ಜಾಗೀರ್ದಾರ್*
ಪುರಾತನ ಫಿಲಂಸ್ ನಿರ್ಮಾಣದ, ಶ್ರೀಕಾಂತ್ ಹುಣಸೂರು ನಿರ್ದೇಶನದ ಹಾಗೂ ಪ್ರಣಂ ದೇವರಾಜ್ ನಾಯಕನಾಗಿ ನಟಿಸಿರುವ "S\O ಮುತ್ತಣ್ಣ" ಚಿತ್ರ ಪ್ರಾರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಸಚಿನ್ ಬಸ್ರೂರ್ ಸಂಗೀತ ನೀಡಿರುವ ಈ ಚಿತ್ರದ ಕಮಂಗಿ ನನ್ನ ಮಗನೆ ಹಾಡು ಈಗಾಗಲೇ ಜನಮನ ಗೆದ್ದಿದೆ. ಟೀಸರ್ ಕೂಡ ಮೆಚ್ಚುಗೆ ಪಡೆದಿದೆ. ಬಹು ನಿರೀಕ್ಷಿತ ಈ ಚಿತ್ರ ಯಾವಾಗ ಬಿಡುಗಡೆಯಾಗಲಿದೆ ಎಂಬ ಕಾತುರ ಅಭಿಮಾನಿಗಳಲ್ಲಿತ್ತು. ಆ ಕಾತುರಕ್ಕೆ ಈಗ ತೆರೆ ಬಿದ್ದಿದೆ. "S\O ಮುತ್ತಣ್ಣ" ಚಿತ್ರ ಆಗಸ್ಟ್ 22 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಪ್ರತಿಷ್ಠಿತ ಬೆಂಗಳೂರು ಕುಮಾರ್ ಫಿಲಂಸ್ ಸಂಸ್ಥೆ ಕರ್ನಾಟಕದಾದ್ಯಂತ ಈ ಚಿತ್ರವನ್ನು ವಿತರಣೆ ಮಾಡುತ್ತಿದೆ. ಆಗಸ್ಟ್ ಮೊದಲವಾರದಲ್ಲಿ ಚಿತ್ರವನ್ನು ಅಮೆರಿಕಾ ಹಾಗೂ ದುಬೈನಲ್ಲಿ ಬಿಡುಗಡೆ ಮಾಡುವ ಸಿದ್ದತೆಯನ್ನು ಚಿತ್ರತಂಡ ನಡೆಸಿದೆ.
ಅಪ್ಪ - ಮಗನ ಬಾಂಧವ್ಯದ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ರಂಗಾಯಣ ರಘು ಹಾಗೂ ಪ್ರಣಂ ದೇವರಾಜ್ ತಂದೆ - ಮಗನಾಗಿ ಅಭಿನಯಿಸದ್ದಾರೆ. ಅಪ್ಪ - ಮಗನ ಬಾಂಧವ್ಯದ ಸನ್ನಿವೇಶಗಳು ಮನಸ್ಸಿಗೆ ಹತ್ತಿರವಾಗಲಿದೆ.
ಪುರಾತನ ಫಿಲಂಸ್ ನಿರ್ಮಾಣ ಮಾಡಿರುತ್ತಾರೆ ಇವರಿಗೆ ಎಸ್ ಅರ್ ಕೆ ಫಿಲಂಸ್ ಸಾಥ್ ನೀಡಿದೆ.
ಪ್ರಣಂ ದೇವರಾಜ್ ಅವರಿಗೆ ನಾಯಕಿಯಾಗಿ ದಿಯಾ ಖ್ಯಾತಿಯ ಖುಷಿ ರವಿ ಅಭಿನಯಿಸಿದ್ದಾರೆ. ರಂಗಾಯಣ ರಘು ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಚೇಂದ್ರ ಪ್ರಸಾದ್, ಗಿರೀಶ್ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್ ಪ್ರಭು, ಸುಧಾ ಬೆಳವಾಡಿ, ಅರುಣ್ ಚಕ್ರವರ್ತಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಸಚಿನ್ ಬಸ್ರೂರು ಸಂಗೀತವಿರುವ 's/o ಮುತ್ತಣ್ಣ' ಸಿನಿಮಾದ ಹಾಡುಗಳನ್ನು ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಪ್ರಮೋದ್ ಮರವಂತೆ ಬರೆದಿದ್ದಾರೆ. ಸ್ಕೇಟಿಂಗ್ ಕೃಷ್ಣ ಛಾಯಾಗ್ರಹಣ ಹಾಗೂ ಹರೀಶ್ ಕೊಮ್ಮೆ ಅವರ ಸಂಕಲನ ಬಹು ನಿರೀಕ್ಷಿತ ಈ ಚಿತ್ರಕ್ಕಿದೆ.