– ರಾಘವೇಂದ್ರ ಅಡಿಗ ಎಚ್ಚೆನ್.
ಚಂದನವನದಲ್ಲಿ ಭರವಸೆಯ ಯುವ ನಟನಾಗಿ ಮಿಂಚುತ್ತಿರುವ ಪ್ರತಿಭೆ ಶ್ರೇಯಸ್ ಮಂಜು. ಖ್ಯಾತ ನಿರ್ಮಾಪಕ ಕೆ. ಮಂಜು ರವರ ಸುಪುತ್ರ ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ರವರ ಅಪ್ಪಟ ಅಭಿಮಾನಿ ಆಗಿರುವ ಪ್ರತಿಭಾವಂತ ನಟ ಶ್ರೇಯಸ್. ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡುವ ನಿಟ್ಟಿನಲ್ಲಿ ವೈಜಾಕ್ ನ ಸತ್ಯಾನಂದ ಆಕ್ಟಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ನಾನಾ ಬಗೆಯ ಕಲೆಯ ಪ್ರಕಾರಗಳನ್ನು ತಿಳಿದುಕೊಳ್ಳುತ್ತಾ ಜೆಮಿನಸ್ಟಿಕ್ , ಟ್ಯಾಕ್ವಂಡೂ , ಪರ್ಕೌರ್ ತರಬೇತಿಯನ್ನು ಪಡೆದು ತನ್ನ ಪ್ರತಿಭೆಯ ಮೂಲಕ ಗುರುತಿಸಿಕೊಳ್ಳುವ ತವಕ ದೊಂದಿಗೆ ಚಿತ್ರರಂಗಕ್ಕೆ ಬಂದಂತ ನಟ ಶ್ರೇಯಸ್.
2019 ರಲ್ಲಿ ಹೆಸರಾಂತ ಸೂರಜ್ ಪ್ರೊಡಕ್ಷನ್ಸ್ ನ ನಿರ್ಮಾಪಕ ಎಂ. ರಮೇಶ್ ರೆಡ್ಡಿ ನಿರ್ಮಾಣದಲ್ಲಿ ಗುರು ದೇಶಪಾಂಡೆ ನಿರ್ದೇಶನದ “ಪಡ್ಡೆಹುಲಿ” ಚಿತ್ರದ ಮೂಲಕ ಶ್ರೇಯಸ್ ಮಂಜು ನಾಯಕನಾಗಿ ಬೆಳ್ಳಿ ಪರದೆಗೆ ಎಂಟ್ರಿಯನ್ನು ಮಾಡಿ ತನ್ನ ಮೊದಲ ಚಿತ್ರದಲ್ಲೇ ಆಕ್ಷನ್ , ಲವ್ , ಸೆಂಟಿಮೆಂಟ್ ಗೂ ಸೈ ಎನ್ನುವಂತೆ ಅಭಿನಯಿಸಿ ಚಿತ್ರಂಗಕ್ಕೆ ಭರವಸೆಯ ನಟನೊಬ್ಬ ಸಿಕ್ಕಂತಾಯಿತು ಎಂಬ ಅಭಿಪ್ರಾಯವನ್ನ ಎಲ್ಲರಿಂದ ಪಡೆದುಕೊಂಡರು. ತದನಂತರ ಖಡಕ್ ಪೊಲೀಸ್ ಅಧಿಕಾರಿಯಾಗಿ “ರಾಣ” ಚಿತ್ರದಲ್ಲಿ ಮಿಂಚಿದರು. ಮುಂದೆ ಮನಮಿಡಿಯುವ ಮುದ್ದಾದ ಪ್ರೇಮಕಥೆ “ವಿಷ್ಣುಪ್ರಿಯ” ಚಿತ್ರದಲ್ಲಿ ಮನೋಜ್ಞ ಅಭಿನಯ ನೀಡಿ ಎಲ್ಲರಿಂದ ಪ್ರಶಂಸೆಯನ್ನು ಪಡೆದು ಯಾವ ಪಾತ್ರನ್ನಾದರೂ ನಿಭಾಯಿಸುವ ಸಾಮರ್ಥ ಶ್ರೇಯಸ್ ಮಂಜು ಗೆ ಇದೆ ಎಂಬುದನ್ನು ನಿರೂಪಿಸಿದರು.
ಯುವ ನಟ ಶ್ರೇಯಸ್ ಮಂಜು ಪ್ರಕಾರ ಈಗ ಸಾಲು ಸಾಲು ಚಿತ್ರಗಳು ಕೈಯಲ್ಲಿದ್ದು , ನಮ್ಮ ತಂದೆ ಕೆ. ಮಂಜು ನಿರ್ಮಾಣದಲ್ಲಿ ಎಸ್. ನಾರಾಯಣ್ ನಿರ್ದೇಶನದಲ್ಲಿ ದುನಿಯಾ ವಿಜಯ್ ಜೊತೆ ಅಭಿನಯಿಸುತ್ತಿರುವ “ಮಾರುತ” ಚಿತ್ರ ಈಗ ಚಿತ್ರೀಕರಣವನ್ನು ಪೂರೈಸಿದ್ದು, ಸದ್ಯ ಬಿಡುಗಡೆಗೆ ಪ್ರಚಾರದ ಕಾರ್ಯವನ್ನು ಆರಂಭಿಸಿದ್ದೇವೆ. ಇದರ ಜೊತೆಗೆ ಹೊಸ ತಂಡದೊಂದಿಗೆ “ದಿಲ್ದಾರ” ಎಂಬ ಚಿತ್ರವೂ ಕೂಡ ಕೊನೆಯ ಹಂತದಲ್ಲಿದ್ದು , ಸಾಂಗ್ ಶೂಟಿಂಗ್ ನಡೆಯುತ್ತಿದೆ. ಇದಾದ ಮೇಲೆ ನನ್ನ ಡ್ರೀಮ್ ಪ್ರಾಜೆಕ್ಟ್ ಶುರು ಮಾಡಬೇಕೆಂಬ ಪ್ಲಾನ್ ಮಾಡಿಕೊಂಡಿದ್ದೆ. ಆದರೆ ನನ್ನ ಹಳೆ ಕಮಿಟ್ಮೆಂಟ್ , ನಿರ್ಮಾಪಕರ ಚಿತ್ರ ಮುಗಿಸಬೇಕಾಗಿತ್ತು. ಈಗ ಎಲ್ಲಾ ಹಂತ ಹಂತವಾಗಿ ಮುಗಿಯುತ್ತಿದೆ.
ಇದರ ನಡುವೆ ನಾನು ಹಾಗೂ ನಮ್ಮ ಟೀಮ್ ಪೂರ್ಣ ಪ್ಲಾನ್ ಮಾಡಿಕೊಂಡು ಇಂಟರ್ನ್ಯಾಷನಲ್ಲಿ ಶೂಟ್ ಮಾಡುವ ಒಂದು ಸಂಪೂರ್ಣ ಲೋಡೆಡ್ ಆಕ್ಷನ್ , ಲವ್ ಸ್ಟೋರಿ ಮಾಡಲು ನಿರ್ಧರಿಸಿದ್ದೇವೆ. ಇದು ಎರಡು ಭಾಷೆಯಲ್ಲಿ ನಿರ್ಮಾಣ ಮಾಡಲು ಪ್ಲಾನ್ ಮಾಡಿಕೊಂಡಿದ್ದೇವೆ. ಸದ್ಯದಲ್ಲೇ ಚಿತ್ರದ ಕುರಿತು ದೊಡ್ಡ ಮಾಹಿತಿಯನ್ನು ನೀಡುತ್ತೇವೆ.
ಯಾಕಂದ್ರೆ ಈ ಚಿತ್ರದ ಪ್ರಿಪರೇಷನ್ ಬಹಳ ದೊಡ್ಡದಾಗಿ ಮಾಡುತ್ತಿದ್ದೇವೆ. ಹಂತ ಹಂತವಾಗಿ ಒಂದೊಂದೇ ಮಾಹಿತಿ ನೀಡುತ್ತೇವೆ. ನನ್ನ ಬೆಳವಣಿಗೆಗೆ ಬಹಳಷ್ಟು ಸಹಕಾರ , ಬೆಂಬಲ ನೀಡುತ್ತಿದ್ದೀರಿ , ಅದೇ ರೀತಿ ಪ್ರೇಕ್ಷಕರು ಕೂಡ ಇಷ್ಟಪಟ್ಟಿದ್ದಾರೆ. ಮುಂದೆಯೂ ನಿಮ್ಮೆಲ್ಲರ ಪ್ರೀತಿ ಸಹಕಾರ ನಿರಂತರವಾಗಿರಲಿ. ನಿಮ್ಮನ್ನು ಮೆಚ್ಚಿಸುವ ಒಳ್ಳೊಳ್ಳೆ ಪಾತ್ರಗಳಲ್ಲಿ ಅಭಿನಯಿಸುತ್ತೇನೆ ಎಂದು ತಮ್ಮ ಮನಸ್ಸಿನ ಮಾತುಗಳನ್ನು ಯುವ ನಟ ಶ್ರೇಯಸ್ ಮಂಜು ಹಂಚಿಕೊಂಡಿದ್ದಾರೆ.