ಫ್ರೈಡ್ ಕಾರ್ನ್
ಸಾಮಗ್ರಿ : 200 ಗ್ರಾಂ ಜೋಳದ ಕಾಳು, ಅರ್ಧ ಕಪ್ ಕಾರ್ನ್ ಫ್ಲೋರ್, ಅಕ್ಕಿ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಪುಡಿ ಮೆಣಸು, ಖಾರ, ಕರಿಯಲು ಎಣ್ಣೆ.
ವಿಧಾನ : ಮೊದಲು ಜೋಳದ ಕಾಳನ್ನು ಕುದಿವ ನೀರಲ್ಲಿ ಲಘುವಾಗಿ ಬೇಯಿಸಿ. ಇದನ್ನು ಟವೆಲ್ ಮೇಲೆ ಹರಡಿ ಫ್ಯಾನಿನಡಿ ಒಣಗಿಸಿ. ಒಂದು ಸಣ್ಣ ಬಟ್ಟಲಿಗೆ ಉಳಿದೆಲ್ಲ ಸಾಮಗ್ರಿ ಸೇರಿಸಿ, ಸ್ವಲ್ಪ ನೀರು ಬೆರೆಸಿ ಬೋಂಡ ಹಿಟ್ಟಿನ ಹದಕ್ಕೆ ಗಟ್ಟಿಯಾಗಿ ಕಲಸಿಕೊಳ್ಳಿ. ಇದಕ್ಕೆ ಒಣಗಿಸಿದ ಜೋಳ ಹಾಕಿ ಚೆನ್ನಾಗಿ ಮೆತ್ತಿಕೊಳ್ಳುವಂತೆ ಮಾಡಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಮಂದ ಉರಿಯಲ್ಲಿ ಇದನ್ನು ಕರಿದು ತೆಗೆಯಿರಿ. ಇದನ್ನು ಟಿಶ್ಯು ಪೇಪರ್ ಮೇಲೆ ಹರಡಿ, ಹೆಚ್ಚುವರಿ ಎಣ್ಣೆ ಹೋಗಲಾಡಿಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ, ಸಂಜೆ ಕಾಫಿ/ಟೀ ಜೊತೆ ಸವಿಯಲು ಕೊಡಿ.
ಫ್ರೂಟಿ ಐಸ್ ಕ್ರೀಂ
ಸಾಮಗ್ರಿ : 1 ಮಾಗಿದ ಮಾವು, 2 ಕಿವೀ ಫ್ರೂಟ್, 4-5 ಚಮಚ ಸೀಡ್ಲೆಸ್ ದಾಳಿಂಬೆ ಹರಳು, 1 ಸೇಬು, 1-2 ಕಳಿತ ಬಾಳೆಹಣ್ಣು, ರುಚಿಗೆ ತಕ್ಕಷ್ಟು ವೆನಿಲಾ ಐಸ್ ಕ್ರೀಂ, ಹಾಲಲ್ಲಿ ನೆನೆಸಿ ಸಣ್ಣಗೆ ಹೆಚ್ಚಿದ ಬಾದಾಮಿ ಚೂರು.
ವಿಧಾನ : ಎಲ್ಲಾ ಹಣ್ಣುಗಳನ್ನೂ ಸಣ್ಣದಾಗಿ ಹೆಚ್ಚಿಡಿ. ಒಂದು ಬೋಗುಣಿಗೆ ವೆನಿಲಾ ಐಸ್ ಕ್ರೀಂ ಹಾಕಿ ಬೀಟ್ ಮಾಡಿ. ಇದಕ್ಕೆ ಹಣ್ಣು ಸೇರಿಸಿ ಮಿಕ್ಸ್ ಮಾಡಿ. ಮೇಲೆ ಬಾದಾಮಿ ಉದುರಿಸಿ, ಅರ್ಥ ಗಂಟೆ ಫ್ರಿಜ್ ನಲ್ಲಿರಿಸಿ ನಂತರ ಸವಿಯಲು ಕೊಡಿ.
ಎಳ್ಳು ಪನೀರ್ ಕ್ಯೂಬ್ಸ್
ಸಾಮಗ್ರಿ : 300 ಗ್ರಾಂ ಪನೀರ್ ತುಂಡು, 4 ಚಮಚ ನೈಲಾನ್ ಎಳ್ಳು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಟೊಮೇಟೊ ಸಾಸ್, ರೆಡ್ ಚಿಲೀ ಸಾಸ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ತುಸು ಎಣ್ಣೆ.
ವಿಧಾನ : ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಇದಕ್ಕೆ ಬೆಳ್ಳುಳ್ಳಿ-ಶುಂಠಿ ಪೇಸ್ಟ್ ಹಾಕಿ ಮಂದ ಉರಿಯಲ್ಲಿ ಬಾಡಿಸಿ. ನಂತರ ಎರಡೂ ಬಗೆಯ ಸಾಸ್ ಬೆರೆಸಿ ಉಪ್ಪು, ಖಾರ ಹಾಕಿ ಕೆದಕುತ್ತಾ ಇರಿ. ನಂತರ ಪನೀರ್ ತುಂಡು ಹಾಕಿ ಎಲ್ಲವೂ ಚೆನ್ನಾಗಿ ಮೆತ್ತಿಕೊಳ್ಳುವಂತೆ ಬಾಡಿಸಿ. ಇದರ ಮೇಲೆ ಎಳ್ಳು ಉದುರಿಸಿ, ಪನೀರ್ ಗೆ ಮೆತ್ತಿಸಿ. 2 ನಿಮಿಷ ಬಾಡಿಸಿ ಕೆಳಗಿಳಿಸಿ. ಚಿತ್ರದಲ್ಲಿರುವಂತೆ ಅಲಂಕರಿಸಿ, ಸ್ಟಾರ್ಟಸ್ ಆಗಿ ಸವಿಯಲು ಕೊಡಿ.
ಬಿಸ್ಕತ್ತಿನ ಲಡ್ಡು
ಸಾಮಗ್ರಿ : 12-15 ಡೈಜೆಸ್ಟಿವ್ ಬಿಸ್ಕತ್ತು, 150 ಗ್ರಾಂ ಸಿಹಿ ಖೋವಾ, 1 ಗಿಟುಕು ಕೊಬ್ಬರಿ ತುರಿ, 2 ಚಮಚ ಬಾದಾಮಿ ಪುಡಿ, ಅರ್ಧ ಕಪ್ ಟೂಟಿಫ್ರೂಟಿ, ಒಂದಿಷ್ಟು ಏಲಕ್ಕಿಪುಡಿ, ಬಾದಾಮಿ ಫ್ಲೇಕ್ಸ್, ಪಿಸ್ತಾ ಫ್ಲೇಕ್ಸ್.
ವಿಧಾನ : ಬಿಸ್ಕತ್ತನ್ನು ಮಿಕ್ಸಿಗೆ ಹಾಕಿ ತರಿ ತರಿ ಮಾಡಿಕೊಳ್ಳಿ. ಖೋವಾ ಚೆನ್ನಾಗಿ ಮಸೆದು, ಇದಕ್ಕೆ ಬೇರೆಲ್ಲ ಸಾಮಗ್ರಿ ಸೇರಿಸಿ. ತುಪ್ಪ ಸವರಿದ ಕೈಗಳಿಂದ ಈ ಮಿಶ್ರಣದಿಂದ ಸಣ್ಣ ನಿಂಬೆ ಗಾತ್ರದ ಉಂಡೆ ಹಿಡಿದು, ಗಾಳಿಯಾಡದ ಡಬ್ಬಕ್ಕೆ ತುಂಬಿಸಿಡಿ. ಮಕ್ಕಳು ಬಯಸಿದಾಗ ಲಡ್ಡು ಸವಿಯಲು ಕೊಡಿ.
ಬ್ರೋಕನ್ ವೀಟ್ ಸಿಹಿ ಪೊಂಗಲ್
ಸಾಮಗ್ರಿ : ಅರ್ಧರ್ಧ ಕಪ್ ಬ್ರೋಕನ್ ವೀಟ್, ಹೆಸರು ಬೇಳೆ, ರುಚಿಗೆ ತಕ್ಕಷ್ಟು ಕಾದಾರಿದ ಹಾಲು, ಬೆಲ್ಲ, ತುಪ್ಪ, ಕೊಬ್ಬರಿ ತುರಿ, ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು, ಏಲಕ್ಕಿ ಪುಡಿ, ಪಚ್ಚ ಕರ್ಪೂರ.
ವಿಧಾನ : ಮೊದಲು ಚಿಕ್ಕ ಪ್ರೆಷರ್ ಕುಕ್ಕರ್ ನಲ್ಲಿ ತುಪ್ಪ ಬಿಸಿ ಮಾಡಿ ಇದಕ್ಕೆ ಡ್ರೈ ಫ್ರೂಟ್ಸ್ ಹಾಕಿ ಹುರಿದು ತೆಗೆಯಿರಿ. ನಂತರ ಹೆಸರುಬೇಳೆ ಹಾಕಿ ಮಂದ ಉರಿಯಲ್ಲಿ ಹುರಿದು, ಹಸಕಲು ವಾಸನೆ ಹೋಗಲಾಡಿಸಿ. ನಂತರ ಇದಕ್ಕೆ ತೊಳೆದ ಬ್ರೋಕನ್ ವೀಟ್ ಹಾಕಿ. ಇದಕ್ಕೆ ಅಗತ್ಯವಿದ್ದಷ್ಟು ಹಾಲು ಬೆರೆಸಿ (ನೀರು ಬೇಡ, ಹಾಲಲ್ಲೇ ಬೇಯಿಸಿ), 3 ಸೀಟಿ ಬರುವಂತೆ ಚೆನ್ನಾಗಿ ಕೂಗಿಸಿ. ಅದೇ ಸಮಯದಲ್ಲಿ ಪಕ್ಕದ ಒಲೆಯಲ್ಲಿ ಬಾಣಲೆಗೆ ಬೆಲ್ಲ, ನೀರು ಹಾಕಿ ಕರಗಿಸಿ, ಪಾಕವನ್ನು ಸೋಸಿಕೊಳ್ಳಿ. ಅದೇ ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿ. ಬೆಲ್ಲದ ಪಾಕ, ಬೆಂದ ಮಿಶ್ರಣ, ಹಾಕಿ ನಡುನಡುವೆ ತುಪ್ಪ ಬೆರಸುತ್ತಾ ಕೆದಕಿರಿ. ನಂತರ ಡ್ರೈ ಫ್ರೂಟ್ಸ್ ಸಮೇತ ಉಳಿದೆಲ್ಲಾ ಸಾಮಗ್ರಿ ಬೆರೆಸಿ, 2 ನಿಮಿಷ ಕೆದಕಿ ಕೆಳಗಿಳಿಸಿ. ತಟ್ಟೆಗೆ ಈ ಬಿಸಿ ಬಿಸಿ ಪೊಂಗಲ್ ಹಾಕಿ, ಮೇಲೆ 2 ಮಿಳ್ಳೆ ತುಪ್ಪ ಹಾಕಿ ಸೇವಿಸಲು ಕೊಡಿ.
ಬ್ರೆಡ್ ರವೆ ಬರ್ಫಿ
ಸಾಮಗ್ರಿ : 1 ಕಪ್ ಫ್ರೆಶ್ ಕ್ರೀಂ, ಅರ್ಧ ಕಪ್ ರವೆ, ತುಪ್ಪ, 4-5 ಬ್ರೆಡ್ ಸ್ಲೈಸ್, ಹೆಚ್ಚಿದ 2-3 ಈರುಳ್ಳಿ, ಒಂದಿಷ್ಟು ಹೆಚ್ಚಿದ 3 ಬಗೆ ಕ್ಯಾಪ್ಸಿಕಂ, ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು ಪುಡಿ ಮೆಣಸು.
ವಿಧಾನ : ಮೊದಲು ಫ್ರೆಶ್ ಕ್ರೀಂ ಬೀಟ್ ಮಾಡಿಕೊಂಡು, ಇದಕ್ಕೆ ಹೆಚ್ಚಿದ ಉಳಿದೆಲ್ಲ ಸಾಮಗ್ರಿ, ಉಪ್ಪು, ಖಾರ ಎಲ್ಲ ಸೇರಿಸಿ ಕದಡಿಕೊಳ್ಳಿ. ಬ್ರೆಡ್ ಸ್ಲೈಸ್ ನ್ನು ಆಯತಾಕಾರವಾಗಿ ಕತ್ತರಿಸಿ, ಅದರ ಎರಡೂ ಬದಿ ಈ ಮಿಶ್ರಣ ಸವರಿಡಿ. ನಾನ್ ಸ್ಟಿಕ್ ಪ್ಯಾನಿಗೆ ತುಪ್ಪ ಹಾಕಿ, ಈ ಬ್ರೆಡ್ ಸ್ಲೈಸ್ ನ್ನು ಅದರಲ್ಲಿ ಎರಡೂ ಬದಿ ಹೊಂಬಣ್ಣ ಬರುವಂತೆ ಫ್ರೈ ಮಾಡಿ. ನಂತರ ಚಿತ್ರದಲ್ಲಿರುವಂತೆ ಸಾಸ್ ನಿಂದ ಅಲಂಕರಿಸಿ ಸವಿಯಲು ಕೊಡಿ.
ಸ್ಪೆಷಲ್ ಪಕೋಡಾ
ಸಾಮಗ್ರಿ : 5-6 ಹೆಚ್ಚಿದ ಈರುಳ್ಳಿ, 3-4 ಹಸಿಮೆಣಸು, ತುಸು ಕೊ.ಸೊಪ್ಪು, ಪುದೀನಾ, ಕರಿಬೇವು, 2 ಕಪ್ ಕಡಲೆಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಓಮ, ಕರಿಯಲು ಎಣ್ಣೆ.
ವಿಧಾನ : ಬಾಣಲೆಯಲ್ಲಿ ಎಣ್ಣೆ ಕಾಯಲು ಇಡಿ. ಒಂದು ಬೇಸನ್ನಿಗೆ ಮೇಲಿನ ಎಲ್ಲಾ ಸಾಮಗ್ರಿ ಸೇರಿಸಿ ಪಕೋಡಾ ಹದಕ್ಕೆ ಕಲಸಿಡಿ. ಇದರಿಂದ ತುಸು ಮಿಶ್ರಣ ತೆಗೆದುಕೊಂಡು ಬಾಣಲೆಗೆ ಹಾಕುತ್ತಾ, ಚೆನ್ನಾಗಿ ಹೊಂಬಣ್ಣ ಬರುವಂತೆ ಕರಿದು, ಬಿಸಿಬಿಸಿಯಾಗಿ ಇದನ್ನು ಪುದೀನಾ ಚಟ್ನಿ ಜೊತೆ ಸವಿಯಲು ಕೊಡಿ.
ಮ್ಯಾಂಗೋ ಪನೀರ್ ರೋಲ್ಸ್
ಸಾಮಗ್ರಿ : 2 ಮಾಗಿದ ಮಾವು, 100 ಗ್ರಾಂ ಪನೀರ್, 2-2 ಚಮಚ ಬಾದಾಮಿ ಫ್ಲೇಕ್ಸ್, ಪುಡಿ ಸಕ್ಕರೆ, ತುಸು ಉದ್ದಕ್ಕೆ ಹೆಚ್ಚಿದ ಸ್ಟ್ರಾಬೆರಿ, ಏಲಕ್ಕಿಪುಡಿ, ಪಿಸ್ತಾ ಚೂರು.
ವಿಧಾನ : ಮಾವಿನ ಸಿಪ್ಪೆ ಹೆರೆದು, ಉದ್ದಕ್ಕೆ ಸ್ಲೈಸ್ ಮಾಡಿ. ಪನೀರ್‌ಚೆನ್ನಾಗಿ ಮಸೆದು ಅದಕ್ಕೆ ಪುಡಿ ಸಕ್ಕರೆ, ಏಲಕ್ಕಿ, ಬಾದಾಮಿ ಸೇರಿಸಿ. ಪ್ರತಿ ಸ್ಲೈಸ್‌ಮೇಲೂ ಪನೀರ್ ಮಿಶ್ರಣ ಹರಡಿ ರೋಲ್ ಮಾಡಿ. ಇದರ ಮೇಲೆ ಸ್ಟ್ರಾಬೆರಿ (ಇಡಿಯಾಗಿ), ಪಿಸ್ತಾ ಉದುರಿಸಿ, 1 ಗಂಟೆ ಕಾಲ ಫ್ರಿಜ್ ನಲ್ಲಿರಿಸಿ ಸವಿಯಲು ಕೊಡಿ.