ಇತ್ತೀಚೆಗೆ ಸಣ್ಣ ವಯಸ್ಸಿನ ತರುಣಿಯರೇ ಹೆಚ್ಚಾಗಿ ಬ್ರೆಸ್ಟ್ ಕ್ಯಾನ್ಸರ್ಗೆ ಬಲಿಯಾಗುತ್ತಿದ್ದಾರೆ…… ಏಕೆ?

ಬೆಂಗಳೂರಿನ 27 ವರ್ಷದ ಚಂದ್ರಿಕಾ ರಾವ್ ‌ಗೆ ತನ್ನ ಎರಡೂ ಸ್ತನಗಳಲ್ಲಿ ಕ್ಯಾನ್ಸರ್‌ ಗೆಡ್ಡೆ ಬೆಳೆಯುತ್ತಿದೆ ಎಂದು ಅರಿವಾದಾಗ, ಘನಘೋರ ಶಾಕ್‌ ತಗುಲಿತು. ಆಕೆ ಒಂದು ಉನ್ನತ ಖಾಸಗಿ ಕಂಪನಿಯ ಹಿರಿಯ ಅಧಿಕಾರಿ. ಮೊದ ಮೊದಲು ಆಕೆಗೆ ಈ ಬಗ್ಗೆ ಏನೂ ಗೊತ್ತಾಗಲಿಲ್ಲ. ಆದರೆ ಇದ್ದಕ್ಕಿದ್ದಂತೆ ಅವಿವಾಹಿತೆಯಾದ ತನ್ನ ಮುಟ್ಟಿನಲ್ಲಿ ವಿಪರೀತ ಏರುಪೇರಾದಾಗ ಗಾಬರಿಯಾದಳು, ಕ್ರಮೇಣ ಅದು ನಿಂತೇ ಹೋಯಿತು! ತನ್ನ ಮನಿ ವೈದ್ಯರನ್ನು ಸಂಪರ್ಕಿಸಿದಾಗ, ಅವರು ನೀಡಿದ ಚಿಕಿತ್ಸೆ ಪರಿಣಾಮ ಇದೇನೋ ಸರಿಹೋಯಿತು, ಆದರೆ ಕ್ರಮೇಣ ಆಕೆಗೆ ಯಾವುದೇ ತಿಂಡಿ ಊಟದಲ್ಲೂ ರುಚಿ ಹತ್ತದೆ, ಆಹಾರ ಎಂದರೆ ವಾಕರಿಕೆ ಬರತೊಡಗಿತು.

ಒಂದು ದಿನ ಸ್ನಾನ ಮಾಡುವಾಗ ಆಕೆಗೆ ಆಕಸ್ಮಿಕವಾಗಿ, ತನ್ನ ಬಲ ಸ್ತನದಲ್ಲಿ ಏನೋ ಗಂಟು ಒತ್ತುವ ಅನುಭವವಾಯಿತು. ವೈದ್ಯರು ಇದೇನೋ ಮಸಲ್ಸ್ ನಡುವಿನ ಗಂಟು ಎಂದು ಔಷಧಿ ಬರೆದುಕೊಟ್ಟರು. ಈ ತರಹ ಹಲವು ತಿಂಗಳು ಕಳೆಯಿತು.

ಹೀಗೆ ಚಿಕಿತ್ಸೆ ಫಲಿಸದಿದ್ದಾಗ ಕ್ಯಾನ್ಸರ್‌ ಪರೀಕ್ಷೆಗಾಗಿ ಮೆಮೊಗ್ರಫಿ ಮಾಡಿಸಲಾಯಿತು. ಇದರಿಂದ ಆಕೆಯ ಎರಡೂ ಸ್ತನಗಳಲ್ಲಿ ಕ್ಯಾನ್ಸರ್‌ ಗಡ್ಡೆ ಇರುವುದು ಖಚಿತವಾಯಿತು. ನಂತರ ಆಕೆ ತಾಯಿಯ ಜೊತೆ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಹೋಗಿ ಸಂಪೂರ್ಣ ಚಿಕಿತ್ಸೆ ಪಡೆದು ಗುಣಮುಖ ಹೊಂದಿದರು, ತನ್ನದೀಗ ಹೊಸ ಜೀವನ ಎಂದು ಭಾವಿಸುತ್ತಾರೆ.

ಸ್ತನ ಕ್ಯಾನ್ಸರ್

ಇದು ಅಸಾಮಾನ್ಯ ಜೀವಕೋಶಗಳ ಒಂದು ಪ್ರಕಾರವಾಗಿದೆ, ಸತತ ಬೆಳೆಯುತ್ತಲೇ ಇರುತ್ತವೆ. ಸ್ತನದ ಯಾವುದೇ ಭಾಗದಲ್ಲಿ ತಂತಾನೇ ಬೆಳೆಯಲಾರಂಭಿಸುತ್ತದೆ. ಇದು ಸ್ತನದ ತೊಟ್ಟು ಹಾಲು ಸುರಿಸದಂತೆ, ಅಲ್ಲಿನ ಸಣ್ಣ ನಳಿಕೆ, ಹಾಲು ಉತ್ಪನ್ನ ಮಾಡುವ ಅಂಗಾಂಶಗಳನ್ನೂ ನಿಷ್ಕ್ರಿಯಗೊಳಿಸಬಲ್ಲದು. ಇದರ ಪ್ರಕೋಪ ಗಂಡಸರಿಗಿಂತ ಹೆಂಗಸರಲ್ಲಿ ಹೆಚ್ಚು. ಹಾಗೇಂತ ಗಂಡಸರಿಗೆ ಬರುವುದೇ ಇಲ್ಲ ಎಂದು ಭಾವಿಸಬಾರದು. ಗ್ರಾಮೀಣ ಮಹಿಳೆಯರಿಗಿಂತ ನಗರ ಪ್ರದೇಶದ ಮಹಿಳೆಯರೇ ಇದಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ.

ಮುಂಬೈನ ಪ್ರತಿ 1 ಲಕ್ಷ ಹೆಂಗಸರಲ್ಲಿ 27 ಮಂದಿಗೆ ಇದು ತಪ್ಪಿದ್ದಲ್ಲ. ಹಿಂದೆಲ್ಲ ಪ್ರೌಢ ಹೆಂಗಸರು ಮಾತ್ರ ಇದಕ್ಕೆ ಗುರಿಯಾಗುತ್ತಿದ್ದರು, ಇದೀಗ ಚಿಕ್ಕ ವಯಸ್ಸಿನ ತರುಣಿಯರೂ ಬಲು ಬೇಗ ಇದಕ್ಕೆ ಈಡಾಗುತ್ತಿದ್ದಾರೆ. ಹಳ್ಳಿ ಹೆಂಗಸರಲ್ಲಿ 1 ಲಕ್ಷಕ್ಕೆ 8 ಮಂದಿಯಲ್ಲಿ ಇದನ್ನು ಗಮನಿಸಬಹುದು. ಹಿಂದೆಲ್ಲ 40+, 50+ನ ಹೆಂಗಸರೇ ಇದಕ್ಕೆ ಗುರಿಯಾಗುತ್ತಿದ್ದರು. ಆದರೆ ಇದೀಗ 25+ನವರಲ್ಲೂ ಇದು ಮಾಮೂಲಿ ವಿಷಯ ಆಗಿಹೋಗಿದೆ! ಸಣ್ಣ ವಯಸ್ಸಿನವರು ಹೆಚ್ಚು ಹೆಚ್ಚಾಗಿ ಉದ್ಯೋಗ ಅರಸುತ್ತಾ, ಇಡೀ ದಿನ ಹೊರಗೆಲ್ಲ ಅಲೆದಾಡುವುದರಿಂದ ಇದು ಸಹಜವಾಗಿ ಹೆಚ್ಚುತ್ತಿದೆ ಎಂದು ಒಂದು ರಾಷ್ಟ್ರೀಯ ವರದಿ ತಿಳಿಸುತ್ತದೆ.

ಆನುವಂಶಿಕತೆಯ ಕಾರಣ ಇದು 5% ಹೆಂಗಸರಲ್ಲಿ ಮುಂದುವರಿಯುತ್ತದೆ. ಕಡಿಮೆ ವಯಸ್ಸಿನ ತರುಣಿಯರಲ್ಲಿ ಗುರುತಿಸಲಾದ ಈ ರೋಗ, ಎರಡೂ ಸ್ತನಗಳಿಗೆ ಏಕಕಾಲಕ್ಕೆ ಆಕ್ರಮಿಸಿರುವುದು ವಿಷಾದದ ಅಚ್ಚರಿಯ ಸಂಗತಿ!

ಇದಕ್ಕೆ ಮೂಲಕಾರಣ, ಇಂದಿನ ನಗರಗಳ ಜೀವನಶೈಲಿ, ಅದು ಪಾಶ್ಚಿಮಾತ್ಯ ಸಂಸ್ಕೃತಿಯತ್ತ ಹೆಚ್ಚು ವಾಲುತ್ತಿರುವುದು ಹೆಚ್ಚು ಆಘಾತಕರ. ಸ್ಯಾಚುರೇಟೆಡ್‌ ಆಯಿಲ್ ‌ಸೇವನೆ ಅಧಿಕವಾಗಿದೆ. ವ್ಯಾಯಾಮ ಇಲ್ಲವೇ ಇಲ್ಲ. ಅತ್ಯಧಿಕ ಒತ್ತಡ ಈ ಹಿಂಸೆಗೆ ಮೂಲ. ತರುಣಿಯರ ಮದುವೆ ಫಿಕ್ಸ್ ಆಗುವುದೇ ಬಲು ತಡವಾಗಿ. ಮಗು ಹುಟ್ಟಿದರೂ ಅದಕ್ಕೆ ಸ್ತನ್ಯಪಾನವಿಲ್ಲ. ಇವೆಲ್ಲ ಕೂಡಿಕೊಂಡು ಸ್ತನ ಕ್ಯಾನ್ಸರ್‌ ನ್ನು ಬೇಗ ಹೆಚ್ಚುವಂತೆ ಮಾಡಿವೆ. ಹೀಗಾಗಿ ಸಕಾಲಕ್ಕೆ, ಆದಷ್ಟೂ ಬೇಗ ಇದಕ್ಕೆ ಚಿಕಿತ್ಸೆ ಆರಂಭವಾದರೆ ರೋಗಿ ಬೇಗ ಗುಣಮುಖರಾಗುತ್ತಾರೆ.

ಸದಾ ಜಾಗ್ರತೆ ವಹಿಸಿ

ಸ್ತನ ಕ್ಯಾನ್ಸರ್‌ ಇದೆಯೇ ಎಂದು ಗುರುತಿಸುವುದು, ಅರ್ಥ ಮಾಡಿಕೊಳ್ಳುವುದಕ್ಕೆ ಹೆಚ್ಚಿನ ಸಮಯ ಬೇಕು. ಅದರಲ್ಲೂ ಇಂದಿನ ಧಾವಂತದ ತರುಣಿಯರು ಇದರ ಕಡೆ ಜಾಗ್ರತೆ ವಹಿಸುವುದೇ ಇಲ್ಲ. ಹೀಗಾಗಿ ಇಂಥವರು ಈ ಪ್ರಾರಂಭಿಕ ಲಕ್ಷಣಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದೇ ಇಲ್ಲ. ಜೊತೆಗೆ ಮನೆಯವರು, ಸಮಾಜ ಸಹ ಇದನ್ನು ಸಹಜವಾಗಿ ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ಈ ರೋಗ ತಂತಾನೇ ಉಲ್ಬಣಗೊಳ್ಳುತ್ತಲೇ ಇರುತ್ತದೆ, ಮುಂದೆ ಅಪಾಯಕ್ಕೆ ತಿರುಗಿದರೆ ಆಶ್ಚರ್ಯವಿಲ್ಲ.

ಆರಂಭಿಕ ಅವಸ್ಥೆಯಲ್ಲಿ ಮೆಮೊಗ್ರಫಿ ಮಾಡಿಸಿ ಸ್ತನ ಕ್ಯಾನ್ಸರ್‌ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು ಉತ್ತಮ. ಈ ಹಂತದಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ರೇಡಿಯೇಶನ್‌ ಪ್ರಯೋಗಿಸಿ, ಸ್ತನದ ಎಕ್ಸ್ ರೇ ತೆಗೆಯುತ್ತಾರೆ. ಇದಾದ ನಂತರ ಕ್ಯಾನ್ಸರ್‌ ಗೆಡ್ಡೆಯ ಆಕಾರ ಎಷ್ಟು ದೊಡ್ಡದು ಎಂಬುದರ ನಿಖರತೆ ತಿಳಿಯುತ್ತದೆ. ಈ ಸೌಲಭ್ಯ ಎಲ್ಲಾ ಸಣ್ಣಪುಟ್ಟ ಊರುಗಳಲ್ಲೂ ಲಭ್ಯ. ನೀವೇ ಖುದ್ದಾಗಿ ಸ್ತನ ಮುಟ್ಟಿ ನೋಡಿಕೊಂಡು, ಏನೇ ಅಸಹಜತೆ ಭಾವಿಸಿದರೂ, ತಕ್ಷಣ ಆಸ್ಪತ್ರೆಗೆ ಹೋಗಿ ಮೆಮೊಗ್ರಫಿ ಮಾಡಿಸಿ. 40+ ನಂತರ ಹೆಂಗಸರು ಪ್ರತಿ 2 ವರ್ಷಕ್ಕೊಮ್ಮೆ ಮೆಮೊಗ್ರಫಿ ಮಾಡಿಸುವುದು ಲೇಸು. ಹಾಗೇ 50+ ನಂತರ ಪ್ರತಿ ವರ್ಷಕ್ಕೊಮ್ಮೆ ಮಾಡಿಸಬೇಕು. ಗಂಟು ಇದೆ ಎಂದು ಖಚಿತಪಡಿಸಿಕೊಂಡ ನಂತರ, ಅಗತ್ಯವಾಗಿ ಸೋನೋಗ್ರಾಫಿ ಮಾಡಿಸಬೇಕು. ಆಗ ಕ್ಯಾನ್ಸರ್‌ ನಮ್ಮನ್ನು ಎಷ್ಟು ಬಾಧಿಸುತ್ತಿದೆ ಎಂಬುದರ ಒಂದು ನಿಖರ ಅರಿವು ಸಿಗುತ್ತದೆ.

ಚಿಕಿತ್ಸೆ ಖಂಡಿತಾ ಸಾಧ್ಯ

ಸಾಮಾನ್ಯವಾಗಿ ಸ್ತನ ಕ್ಯಾನ್ಸರ್‌ ಗೆ ಸರ್ಜರಿ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಇಡೀ ಸ್ತನ ತೆಗೆದು ಹಾಕುವುದು ಅಥವಾ ಕ್ಯಾನ್ಸರ್‌ ಗೆಡ್ಡೆಯ ಆಸುಪಾಸಿನ ಸ್ತನ ಭಾಗ ಮಾತ್ರ ತೆಗೆಯುವುದು ಎಂಬ 2 ವಿಧಾನಗಳಿವೆ. ಈ ಸರ್ಜರಿ ನಂತರ ಡಾಕ್ಟರ್ ರೇಡಿಯೇಶನ್‌ ಥೆರಪಿ, ಕೀಮೊಥೆರಪಿ, ಹಾರ್ಮೋನ್‌ ಥೆರಪಿ ಅಥವಾ ಈ ಎಲ್ಲಾ ಥೆರಪಿ ಬೆರೆಸಿ ಚಿಕಿತ್ಸೆ ನೀಡುತ್ತಾರೆ.

ಅಧಿಕಾಂಶ ಸರ್ಜರಿಗಳಲ್ಲಿ ಈ ಗೆಡ್ಡೆ ತೆಗೆದ ನಂತರ, ಒಂದು ವಿಶೇಷ ಮೆಶೀನ್‌ ನಿಂದ ಆ ಭಾಗ ಸರಿಪಡಿಸಲಾಗುತ್ತದೆ. ಇದು ಗ್ರಾಮೀಣ ಪ್ರದೇಶಗಳಲ್ಲಿ ಲಭ್ಯವಿಲ್ಲ, ಮಹಾನಗರಗಳಲ್ಲಿ ಮಾತ್ರ ಲಭ್ಯ. ಸರ್ಜರಿ ನಂತರ 5-6 ವಾರಗಳ ಕಾಲ ಇದರ ನೆರವು ಪಡೆಯಬೇಕಾಗುತ್ತದೆ. ಇದು ದುಬಾರಿ ಖರ್ಚೇ ಸರಿ. ಈ ನಿಟ್ಟಿನಲ್ಲಿ ಒಂದು ಹೊಸ ಪದ್ಧತಿ ಬಂದಿದೆ, ಅದುವೇ ಇಂಟ್ರಾ ಆಪರೇಟಿವ್ ರೇಡಿಯೇಶನ್‌ ಥೆರಪಿ. ಇದರಲ್ಲಿ ಸರ್ಜರಿ ಆದ ತಕ್ಷಣ, ಅಗತ್ಯ ಪ್ರಮಾಣದಲ್ಲಿ ರೇಡಿಯೇಶನ್‌ ನೀಡುತ್ತಾರೆ. ಇದರಿಂದ 5-6 ವಾರಗಳಲ್ಲಿ 25-30 ಸೆಶನ್ಸ್ ಆಗುತ್ತದೆ. ಹೀಗಾಗಿ ಗಂಟು ದೂರಾಗುತ್ತದೆ. ಖರ್ಚು ಎಷ್ಟೋ ಕಡಿಮೆ ಆಗುತ್ತದೆ, ಸೈಡ್‌ ಎಫೆಕ್ಟ್ ಸಹ.

ಆತ್ಮವಿಶ್ವಾಸ ಉಳಿಸಿಕೊಳ್ಳಿ

ಸ್ತನದ ಸರ್ಜರಿ ನಂತರ, ಅದನ್ನು ಮತ್ತೆ ಪುನರ್ಸ್ಥಾಪಿತಗೊಳಿಸುವುದು ಸುಲಭದ ಕೆಲಸವಲ್ಲ. ಆದರೆ ಇಂದಿನ ಆಧುನಿಕ ತರುಣಿಯರು ಇದನ್ನು ಮಾಡಿಸಿಕೊಳ್ಳುವುದಕ್ಕೆ ಹಿಂಜರಿಯುವುದಿಲ್ಲ. ಏಕೆಂದರೆ ದೇಹದ ಯಾವುದೇ ಭಾಗವನ್ನು ಕತ್ತರಿಸಿ ತೆಗೆದು ಹಾಕಿದರೂ, ರೋಗಿಯ ಆತ್ಮವಿಶ್ವಾಸಕ್ಕೆ ಧಕ್ಕೆಯಾಗುತ್ತದೆ. ಇಲ್ಲಿ ಹೆಣ್ಣಿನ ಸೂಕ್ಷ್ಮ ಭಾಗದ ವಿಷಯವಾದ್ದರಿಂದ, ಇದು ಮತ್ತಷ್ಟು ಜಟಿಲ ವಿಷಯವೇ ಸರಿ. ಸ್ತನ ರಹಿತ ತನ್ನ ದೇಹ ಆಕೆಗೆ ಕಿರಿಕಿರಿ ಎನಿಸುತ್ತದೆ. ಆದ್ದರಿಂದ ಬ್ರೆಸ್ಟ್ ರೀಕನ್‌ ಸ್ಟ್ರಕ್ಷನ್‌ ಮಾಡಿಸುವುದೇ ಸರಿ. ಇದನ್ನು ಸಮರ್ಥ ಕಾಸ್ಮೆಟಕ್‌ ಸರ್ಜನ್‌ ಮಾತ್ರ ಮಾಡಬಲ್ಲರು.

ಮಾಸ್ಟೆಕ್ಟೋಮಿ (ಪೂರ್ತಿ ಸ್ತನ ತೆಗೆಯುವಿಕೆ)ಯ ತಕ್ಷಣವೇ ರೀಕನ್‌ ಸ್ಟ್ರಕ್ಷನ್‌ ಮಾಡಿಸಬಹುದು. ಅದರೆ ಸರ್ಜರಿ ಹೇಗೆ ನಡೆಯಿತು ಎಂಬುದು ಇಲ್ಲಿ ಬಹಳ ಮುಖ್ಯ.

ಗಮನಿಸಿ : ಮಾಸ್ಟೆಕ್ಟೋಮಿಯಲ್ಲಿ ಪೂರ್ತಿ ಸ್ತನವನ್ನು ತೊಟ್ಟಿನ ಸಹಿತ ತೆಗೆದು ಹಾಕಲಾಗುತ್ತದೆ. ಇದರಿಂದ ದೇಹದ ಇತರ ಭಾಗಗಳಿಂದ ಚರ್ಮ, ಕೊಬ್ಬು, ಮಾಂಸ, ರಕ್ತ ವಾಹಿನಿಗಳನ್ನು ತೆಗೆದು ಮತ್ತೆ ಪುನರ್ಸ್ಥಾಪಿತ ಗೊಳಿಸಬೇಕಾಗುತ್ತದೆ. ಈ ಭಾಗಗಳನ್ನು ಸಾಮಾನ್ಯವಾಗಿ ಹೊಟ್ಟೆ, ತೊಡೆ, ನಿತಂಬ, ಸೊಂಟದ ಮೇಲ್ಬಾಗದಿಂದ ತೆಗೆದುಕೊಳ್ಳುತ್ತಾರೆ.

ಡಾ. ಸುಮತಿ 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ