್ಪ ಹಾಕಿ ಎಲ್ಲಾ ತರಕಾರಿ ಸೇರಿಸಿ ಅರೆ ಬೇಯುವಂತೆ ಬಾಡಿಸಿ. ಎಲ್ಲವನ್ನೂ ಬೇರೆ ಬೇರೆಯಾಗಿಡಿ. ನಂತರ ತುಪ್ಪ ಬೆರೆಸಿ ಮೊದಲು ಈರುಳ್ಳಿ ಬಾಡಿಸಿ. ಇದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆದಕಬೇಕು. ನಂತರ ಹಸಿ ಮೆಣಸು, ಕಾಳು ಮೆಣಸು, ಚಕ್ಕೆಲವಂಗ ಇತ್ಯಾದಿ ಎಲ್ಲಾ ಬೆರೆಸಿ ಕೆದಕಬೇಕು. ನಂತರ ಉಪ್ಪು, ಖಾರ, ಡ್ರೈಫ್ರೂಟ್ಸ್ ಇತ್ಯಾದಿ ಬೆರೆಸಿ ಕೆದಕಬೇಕು. ಕೊನೆಯಲ್ಲಿ ಬಾಡಿಸಿದ ತರಕಾರಿ, ಅನ್ನ ಎಲ್ಲಾ ಹಾಕಿ ಬಾಡಿಸಿ, ಮುಚ್ಚಳ ಮುಚ್ಚಿರಿಸಿ, ಮಂದ ಉರಿ ಮಾಡಿ. ಪಕ್ಕದ ಒಲೆಯಲ್ಲಿ ಚಿಕ್ಕ ಪ್ಯಾನ್ ಇರಿಸಿ ತುಸು ತುಪ್ಪ ಬಿಸಿ ಮಾಡಿ ಜೀರಿಗೆ, ಹಾಲು ಸಹಿತ ನೆನೆದ ಕೇಸರಿ ಬೆರೆಸಿ ಕೆದಕಿ ಕೆಳಗಿಳಿಸಿ. ಇದನ್ನು ಕುಕ್ಕರ್ ಗೆ ಬೆರೆಸಿ, ಲಘುವಾಗಿ ಕೆದಕಿರಿ. ನಂತರ 1 ಸೀಟಿ ಬರುವಂತೆ ಕೂಗಿಸಿ. ಮುಚ್ಚಳ ತೆರೆದ ನಂತರ ಇದಕ್ಕೆ ಹೆಚ್ಚಿದ ಪದಾರ್ಥ ಉದುರಿಸಿ, ನಿಂಬೆ ಹಣ್ಣು ಹಿಂಡಿಕೊಂಡು, ಹಸಿ ಮೆಣಸು, ಈರುಳ್ಳಿ ಬಿಲ್ಲೆಯಿಂದ ಚಿತ್ರದಲ್ಲಿರುವಂತೆ ಅಲಂಕರಿಸಿ, ಬಿಸಿ ಬಿಸಿಯಾಗಿ ಟೊಮೇಟೊ ರಾಯ್ತಾ ಜೊತೆ ಸವಿಯಿರಿ.
ಹಸಿ ಮೆಣಸಿನ ಉಪ್ಪಿನಕಾಯಿ
ಸಾಮಗ್ರಿ : 250 ಗ್ರಾಂ ಉದ್ದದ ತಾಜಾ ಹಸಿ ಮೆಣಸು, ಅಗತ್ಯಕ್ಕೆ ತಕ್ಕಷ್ಟು ಉಪ್ಪು, ಅರಿಶಿನ, ಸಾಸುವೆ, ಜೀರಿಗೆ, ಸೋಂಪು, ಮೆಂತ್ಯ, ನಿಂಬೆರಸ, 2 ಸೌಟು ಎಣ್ಣೆ.
ವಿಧಾನ : ಹಿಡಿ ಇರುವಂತೆ ಹಸಿ ಮೆಣಸನ್ನು ಉದ್ದಕ್ಕೆ ಸೀಳಿರಿ. ಒಲೆ ಮೇಲೆ ಚಿಕ್ಕ ಬಾಣಲೆ ಇರಿಸಿ ಮೆಂತ್ಯ, ಜೀರಿಗೆ, ಸೋಂಪು, ಸಾಸುವೆ ಇತ್ಯಾದಿ ಹುರಿದು, ಆರಿದ ನಂತರ ತರಿತರಿಯಾಗಿ ಪುಡಿ ಮಾಡಿಡಿ. ಇದಕ್ಕೆ ಅರಿಶಿನ ಉಪ್ಪು ಬೆರೆಸಿಡಿ. ಅದೇ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಈ ಮಿಶ್ರಣ ಹಾಕಿ (ಮಂದ ಉರಿಯಲ್ಲಿ) ಬಾಡಿಸಿ ಕೆಳಗಿಳಿಸಿ. ಚೆನ್ನಾಗಿ ಆರಲಿ, ಇದಕ್ಕೆ ನಿಂಬೆಹಣ್ಣು ಹಿಂಡಿಕೊಳ್ಳಿ. ಇದನ್ನು ಎಲ್ಲಾ ಹಸಿ ಮೆಣಸಿಗೂ ಸಮನಾಗಿ ತುಂಬಿಸಿ. ಉಳಿದ ಎಣ್ಣೆ ಮಸಾಲೆ ಇದರ ಮೇಲೆ ಸುರಿದು, ಗಾಜಿನ ಬಾಟಲಿಗೆ ತುಂಬಿಸಿ, 1 ವಾರ ಬಿಸಿಲಿಗಿಟ್ಟು ನಂತರ ಬಳಸಿಕೊಳ್ಳಿ.
ಕ್ಯಾರೆಟ್ ಬೀನ್ಸ್ ಉಪ್ಪಿನಕಾಯಿ
ಸಾಮಗ್ರಿ : ತಲಾ 250 ಗ್ರಾಂ ಕ್ಯಾರೆಟ್, ಬೀನ್ಸ್, 1 ದೊಡ್ಡ ಹಸಿ ಶುಂಠಿ, 3-4 ಉದ್ದದ ಹಸಿ ಮೆಣಸು (ಉದ್ದಕ್ಕೆ ಸೀಳಿರಿ), ಅಗತ್ಯವಿದ್ದಷ್ಟು ಉಪ್ಪು, ಖಾರ, ಸಾಸುವೆ, ಜೀರಿಗೆ, ಸೋಂಪು, ಅರಿಶಿನ, ಇಂಗು, ನಿಂಬೆರಸ, ವಿನಿಗರ್, 2 ಸೌಟು ಎಣ್ಣೆ.
ವಿಧಾನ : ಕ್ಯಾರೆಟ್, ಬೀನ್ಸ್ ನ್ನು ಉದ್ದುದ್ದಕ್ಕೆ ಹೆಚ್ಚಿಡಿ. ಇದನ್ನು ಹೆಚ್ಚಿದ ಶುಂಠಿ, ಹಸಿ ಮೆಣಸಿನ ಜೊತೆ ಎಣ್ಣೆಯಲ್ಲಿ ಬಾಡಿಸಿ ಬೇರೆಯಾಗಿಡಿ. ಅದೇ ಬಾಣಲೆಯಲ್ಲಿ ಮೊದಲು ಸಾಸುವೆ, ಜೀರಿಗೆ ಇತ್ಯಾದಿ ಎಲ್ಲಾ ಹುರಿದು ತರಿಯಾಗಿ ಪುಡಿ ಮಾಡಿ. ಮತ್ತೆ ಅದೇ ಬಾಣಲೆಯಲ್ಲಿ ಇನ್ನಷ್ಟು ಎಣ್ಣೆ ಬಿಸಿ ಮಾಡಿ, ಇಂಗಿನ ಒಗ್ಗರಣೆ ಕೊಡಿ. ನಂತರ ಪುಡಿ ಮಿಶ್ರಣ, ಉಪ್ಪು, ಖಾರ ಸೇರಿಸಿ ಕೆದಕಬೇಕು. ಕೊನೆಯಲ್ಲಿ ಬಾಡಿಸಿದ ತರಕಾರಿ ಹಾಕಿ ಮತ್ತಷ್ಟು ಹೊತ್ತು ಬಾಡಿಸಿ ಕೆಳಗಿಳಿಸಿ. ಚೆನ್ನಾಗಿ ಆರಿದ ನಂತರ ನಿಂಬೆ ಹಣ್ಣು ಹಿಂಡಿಕೊಂಡು, ವಿನಿಗರ್ ಬೆರೆಸಿ, ಚೆನ್ನಾಗಿ ಮಿಕ್ಸ್ ಮಾಡಿ. ಜಾಡಿಗೆ ತುಂಬಿಸಿ, 2 ದಿನ ಬಿಸಿಲಿಗಿಟ್ಟು ನಂತರ ಬಳಸಿರಿ.
ಟೊಮೇಟೊ ಇನ್ ಸ್ಟೆಂಟ್ ಪಿಕಲ್
ಸಾಮಗ್ರಿ : 4-5 ಹುಳಿ ಟೊಮೇಟೊ, 3-4 ಹಸಿ ಮೆಣಸು, 1 ತುಂಡು ಹಸಿ ಶುಂಠಿ, 2 ಸೌಟು ಎಣ್ಣೆ, ಅಗತ್ಯವಿದ್ದಷ್ಟು ಉಪ್ಪು, ಖಾರ, ಸಾಸುವೆ, ಜೀರಿಗೆ, ಇಂಗು, ಸೋಂಪು, ಮೆಂತ್ಯ, ಗರಂಮಸಾಲ.
ವಿಧಾನ : ಮೊದಲು ತರಕಾರಿ ಹೆಚ್ಚಿಡಿ. ಬಾಣಲೆಯಲ್ಲಿ ಸಾಸುವೆ, ಜೀರಿಗೆ ಹಾಕಿ ಡ್ರೈ ರೋಸ್ಟ್ ಮಾಡಿ, ಆರಿದ ನಂತರ ತರಿತರಿಯಾಗಿ ಪುಡಿ ಮಾಡಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಇಂಗಿನ ಒಗ್ಗರಣೆ ಕೊಡಿ. ನಂತರ ಹೆಚ್ಚಿದ ಶುಂಠಿ, ಹಸಿ ಮೆಣಸು, ನಂತರ ಟೊಮೇಟೊ ಹಾಕಿ ಬಾಡಿಸಿ. ಆಮೇಲೆ ಇದಕ್ಕೆ ಉಪ್ಪು, ಖಾರ, ಮಸಾಲೆ ಎಲ್ಲಾ ಬೆರೆಸಿ ಕೆದಕಿ ಕೆಳಗಿಳಿಸಿ. ಇದನ್ನು ನೇರವಾಗಿ ಊಟದ ಜೊತೆ ಹಾಗೇ ಬಳಸಬಹುದು ಅಥವಾ ಜಾಡಿಗೆ ತುಂಬಿಸಿ 2-3 ದಿನ ಬಿಸಿಲಿಗಿಟ್ಟ ನಂತರ 1 ವಾರದ ಕಾರಣ ಬಳಸಬಹುದು.
ಬೆಂಡೆ ಉಪ್ಪಿನಕಾಯಿ
ಸಾಮಗ್ರಿ : 500 ಗ್ರಾಂ ಬೆಂಡೆಕಾಯಿ, 2 ಸೌಟು ಎಣ್ಣೆ, ಅಗತ್ಯವಿದ್ದಷ್ಟು ಉಪ್ಪು, ಖಾರ, ಓಮ, ಅರಿಶಿನ, ಸಾಸುವೆ, ಜೀರಿಗೆ, ಸೋಂಪು, ಧನಿಯಾ, ನಿಂಬೆರಸ, ಇಂಗು.
ವಿಧಾನ : ಮೊದಲು ಬಾಣಲೆಯಲ್ಲಿ ಸಾಸುವೆ, ಜೀರಿಗೆ, ಇತ್ಯಾದಿ ಒಟ್ಟಾಗಿ ಹುರಿದು ತರಿತರಿ ಪುಡಿ ಮಾಡಿಡಿ. ಬೆಂಡೆಕಾಯಿ ತೊಳೆದು ನೀಟಾಗಿ ಒರೆಸಿ, ಫ್ಯಾನಿನ ಕೆಳಗೆ ಒಣಗಿಸಿ. ಇದರ ಮೇಲ್ಭಾಗ, ಅಡಿ ಭಾಗ ಕತ್ತರಿಸಿ ಉದ್ದುದ್ದಕ್ಕೆ ಹೆಚ್ಚಿಕೊಳ್ಳಿ. ಇದರಲ್ಲಿ ಒಂದೊಂದಕ್ಕೂ ನಿಂಬೆರಸ ಬೆರೆಸುತ್ತಾ, ಒಂದು ಬದಿಗಿಡಿ. ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ, ಉಪ್ಪು, ಖಾರ, ಮಸಾಲೆ ಮಿಶ್ರಣ ಹಾಕಿ ಕೆದಕಿ ಕೆಳಗಿಳಿಸಿ. ಇದನ್ನು ಬೆಂಡೆಕಾಯಿಗಳಿಗೆ ನಿಧಾನವಾಗಿ ತುಂಬಿಸಿ. ನಂತರ ಅದೇ ಬಾಣಲೆಯಲ್ಲಿ ಉಳಿದ ಎಣ್ಣೆ ಬಿಸಿ ಮಾಡಿ ಬೆಂಡೆ ಹಾಕಿ ಮಂದ ಉರಿಯಲ್ಲಿ ಚೆನ್ನಾಗಿ ಬಾಡಿಸಿ. ನಂತರ ಉಳಿದ ಮಸಾಲೆ ಮಿಶ್ರಣ ಇದರ ಮೇಲೆ ಹಾಕಿ ಮತ್ತಷ್ಟು ಬಾಡಿಸಿ ಕೆಳಗಿಳಿಸಿ. ಆರಿದ ನಂತರ ಏರ್ ಟೈಟ್ ಕಂಟೇನರ್ ಗೆ ತುಂಬಿಸಿ, ಬೇಕಾದಾಗ ಸವಿಯಿರಿ. ಇದು 1 ವಾರ ಕೆಡದೆ ಉಳಿಯುತ್ತದೆ.
ಅಂಜೂರ–ಖರ್ಜೂರದ ರೋಲ್ಸ್
ಮೂಲ ಸಾಮಗ್ರಿ : ಹಸಿ ಖರ್ಜೂರ-ಅಂಜೂರದ ಪೇಸ್ಟ್ (ತಲಾ ಅರ್ಧರ್ಧ ಕಪ್, ಹಾಲಲ್ಲಿ ನೆನೆಸಿ ನಂತರ ಪೇಸ್ಟ್ ಮಾಡಿಡಿ), 1 ಕಪ್ ತುಪ್ಪ.
ಹೂರಣದ ಸಾಮಗ್ರಿ : ಗೋಡಂಬಿ, ದ್ರಾಕ್ಷಿ, ಬಾದಾಮಿ, ಪಿಸ್ತಾ, ಅಖರೋಟು (ಒಟ್ಟಾಗಿ 2 ಕಪ್, ತುಪ್ಪದಲ್ಲಿ ಹುರಿದು ತರಿತರಿ ಮಾಡಿಡಿ), 7-8 ಹೆಚ್ಚಿದ ಅಂಜೂರದ ಬಿಲ್ಲೆ, 10-12 ಎಸಳು ಕೇಸರಿ (ಹಾಲಲ್ಲಿ ನೆನೆಸಿಡಿ), 4 ಚಮಚ ಗೋಡಂಬಿ ಪುಡಿ, ಕೋಟಿಂಗ್ ಗಾಗಿ ಅರ್ಧ ಕಪ್ ಗಸಗಸೆ ಪೇಸ್ಟ್.
ಹೂರಣಕ್ಕಾಗಿ : ತರಿತರಿ ಡ್ರೈ ಫ್ರೂಟ್ಸ್ ನ್ನು ಒಂದು ಬಟ್ಟಲಿಗೆ ಹಾಕಿಡಿ. ಇದಕ್ಕೆ ಹಾಲಿನ ಸಮೇತ ಕೇಸರಿ, ಗೋಡಂಬಿ ಪುಡಿ, ಗಸಗಸೆ ಪೇಸ್ಟ್ ಹಾಕಿ ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ.
ವಿಧಾನ : ಒಂದು ಬಾಣಿಯಲ್ಲಿ ತುಪ್ಪ ಬಿಸಿ ಮಾಡಿ. ಇದಕ್ಕೆ ಅಂಜೂರ-ಖರ್ಜೂರದ ಪೇಸ್ಟ್ ಹಾಕಿ ಮಂದ ಉರಿಯಲ್ಲಿ ಬಾಡಿಸಿ. ತೇವಾಂಶ ಹಿಂಗಿಸಿ. ನಡುನಡುವೆ ತುಪ್ಪ ಬೆರೆಸುತ್ತಾ ಗಟ್ಟಿ ಆಗಿಸಿ, ಕೆಳಗಿಳಿಸಿ. ಚೆನ್ನಾಗಿ ಆರಿದ ನಂತರ ಇದರಿಂದ ಸಣ್ಣ ಸಣ್ಣ ಉಂಡೆ ಮಾಡಿ, ಜಿಡ್ಡು ಸವರಿದ ಅಂಗೈ ಮೇಲೆ ತಟ್ಟಿಕೊಂಡು, ಒಳಗೆ 2-3 ಚಮಚ ಹೂರಣ ತುಂಬಿಸಿ. ಚಿತ್ರದಲ್ಲಿರುವಂತೆ ಇದನ್ನು ರೋಲ್ಸ್ ಮಾಡಿ. ನಂತರ ಇದನ್ನು ಒಣ ಗಸಗಸೆಯಲ್ಲಿ ರೋಲ್ ಮಾಡಿ, 1 ಗಂಟೆ ಕಾಲ ಫ್ರಿಜ್ ನಲ್ಲಿರಿಸಿ ಸೆಟ್ ಮಾಡಿ. ನಂತರ ಸವಿಯಲು ಕೊಡಿ.
ಕಡಲೆಪುರಿ ಉಂಡೆ
ಸಾಮಗ್ರಿ : 2-3 ಕಪ್ ಕಡಲೆಪುರಿ, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು (ಒಟ್ಟಾಗಿ ಅರ್ಧ ಕಪ್), 1 ಕಪ್ ಬೆಲ್ಲದ ಪುಡಿ, ಚಿಟಕಿ ಸೋಂಪು, ಸಾಲ್ಟ್ ಪೆಪ್ಪರ್, ಅರ್ಧ ಸೌಟು ತುಪ್ಪ, 1 ಗಿಟುಕು ಕೊಬ್ಬರಿ ತುರಿ.
ವಿಧಾನ : ಒಂದು ಬಾಣಲೆಯಲ್ಲಿ ಕಡಲೆಪುರಿಯನ್ನು ಡ್ರೈ ರೋಸ್ಟ್ ಮಾಡಿ ಕೆಳಗಿಳಿಸಿ. ಅದರಲ್ಲಿ ತುಪ್ಪ ಬಿಸಿ ಮಾಡಿ, ಬೆಲ್ಲ ಹಾಕಿ ಮಂದ ಉರಿಯಲ್ಲಿ ಕರಗಿಸಿ. ನಂತರ ಇದಕ್ಕೆ ಸೋಂಪು, ಸಾಲ್ಟ್ ಪೆಪ್ಪರ್, ಡ್ರೈ ಫ್ರೂಟ್ಸ್, ಕೊಬ್ಬರಿ ತುರಿ ಎಲ್ಲಾ ಸೇರಿಸಿ ಕೆದಕಿ ಕೆಳಗಿಳಿಸಿ. ನಂತರ ಇದಕ್ಕೆ ಕಡಲೆಪುರಿ ಹಾಕಿ ಎಲ್ಲ ಬೆರೆತುಕೊಳ್ಳುವಂತೆ ಬೇಗ ಬೇಗ ಕೈಯಾಡಿಸಿ. ಕೈಗೆ ತುಪ್ಪ ಸವರಿಕೊಂಡು ಇದರಿಂದ ನಿಂಬೆ ಗಾತ್ರದ ಉಂಡೆ ಮಾಡಿಕೊಳ್ಳಿ. ನಂತರ ಚಿತ್ರದಲ್ಲಿರುವಂತೆ ಗುಲಾಬಿ ದಳಗಳಿಂದ ಅಲಂಕರಿಸಿ ಸವಿಯಲು ಕೊಡಿ.