*”ಮಹಾವತಾರ್ ನರಸಿಂಹ”

ಜಾಗೀರ್ದಾರ್*

ಕ್ಲೀಮ್ ಪ್ರೊಡಕ್ಷನ್ಸ್ ನಿರ್ಮಿಸಿ ಹೊಂಬಾಳೆ ಫಿಲಂಸ್‌ ಪ್ರಸ್ತುತಪಡಿಸಿರುವ ಸಿನಿಮಾ “ಮಹಾವತಾರ್ ನರಸಿಂಹ”. ಇದೀಗ ಇದೇ ಸಿನಿಮಾದಿಂದ ಬಿಗ್‌ ಅಪ್‌ಡೇಟ್‌ ಸಿಕ್ಕಿದೆ. ಈಗಾಗಲೇ ಬಿಡುಗಡೆ ದಿನಾಂಕ ಅಧಿಕೃತಗೊಳಿಸಿರುವ ಈ ಸಿನಿಮಾ, ಈಗ ಟ್ರೇಲರ್‌ ಮೂಲಕ ಆ ಕುತೂಹಲಕ್ಕೆ ಕಿಚ್ಚು ಹಚ್ಚಿದೆ. ಪಂಚತತ್ವಗಳನ್ನು ಸಂಕೇತಿಸುವಂತ ಅಪರೂಪದ ದೃಶ್ಯಕಾವ್ಯ, ಆಳವಾದ ಕಥಾವಸ್ತು ಮತ್ತು ರೋಮಾಂಚನಕಾರಿ ಹಿನ್ನೆಲೆ ಸಂಗೀತ, “ಮಹಾವತಾರ್ ನರಸಿಂಹ” ಚಿತ್ರವನ್ನು ಮತ್ತೊಂದು ಹಂತಕ್ಕೆ ಕರೆದೊಯ್ದಿದೆ.

ಹಾಗಾದರೆ, “ಮಹಾವತಾರ್ ನರಸಿಂಹ” ಸಿನಿಮಾದ ಕಥಾ ತಿರುಳೇನು? ಈ ಕಥೆಯು ಪ್ರಹ್ಲಾದನ ನಂಬಿಕೆಗೆ ವಿರುದ್ಧವಾಗಿ ನಿಲ್ಲುವ ತಂದೆ ಹಿರಣ್ಯಕಶಿಪುವನ್ನು ಮತ್ತು ಅವನ ಅಹಂಕಾರವನ್ನು ನಾಶಮಾಡಲು ಭೂಮಿಗೆ ಇಳಿದ ದೈವಿಕ ಅವತಾರ ಮಹಾವತಾರ್ ನರಸಿಂಹನ ಉದಯವನ್ನು ಅಷ್ಟೇ ಆವೇಶದಲ್ಲಿ ಪೌರಾಣಿಕ ಹಿನ್ನೆಲೆಯಲ್ಲಿ, ಗಟ್ಟಿ ತಾಂತ್ರಿಕ ನೆಲೆಗಟ್ಟಿನಲ್ಲಿ ಹೇಳಲಾಗಿದೆ.

ಈ ಟ್ರೇಲರ್‌ ಬಗ್ಗೆ ನಿರ್ದೇಶಕ ಅಶ್ವಿಕ್‌ ಕುಮಾರ್‌ ಹೇಳುವುದೇನೆಂದರೆ, “ಮಹಾವತಾರ್ ನರಸಿಂಹ” ಸಿನಿಮಾ ಯೂನಿವರ್ಸ್‌ನ ಮೊದಲ ಅನಿಮೇಟೆಡ್ ಟ್ರೇಲರ್‌ಅನ್ನು, ಶ್ರೀ ಬೃಂದಾವನ ಧಾಮದಲ್ಲಿ ಶ್ರೀ ಇಂದ್ರೇಶ್‌ಜೀ ಮಹಾರಾಜರಿಂದ ಬಿಡುಗಡೆಗೊಂಡಿದೆ. ಇದು ಕೇವಲ ಸಿನಿಮಾ ಅಲ್ಲ – ಇದು ಭಾರತದ ಸಂಸ್ಕೃತಿಯ ಸಂರಕ್ಷಣೆಯ ತಪಸ್ಸು.” ಎಂದಿದ್ದಾರೆ.

ನಿರ್ಮಾಪಕಿ ಶಿಲ್ಪಾ ಧವನ್ ಕೂಡಾ ಸಿನಿಮಾ ಮತ್ತು ಟ್ರೇಲರ್‌ ಬಗ್ಗೆ ಮಾತನಾಡಿದರು. “ಇದೀಗ ಗರ್ಜನೆಯ ಕಾಲ! ಐದು ವರ್ಷದ ಅವಿರತ ಪ್ರಯತ್ನದ ಬಳಿಕ, ನರಸಿಂಹ ಮತ್ತು ವರಾಹರ ದೈವಿಕ ಕಥೆಯನ್ನು ವಿಶ್ವದ ಮುಂದೆ ತರಲು ಸಜ್ಜಾಗಿದ್ದೇವೆ. ಪ್ರತಿಯೊಂದು ಕ್ಷಣ, ಪ್ರತಿಯೊಂದು ದೃಶ್ಯ, ಪ್ರತಿಯೊಂದು ಉಸಿರೂ ಈ ಕಥೆಯ ಆತ್ಮವಾಗಿದೆ. ನಿಮ್ಮ ಮನಸ್ಸು ತಲುಪುವ ದೃಶ್ಯ ವೈಭವಕ್ಕಾಗಿ ಸಿದ್ಧರಾಗಿ.. ನರಸಿಂಹನ ಗರ್ಜನೆ ಬರಲಿದೆ. ಅದು ಎಲ್ಲವನ್ನೂ ಬದಲಾಯಿಸಲಿದೆ!” ಎಂದಿದ್ದಾರೆ.

*ಇದು “ಮಹಾವತಾರ್” ಯೂನಿವರ್ಸ್‌*

“ಮಹಾವತಾರ್ ನರಸಿಂಹ” ಸಿನಿಮಾ ಭಗವಾನ್ ವಿಷ್ಣುವಿನ ದಶಾವತಾರಗಳ ಆಧಾರದ ಮೇಲೆ ಮುಂದಿನ ದಶಕದವರೆಗೆ ಸಾಗಲಿರುವ ವಿಶಾಲ ಅನಿಮೇಟೆಡ್ ಸರಣಿಯ ಮೊದಲ ಅಧ್ಯಾಯವಾಗಿದೆ. ಇದರಲ್ಲಿ ಮುಂದಿನ ಸಿನಿಮಾಗಳು ಹೀಗಿವೆ. “ಮಹಾವತಾರ್ ನರಸಿಂಹ” (2025), “ಮಹಾವತಾರ್ ಪರಶುರಾಮ” (2027), “ಮಹಾವತಾರ್ ರಘುನಂದನ” (2029), “ಮಹಾವತಾರ್ ಧ್ವಾಕಾಧೀಶ್” (2031), “ಮಹಾವತಾರ್ ಗೋಕುಲನಂದ” (2033), “ಮಹಾವತಾರ್ ಕಲ್ಕಿ ಭಾಗ 1” (2035), “ಮಹಾವತಾರ್ ಕಲ್ಕಿ ಭಾಗ 2” (2037) ಮೂಡಿಬರಲಿವೆ.

*ಚಿತ್ರದ ವಿವರ*

“ಮಹಾವತಾರ್ ನರಸಿಂಹ” ಚಿತ್ರವನ್ನು ಅಶ್ವಿನ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಶಿಲ್ಪಾ ಧವನ್, ಕುಶಾಲ್ ದೇಸಾಯಿ, ಚೈತನ್ಯ ದೇಸಾಯಿ ನಿರ್ಮಾಣ ಮಾಡಿದ್ದಾರೆ. ಕ್ಲೀಮ್‌ ಪ್ರೊಡಕ್ಷನ್ಸ್‌ ಸಂಸ್ಥೆ ಈ ಚಿತ್ರವನ್ನು ನಿರ್ಮಿಸಿದೆ. ಹೊಂಬಾಳೆ ಫಿಲಂಸ್‌ ಪ್ರಸ್ತುತಿ ಜವಾಬ್ದಾರಿ ಹೊತ್ತಿದೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಒಟ್ಟು ಐದು ಭಾಷೆಗಳಲ್ಲಿ 3D ವೀಕ್ಷಣೆಯ ಆಯ್ಕೆಯನ್ನೊಳಗೊಂಡು ಇದೇ ಜುಲೈ 25ರಂದು “ಮಹಾವತಾರ್‌ ನರಸಿಂಹ” ಸಿನಿಮಾ ಬಿಡುಗಡೆರ ಆಗಲಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ