ಜಾಗೀರ್ದಾರ್*
ನಟ ರಘು ಭಟ್ ಅವರು ಕಳೆದ ಏಳು ವರ್ಷಗಳಿಂದ “TNIT” media award ಸಮಾರಂಭವನ್ನು ಕರ್ನಾಟಕದಲ್ಲಿ ಅಚ್ಚುಕಟ್ಟಾಗಿ ಆಯೋಜಿಸಕೊಂಡು ಬರುತ್ತಿದ್ದಾರೆ. ಈ ಬಾರಿ ಈ ಪ್ರಶಸ್ತಿ ಸಮಾರಂಭವನ್ನು ದಕ್ಷಿಣ ಭಾರತದ ಮಟ್ಟದಲ್ಲಿ ಆಯೋಜಿಸಲು “TNIT”(ದಿ ನ್ಯೂ ಇಂಡಿಯನ್ ಟೈಮ್ಸ್) ಸಂಸ್ಥೆ ನಿರ್ಧರಿಸಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ “TNIT” ಮುಖ್ಯಸ್ಥ ರಘು ಭಟ್ ಮಾಹಿತಿ ನೀಡಿದರು. ಜ್ಯೂರಿಗಳಾಗಿರುವ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಹಾಗೂ ಆಕಾಶವಾಣಿ – ದೂರದರ್ಶನದ ಮಾಜಿ ಕಾರ್ಯ ನಿರ್ವಾಹಕ ನಿರ್ದೇಶಕಿ ನಿರ್ಮಲಾ ಎಲಿಗಾರ್, AVR ಸಂಸ್ಥೆಯ ಶೈಲೇಶ್ ಕುಮಾರ್, “TNIT” ಸಂಸ್ಥೆಯ ಸಂಪಾದಕಿ ಮೀರಾ, ಸುಗುಣ ರಘು ಭಟ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಟ ಪ್ರೇಮ್ ಹಾಗೂ ನಟಿ ರಾಗಿಣಿ ದ್ವಿವೇದಿ ಅತಿಥಿಗಳಾಗಿ ಆಗಮಿಸಿ ಸಮಾರಂಭ ಯಶಸ್ವಿಯಾಗಲೆಂದು ಹಾರೈಸಿದರು.
ನಮ್ಮ “TNIT” ಸಂಸ್ಥೆ ಕಳೆದ ಕೆಲವು ವರ್ಷಗಳಿಂದ ಕರ್ನಾಟಕದ ವಿದ್ಯುನ್ಮಾನ ಮಾಧ್ಯಮದಲ್ಲಿ ವಿವಿಧ ಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಿಪೋರ್ಟರ್, ಕ್ಯಾಮೆರಾ ಮ್ಯಾನ್ ಅವರುಗಳನ್ನು ಗುರುತಿಸಿ ಪ್ರಶಸ್ತಿ ನೀಡುತ್ತಾ ಬರುತ್ತಿದ್ದೇವೆ. ಈ ಬಾರಿ ಸಮಾರಂಭವನ್ನು ದಕ್ಷಿಣ ಭಾರತದ ಮಟ್ಟದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಆಂದ್ರಪ್ರದೇಶ, ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾಧ್ಯಮದ ಮಿತ್ರರನ್ನು ಗುರುತಿಸಿ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ. ಈಗಾಗಲೇ ಈ ಕುರಿತು ಕಾರ್ಯ ಆರಂಭವಾಗಿದೆ. ಈ ಬಾರಿ ಪ್ರಶಸ್ತಿಯಲ್ಲೂ ಬೇರೆ ಬೇರೆ ವಿಭಾಗಗಳು ಸೇರ್ಪಡೆಯಾಗಲಿದೆ. ನಾವು ಮೊದಲು ವಾಹಿನಿಗಳಿಗೆ ತೆರಳಿ, ಸಮಾರಂಭದ ಕುರಿತು ಮಾಹಿತಿ ನೀಡುತ್ತೇವೆ. ಆನಂತರ ಅವರು ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲವರ ಹೆಸರುಗಳನ್ನು ನಮಗೆ ಕಳುಹಿಸುತ್ತಾರೆ. ಆನಂತರ ಜ್ಯೂರಿಗಳು ಯಾರಿಗೆ ಪ್ರಶಸ್ತಿ ನೀಡಬೇಕೆಂಬುದನ್ನು ತೀರ್ಮಾನಿಸುತ್ತಾರೆ. ಕರ್ನಾಟಕದಿಂದ ಹಿರಿಯ ಪತ್ರಕರ್ತರಾದ ಗಣೇಶ್ ಕಾಸರಗೋಡು ಹಾಗೂ ನಿರ್ಮಲ ಎಲಿಗಾರ್ ಅವರು ಜ್ಯೂರಿಗಳಾಗಿರುತ್ತಾರೆ. ಇದೇ ರೀತಿ ಬೇರೆ ರಾಜ್ಯಗಳಲ್ಲೂ ಜ್ಯೂರಿಗಳಿರುತ್ತಾರೆ. ದಕ್ಷಿಣ ಭಾರತದ ಮಟ್ಟದಲ್ಲಿ ಈ ಪ್ರಶಸ್ತಿ ಸಮಾರಂಭ ಆಯೋಜಿಸಲು AVR ಸಂಸ್ಥೆಯ ಅರವಿಂದ್ ವೆಂಕಟೇಶ್ ರೆಡ್ಡಿ ಅವರ ಸಹಕಾರ ಕಾರಣ. ಇನ್ನೂ ಇಂದಿನ ಸಮಾರಂಭಕ್ಕೆ ಬಂದು ಹಾರೈಸಿದ ನಟ ಪ್ರೇಮ್ ಹಾಗೂ ನಟಿ ರಾಗಿಣಿ ದ್ವಿವೇದಿ ಅವರಿಗೆ ಮತ್ತು ಗಣೇಶ್ ಕಾಸರಗೋಡು, ನಿರ್ಮಲಾ ಎಲಿಗಾರ್ ಅವರಿಗೆ ಧನ್ಯವಾದ ಎಂದು ಮಾತನಾಡಿದ ರಘು ಭಟ್, “TNIT” 2025 ಸಮಾರಂಭದ ದಿನಾಂಕವನ್ನು ಸದ್ಯದಲ್ಲೇ ತಿಳಿಸುವುದಾಗಿ ಹೇಳಿದರು.