ಹಲವು ಗಮನಾರ್ಹ ಸಿನಿಮಾಗಳಲ್ಲಿ ನಟಿಸಿರುವ ಭಾವನಾ ರಾಮಣ್ಣ ಅವಳಿ ಮಕ್ಕಳ ತಾಯಿಯಾಗುತ್ತಿದ್ದಾರೆ. ಆದರೆ ಅವರು ಮದುವೆ ಆಗಿಲ್ಲ. ತಮ್ಮ ಈ ನಿರ್ಧಾರದ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದು, ಅವರ ನಿರ್ಧಾರವನ್ನು ಅವರ ಕುಟುಂಬದವರು ಹಾಗೂ ಚಿತ್ರರಂಗದ ಹಲವರು ಬೆಂಬಲಿಸಿದ್ದಾರೆ.

ಕನ್ನಡ ಚಿತ್ರರಂಗದ ಖ್ಯಾತ ನಟಿ ಭಾವನಾ ರಾಮಣ್ಣ ಮದುವೆಯಾಗಿಲ್ಲ. ಆದರೆ ಮಕ್ಕಳನ್ನು ಪಡೆಯುವ ದಿಟ್ಟ ನಿರ್ಧಾರ ಮಾಡಿದ್ದಾರೆ. ಇದು ಅನೇಕರಿಗೆ ಅಚ್ಚರಿ ಉಂಟು ಮಾಡಿದೆ. ಈಗ ಅವರು 6 ತಿಂಗಳ ಗರ್ಭಿಣಿ. ಅವಳಿ ಮಕ್ಕಳಿಗೆ ಅವರು ತಾಯಿಯಾಗುತ್ತಿದ್ದಾರೆ. 40 ವರ್ಷ ದಾಟಿದ ಬಳಿಕ ಅವರು ತಾಯಿ ಆಗುತ್ತಿದ್ದಾರೆ. ಐವಿಎಫ್ (IVF) ತಂತ್ರಜ್ಞಾನದ ಮೂಲಕ ಇದು ಸಾಧ್ಯವಾಗುತ್ತಿದೆ. ಅವರು ಈ ನಿರ್ಧಾರ ತೆಗೆದುಕೊಳ್ಳುವುದು ಸುಲಭವಾಗಿರಲಿಲ್ಲ. ಆ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ತಾಯಿ ಆಗುತ್ತಿರುವುದರ ಬಗ್ಗೆ ಅವರು ಪೋಸ್ಟ್ ಮಾಡಿದ್ದಾರೆ.

‘ಒಂದು ಹೊಸ ಅಧ್ಯಾಯ, ಒಂದು ಹೊಸ ಲಯ’ ಎನ್ನುವ ಮೂಲಕ ಅವರು ಬರಹ ಆರಂಭಿಸಿದ್ದಾರೆ. ‘ಇದನ್ನು ನಾನು ಹೇಳುತ್ತೇನೆ ಅಂತ ಊಹಿಸಿಯೇ ಇರಲಿಲ್ಲ. ಆದರೆ ನಾನು ಈಗ 6 ತಿಂಗಳ ಗರ್ಣಿಣಿ. ಅವಳಿ ಮಕ್ಕಳ ತಾಯಿಯಾಗುತ್ತಿದ್ದೇನೆ. ಧನ್ಯತಾ ಭಾವ ಆವರಿಸಿದೆ’ ಎಂದು ಭಾವನಾ ರಾಮಣ್ಣ ಅವರು ಬರೆದುಕೊಂಡಿದ್ದು, ಜೊತೆಗೆ ಬೇಬಿ ಬಂಪ್ ಫೋಟೋ ಹಂಚಿಕೊಂಡಿದ್ದಾರೆ.

‘20ರ ವಯಸ್ಸಿನಲ್ಲಿ ಮತ್ತು 30ರ ವಯಸ್ಸಿನಲ್ಲಿ ನಾನು ತಾಯಿ ಆಗುವ ಬಗ್ಗೆ ಆಲೋಚಿಸಿರಲಿಲ್ಲ. ಆದರೆ 40ನೇ ವಯಸ್ಸು ಆದಾಗ ತಾಯಿಯಾಗುವ ಬಯಕೆ ತೀವ್ರವಾಗಿತ್ತು. ಒಂಟಿ ಮಹಿಳೆಯಾಗಿ ಈ ದಾರಿ ಸುಲಭದ್ದಾಗಿರಲಿಲ್ಲ. ಸಾಕಷ್ಟು ಐವಿಎಫ್ ಕ್ಲಿನಿಕ್​​ಗಳು ನನ್ನನ್ನು ಕೂಡಲೇ ತಿರಸ್ಕರಿಸಿದವು. ಆದರೆ ಡಾಕ್ಟರ್ ಸುಷ್ಮಾ ಅವರನ್ನು ರೇನ್​ ಬೋ ಆಸ್ಪತ್ರೆಯಲ್ಲಿ ಭೇಟಿಯಾದಾಗ ಅವರು ನನ್ನನ್ನು ಯಾವುದೇ ಜಡ್ಜ್​ಮೆಂಟ್ ಇಲ್ಲದೇ ಸ್ವಾಗತಿಸಿದರು. ಅವರ ಬೆಂಬಲದಿಂದ ನಾನು ಮೊದಲ ಪ್ರಯತ್ನದಲ್ಲೇ ಗರ್ಭಿಣಿ ಆದೆ’ ಎಂದಿದ್ದಾರೆ ಭಾವನಾ ರಾವಣ್ಣ.

ಭಾವನಾ ರಾಮಣ್ಣ ಅವರ ಇಡೀ ಕುಟುಂಬದವರು ನಟಿಯ ಈ ನಿರ್ಧಾರವನ್ನು ಬೆಂಬಲಿಸಿದ್ದಾರೆ. ‘ನನ್ನ ತಂದೆ, ಒಡಹುಟ್ಟಿದವರು, ಪ್ರೀತಿಪಾತ್ರರು ಬಹಳ ಹೆಮ್ಮೆ ಮತ್ತು ಪ್ರೀತಿಯಿಂದ ನನ್ನ ಪರವಾಗಿ ನಿಂತುಕೊಂಡರು. ಕೆಲವರು ನನ್ನ ನಿರ್ಧಾರವನ್ನು ಪ್ರಶ್ನಿಸಿದರು. ಆದರೆ ನಾನು ಇದಕ್ಕೆ ಸಿದ್ಧವಾಗಿದ್ದೇನೆ ಎಂಬುದು ನನ್ನ ಮನಸ್ಸಿಗೆ ತಿಳಿದಿತ್ತು’ ಎಂದು ಭಾವನಾ ಪೋಸ್ಟ್ ಮಾಡಿದ್ದಾರೆ.

‘ನನ್ನ ಮಕ್ಕಳಿಗೆ ತಂದೆ ಇಲ್ಲದೇ ಇರಬಹುದು. ಆದರೆ ಅವರು ಕಲೆ, ಸಂಗೀತ, ಸಂಸ್ಕೃತಿ ಮತ್ತು ಅಪರಿಮಿತ ಪ್ರೀತಿ ತುಂಬಿದ ಮನೆಯಲ್ಲಿ ಬೆಳೆಯುತ್ತಾರೆ. ತಮ್ಮ ಬಗ್ಗೆ ಹೆಮ್ಮೆ ಆತ್ಮವಿಶ್ವಾಸ ಆಗುವ ರೀತಿಯಲ್ಲಿ ಅವರನ್ನು ಬೆಳೆಸಲಾಗುವುದು. ಬಂಡಾಯದ ಕಾರಣಕ್ಕೆ ನಾನು ಈ ದಾರಿ ಆಯ್ಕೆ ಮಾಡಿಕೊಂಡಿಲ್ಲ. ನನ್ನ ಸತ್ಯವನ್ನು ಗೌರವಿಸುವ ಸಲುವಾಗಿ ಆಯ್ಕೆ ಮಾಡಿಕೊಂಡೆ’ ಎಂದಿದ್ದಾರೆ ಭಾವನಾ.

‘ನನ್ನ ಈ ಕಥೆಯು ಕೇವಲ ಓರ್ವ ಮಹಿಳೆಗೆ ಸ್ಪೂರ್ತಿ ತುಂಬಿದರೂ ಸಾಕು’ ಎಂದು ಅವರು ಹೇಳಿದ್ದಾರೆ. ‘ಶೀಘ್ರದಲ್ಲೇ ಎರಡು ಪುಟ್ಟ ಜೀವಗಳು ನನ್ನನ್ನು ಅಮ್ಮ ಎಂದು ಕರೆಯುತ್ತವೆ. ಅದೇ ಸರ್ವಸ್ವ. ನನ್ನ ಜೊತೆ ಇದ್ದಿದ್ದಕ್ಕಾಗಿ ರೇನ್​ ಬೋ ಆಸ್ಪತ್ರೆಯ ಡಾಕ್ಟರ್ ಸುಷ್ಮಾ ಅವರಿಗೆ ಧನ್ಯವಾದಗಳು’ ಎನ್ನುವ ಮೂಲಕ ಭಾವನಾ ರಾಮಣ್ಣ ಅವರು ಬಹರ ಪೂರ್ಣಗೊಳಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ